×
Ad

ಕಲ್ಯಾಣ ರಾಜಕೀಯಕ್ಕೆ ಅಡಿಗಲ್ಲು ಹಾಕಿದ ಎಂಜಿಆರ್

Update: 2017-01-21 21:06 IST

ದಶಕದಷ್ಟು ಕಾಲ ತಮಿಳುನಾಡನ್ನು ಆಳಿದ ಎಂಜಿಆರ್ ಸಿನೆಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸಿನಿಂದಾಗಿ ಎಂಜಿಆರ್ ಸಿದ್ಧಾಂತವಾಗಿ ರೂಪುಗೊಂಡವರು. ಕಲ್ಯಾಣರಾಜ್ಯ ಎಂಬ ಪರಿವರ್ತಿತ ತಮಿಳುನಾಡಿಗೆ ಅಡಿಗಲ್ಲು ಹಾಕಿದ ಕೀರ್ತಿ ಎಂಜಿಆರ್ ಅವರದ್ದು. ಅವರು ಬಡವರಿಗೆ ನೀಡಿದ ವಿನಾಯಿತಿಗಳು ಹಾಗೂ ಸಬ್ಸಿಡಿ ಯೋಜನೆಗಳು ಜನರ ಸನಿಹಕ್ಕೆ ಅವರನ್ನು ಒಯ್ದಿತು. ಅವರು ಅಧಿಕಾರದಲ್ಲಿದ್ದಾಗ ಬಂದ ಭ್ರಷ್ಟಾಚಾರದ ಆರೋಪಗಳ ಹೊರತಾಗಿಯೂ, ದ್ರಾವಿಡ ಆದರ್ಶಕ್ಕೆ ವಿರುದ್ಧವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರೂ, ಸ್ವಚ್ಛವ್ಯಕ್ತಿ ಅಥವಾ ದ್ರಾವಿಡ ಮುಖಂಡ ಎಂಬ ಇಮೇಜ್‌ಗೆ ಧಕ್ಕೆ ಬರಲಿಲ್ಲ.

ಭಾರತದ ಅತ್ಯಂತ ಸೂಜಿಗಲ್ಲು ವ್ಯಕ್ತಿತ್ವದ ರಾಜಕಾರಣಿಗಳಲ್ಲಿ ಮರುದೂರು ಗೋಪಾಲನ್ ರಾಮಚಂದ್ರನ್ ಅಥವಾ ಎಂಜಿಆರ್ ಅಗ್ರಗಣ್ಯರು. ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಬಳಿಕ ಚಿತ್ರರಂಗದ ಹಿನ್ನೆಲೆಯಿಂದ ರಾಜಕೀಯಕ್ಕೆ ಧುಮುಕಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಎರಡನೇ ವ್ಯಕ್ತಿ. ರೇಗನ್‌ಗಿಂತ ಭಿನ್ನವಾಗಿ ಎಂಜಿಆರ್ ಅವತಾರ ಪುರುಷ ಎಂಬಷ್ಟು ಎಲ್ಲರಿಗೂ ಅಚ್ಚುಮೆಚ್ಚು. ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ, ಮಾರ್ಗದರ್ಶಕ ಸಿ.ಎನ್.ಅಣ್ಣಾದುರೈ ಹಾಗೂ ಇಂದಿರಾಗಾಂಧಿಯವರಷ್ಟೇ ಜನಾಕರ್ಷಣೆ ಮಾಡುವ ಸಾಮರ್ಥ್ಯ ಅವರದ್ದು.

ಕಿತ್ತುತಿನ್ನುವ ಬಡತನದ ಕಾರಣದಿಂದ ಮೂರನೆ ತರಗತಿಯಲ್ಲೆ ಔಪಚಾರಿಕ ಶಿಕ್ಷಣಕ್ಕೆ ಗುಡ್‌ಬೈ ಹೇಳಬೇಕಾಯಿತು. ಆದರೆ ಕಾರ್ಯದ ಮೂಲಕ ಸಂದೇಶ ನೀಡಿದ ಅವರಿಗೆ ಇದರ ಅಗತ್ಯ ಇರಲಿಲ್ಲ. ಆಕರ್ಷಣೀಯ ವ್ಯಕ್ತಿತ್ವ, ಸಾಹಸ ಮನೋಭಾವ ಹಾಗೂ ಉದಾರತೆ, ಸಹಜತೆಯಿಂದಾಗಿ ಜನ ಅವರಲ್ಲಿ ದೈವತ್ವ ಕಂಡರು.

