ಬಿಎಸ್‌ವೈ-ಈಶ್ವರಪ್ಪ ಸಂಧಾನ ವಿಫಲ

Update: 2017-01-21 14:54 GMT

ಬೆಂಗಳೂರು, ಜ.21: ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಮತದ ನಡುವೆಯೆ ಕಲಬುರಗಿಯಲ್ಲಿ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿದ್ದು, ಕೆಲ ದಿನಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ನಗರದ ಹರವಾಡ ಕಲ್ಯಾಣಮಂಟಪದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭವಾಗುವುದಕ್ಕಿಂತ ಮುಂಚೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಸಂಧಾನ ನಡೆಸಲು ಕೆಲವು ಪ್ರಮುಖ ನಾಯಕರು ನಡೆಸಿದ ಪ್ರಯತ್ನ ವಿಫಲವಾಯಿತು.

ಬಿಎಸ್‌ವೈ ತಾಕೀತು: ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಅಶಿಸ್ತಿಗೆ ಅವಕಾಶ ನೀಡುವುದಿಲ್ಲ. ಯಾವುದೆ ಚಟುವಟಿಕೆಗಳು ನಡೆಯಬೇಕಿದ್ದರೂ ಅದು ಪಕ್ಷದ ಚೌಕಟ್ಟಿನಲ್ಲೆ ಜರುಗಬೇಕು ಎಂದು ಪರೋಕ್ಷವಾಗಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಈಶ್ವರಪ್ಪಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಯಡಿಯೂರಪ್ಪ ಪರೋಕ್ಷವಾಗಿ ತಾಕೀತು ಮಾಡಿದರು.

ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನ ರೋಸಿಹೋಗಿದ್ದು, ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಪಕ್ಷದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾವುದೆ ಕಾರಣಕ್ಕೂ ಪಕ್ಷದಲ್ಲಿ ಅಶಿಸ್ತಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲವನ್ನು ಎದುರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಸರಕಾರದ ವೈಫಲ್ಯಗಳನ್ನು ಜನತೆಗೆ ಮನದಟ್ಟು ಮಾಡಿಕೊಡಬೇಕು. ಬರಗಾಲ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದನ್ನು ತಪ್ಪಿಸಲು ಪ್ರಯತ್ನ ಪಡಬೇಕು ಎಂದು ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿರುವ ಸಾಧನೆಗಳನ್ನು ಜನರ ಬಳಿ ಕೊಂಡೊಯ್ಯಬೇಕು. ಬರ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಸರಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಬರ ಪರಿಹಾರ ಕಾಮಗಾರಿಗಳು ನಡೆದಿವೆ ಎಂಬುದರ ಕುರಿತು ಅವಲೋಕನ ನಡೆಸಬೇಕು. ಪಕ್ಷದ ಪ್ರತಿಯೊಬ್ಬ ನಾಯಕ, ಮುಖಂಡ ಹಾಗೂ ಕಾರ್ಯಕರ್ತರು ಅಲಸ್ಯ ಬಿಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಬೇಕು ಎಂದು ಅವರು ಸೂಚಿಸಿದರು.

ಪಕ್ಷದಲ್ಲಿ ಇನ್ನು ಮುಂದೆ ಯಾವುದೆ ರೀತಿಯ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ. ಈಗ ಆಗಿರುವಂತಹ ತಪ್ಪುಗಳನ್ನು ಸರಿಪಡಿಸಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಆದ್ಯತೆ ನೀಡಲಾಗುವುದು. ಸ್ವಂತ ಬಲದ ಆಧಾರದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ಕಾರ್ಯಕರ್ತರು ಕಂಕಣಬದ್ಧರಾಗಿ ದುಡಿಯಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಪ್ರಮುಖ ನಾಯಕರ ವರ್ತನೆಯಿಂದ ಪಕ್ಷದಲ್ಲಿ ಉಂಟಾಗಿರುವ ಒಡಕುಗಳಿಂದಾಗಿ ಕಾರ್ಯಕರ್ತರಿಗೆ ನೋವಾಗಿದೆ. ಈ ಹಿಂದೆ ಇದೇ ಮಾದರಿಯ ಪ್ರಮಾದಗಳು ನಡೆದಾಗ ಪಕ್ಷ ಎಂತಹ ಅನಾಹುತವನ್ನು ಎದುರಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕಿವಿಮಾತು ಹೇಳಿದರು.

ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್, ರಮೇಶ್ ಜಿಗಜಿಣಗಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಪ್ರಹ್ಲಾದ್‌ಜೋಶಿ, ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News