ಮಟರ್.......ಇದು ಬಟರ್‌ನಷ್ಟೇ ರುಚಿ

Update: 2017-01-16 09:28 GMT

ರುಚಿಕರವಾದ ಹಸಿ ಬಟಾಣಿ ಕೋಡು ಅಥವಾ ಮಟರ್ ಅಥವಾ ಗ್ರೀನ್ ಪೀಸ್‌ನಲ್ಲಿಯ ಹಸಿರು ಬೀಜಗಳು ಸಮೃದ್ಧ ಪೋಷಕಾಂಶಗಳನ್ನೊಳಗೊಂಡಿದ್ದು, ಪುರಾತನ ಕಾಲದಿಂದಲೂ ವಿಶ್ವದಲ್ಲಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲೊಂದಾಗಿದೆ. ವಾಯುವ್ಯ ಭಾರತದ ಹಿಮಾಲಯ ತಪ್ಪಲು ಇದರ ಮೂಲವೆಂದು ನಂಬಲಾಗಿದೆ.

 ಸಸ್ಯಶಾಸ್ತ್ರೀಯವಾಗಿ ಫೆಬಾಕಸೀ ಕುಟುಂಬಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು ಪಿಸಮ್ ಸಟಿವಮ್ ಆಗಿದೆ. ನೀರು ಚೆನ್ನಾಗಿ ಹರಿದು ಹೋಗುವ ಮರಳು ಮಿಶ್ರಿತ ಮಣ್ಣು ಇದನ್ನು ಬೆಳೆಯಲು ಸೂಕ್ತವಾಗಿದ್ದು, ಸಾಕಷ್ಟು ತೇವಾಂಶ ಮತು ತಂಪು ವಾತಾವರಣ ಪೂರಕವಾಗಿದೆ. 2-3 ಇಂಚು ಉದ್ದ ಬೆಳೆಯುವ ಕೋಡಿನಲ್ಲಿ 2ರಿಂದ 10 ತಿಳಿಹಸಿರು ಬಣ್ಣದ ಮೃದು ಬೀಜಗಳಿರುತ್ತವೆ.

ಮಟರ್‌ನಿಂದ ಆರೋಗ್ಯ ಲಾಭಗಳು.

ಅತ್ಯಂತ ಪೌಷ್ಟಿಕಾಂಶಭರಿತ ದ್ವಿದಳ ತರಕಾರಿಗಳಲ್ಲೊಂದಾಗಿರುವ ಮಟರ್ ಆರೋಗ್ಯಕ್ಕೆ ಲಾಭಕಾರಿಯಾದ ಫೈಟೊ ನ್ಯೂಟ್ರಿಯಂಟ್‌ಗಳು, ಖನಿಜಗಳು, ವಿಟಾಮಿನ್ ಗಳು ಮತ್ತು ಆ್ಯಂಟಿ ಆಕ್ಸಿಡಂಟ್‌ಗಳನ್ನು ಹೇರಳವಾಗಿ ಹೊಂದಿದೆ.

 ತಾಜಾ,ಎಳೆಯ ಮಟರ್ ಬೀನ್ಸ್‌ಗೆ ಹೋಲಿಸಿದರೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಪ್ರತಿ 100 ಗ್ರಾಂ ಮಟರ್ ಕೇವಲ 81 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಕೊಲೆಸ್ಟರಾಲ್ ಇದರಲ್ಲಿಲ್ಲ. ಜೊತೆಗೆ ಇದು ಪ್ರೋಟಿನ್, ವಿಟಾಮಿನ್ ಗಳು ಹಾಗೂ ಕರಗಬಲ್ಲ ಮತ್ತು ಕರಗದ ನಾರಿನಂಶಗಳ ಉತ್ತಮ ಮೂಲವಾಗಿದೆ.

ತಾಜಾ ಮಟರ್ ಕೋಡುಗಳು ಫಾಲಿಕ್ ಆ್ಯಸಿಡ್‌ನ್ನು ಸಮೃದ್ಧವಾಗಿ ಹೊಂದಿರುತ್ತವೆ. 100 ಗ್ರಾಂ ಮಟರ್ ನಮ್ಮ ಶರೀರದ ದೈನಂದಿನ ಅಗತ್ಯದ ಶೇ.16ರಷ್ಟು ಫೊಲೇಟ್‌ಗಳನ್ನು ಒದಗಿಸುತ್ತದೆ. ಫೊಲೇಟ್ ಶರೀರದೊಳಗೆ ಡಿಎನ್‌ಎ ಸಂಶ್ಲೇಷಣೆಗೆ ಅಗತ್ಯವಾಗಿರುವ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳಲ್ಲೊಂದಾಗಿದೆ.

ಸಾಕಷ್ಟು ಫೊಲೇಟ್‌ಗಳಿರುವ ಆಹಾರವನ್ನು ಗರ್ಭಿಣಿಯರು ಸೇವಿಸುತ್ತಿದ್ದರೆ ನವಜಾತ ಶಿಶುಗಳಲ್ಲಿ ನ್ಯೂರಲ್ ಟ್ಯೂಬ್‌ನ ದೋಷಗಳನ್ನು ತಡೆಯುವಲ್ಲಿ ನೆರವಾಗುತ್ತದೆ.