ದಶಕದ ಕಾಲ ತಮಿಳುನಾಡನ್ನು ಆಳಿದ ಎಂಜಿಆರ್ 1987ರ ಡಿಸೆಂಬರ್ 24ರಂದು 70ನೆ ವಯಸ್ಸಿನಲ್ಲಿ ಮೃತಪಟ್ಟರು. ಸಿನೆಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸಿನಿಂದಾಗಿ ಎಂಜಿಆರ್ ಸಿದ್ಧಾಂತವಾಗಿ ರೂಪುಗೊಂಡರು. ‘ಸತಿ ಲೀಲಾವತಿ’ ಮೂಲಕ 1936ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೂ, ‘ಮಂತಿರಿ ಕುಮಾರಿ’ (1950) ಹಾಗೂ ‘ಮಲೈಕಲ್ಲನ್’ (1954) ಮೂಲಕ ಚಿತ್ರರಸಿಕರ ಮನಸ್ಸು ಗೆದ್ದರು. ಎಂಜಿಆರ್ ಹಾಗೂ ಕಮಲಹಾಸನ್ ನಟನೆಯ ‘ಆನಂದಜ್ಯೋತಿ’ (1963), ಎಂಜಿಆರ್-ಸರೋಜಾದೇವಿ ಜೋಡಿಯ ‘ಪಾದಗೊತ್ತಿ’ (1964) ಶತದಿನೋತ್ಸವ ಕಂಡ ಹಿಟ್ ಚಿತ್ರಗಳು. ಈ ಜೋಡಿ 26 ಚಿತ್ರಗಳಲ್ಲಿ ನಟಿಸಿತ್ತು.

ಆಯಿರತ್ತಿಲ್ ಒರಿವನ್ (1965) ಚಿತ್ರದಲ್ಲಿ ಜಯಲಲಿತಾ ಮೊಟ್ಟಮೊದಲ ಬಾರಿಗೆ ಎಂಜಿಆರ್ ಜತೆ ನಟಿಸಿದರು. ಬಳಿಕ 28 ಚಿತ್ರಗಳಲ್ಲಿ ಈ ಜೋಡಿ ಚಿತ್ರರಸಿಕರ ಮನೆ-ಮನ ತಲುಪಿತು. ‘‘ಚಿತ್ರರಂಗ ನನ್ನ ರಾಜಕೀಯ ಪ್ರವೇಶಕ್ಕೆ ರಹದಾರಿಯಾಯಿತು’’ ಎಂದು ಜಯಾ ಹೇಳಿಕೊಂಡಿದ್ದರು. ತೆರೆಮೇಲಿನ ಪೈಪೋಟಿಯ ಹೊರತಾಗಿಯೂ ಶಿವಾಜಿ ಅವರ ಜತೆಗೆ ವಿಶೇಷ ಬಾಂಧವ್ಯ ಹೊಂದಿದ್ದರು. ಅಪ್ಪಟ ಕಾಂಗ್ರೆಸಿಗರಾಗಿದ್ದ ಎಂಜಿಆರ್ ಸಿ.ಎನ್.ಅಣ್ಣಾದುರೈ ಅವರನ್ನು ಅನುಸರಿಸಿದರೆ, ಶಿವಾಜಿ ಕೆ.ಕಾಮರಾಜ್ ಅವರ ಅನುಯಾಯಿಯಾಗಿ ಬೆಳೆದದ್ದು ಕಾಕತಾಳೀಯ. ‘ಪೆತ್ರಾಲತಾನ್ ಪಿಲ್ಲೈಯಾ’ (1966) ಚಿತ್ರದಲ್ಲಿ ಎಂಜಿಆರ್ ಎಂ.ಆರ್.ರಾಧಾ ಜತೆ ನಟಿಸಿದರು. ಈ ಚಿತ್ರ ಬಿಡುಗಡೆಯಾದ ಒಂದು ತಿಂಗಳಲ್ಲಿ ಅಂದರೆ 1967ರ ಜನವರಿ 12ರಂದು ಸಹನಟ ಇವರ ಮೇಲೆ ಗುಂಡಿನ ದಾಳಿ ನಡೆಸಿದರು. ಅವರು ಆಸ್ಪತ್ರೆಯ ಬೆಡ್‌ನಲ್ಲೇ ಇದ್ದಾಗಲೂ ಚಿತ್ರೀಕರಣ ನಡೆಸಿದ ಆ ಚಿತ್ರ 1967ರ ವಿಧಾನಸಭಾ ಚುನಾವಣೆ ವೇಳೆ ವ್ಯಾಪಕವಾಗಿ ಹರಿದಾಡಿತು. ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ನೆಲಕಚ್ಚಿ, ಅಣ್ಣಾದುರೈ ನೇತೃತ್ವದ ಡಿಎಂಕೆ ಗದ್ದುಗೆ ಹಿಡಿಯಿತು.

