ಅವೈಜ್ಞಾನಿಕ ವೇಗ ತಡೆಗಳ ತೆರವಿಗೆ ಸೂಚನೆ

Update: 2017-01-19 17:02 GMT

ಬೆಂಗಳೂರು, ಜ.19: ಅವೈಜ್ಞಾನಿಕ ಮತ್ತು ಅನಧಿಕೃತ ವೇಗ ತಡೆ(ಸ್ಪೀಡ್ ಬ್ರೇಕರ್)ಗಳನ್ನು ತೆರವುಗೊಳಿಸುವಂತೆ ಮತ್ತು ಈ ಕುರಿತ ಕ್ರಿಯಾ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸುವಂತೆ ಪಿಡಬ್ಲೂಡಿ ಇಲಾಖೆಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಉಪಲೋಕಾಯುಕ್ತರು ಸೂಚಿಸಿದ್ದಾರೆ.

 ಹೆದ್ದಾರಿ ನಿರ್ಮಾಣ ಕಾಮಗಾರಿ ಸಂದರ್ಭ ಭಾರತೀಯ ರಸ್ತೆ ಕಾಯ್ದೆ ಮಾರ್ಗಸೂಚಿ ಅನುಸರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಆಡಿ ಅವರು ಸರಕಾರಕ್ಕೆ ಕಳಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ಎನ್‌ಎಚ್-206ರಲ್ಲಿ,ಅದರಲ್ಲೂ ಕಡೂರು ಮತ್ತು ಶಿವಮೊಗ್ಗ ನಡುವಿನ ಹೆದ್ದಾರಿಯಲ್ಲಿರುವ ಅವೈಜ್ಞಾನಿಕ ವೇಗ ತಡೆಗಳ ಕಾರಣ ಬಹಳಷ್ಟು ಅಪಘಾತಗಳು ಸಂಭವಿಸಿದ್ದು ಈ ನಿಟ್ಟಿನಲ್ಲಿ ಈ ವೇಗ ತಡೆಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಚಿಕ್ಕಮಗಳೂರಿನ ಬಿ.ವಿ.ಮಹೇಶ್ವರಪ್ಪ ಎಂಬವರು ಉಪಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ರಾಜ್ಯದಲ್ಲಿ 2014ರಲ್ಲಿ ಅವೈಜ್ಞಾನಿಕ ವೇಗ ತಡೆ ಹಾಗೂ ರಸ್ತೆ ಗುಂಡಿಗಳ ಕಾರಣ ರಸ್ತೆ ಅಪಘಾತದಿಂದ 970 ಸಾವು ಸಂಭವಿಸಿದೆ ಎಂಬ ವರದಿಯನ್ನೂ ಉಪಲೋಕಾಯುಕ್ತರ ಗಮನಕ್ಕೆ ತರಲಾಗಿತ್ತು.

ಕಡೂರು-ಶಿವಮೊಗ್ಗ ಹೆದ್ದಾರಿ ನಡುವೆ 9 ಅನಧಿಕೃತ ವೇಗ ತಡೆಗಳಿವೆ.ಅವನ್ನು ತೆರವುಗೊಳಿಸಿದರೂ ಸ್ಥಳೀಯರು ಮತ್ತೆ ನಿರ್ಮಿಸುತ್ತಿದ್ದಾರೆ ಎಂದು ಪಿಡಬ್ಲೂಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು-ಪುಣೆ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ವೇಗ ತಡೆಗಳ ಕಾರಣ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದೆ ಎಂದೂ ಈ ಬಗ್ಗೆ ನಡೆಸಲಾದ ಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಇರುವ ಬಹುತೇಕ ವೇಗ ತಡೆಗಳು ಗೋಚರಕ್ಕೇ ಬರುವುದಿಲ್ಲ. ಇವುಗಳಿಗೆ ರಿಫ್ಲೆಕ್ಟರ್ ಅಳವಡಿಸಲಾಗಿಲ್ಲ ಮತ್ತು ಯಾವುದೇ ಮಾರ್ಕಿಂಗ್ ಇಲ್ಲದಿರುವುದರಿಂದ ಅಪಘಾತ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News