ವಿಷ್ಣು ಶ್ಯಾನುಭೋಗ್ (ಎ.ವಿ ಶ್ಯಾನುಭೋಗ್)
ಕಾಸರಗೋಡು , ಜ.21 : ಹಿರಿಯ ಕನ್ನಡ ಹೋರಾಟಗಾರ ಹಾಗೂ ಖ್ಯಾತ ನ್ಯಾಯವಾದಿ ಎಲ್ಲಂಗಳ ವಿಷ್ಣು ಶ್ಯಾನುಭೋಗ್ (ಎ.ವಿ ಶ್ಯಾನುಭೋಗ್) ಇಂದು ಬೆಳಿಗ್ಗೆ ತಾಲಿಪಡ್ಪುವಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 91 ವರ್ಷ ವಯಸ್ಸಾಗಿತ್ತು.
1926 ಜುಲೈ 5ರಂದು ಜನಿಸಿದ ಎ.ವಿ. ಶ್ಯಾನುಭೋಗ್ ಕಾಸರಗೋಡು ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಬಳಿಕ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿದ್ದರು.
ಮದ್ರಾಸ್‌ನಲ್ಲಿ ಕಾನೂನು ಪದವಿ ಪಡೆದು ನ್ಯಾಯವಾದಿ ಕೆ.ಆರ್. ಕಾರಂತರ ಜ್ಯೂನಿಯರ್ ಆಗಿ 1952ರಲ್ಲಿ ಮಂಗಳೂರಿನಲ್ಲಿ ನ್ಯಾಯವಾದಿ ಸೇವಾ ರಂಗಕ್ಕೆ ಕಾಲಿರಿಸಿದ್ದರು.
ಕೇರಳ ರಾಜ್ಯ ರೂಪೀಕರಣಗೊಂಡ ಬಳಿಕ ಅವರು 1952ರಲ್ಲಿ ತಮ್ಮ ವಾಸ್ತವ್ಯವನ್ನು ಕಾಸರಗೋಡಿಗೆ ಸ್ಥಳಾಂತರಿಸಿ ಜಿಲ್ಲಾ ವಕೀಲ ಸೇವೆ ಮುಂದುವರಿಸಿದ್ದರು. 60 ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದರು.
ಕಾಸರಗೋಡು-ಕರ್ನಾಟಕ ಸಮಿತಿಯ ಸ್ಥಾಪಕ ಸದಸ್ಯರಾಗಿರುವ ಎ.ವಿ. ಶ್ಯಾನುಭೋಗ್‌ರವರು ಹಲವು ಬಾರಿ ಅದರ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವ ಬೇಡಿಕೆಯೊಂದಿಗೆ ಈ ತನಕ ನಡೆದ ಎಲ್ಲಾ ಹೋರಾಟಗಳಲ್ಲೂ ಅವರು ಮುಂಚೂಣಿಯಲ್ಲಿ ನಿಂತು ಭಾಗವಹಿಸಿದ್ದರು. ಇದಲ್ಲದೆ ಕಾಸರಗೋಡಿನಲ್ಲಿ ಕನ್ನಡ ಭಾಷೆ, ನಡೆ-ನುಡಿ ಮತ್ತು ಸಂಸ್ಕೃತಿಯ ಉಳಿವಿಗಾಗಿಯೂ ಅವಿರತವಾಗಿ ದುಡಿದಿದ್ದರು. ಕಾಸರಗೋಡಿನ ಕನ್ನಡಿಗರ ಸಂವಿಧಾನಬದ್ಧ ಹಕ್ಕು ಕಸಿಯುತ್ತಿರುವುದನ್ನು ಪ್ರತಿಭಟಿಸಿ ನಡೆದ ಎಲ್ಲಾ ಹೋರಾಟಗಳ ನೇತೃತ್ವ ಸ್ಥಾನದಲ್ಲಿ ಅವರಿದ್ದರು.
ಕಾಸರಗೋಡು ಲಲಿತಕಲಾಸದನದ ಕಾರ್ಯದರ್ಶಿ, ಕಾಸರಗೋಡು ಬಾರ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಮಾತ್ರವಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಸರಗೋಡು ಲಯನ್ಸ್ ಕ್ಲಬ್ ಅಧ್ಯಕ್ಷರು ಮತ್ತು ಚಿನ್ಮಯ ಮಿಶನ್‌ನ ಪದಾಧಿಕಾರಿಗಳಾಗಿಯೂ ಅವರು ಈ ಹಿಂದೆ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಹಾಗೂ 7ಮಂದಿ ಮಕ್ಕಳನ್ನು ಅಗಲಿದ್ದಾರೆ .