ಬಿಜೆಪಿಯ ಆಂತರಿಕ ಭಿನ್ನಮತ ಸ್ಫೋಟ : ಬಿಎಸ್‌ವೈ ಸಭೆ ಬಹಿಷ್ಕರಿಸಿದ ಅತೃಪ್ತ ಮುಖಂಡರು

Update: 2017-01-19 17:14 GMT

ಬೆಂಗಳೂರು, ಜ.19: ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆದಿದ್ದ ಸಂಧಾನ ಸಭೆಯನ್ನು ಅತೃಪ್ತ ಮುಖಂಡರು ಬಹಿಷ್ಕರಿಸುವ ಮೂಲಕ, ಮತ್ತೆ ಸಂಘರ್ಷವನ್ನು ಮುಂದುವರೆಸಿದ್ದಾರೆ.

ಯಡಿಯೂರಪ್ಪ ಬಿಜೆಪಿಯ ರಾಜ್ಯಾಧ್ಯಕ್ಷರಾದ ನಂತರ ಪಕ್ಷದ ವಕ್ತಾರರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕಾತಿ ಸಂದರ್ಭದಲ್ಲಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎಂದು ಅತೃಪ್ತ ಮುಖಂಡರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಅತೃಪ್ತ ಮುಖಂಡರೊಂದಿಗೆ ಚರ್ಚೆ ನಡೆಸಲು ಗುರುವಾರ ಸಂಜೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆಯನ್ನು ಕರೆದಿದ್ದರು. ಆದರೆ, ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ 24 ಮುಖಂಡರ ಪೈಕಿ ಕೇವಲ 12 ಮಂದಿಗೆ ಮಾತ್ರ ಸಭೆಗೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ.

ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರ ಮುಖಂಡರು, ನಿಗದಿತ ಅವಧಿಗೆ ಕಚೇರಿಯಲ್ಲಿ ಉಪಸ್ಥಿತರಿದ್ದರು. ಆದರೆ, ಸಭೆಗೆ ಕೇವಲ 12 ಮಂದಿಗೆ ಮಾತ್ರ ಆಹ್ವಾನಿಸಿರುವ ಕ್ರಮಕ್ಕೆ ಅತೃಪ್ತರು ಆಕ್ರೋಶ ವ್ಯಕ್ತಪಡಿಸಿ, ‘ಎಲ್ಲ 24 ಮುಖಂಡರನ್ನು ಆಹ್ವಾನಿಸಿ, ಇಲ್ಲದಿದ್ದರೆ ನಾವು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಯಡಿಯೂರಪ್ಪಗೆ ಸಂದೇಶ ರವಾನಿಸಿದರು. ಇದರಿಂದಾಗಿ, ಸಭೆಯನ್ನು ರದ್ದುಗೊಳಿಸಲಾಗಿದೆ.

ಶಿಸ್ತು ಕ್ರಮದ ಎಚ್ಚರಿಕೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಯಾರೇ ಆಗಲಿ, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದರು.

ಅತೃಪ್ತ ಮುಖಂಡರೊಂದಿಗಿನ ಸಭೆ ರದ್ದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖಂಡರ ಬಯಕೆಯಂತೆ ಈ ಸಭೆಯನ್ನು ಕರೆಯಲಾಗಿತ್ತು. ನಾವೆಲ್ಲ ಸಮಯಕ್ಕೆ ಸರಿಯಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಉಪಸ್ಥಿತರಿದ್ದೆವು. ಆದರೆ, ಯಾರು ಸಮಯವನ್ನು ಕೇಳಿದ್ದರೊ ಅವರೆ ಸಭೆಗೆ ಬಂದಿಲ್ಲ ಎಂದರು.