ಮಹಾತ್ಮಾಗಾಂಧೀಜಿ ಹಾಗೂ ಅಣ್ಣಾದುರೈ ಅವರ ತತ್ವಗಳನ್ನು ಅಕ್ಷರಶಃ ಪಾಲಿಸುವ ಮೂಲಕ ತಮ್ಮ ರಾಜಕೀಯ ಇಮೇಜ್ ಬೆಳೆಸಿಕೊಂಡ ಎಂಜಿಆರ್, ‘ರಿಕ್ಷಾಕಾರನ್’ನ ಫೋಟೊ ಮೂಲಕ ಮನೆಮಾತಾದರು. ಅವರು ಎಐಎಡಿಎಂಕೆ ಪಕ್ಷ ಸ್ಥಾಪಿಸಿದ ಮೇಲೆ ಅವರ ‘ಉಳಗನ್ ಸೂತ್ರಮ್ ವಲಿಬನ್’ (1973) ಚಿತ್ರ ಬಿಡುಗಡೆಯಾಯಿತು. ಇದು ತಮಿಳು ಚಿತ್ರರಂಗದಲ್ಲಿ ದಾಖಲೆ ಗಳಿಕೆ ಕಂಡ ಬಾಕ್ಸ್‌ಆಫೀಸ್ ಹಿಟ್ ಚಿತ್ರ.

25 ವಾರ ಇದು ಭಾರತದಲ್ಲಿ ಮಾತ್ರವಲ್ಲದೇ ಶ್ರೀಲಂಕಾ, ಕೆನಡಾ, ಅಮೆರಿಕ, ಬ್ರಿಟನ್‌ನಲ್ಲೂ ಓಡಿತು.

ಎಂಜಿಆರ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಪ್ರಭುದಾಸ್ ಪಟ್ವಾರಿ ಅವರಿಂದ 1977ರ ಜೂನ್ 30ರಂದು ಪ್ರಮಾಣ ವಚನ ಸ್ವೀಕರಿಸಿದರು. ಎಂಜಿಆರ್ ಆಡಳಿತ ಬಡವರಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿತು. ಈ ಪೈಕಿ ಇಂದೂ ದೇಶಾದ್ಯಂತ ಜನಪ್ರಿಯವಾಗಿರುವ ಮಧ್ಯಾಹ್ನದೂಟ ಯೋಜನೆಯನ್ನು 1982ರಲ್ಲೇ ಎಂಜಿಆರ್ ಜಾರಿಗೆ ತಂದಿದ್ದರು. ಜಯಲಲಿತಾ ಅವರನ್ನು ರಾಜಕೀಯಕ್ಕೆ ಪರಿಚಯಿಸುವಲ್ಲಿ ಎಂಜಿಆರ್ ಮಹತ್ವದ ಪಾತ್ರ ವಹಿಸಿದ್ದರು. ಮಧುರೈನಲ್ಲಿ 1982ರಂದು ನಡೆದ ವಿಶ್ವ ಎಂಜಿಆರ್ ಮಂದ್ರಮ್ ಸಮ್ಮೇಳನದಲ್ಲಿ ಅವರು ಜಯಲಲಿತಾ ಅವರನ್ನು ಪರಿಚಯಿಸಿದರು.

