ಬಿಎಸ್‌ವೈ-ಈಶ್ವರಪ್ಪ ನಡುವಿನ ಬಿಕ್ಕಟ್ಟು ಶಮನಕ್ಕೆ ಕೇಶವಕೃಪದಲ್ಲಿ ಆರೆಸ್ಸೆಸ್ ಸಮಲೋಚನಾ ಸಭೆ

Update: 2017-01-17 15:21 GMT

ಬೆಂಗಳೂರು, ಜ.17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನವನ್ನು ಪರಿಹರಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ಮುಖಂಡರು ನಗರದ ಕೇಶವಕೃಪದಲ್ಲಿ ಸಮಾಲೋಚನಾ ಸಭೆ ನಡೆಸಿದರು.

ಆರೆಸ್ಸೆಸ್‌ನ ಅಖಿಲ ಭಾರತೀಯ ಸಹಬೌದ್ಧಿಕ ಪ್ರಮುಖ ಮುಕುಂದರಾವ್, ದಕ್ಷಿಣ ಮಧ್ಯ ಕ್ಷೇತ್ರೀಯ ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಗೋಪಾಲ್, ಆರೆಸ್ಸೆಸ್ ಪ್ರಾಂತೀಯ ಸಂಚಾಲಕ ಬಿ.ನಾಗರಾಜ್, ಉತ್ತರ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಗೋವರ್ಧನ್ ರಾವ್ ಸೇರಿದಂತೆ ಸಂಘದ ಹಾಗೂ ಬಿಜೆಪಿಯ ಕೆಲವು ಪ್ರಮುಖರು ಸಭೆಯಲ್ಲಿ ಭಾಗವಸಿದ್ದರು.

ಈ ಸಮಾಲೋಚನಾ ಸಭೆಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪರನ್ನು ಆಹ್ವಾನಿಸಿರಲಿಲ್ಲ. ಬದಲಿಗೆ, ಯಡಿಯೂರಪ್ಪಪರವಾಗಿ ಬಿಜೆಪಿ ಪ್ರಧಾಶ ಕಾರ್ಯದರ್ಶಿ ಅರುಣ್‌ಕುಮಾರ್ ಹಾಗೂ ಈಶ್ವರಪ್ಪಪರವಾಗಿ ಬಿಜೆಪಿಯ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಹಾಗೂ ಭಾಗವಹಿಸಿ ತಮ್ಮ ತಮ್ಮ ಬಣದ ಪರವಾಗಿ ದೂರುಗಳನ್ನು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ನೇಮಕಾತಿ, ಕೋರ್ ಕಮಿಟಿ ಸದಸ್ಯರ ಆಯ್ಕೆ, ಬರ ಅಧ್ಯಯನ ತಂಡದಲ್ಲಿ ದುರುದ್ದೇಶಪೂರ್ವಕವಾಗಿ ಕೆ.ಎಸ್. ಈಶ್ವರಪ್ಪರನ್ನು ಕೈಬಿಟ್ಟಿದ್ದು, ಪದಾಧಿಕಾರಿಗಳ ಸಭೆ ನಡೆಸದಿರುವುದು ಸೇರಿದಂತೆ ಮತ್ತಿತರ ವಿಷಯಗಳಲ್ಲಿ ಪದೇ ಪದೇ ಎಡವುತ್ತಿದ್ದಾರೆಂದು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸಂತೋಷ್ ದೂರು ನೀಡಿದರು.

ಇನ್ನು ಬಿ.ಎಸ್.ಯಡಿಯೂರಪ್ಪಪರವಾಗಿ ಸಭೆಗೆ ಬಂದಿದ್ದ ಬಿಜೆಪಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಈಶ್ವರಪ್ಪಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಿದ್ದೇ ಸಮಸ್ಯೆಯ ಮೂಲ ಕಾರಣ ಎಂದು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿಗೂ ರಾಯಣ್ಣ ಬ್ರಿಗೇಡ್‌ಗೂ ಸಂಬಂಧಲ್ಲ ಎಂದು ಈಶ್ವರಪ್ಪಹೇಳುತ್ತಿದ್ದರೂ ಇದರ ಉದ್ದೇಶವೇ ಬೇರೆಯಾಗಿದೆ. ಶಿವಮೊಗ್ಗ ಇಲ್ಲವೆ ತುಮಕೂರಿನಿಂದ ಕೆ.ಎಸ್. ಈಶ್ವರಪ್ಪ ಮತ್ತು ಸೊಗಡು ಶಿವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ಯಡಿಯೂರಪ್ಪಎಲ್ಲೂ ಹೇಳಿಲ್ಲ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷ ಇರುವಾಗ ಟಿಕೆಟ್ ಬಗ್ಗೆ ಕೆ.ಎಸ್.ಈಶ್ವರಪ್ಪ ಚಿಂತಿಸುವ ಅಗತ್ಯಲ್ಲ. ಪಕ್ಷದಲ್ಲೇ ಅನೇಕ ಮೋರ್ಚಾಗಳಿವೆ ಅವುಗಳ ಜೊತೆ ಒಗ್ಗೂಡಿ ಸಂಘಟನೆ ಮಾಡಬಹುದು. ಅಲ್ಲದೆ ಕೆ.ಎಸ್.ಈಶ್ವರಪ್ಪಎಲ್ಲ ಸಭೆ ಸಮಾರಂಭಗಳಲ್ಲಿ ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಾರೆ ಎಂದು ಅರುಣ್ ಕುಮಾರ್ ಆರೋಪಿಸಿದರು.

ಈ ಉಭಯ ನಾಯಕರ ವಾದ ಆಲಿಸಿರುವ ಆರೆಸ್ಸೆಸ್ ನಾಯಕರು ಜ.20ರಂದು ಕಲ್ಬುರ್ಗಿಯಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯ ನಂತರ ಪರಿಸ್ಥಿತಿ ತಿಳಿಯಾಗದಿದ್ದರೆ ಉಭಯ ನಾಯಕರನ್ನು ಕರೆಸಿ ಮಾತುಕತೆ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News