ಯಡಿಯೂರಪ್ಪರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೆ ಪಕ್ಷದ ವರಿಷ್ಠರು ಘೋಷಿಸಿದ್ದಾರೆ. ಆದರೆ, ಕೆಲವರು ಅವರನ್ನು ಹೀಯಾಳಿಸುವ ಕೆಲಸವನ್ನು ಮಾಡತ್ತಿದ್ದಾರೆ. ನಮ್ಮ ಕೆಲವು ನಾಯಕರ ವರ್ತನೆಯಿಂದ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆದುದರಿಂದ, ನಾನು ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಬೆಂಕಿ ಹಚ್ಚುವ ಕೆಲಸ ಮಾಡಬೇಡಿ: ಶಿವಮೊಗ್ಗದಲ್ಲಿನ ಸಣ್ಣ ಸಮಸ್ಯೆಯನ್ನು ಮುಂದಿಟ್ಟುಕೊಂಡು, ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾಡಬಾರದು ಎಂದು ಸಂಸದ ಬಿ.ಶ್ರೀರಾಮುಲು ಕಿಡಿಗಾರಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ರಾಜ್ಯದ ದೊಡ್ಡ ಶಕ್ತಿ. ಅವರ ಬಗ್ಗೆ 10 ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ಹಿರಿಯ ನಾಗರಿಕರಿಗೂ ಗೊತ್ತಿದೆ. ಅವರನ್ನು ಕೆಣಕುವ ಕೆಲಸಕ್ಕೆ ಈಶ್ವರಪ್ಪ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಅವರಂತಹ ನಾಯಕ ನಮ್ಮ ರಾಜ್ಯದಲ್ಲಿ ಈ ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಬರುವುದಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರು ಯಡಿಯೂರಪ್ಪರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೆ ಘೋಷಿಸಿದ್ದಾರೆ. ಅವರ ಬೆನ್ನಹಿಂದೆ ಎಲ್ಲರೂ ನಿಲ್ಲಬೇಕಿದೆ ಎಂದು ಅವರು ಹೇಳಿದರು.

ಕಳೆದ 40 ವರ್ಷಗಳಿಂದ ಯಡಿಯೂರಪ್ಪ ಜನಪರವಾದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಈಶ್ವರಪ್ಪ ಕೂಡ ನಮ್ಮ ಪಕ್ಷದ ನಾಯಕ. ಆದರೆ, ಶಿವಮೊಗ್ಗದಲ್ಲಿನ ಸಣ್ಣ ಸಮಸ್ಯೆಯನ್ನು ಮುಂದಿಟ್ಟುಕೊಂಡು, ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಒಂದು ದೊಡ್ಡ ಶಕ್ತಿ. ಅವರನ್ನು ಕೆಣಕುವ ಕೆಲಸವನ್ನು ಯಾರೂ ಮಾಡಬಾರದು. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು, ಎಲ್ಲ ನಾಯಕರು, ಮುಖಂಡರು ಒಗ್ಗಟ್ಟಿನಿಂದ ಮುಂದುವರೆಯ ಬೇಕಿದೆ ಎಂದು ಅವರು ಹೇಳಿದರು.

ಅಮಿತ್ ಶಾ ಸಭೆಗೆ ಹೋಗುತ್ತೇನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆಯುವಂತಹ ಸಭೆಗೆ ಮಾತ್ರ ನಾನು ಹೋಗುತ್ತೇನೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷದ ಸಂಘಟನೆಯಲ್ಲ. ಆದುದರಿಂದ, ರಾಜ್ಯ ಅಥವಾ ರಾಷ್ಟ್ರೀಯ ಮುಖಂಡರು ಈ ಸಂಘಟನೆ ನಿಲ್ಲಿಸುವಂತೆ ಹೇಳಲು ಅವಕಾಶವಿಲ್ಲ. ಇದರಿಂದ, ಪಕ್ಷಕ್ಕೆ ಯಾವುದೆ ಹಾನಿಯಾಗುವುದಿಲ್ಲ. ಸಾಧು-ಸಂತರ ನೇತೃತ್ವದಲ್ಲಿ ಈ ಸಂಘಟನೆ ಮುಂದುವರೆಯುತ್ತಿದೆ.

-ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News