ಡಿಎಂಕೆ ಯುಗ

50ರ ದಶಕದಲ್ಲಿ ಅಂದರೆ ಅವರು ಚಿತ್ರರಂಗದ ಹೀರೊ ಆಗಿದ್ದ ಅವಧಿಯಲ್ಲೇ ನ್ಯಾಯಕ್ಕಾಗಿ ಹೋರಾಡುವ ಅವರ ಮನೋಭಾವ, ಉದಾರತೆ ಹಾಗೂ ಬಡವರ ಬಗ್ಗೆ ಇದ್ದ ಕನಿಕರದಂಥ ಅಂಶಗಳೇ ಹಲವು ಚಿತ್ರಕಥೆಗಳಿಗೆ ಸ್ಫೂರ್ತಿಯಾದವು. ಇದೇ ಅವರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಬಡವರ ಬಗ್ಗೆ ರಾಜಕೀಯ ಬದ್ಧತೆ ಬಲಗೊಳ್ಳಲು ಕಾರಣವಾಯಿತು.

1962ರ ವೇಳೆಗೆ ಭರವಸೆ ಮೂಡಿಸಿದ್ದ ಡಿಎಂಕೆ ಹಾಗೂ ಎಂಜಿಆರ್ ಒಂದೇ ನಾಣ್ಯದ ಎರಡು ಮುಖದಂತಾದರು. ಕುತೂಹಲದ ಅಂಶವೆಂದರೆ 1944ರಲ್ಲಿ, ತಮ್ಮ ವೃತ್ತಿಜೀವನಕ್ಕೆ ಕಳಂಕ ತಟ್ಟುತ್ತದೆ ಎಂಬ ಕಾರಣಕ್ಕೆ ಡಿಎಂಕೆ ಸಂಸ್ಥಾಪಕ ಅಣ್ಣಾ ಅವರ ಪ್ರಚಾರ ನಾಟಕದ ಪ್ರಧಾನಪಾತ್ರವನ್ನು ಎಂಜಿಆರ್ ನಿರಾಕರಿಸಿದ್ದರು. ಕೊನೆ ಕ್ಷಣದಲ್ಲಿ ಬಳಿಕ ವಿ.ಸಿ.ಗಣೇಶನ್ ಅಂದರೆ ಶಿವಾಜಿ ರಂಗಪ್ರವೇಶ ಮಾಡಿದರು.

ಪ್ರಸ್ತಾವವನ್ನು ತಿರಸ್ಕರಿಸಿದ ಒಂದು ದಶಕದ ಬಳಿಕ, ಎಂಜಿಆರ್ ಡಿಎಂಕೆ ಹಾದಿ ತುಳಿದರು. ಅವರ ಹೃದಯ ಪರಿವರ್ತಿಸಿದವರು ಚಿತ್ರ ಸಂಭಾಷಣೆಕಾರ, ಸಂಘಟಕ ಹಾಗೂ ರಾಜಕಾರಣಿ ಎಂ.ಕರುಣಾನಿಧಿ. ಇಬ್ಬರೂ ಜತೆಯಾದದ್ದು ಎಂಜಿಆರ್ ನಾಯಕನಟನಾಗಿ ಅಭಿನಯಿಸಿದ ‘ರಾಜಕುಮಾರಿ’ (1947) ಚಿತ್ರಕ್ಕಾಗಿ. ಇವರ ಸ್ನೇಹ ಮತ್ತು ಸಹಭಾಗಿತ್ವ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಿತು.

ಎಂಜಿಆರ್ ಪ್ರಭಾವಳಿ ಎಷ್ಟು ದಟ್ಟವಾಗಿತ್ತೆಂದರೆ, ಬೆಂಬಲಿಗರ ಕ್ರೇಜ್‌ಗೆ ಸ್ವತಃ ಅಣ್ಣಾದುರೈ ದಂಗಾಗಿದ್ದರು. ಆನೆ ಸಾಗಿದ್ದೇ ದಾರಿ ಎಂಬಂತೆ ಅವರ ಶಕ್ತಿ ಬಗ್ಗೆ ಎಂಜಿಆರ್‌ಗೆ ಆತ್ಮವಿಶ್ವಾಸ ಇತ್ತು. ಆದರೆ ಇತರರಿಗೆ ಇಲ್ಲದ ಕಾರಣ ಪಕ್ಷ 1961ರಲ್ಲಿ ವಿಭಜನೆಯಾಯಿತು.