ತಾಜಾ ಮಟರ್ ಎಸ್ಕಾರ್ಬಿಕ್ ಆ್ಯಸಿಡ್(ವಿಟಾಮಿನ್ ಸಿ) ಅನ್ನು ಉತ್ತಮ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. 100 ಗ್ರಾಂ ತಾಜಾ ಕೋಡುಗಳು 40 ಮಿ.ಗ್ರಾಂ ಅಥವಾ ನಮ್ಮಶರೀರದ ದೈನಂದಿನ ಅಗತ್ಯದ ಶೇ.67ರಷ್ಟು ವಿಟಾಮಿನ್ ಸಿ ಅನ್ನು ಒಳಗೊಂಡಿರುತ್ತವೆ. ವಿಟಾಮಿನ್ ಸಿ ಶಕ್ತಿಶಾಲಿ, ನೈಸರ್ಗಿಕ ನೀರಿನಲ್ಲಿ ಕರಗಬಲ್ಲ ಆ್ಯಂಟಿ ಆಕ್ಸಿಡಂಟ್ ಆಗಿದೆ.

ವಿಟಾಮಿನ್ ಸಿ ಅನ್ನು ಒಳಗೊಂಡಿರುವ ತರಕಾರಿಗಳ ಸೇವನೆಯು ಸೋಂಕುಕಾರಕಗಳ ವಿರುದ್ಧ ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಶರೀರದಲ್ಲಿನ ಹಾನಿಕಾರಕ,ಉರಿಯೂತಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸಲುನೆರವಾಗುತ್ತದೆ.ಮಟರ್ ಫೈಟೊಸ್ಟೆರಾಲ್‌ಗಳನ್ನು, ವಿಶೇಷವಾಗಿ ಬೀಟಾ ಸೈಟೊಸ್ಟೆರಾಲ್ ನ್ನು ಒಳಗೊಂಡಿದ್ದು, ಇವು ಶರೀರದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತವೆ.

ಮಟರ್‌ನಲ್ಲಿ ವಿಟಾಮಿನ್ ಕೆ ಕೂಡ ಉತ್ತಮ ಪ್ರಮಾಣದಲ್ಲಿದೆ. ಪ್ರತಿ ನೂರು ಗ್ರಾಂ ತಾಜಾ ಬೀಜಗಳು ನಮ್ಮ ದೈನಂದಿನ ಅಗತ್ಯದ ಶೇ.21ರಷ್ಟು ವಿಟಾಮಿನ್ ಕೆ-1 ಅನ್ನು ಒದಗಿಸುತ್ತವೆ. ವಿಟಾಮಿನ್ ಕೆ ಅಸ್ಥಿಮಜ್ಜೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಮಿದುಳಿನೊಳಗೆ ಉಂಟಾಗಿರುವ ನರಸಂಬಂಧಿ ಹಾನಿಯನ್ನು ಸೀಮಿತ ಗೊಳಿಸುವ ಮೂಲಕ ಅಲ್ಝೀಮರ್ ಕಾಯಿಲೆಪೀಡಿತ ರೋಗಿಗಳ ಚಿಕಿತ್ಸೆಯಲ್ಲಿಯೂ ವಿಟಾಮಿನ್ ಕೆ ನೆರವಾಗುತ್ತದೆ.

ತಾಜಾ ಮಟರ್ ಸಾಕಷ್ಟು ಪ್ರಮಾಣದಲ್ಲಿ ಕ್ಯಾರೊಟಿನ್,ಲುಟೆನ್,ಝೀ ಕ್ಸಾಂತಿನ್ ಮತ್ತು ವಿಟಾಮಿನ್ ಎ ಗಳಂತಹ ಆ್ಯಂಟಿ ಆಕ್ಸಿಡಂಟ್ ಫ್ಲಾವೊನಾಯ್ಡಾಗಳನ್ನು ಒಳಗೊಂಡಿರುತ್ತದೆ. ವಿಟಾಮಿನ್ ಎ ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಜೊತೆಗೆ ಈ ಫ್ಲಾವನಾಯ್ಡಾಗಳು ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧವೂ ರಕ್ಷಣೆ ನೀಡುತ್ತವೆ.

 ಮಟರ್ ಬಿ-ಕಾಂಪ್ಲೆಕ್ಸ್ ಗುಂಪಿನ ಹಲವಾರು ಅಗತ್ಯ ವಿಟಾಮಿನ್‌ಗಳ ಆಗರ ವಾಗಿದೆ. ಅದು ಪೈರಿಡಾಕ್ಸಿನ್(ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ಪ್ಯಾಂಟೊಥೆನಿಕ್ ಆ್ಯಸಿಡ್(ವಿಟಾಮಿನ್ ಬಿ5) ಮತ್ತು ನಿಯಾಸಿನ್(ವಿಟಾಮಿನ್ ಬಿ3)ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿದೆ. ಈ ವಿಟಾಮಿನ್‌ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ.ಜೊತೆಗೆ ಕಬ್ಬಿಣ,ತಾಮ್ರ,ಸತುವು ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳು ಮಟರ್‌ನಲ್ಲಿ ಹೇರಳವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News