ಬಿಎಸ್‌ವೈ ಅವರದ್ದು ಹಿತ್ತಾಳೆ ಕಿವಿ: ವಿ.ಸೋಮಣ್ಣ ಅಸಮಾಧಾನ

Update: 2017-01-20 14:03 GMT

ಬೆಂಗಳೂರು, ಜ. 20: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ತಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಕಾಂಗ್ರೆಸ್ ಸೇರ್ಪಡೆ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನನಗೆ ಎಲ್ಲವನ್ನು ಕೊಟ್ಟಿದೆ. ಹೀಗಾಗಿ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ತಮಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ ಯಾರಿಂದಲೂ ಆಹ್ವಾನವು ಬಂದಿಲ್ಲ. ತಾನೂ ಯಾರನ್ನೂ ಸಂಪರ್ಕಿಸಿಲ್ಲ. ತನಗೆ ಕಾಂಗ್ರೆಸ್ ಸೇರುವ ಬಯಕೆಯೂ ಇಲ್ಲ ಎಂದರು.

ನಾಲ್ವರನ್ನು ದೂರವಿಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರದು ಹಿತ್ತಾಳೆ ಕಿವಿ. ಅವರು ತಮ್ಮ ಸುತ್ತ ಇರುವ ನಾಲ್ಕು ಮಂದಿಗಳನ್ನು ದೂರ ಇಡಬೇಕು. ನಮಗೆ ಹಳೆಯ ಯಡಿಯೂರಪ್ಪ ಬೇಕೆ ಹೊರತು, ಈಗಿನ ಬಿಎಸ್‌ವೈ ಅಲ್ಲ ಎಂದು ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ಸಲಹೆ ಮಾಡಿದ ಅವರು, ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ತಮ್ಮ ಮಧ್ಯೆ ಗುದ್ದಾಟವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸಬೇಕು.

ಶಿವಮೊಗ್ಗ ಸಮಸ್ಯೆಯನ್ನು ರಾಜ್ಯದ ಮೇಲೆ ಹೇರುವ ಪ್ರಯತ್ನ ಸಲ್ಲ. ಉಭಯ ನಾಯಕರು ತಮ್ಮ ಮಧ್ಯೆದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕು ಎಂದ ಅವರು, ರಾಜ್ಯದ ಜನತೆ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಪಕ್ಷವನ್ನು ಮುನ್ನಡೆಸಬೇಕು ಎಂದರು.

ತನಗೇನು ಹಂಗಿಲ್ಲ: ಕೆಲವರ ಮಾತುಗಳನ್ನು ಕೇಳಿಕೊಂಡು ಯಡಿಯೂರಪ್ಪ ತಮ್ಮನ್ನು ಕಡೆಗಣಿಸುವುದಕ್ಕೆ ತಾನು ಮಾನಸಿಕವಾಗಿ ನೊಂದಿದ್ದೇನೆ. ನನಗೆ ಯಾವುದೇ ಪಕ್ಷದ ಹಂಗಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕನಾದವನು ನಾನು. ಆದರೆ, ಬಿಎಸ್‌ವೈ ಅವರೊಂದಿಗೆ ತಾನು ಮಾತನಾಡಲು ಬಯಸುವುದಿಲ್ಲ ಎಂದರು.

ಸಂದಿಗ್ಧ ಸ್ಥಿತಿಯಲ್ಲಿ ತಾನಿದ್ದು, ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಆರ್. ಅಶೋಕ್ ಸೇರಿದಂತೆ ಬಹಳಷ್ಟು ಮಂದಿ ಎಲ್ಲ ಪಕ್ಷಗಳಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ಆದರೆ, ಬಿಜೆಪಿ ನನಗೆ ತಾಯಿ ಸಮಾನ. ಹೀಗಾಗಿ ಪಕ್ಷ ತ್ಯಜಿಸುವ ಪ್ರಶ್ನೆ ಉದ್ಬವಿಸದು ಎಂದರು.

‘ಪಕ್ಷದಲ್ಲಿ ಕೆಲವೊಂದು ಭಿನ್ನಾಪ್ರಾಯಗಳಿರುವುದು ಸತ್ಯ. ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಮುನ್ನಡೆಸಲು ಶ್ರಮಿಸುವುದು ಅಗತ್ಯ. ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳಲ್ಲಿ ಸತ್ಯಾಂಶವಿಲ್ಲ. ಅವರು ಬಿಜೆಪಿಯಲ್ಲಿಯೇ ಮುಂದುವರಿಯಲಿದ್ದಾರೆ’

-ಆರ್.ಅಶೋಕ್ ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News