1967ರ ಚುನಾವಣೆಯಲ್ಲಿ ತೆರೆ ಎದುರಾಳಿ ಎಂ.ಆರ್.ರಾಧಾ ಅವರ ಗುಂಡೇಟಿನಿಂದ ಗಾಯಗೊಂಡ ಎಂಜಿಆರ್ ಚಿತ್ರಗಳು, ಕಾಂಗ್ರೆಸ್ ಸಾಮ್ರಾಜ್ಯ ಪತನಕ್ಕೆ ಕಾರಣವಾದವು. ಅಣ್ಣಾದುರೈ ತಮ್ಮ ಸಂಪುಟ ಸಚಿವರ ಪಟ್ಟಿಯನ್ನು ಎಂಜಿಆರ್‌ಗೆ ಪರಿಶೀಲನೆಗೆ ಕಳುಹಿಸಿಕೊಟ್ಟರು.

1969ರಲ್ಲಿ ಅಣ್ಣಾ ನಿಧನದೊಂದಿಗೆ ಈ ಕಿಂಗ್‌ಮೇಕರ್‌ಗೆ ಪಕ್ಷದ ಮೂರನೇ ಅತ್ಯುನ್ನತ ಹುದ್ದೆಯಾದ ಖಜಾಂಚಿ ಜವಾಬ್ದಾರಿ ವಹಿಸಲಾಯಿತು. ಹೊಸ ಸಿಎಂ ಕರುಣಾನಿಧಿಯ ಕೃಪೆ. ಆದರೆ ಮುಂದೆ ಅವರು ಭಿನ್ನ ಹಾದಿ ತುಳಿದರು. ಕೆಲ ಪ್ರಕರಣಗಳಲ್ಲಿ ಪ್ರಚಾರ ನಿಧಿಯನ್ನು ವಿತರಿಸಿದ ಬಗ್ಗೆ ಖಜಾಂಚಿಯಾಗಿ ಅವರು ಸ್ಪಷ್ಟನೆ ಕೇಳಿದರು. ಕರುಣಾನಿಧಿ ಮಗನ ಸಿನೆಮಾ ವೃತ್ತಿ ಅವರ ಮುನಿಸಿಗೆ ಕಾರಣವಾಯಿತು.

ಎಐಎಡಿಎಂಕೆ ಯುಗ

 ಡಿಎಂಕೆ ಅಣ್ಣಾದುರೈ ಅವರ ಆದರ್ಶವನ್ನು ಗಾಳಿಗೆ ತೂರಿ ಭ್ರಷ್ಟಪಕ್ಷವಾಗುತ್ತದೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಎಂಜಿಆರ್ 1972ರ ಅಕ್ಟೋಬರ್ 8ರಂದು ಪಕ್ಷದ ನಾಯಕತ್ವದ ವಿರುದ್ಧವೇ ರಣಕಹಳೆ ಮೊಳಗಿದರು. ಪಕ್ಷದ ಎಲ್ಲ ಪದಾಧಿಕಾರಿಗಳು ಮತ್ತು ಸಚಿವರು ತಕ್ಷಣ ತಮ್ಮ ಲೆಕ್ಕಗಳನ್ನು ಮುಂದಿಡುವಂತೆ ಕಟ್ಟಪ್ಪಣೆ ಮಾಡಿದರು. ಇಡದ ಪರಿಣಾಮ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅಣ್ಣಾ ಡಿಎಂಕೆ 1972ರ ಅಕ್ಟೋಬರ್ 18ರಂದು ಉದಯವಾಯಿತು. ಬಳಿಕ ಅದನ್ನು ಎಐಎಡಿಎಂಕೆ ಎಂದು 1976ರಲ್ಲಿ ಮರುನಾಮಕರಣ ಮಾಡಲಾಯಿತು. ಚಿತ್ರಪ್ರೇಮಿಗಳೇ ಪಕ್ಷದ ಆಧಾರಸ್ತಂಭವಾದರು. ಇದು ಹಲವು ಮಂದಿ ಪದವೀಧರರು ಹಾಗೂ ವೃತ್ತಿಪರರನ್ನೂ ಆಕರ್ಷಿಸಿತು. ಇದರಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡ ಕೆ.ರಾಮರಾಜ್ ಅದೇ ವರ್ಷದ ನವೆಂಬರ್ 8ರಂದು, ವೆಲ್ಲೂರು ಜಿಲ್ಲೆ ತಿರುವತಿಪುರಂನಲ್ಲಿ ಮಾಡಿದ ಭಾಷಣದಲ್ಲಿ, ‘‘ಎರಡು ಕಳಗಂ ಕೂಡಾ ಒಂದೇ ಕೊಳದಲ್ಲಿ ಮುಳುಗಿದ ನೌಕೆಗಳು’’ ಎಂದು ಬಣ್ಣಿಸಿದರು.

