ಅಡುಗೆಮನೆಯ ಖಾಯಂ ಸದಸ್ಯ ಬದನೆ

Update: 2017-01-15 08:38 GMT

ಬದನೆ ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ, ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಯಾಗಿದೆ. ಶರೀರದ ತೂಕದ ಮೇಲೆ ನಿಗಾ ಇರಿಸುವವರ ಪಾಲಿಗೆ ಇದು ವರದಾನ ಎನ್ನಬಹುದು.

ಸಸ್ಯಶಾಸ್ತ್ರೀಯವಾಗಿ ಸೋಲನಸೀ ಕುಟುಂಬಕ್ಕೆ ಸೇರಿದ್ದು, ಸೋಲನಂ ಮೆಲೊಗ್ನೆನಾ ಎಂಬ ಹೆಸರನ್ನು ಹೊಂದಿದೆ. ಭಾರತೀಯ ಉಪಖಂಡ ಮೂಲದ ಈ ತರಕಾರಿಯನ್ನು ವಿಶ್ವದ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ವಿವಿಧ ಗಾತ್ರ,ಆಕಾರ ಮತ್ತು ಬಣ್ಣಗಳಲ್ಲಿ ಬೆಳೆಯುವ ಬದನೆ ಹೆಚ್ಚಾಗಿ ದುಂಡನೆಯ ಅಥವಾ ಸಪೂರ,ಉದ್ದನೆಯ ಆಕಾರ ಹೊಂದಿರುತ್ತದೆ. ಬದನೆಯ ಗಿಡ ಸ್ವಲ್ಪ ಸಮಯದಲ್ಲೇ 3-4 ಅಡಿಗಳಷ್ಟು ಎತ್ತರ ಬೆಳೆದು ಕಾಯಿಗಳನ್ನು ನೀಡಲು ಆರಂಭಿಸುತ್ತದೆ. ಬಿಳಿಯ ಬಣ್ಣದ ತಿರುಳು ಮತ್ತು ಸಣ್ಣ,ಮೃದುವಾದ ಬೀಜಗಳನ್ನು ಹೊಂದಿರುತ್ತದೆ.

ಆರೋಗ್ಯವರ್ಧಕ ಗುಣಗಳು

ಅತ್ಯಂತ ಕಡಿಮೆ ಕ್ಯಾಲೊರಿ ಮತ್ತು ಕೊಬ್ಬನ್ನು ಹೊಂದಿರುವ ಬದನೆ ಕರಗಬಲ್ಲ ನಾರಿನಂಶವನ್ನು ಹೇರಳವಾಗಿ ಹೊಂದಿದೆ. ಪ್ರತಿ 100 ಗ್ರಾಂ ಬದನೆ ಕೇವಲ 24 ಕ್ಯಾಲೊರಿಗಳನ್ನು ಹೊಂದಿದ್ದು, ನಮ್ಮ ಶರೀರಕ್ಕೆ ದೈನಂದಿನ ಅಗತ್ಯದ ಶೇ.9ರಷ್ಟು ನಾರಿನಂಶವನ್ನು ಒದಗಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬದನೆ ಪರಿಣಾಮಕಾರಿಯಾಗಿದೆ ಎನ್ನುವುದು ಸಂಶೋಧನೆಗಳಿಂದ ಸಿದ್ಧಗೊಂಡಿದೆ.

ಬದನೆಯ ಸಿಪ್ಪೆಯಲ್ಲಿ ಆ್ಯಂಥೊಸೈನಿನ್‌ಗಳೆಂಬ ಫೆನಾಲಿಕ್ ಫ್ಲಾವೊನಾಯ್ಡಾ ಫೈಟೊ ಕೆಮಿಕಲ್‌ಗಳು ಸಾಕಷ್ಟು ಪ್ರಮಾಣದಲ್ಲಿವೆ. ಈ ಆ್ಯಂಟಿ ಆಕ್ಸಿಡಂಟ್‌ಗಳು ಕ್ಯಾನ್ಸರ್, ವಯಸ್ಸಾಗುವಿಕೆ,ಎದೆಯುರಿ ಮತ್ತು ನರಸಂಬಂಧಿ ಕಾಯಿಲೆಗಳ ವಿರುದ್ಧ ಪರಿಣಾಮ ಕಾರಿಯಾಗಿ ಕಾಯ ನಿರ್ವಹಿಸುತ್ತವೆ.

 ಬದನೆ ಬಿ-ಕಾಂಪ್ಲೆಕ್ಸ್ ಗುಂಪಿನ ಹಲವಾರು ಅಗತ್ಯ ವಿಟಾಮಿನ್‌ಗಳ ಆಗರವಾಗಿದೆ. ಅದು ಪೈರಿಡಾಕ್ಸಿನ್(ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ಪ್ಯಾಂಟೊಥೆನಿಕ್ ಆ್ಯಸಿಡ್(ವಿಟಾಮಿನ್ ಬಿ5) ಮತ್ತು ನಿಯಾಸಿನ್(ವಿಟಾಮಿನ್ ಬಿ3)ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿದೆ. ಈ ವಿಟಾಮಿನ್‌ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ.

 ಪೊಟ್ಯಾಶಿಯಂ,ಕಬ್ಬಿಣ,ತಾಮ್ರ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳು ಬದನೆಯಲ್ಲಿ ಹೇರಳವಾಗಿವೆ. ಪೊಟ್ಯಾಶಿಯಂ ಎದೆಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಜೀವಕೋಶಗಳು ಮತ್ತು ಶರೀರ ದ್ರವಗಳ ಪ್ರಮುಖ ಘಟಕವಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆಗೆ ತಾಮ್ರ ಮತ್ತು ಕಬ್ಬಿಣ ಅಗತ್ಯವಾಗಿವೆ. ಮ್ಯಾಂಗನೀಸ್ ಅನ್ನು ನಮ್ಮ ಶರೀರವು ಆ್ಯಂಟಿ ಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News