ಅಪರಾಧ-ಅಪಘಾತ ತಡೆ ಹಿನ್ನಲೆ: ಹೆದ್ದಾರಿಗಳಿಗೆ ಬಂತು 100 ಗಸ್ತು ವಾಹನ

Update: 2017-01-16 15:20 GMT

ಬೆಂಗಳೂರು, ಜ.16: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ಹಾಗೂ ಅಪರಾಧಗಳನ್ನು ತಡೆಗಟ್ಟಲು ಮುಂದಾಗಿರುವ ರಾಜ್ಯ ಸರಕಾರ, ಮೊದಲ ಹಂತದ 100 ಗಸ್ತು ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಸೋಮವಾರ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು 100 ಹೆದ್ದಾರಿ ಗಸ್ತು ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಲೋಕಾರ್ಪಣೆ ಮಾಡಿದರು.

 ಈ ಬಗ್ಗೆ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ರಾಜ್ಯ ಹೆದ್ದಾರಿ ಸುರಕ್ಷತಾ ವಾಹನಗಳ ಯೋಜನೆಯಡಿ ಮೊದಲ ಹಂತದಲ್ಲಿ 100 ವಾಹನಗಳನ್ನು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿ ಹೆದ್ದಾರಿಗಳಲ್ಲಿ ಗಸ್ತು ತಿರುಗಲು ನಿಯೋಜಿಸಲಾಗುತ್ತದೆ.

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 30 ರಿಂದ 40 ಕಿ.ಮೀ. ವ್ಯಾಪ್ತಿಯ ಅಂತರಕ್ಕೆ ತಲಾ 1 ವಾಹನವನ್ನು ಹಂಚಿಕೆ ಮಾಡಲಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ವ್ಯಾಪ್ತಿಯ ಅಂತರವು 20 ಕಿ.ಮೀ.ಗೆ ಇಳಿಯಲಿದೆ ಎಂದು ಮಾಹಿತಿ ನೀಡಿದರು.

 ಗಸ್ತು ವಾಹನಗಳಲ್ಲಿ 360 ಡಿಗ್ರಿ ಕ್ಯಾಮರಾ, ಟಚ್ ಸ್ಕ್ರೀನ್ ಮಾನಿಟರ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಮಡಚುವ ಸ್ಟ್ರೇಚರ್, ಅಗ್ನಿಶಮನ ಉಪಕರಣ, ಸರ್ಚ್ ಲೈಟರ್, ಇನ್ವರ್ಟರ್, ಟಾಪ್‌ಬಾರ್ ಲೈಟ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಓಂಪ್ರಕಾಶ್ ಹೇಳಿದರು.

100 ವಾಹನಗಳನ್ನು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದ್ದು, ಈಗಾಗಲೇ 33 ಹೆದ್ದಾರಿ ಗಸ್ತು ವಾಹನಗಳನ್ನು ಪ್ರಮುಖ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಮುಂದಿನ 3 ವರ್ಷಗಳಲ್ಲಿ ಸುಮಾರು 300 ಗಸ್ತು ವಾಹನಗಳು ಹೆದ್ದಾರಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಈ ವಾಹನಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವುದು, ಅಪಘಾತ ಸಂಭವಿಸಿದಾಗ ತುರ್ತು ರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು. ಗಾಯಾಳುಗಳನ್ನು ತುರ್ತಾಗಿ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯುವುದು. ಸಂಚಾರ ನಿಯಮಗಳನ್ನು ಹೆದ್ದಾರಿಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವ ಕಾರ್ಯವನ್ನು ಮಾಡಲಿದೆ ಎಂದು ವಿವರಿಸಿದರು.

ಸುರಕ್ಷಣೆ ಆಗುತ್ತಾ-ಸಿಎಂ: ಇದೇ ಸಂದರ್ಭದಲ್ಲಿ ವಾಹನಗಳಿಗೆ ಹಸಿರು ನಿಶಾನೆ ತೋರಿದ ನಂತರ ವಾಹನದ ಒಳಸೌಲಭ್ಯ ಹಾಗೂ ಉಪಕರಣಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಹನದಲ್ಲಿರುವ ಮೈಕ್‌ನಲ್ಲಿ ಈ ವಾಹನಗಳಿಂದ ರಸ್ತೆ ಸುರಕ್ಷತೆ ಕಾಪಾಡಬಹುದೆ, ಅಪಘಾತಗಳಾದಾಗ ಗಾಯಾಳುಗಳ ನೆರವಿಗೆ ಈ ವಾಹನಗಳು ಧಾವಿಸುತ್ತವೆಯೇ ಎಂದು ಪ್ರಶ್ನಿಸಿದಾಗ ಪೊಲೀಸ್ ಅಧಿಕಾರಿಗಳು ಹೌದು, ತುರ್ತು ನೆರವಿಗೆ ಈ ವಾಹನಗಳು ಧಾವಿಸಲಿವೆ ಎಂಬ ಉತ್ತರ ಬಂದ ಮೇಲೆ ಮುಖ್ಯಮಂತ್ರಿ ಧನ್ಯವಾದ ಹೇಳಿದರು.

ಇದೇ ವೇಳೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಎಂ. ಪ್ರಸಾದ್, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News