1973ರ ದಿಂಡಿಗಲ್ ಲೋಕಸಭಾ ಉಪಚುನಾವಣೆಯಲ್ಲಿ ಎಡಿಎಂಕೆ ಗೆದ್ದಾಗ, ಚಿತ್ರದ ಗ್ಲಾಮರ್ ಗೆದ್ದಿರುವುದೇ ವಿನಃ ಪಕ್ಷವಲ್ಲ ಎಂದು ಬಿಂಬಿಸಿದರು. ಆದರೆ 1977ರಲ್ಲಿ ಎಐಎಡಿಎಂಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವುದರೊಂದಿಗೆ ಅವರ ನಿರ್ಧಾರ ತಪ್ಪುಎನ್ನುವುದು ದೃಢಪಟ್ಟಿತು. ಎಂಜಿಆರ್ ಈ ಹಂತದಲ್ಲಿ ದ್ರಾವಿಡರ್ ಕಳಗಂನ ಕೆ.ವೀರಮಣಿಯವರನ್ನು ಉಭಯ ಪಕ್ಷಗಳ ಮರುಸೇರ್ಪಡೆಗೆ ಮಧ್ಯಸ್ಥಿಕೆ ವಹಿಸುವಂತೆ ಸೂಚಿಸಿದರು. 1979ರಲ್ಲಿ ಜನತಾ ಪಕ್ಷದ ಬಿಜು ಪಟ್ನಾಯಕ್ ಕೂಡಾ ಉಭಯ ಪಕ್ಷಗಳ ವಿಲೀನಕ್ಕೆ ಪ್ರಯತ್ನ ನಡೆಸಿದರು. ಆದರೆ ಕೊನೆಕ್ಷಣದಲ್ಲಿ ಎಂಜಿಆರ್ ಮನಸ್ಸು ಬದಲಾಯಿಸಿದರು.

