ಎಪಿಎಂಸಿ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-01-15 15:15 GMT

ಬೆಂಗಳೂರು, ಜ. 15: ಎಪಿಎಂಸಿ ಚುನಾವಣೆಯಲ್ಲಿ ಬಂದಿರುವ ಫಲಿತಾಂಶವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳ ಫಲಿತಾಂಶಗಳಿಗೆ ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ಕನ್ನಡ ಚಿತ್ರಕಲಾ ಪರಿಷತ್ ನಗರದ ಶಿವಾನಂದ ವೃತ್ತದಲ್ಲಿ ಆಯೋಜಿಸಿದ್ದ ‘ಚಿತ್ರ ಸಂತೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮಾತಗಳು ಬಂದಿವೆ. ಇದು ಮುಂದಿನ ಚುನಾವಣೆಗಳಲ್ಲಿಯೂ ಪುನರಾವರ್ತನೆಯಾಗಲಿದೆ ಎಂದು ತಿಳಿಸಿದರು.

ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿದ ಎಪಿಎಂಸಿ ಸದಸ್ಯರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪಕ್ಷದಿಂದ ಹಮ್ಮಿಕೊಂಡಿರುವ ಜನಪರ ಕಾರ್ಯಕ್ರಮಗಳನ್ನು ಜನತೆ ಅಭೂತಪೂರ್ವಕವಾಗಿ ಸ್ವಾಗತಿಸಿದ್ದಾರೆ ಎಂಬುದಕ್ಕೆ ಎಪಿಎಂಸಿ ಫಲಿತಾಂಶವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲೂ ಜನತೆಯ ಪ್ರೀತಿಯನ್ನು ಹೀಗೆಯೇ ಉಳಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಮಹದಾಯಿ ನ್ಯಾಯಾಧೀಕರಕ್ಕೆ ಮೇಲ್ಮನವಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು, ತಜ್ಞರು ಜೊತೆ ಚರ್ಚಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೂ ಮೊದಲು ಚಿತ್ರಸಂತೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ 16ವರ್ಷದಿಂದ ಚಿತ್ರಸಂತೆ ನಡೆಯುತ್ತಿದೆ. ಪಕ್ಷ ಭೇದ ಮರೆತು ಎಲ್ಲ ಸರಕಾರಗಳು ಸಹ ಚಿತ್ರಸಂತೆಗೆ ಅಗತ್ಯವಾದ ಎಲ್ಲ ರೀತಿಯ ನೆರವನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.

 ಚಿತ್ರಕಲೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಚಿತ್ರಕಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜರಾಜೇಶ್ವರಿ ನಗರದಲ್ಲಿ 20ಎಕರೆಯನ್ನು ನೀಡಿದ್ದು, ಕಟ್ಟಡ ನಿರ್ಮಾಣಕ್ಕೆ 20ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿಯೇ ನೀಡಲಾಗಿದೆ. ದೇಶದಲ್ಲಿಯೇ ಮಾದರಿಯಾದ ಚಿತ್ರಕಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕಲಾಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವು ಮಾರಾಟವಾಗುವುದಕ್ಕಿಂತ ಚಿತ್ರ ರಸಿಕರೇ ಸ್ವಯಂ ಪ್ರೇರಿತವಾಗಿ ಚಿತ್ರಕೃತಿಗಳನ್ನು ಕೊಂಡು ಸಂಗ್ರಹಿಸಿಟ್ಟು ಕೊಳ್ಳುತ್ತಾರೆ. ಕೆಲವೊಂದು ಚಿತ್ರಕೃತಿಗಳು ಒಂದು ಕೋಟಿ ರೂ.ಗೂ ಹೆಚ್ಚು ಮಾರಾಟವಾಗುತ್ತದೆ. ನನಗೂ ಚಿತ್ರಕೃತಿಗಳನ್ನು ನೋಡುವುದೆಂದರೆ ಇಷ್ಟ. ನಮ್ಮ ಮನೆಯಲ್ಲಿಯೂ ಚಿತ್ರಕೃತಿಗಳಿವೆ ಎಂದು ಅವರು ತಿಳಿಸಿದರು.

ಕೇಂದ್ರದ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ದೇಶದಲ್ಲೇ ಬೆಂಗಳೂರಿನಲ್ಲಿ ಮಾತ್ರ ಚಿತ್ರಕಲಾವಿದರು ಹಾಗೂ ಚಿತ್ರ ರಸಿಕರು ಒಂದು ಕಡೆ ಸೇರುದಂತಹ ‘ಚಿತ್ರಸಂತೆ’ ಆಯೋಜಿಸಲಾಗುತ್ತಿದೆ. ಚಿತ್ರಕಲಾ ಕ್ಷೇತ್ರದತ್ತ ಜನತೆಯ ಬಳಿ ಕೊಂಡೊಯ್ಯಲು ಒಳ್ಳೆಯ ಕಾರ್ಯಕ್ರಮವೆಂದು ತಿಳಿಸಿದರು.

  ಮನುಷ್ಯನ ಸಂಬಂಧಗಳನ್ನು ಬೆಸೆಯುವಲ್ಲಿ ಕಲಾಕೃತಿಗಳು ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿವೆ. ಕೆಲವು ಮೂಲಭೂತವಾದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಕಲಾಕೃತಿಗಳು ತನ್ನದೇ ಆದ ರೀತಿಯಲ್ಲಿ ಪರಿಹಾರವನ್ನು ಒದಗಿಸಬಲ್ಲದು. ಕಲಾ ಕ್ಷೇತ್ರಕ್ಕೆ ರಾಜ್ಯ ಸರಕಾರವು ಅಗತ್ಯವಾದ ನೆರವನ್ನು ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News