ಬಿಎಸ್‌ವೈ-ಈಶ್ವರಪ್ಪ ನಡುವಿನ ಸಂಘರ್ಷ : ಬಿಕ್ಕಟ್ಟು ಶಮನಕ್ಕೆ ಆರೆಸ್ಸೆಸ್ ಮಧ್ಯ ಪ್ರವೇಶ

Update: 2017-01-14 16:52 GMT

ಬೆಂಗಳೂರು, ಜ. 14: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಆರೆಸ್ಸೆಸ್ ಮಧ್ಯೆಪ್ರವೇಶಿಸಿದ್ದು, ಜ.17ಕ್ಕೆ ಉಭಯ ನಾಯಕರಿಗೆ ಬುಲಾವ್ ನೀಡಲಾಗಿದೆ.

ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು, ಉಭಯ ನಾಯಕರ ಹೇಳಿಕೆಗಳಿಂದ ಪಕ್ಷದ ಕಾರ್ಯಕರ್ತರಲ್ಲಿ ‘ಬಣ ರಾಜಕೀಯ, ಕ್ಷೋಭೆ’ ಸೃಷ್ಟಿಸಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಇಬ್ಬರು ನಾಯಕರನ್ನು ಒಂದೆಡೆ ಕೂರಿಸಿ ಸಮಾಲೋಚನೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕೆಂದು ಆರೆಸ್ಸೆಸ್‌ಗೆ ಮನವಿ ಮಾಡಲಾಗಿದೆ.

ಈ ಮಧ್ಯೆಯೇ ಬ್ರಿಗೇಡ್ ಚಟುವಟಿಕೆ ಮುಂದುವರಿಸುವ ಅಪೇಕ್ಷೆ ಇದ್ದರೆ ಈಶ್ವರಪ್ಪ ಮೇಲ್ಮನೆ ವಿಪಕ್ಷ ನಾಯಕನ ಸ್ಥಾನ ತ್ಯಜಿಸಬೇಕೆಂದು ಬಿಎಸ್‌ವೈ ಗುಟುರು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ‘ಶಿಸ್ತು ಸಮಿತಿಯಲ್ಲಿಯೇ ಶಿಸ್ತಿಲ್ಲ’ ಎಂದು ಆಕ್ಷೇಪಿಸಿದ್ದಾರೆ. ದಿನದಿನಕ್ಕೂ ಉಭಯ ನಾಯಕರ ಪರ-ವಿರೋಧ ಹೇಳಿಕೆಗಳ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ.
ಹೀಗಾಗಿ ಸದ್ಯ ಪ್ರವಾಸದಲ್ಲಿರುವ ಬಿ.ಎಸ್.ಯಡಿಯೂರಪ್ಪ, ರಾಯಣ್ಣ ಬ್ರಿಗೇಡ್ ಸಮಾವೇಶದ ಹಿನ್ನೆಲೆಯಲ್ಲಿ ತೊಡಗಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಜ.16 ಅಥವಾ 17ರಂದು ಆರೆಸ್ಸೆಸ್ ಮುಖಂಡರ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಸಂಧಾನ ಸಭೆಗೆ ಹಾಜರಾಗಲಿದ್ದಾರೆಂದು ಹೇಳಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಪೂರಕ ವಾತಾವರಣವಿದೆ. ಹೀಗಾಗಿ ಉಭಯ ನಾಯಕರು ತಮ್ಮ ಮಧ್ಯದ ವಿರಸ ಮರೆತು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕೆಂದು ಆರೆಸ್ಸೆಸ್ ಮುಖಂಡರು ಇಬ್ಬರಿಗೂ ಸಲಹೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಈ ನಡುವೆಯೇ ಯಡಿಯೂರಪ್ಪ, ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ಕೊನೆಗೊಳಿಸುವಂತೆ ಈಶ್ವರಪ್ಪನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಪಕ್ಷದ ವರಿಷ್ಟರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ. ಅಲ್ಲದೆ, ಪಕ್ಷ ಮತ್ತು ಮುಖಂಡರ ವಿರುದ್ಧ ಈಶ್ವರಪ್ಪ ನೀಡಿರುವ ಹೇಳಿಕೆಗಳ ಮಾಧ್ಯಮಗಳ ವರದಿಯನ್ನು ರವಾನಿಸಿದ್ದಾರೆ.

ಉಭಯ ಮುಖಂಡರು ಪಕ್ಷದಲ್ಲಿ ತಮ್ಮ ಬಲಾಬಲದ ಅಗ್ನಿ ಪರೀಕ್ಷೆಗೆ ಇಳಿದಂತೆ ಗೋಚರಿಸುತ್ತಿದ್ದು, ಆರೆಸ್ಸೆಸ್ ಮತ್ತು ಪಕ್ಷದ ವರಿಷ್ಠರ ಮಧ್ಯೆ ಪ್ರವೇಶವಾದರೂ, ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆಗಳಿಲ್ಲ. ಆದರೂ, ಆರೆಸ್ಸೆಸ್ ಮನವೊಲಿಕೆ ನಿಟ್ಟಿನಲ್ಲಿ ತನ್ನ ಪ್ರಯತ್ನ ನಡೆಸಲಿದೆ ಎಂದು ಹೇಳಲಾಗಿದೆ.

‘ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಮಯಾವಕಾಶ ಕೋರಿ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಉಲ್ಲೇಖಿಸಿರುವವರ ಪೈಕಿ ಕಾಗೇರಿ, ಮಲ್ಕಾಪುರೆ, ಭಾಂಡಗೆ, ಸೋಮಲಿಂಗಪ್ಪ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ಹೆಸರು ದುರ್ಬಳಕೆ ಮಾಡಿಕೊಂಡಿದ್ದು, ಅವರ್ಯಾರು ಪತ್ರಕ್ಕೆ ಸಹಿ ಹಾಕಿಲ್ಲ, ಆ ಪತ್ರವೂ ಬಿಜೆಪಿ ಕಾರ್ಯಾಲಯಕ್ಕೆ ಬಂದಿಲ್ಲ’
-ಅರವಿಂದ ಲಿಂಬಾವಳಿಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News