ಎಂಜಿಆರ್ ಅವರ ಮೊದಲ ಅವಧಿ ಆದರ್ಶವಾಗಿತ್ತು. ಪಾನನಿಷೇಧ, ಮೀಸಲಾತಿಗೆ ಆರ್ಥಿಕ ಮಿತಿ ಹಾಗೂ ಗ್ರಾಮೀಣಾಭಿವೃದ್ಧಿಯ ಮನ್ವಂತರದಂಥ ಮಹತ್ವದ ನಿರ್ಧಾರ ಕೈಗೊಂಡರೂ, ಸ್ವಚ್ಛ ಆಡಳಿತದ ಕಲ್ಪನೆಯಿಂದಾಗಿ ಸರಕಾರದ ವೇಗ ಕುಂದಿತ್ತು. 1980ರ ದಶಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಾದ ಹಿನ್ನೆಲೆಯಲ್ಲಿ ಪಾನನಿಷೇಧ ಹಾಗೂ ಮೀಸಲಾತಿಗೆ ಆರ್ಥಿಕ ಮಾನದಂಡದಂಥ ನಿರ್ಧಾರವನ್ನು ವಾಪಸು ಪಡೆದು ಯಥಾಸ್ಥಿತಿಗೆ ತಂದರು. ಈ ಅವಧಿಯಲ್ಲಿ ಆಡಳಿತದ ಬಿಗಿ ಕಳೆದುಕೊಂಡ ಎಂಜಿಆರ್, ಪಕ್ಷದ ಖಜಾನೆ ಭರ್ತಿ ಮಾಡಿಕೊಟ್ಟ ಮದ್ಯದೊರೆಗಳಿಗೆ ಅನುಕೂಲ ಮಾಡಿಕೊಟ್ಟರು. ಆದರೆ ಈ ಅವಧಿಯಲ್ಲಿ ಎಂಜಿಆರ್ ಮಧ್ಯಾಹ್ನ ಬಿಸಿಯೂಟ ಯೋಜನೆ ವಿಸ್ತರಿಸುವ ಚಮತ್ಕಾರದಿಂದಾಗಿ ಈ ಅವಧಿ ಸದಾ ನೆನಪಿನಲ್ಲಿ ಉಳಿಯುತ್ತದೆ. ಮುಂದಿನ ವರ್ಷಗಳಲ್ಲಿ ಸುಮಾರು 69 ಲಕ್ಷ ಮಕ್ಕಳು, ಪಿಂಚಣಿದಾರರು ಹಾಗೂ ನಿರ್ಗತಿಕರಿಗೆ ಈ ಯೋಜನೆ ವಿಸ್ತಾರಗೊಂಡಿತು. ಇದರ ಯಶಸ್ಸು ಇತರ ಕಲ್ಯಾಣ ಕ್ರಮಗಳತ್ತ ಹೊರಳುವಂತೆ ಮಾಡಿತು. ಶಿಕ್ಷಣಕ್ಕೆ ಖಾಸಗಿ ಸಹಭಾಗಿತ್ವ ಪಡೆಯುವ ದೃಷ್ಟಿಕೋನ, ರಾಜ್ಯವನ್ನು ಹೊಸ ಎತ್ತರಕ್ಕೆ ಒಯ್ಯುವಲ್ಲಿ ಯಶಸ್ವಿಯಾಯಿತು.

ಲಿಬರೇಶನ್ ಟೈಗರ್ಸ್‌ ಆಫ್ ತಮಿಳು ಈಳಂ ಬೆಳೆಸಿ, ಅದರ ಮುಖಂಡ ವಿ.ಪ್ರಭಾಕರನ್ ಅವರಿಗೆ ನೆರವನ್ನೂ ನೀಡಿದ ಎಂಜಿಆರ್ ಡಿಎಂಕೆ ಬೇಡಿಕೆಗಳನ್ನೂ ಸಮತೋಲನ ಮಾಡಿದರು. ಎಂಜಿಆರ್ ಶ್ರೀಲಂಕಾದ ಜನಾಂಗೀಯ ವಿಷಯದತ್ತಲೂ ಗಮನ ಹರಿಸಿದರು. ಆದರೆ ಪ್ರಭಾಕರನ್ ಮೇಲಿನ ಅವರ ಪ್ರಭಾವವನ್ನು ಮಾತ್ರ ವೈಭವೀಕರಿಸಲಾಗಿದೆ.

ಪರದೆಯ ಮೇಲೆ ಮತ್ತು ಪರದೆಯ ಹಿಂದೆ ನಿಕಟ ಬಾಂಧವ್ಯ ಹೊಂದಿದ್ದ ಜಯಲಲಿತಾ ಅವರನ್ನು ಎಂಜಿಆರ್ 1982ರಲ್ಲಿ ಅವರು ರಾಜಕೀಯಕ್ಕೆ ಪರಿಚಯಿಸಿದರು. ಎಂಜಿಆರ್ ಬಳಿಕ ದೊಡ್ಡ ಸಂಖ್ಯೆಯ ಜನರನ್ನು ಆಕರ್ಷಿಸುವ ಚರಿಷ್ಮಾ ಹೊಂದಿದ್ದ ಜಯಾಗೆ ಅವರು ಪ್ರಾಮುಖ್ಯ ನೀಡಿದ್ದು, ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಯಿತು. 1984ರಲ್ಲಿ ಹಿರಿಯ ಸಚಿವ ಎಸ್.ಡಿ.ಸೋಮಸುಂದರಂ ಪಕ್ಷ ತೊರೆದು, ಎಂಜಿಆರ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದರು. ಇದಕ್ಕೆ ಎಂಜಿಆರ್ ಪ್ರತಿಕ್ರಿಯಿಸಿದ್ದು: ‘‘ಇಂಥ ನಿರಾಧಾರ ಹೇಳಿಕೆಯಿಂದ ಅವರು ಶ್ರೀಮಂತರಾಗುತ್ತಾರೆಯೇ’’ ಎಂದು.

1984ರಲ್ಲಿ ಅವರು ಅಸ್ವಸ್ಥರಾಗುವ ಮೂಲಕ ಪಕ್ಷದ ಹಿಡಿತ ತಪ್ಪಿತು. ಅವರ ಮೂರನೇ ಅವಧಿ, ಮಹತ್ವಾಕಾಂಕ್ಷಿ ಜಯಲಲಿತಾ ಹಾಗೂ ವಿರೋಧಿ ಬಣದ ನಡುವಿನ ಆಡುಮಣೆಯಾಗಿ ಮಾರ್ಪಟ್ಟಿತು. 1986ರಲ್ಲಿ ಪಕ್ಷದ ಒಳಜಗಳದ ಲಾಭ ಡಿಎಂಕೆಗೆ ಆಯಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಎದುರು ಎಐಡಿಎಂಕೆ ಸೋಲು ಕಂಡಿತು. ವಿಧಾನ ಪರಿಷತ್ ರದ್ದು ಮಾಡಿದ್ದು ಹಾಗೂ 10 ಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ ಕ್ರಮ, ಅಸ್ವಸ್ಥ ಸಿಎಂಗೆ ಭಿನ್ನಾಭಿಪ್ರಾಯದ ವಿರುದ್ಧ ಇದ್ದ ಅಸಹನೆಯನ್ನು ಜಗಜ್ಜಾಹೀರು ಮಾಡಿತು.

ಎಂಜಿಆರ್ ಪರಂಪರೆ

ಕಲ್ಯಾಣರಾಜ್ಯ ಎಂಬ ಪರಿವರ್ತಿತ ತಮಿಳುನಾಡಿಗೆ ಅಡಿಗಲ್ಲು ಹಾಕಿದ ಕೀರ್ತಿ ಎಂಜಿಆರ್ ಅವರದ್ದು. ಅವರು ಬಡವರಿಗೆ ನೀಡಿದ ವಿನಾಯಿತಿಗಳು ಹಾಗೂ ಸಬ್ಸಿಡಿ ಯೋಜನೆಗಳು ಜನರ ಸನಿಹಕ್ಕೆ ಅವರನ್ನು ಒಯ್ದಿತು. ಮಾನವ ಅಭಿವೃದ್ಧಿ ಸೂಚ್ಯಂಕ ಭರವಸೆಯನ್ನು ಪ್ರದರ್ಶಿಸುತ್ತಿರುವಾಗಲೇ, ರಾಜ್ಯ ಬಜೆಟ್‌ನ ಮುಕ್ಕಾಲು ಪಾಲು ಸಬ್ಸಿಡಿಗಳಿಗೆ ವ್ಯಯವಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂತು. 10 ವರ್ಷಗಳ ಆಡಳಿತದ ಬಳಿಕವೂ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬ ಅಂಶ ದೃಢಪಟ್ಟಿತು.

ಎಂಜಿಆರ್ ಅವರ ರಾಜಕೀಯ ಬಂಡವಾಳ ತಳಮುಟ್ಟಿದಂತೆಲ್ಲ, ಅದೃಷ್ಟ ಅವರ ಪರ ಅನುಕಂಪ ಮತ್ತು ಬೆಂಬಲವನ್ನು ತಂದುಕೊಟ್ಟಿತು. ಅವರು ಅಧಿಕಾರದಲ್ಲಿದ್ದಾಗ ಬಂದ ಭ್ರಷ್ಟಾಚಾರದ ಆರೋಪಗಳ ಹೊರತಾಗಿಯೂ, ದ್ರಾವಿಡ ಆದರ್ಶಕ್ಕೆ ವಿರುದ್ಧವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರೂ, ಸ್ವಚ್ಛವ್ಯಕ್ತಿ ಅಥವಾ ದ್ರಾವಿಡ ಮುಖಂಡ ಎಂಬ ಇಮೇಜ್‌ಗೆ ಧಕ್ಕೆ ಬರಲಿಲ್ಲ.

Writer - ಆರ್. ಕಣ್ಣನ್

contributor

Editor - ಆರ್. ಕಣ್ಣನ್

contributor

Similar News