ಸೇನಾಪಡೆಗಳಲ್ಲಿ ಶಿಸ್ತು ಕ್ಷೀಣಿಸುತ್ತಿದೆಯೇ?
ಗಲಭೆಕೋರರ ಜೊತೆ ಪೊಲೀಸರು ಶಾಮೀಲಾಗಿರುವ ಇಂತಹ ಪ್ರಕರಣಗಳು ಹೊಸದೇನೂ ಅಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ಹಲವಾರು ವರ್ಷಗಳಿಂದ ಪೊಲೀಸರು ಹಿಂಸಾನಿರತ ಗುಂಪುಗಳ ಪ್ರಬಲವಾದ ಅಸ್ತ್ರಗಳಾಗಿ ಅಥವಾ ಗುರಾಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸುದೈವವಶಾತ್ ಅರೆಸೈನಿಕ ಪಡೆಗಳು ಹಾಗೂ ಸೇನೆಯು ಅಪಾರ ಶಿಸ್ತನ್ನು ಮೈಗೂಡಿಸಿಕೊಂಡಿದೆ ಹಾಗೂ ಗಲಭೆಕೋರರ ಜೊತೆಗಿನ ಸಂಪರ್ಕದಿಂದ ದೂರವಿರಿಸಲ್ಪಟ್ಟಿದೆ ಎಂದು ನಮ್ಮ ಮುಂದೆ ಹೆಮ್ಮೆಯಿಂದ ಹೇಳಿಕೊಂಡು ಬರಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಇದು ಸತ್ಯವೇ ಆಗಿರಬಹುದಾದರೂ, ಎಲ್ಲಾ ಸಂದರ್ಭಗಳಲ್ಲೂ ಹಾಗಾಗುವುದಿಲ್ಲ. ಇದಕ್ಕೆ ಉದಾಹರಣೆ ಭಾಗಲ್ಪುರ.
ಭಾರತದಲ್ಲಿ ಸಶಸ್ತ್ರ ಪಡೆಗಳು ಆಜ್ಞೆಗಳನ್ನು ಪಾಲಿಸಲು ವಿಫಲರಾದಲ್ಲಿ, ಅದರ ಪರಿಣಾಮ ಏನಾಗಬಹುದೆಂಬುದನ್ನು ನಾವು ಮನಗಾಣಬೇಕಾದರೆ, 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ಕೋಮುಗಲಭೆಯಲ್ಲಿ ಮೃತಪಟ್ಟ ಸಾವಿರ ಮಂದಿಯಲ್ಲಿ 900 ಮಂದಿ ಮುಸ್ಲಿಮರೆಂಬುದನ್ನು ತಿಳಿಸುವ ಪುಸ್ತಕ ‘ಸ್ಪ್ಲಿಂಟರ್ಡ್ ಜಸ್ಟಿಸ್’ನ ಆಯ್ದ ಭಾಗವನ್ನೊಮ್ಮೆ ಓದಿ...
‘‘ಆಗಿನ ಅವಿಭಜಿತ ಭಾಗಲ್‌ಪುರದ ಒಂದು ಗ್ರಾಮವಾದ ತೆರಾ ಮಿಲೆ ಮೇಲೆ ದಾಳಿ ನಡೆದಾಗ, ಗಲಭೆಕೋರರನ್ನು ತಡೆಯಲು ಪೊಲೀಸರು ಏನೂ ಮಾಡಲಿಲ್ಲವೆಂಬುದನ್ನು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಬಹಿರಂಗಪಡಿಸಿವೆ. ಮುಸ್ಲಿಮರ ಸಾಮೂಹಿಕ ನರಮೇಧ ನಡೆಸಲು ಹಾಗೂ ಅವರ ಮನೆಗಳನ್ನು ಕೊಳ್ಳೆಹೊಡೆಯುವಂತೆ ಪೊಲೀಸರು ಗಲಭೆನಿರತ ಗುಂಪುಗಳನ್ನು ಉತ್ತೇಜಿಸಿದ್ದರು. ಸ್ಥಳದಲ್ಲಿದ್ದ ಪೊಲೀಸ್ ತುಕಡಿಯಲ್ಲಿ ಮೂವರು ಮುಸ್ಲಿಂ ಸಿಬ್ಬಂದಿಯಿದ್ದರು. ಅವರು ಗಲಭೆಕೋರರನ್ನು ತಡೆಯಲು ಯತ್ನಿಸಿದರಾದರೂ, ಅದರೆ ಅಗಾಧ ಸಂಖ್ಯೆಯಲ್ಲಿದ್ದ ಹಿಂದೂ ಸಹದ್ಯೋಗಿಗಳು ಗಲಭೆನಿರತರಿಗೆ ಕುಮ್ಮಕ್ಕು ನೀಡಿದ ಕಾರಣ ಅವರ ಪ್ರಯತ್ನಗಳೆಲ್ಲ ನಿಷ್ಫಲವಾದವು.’’
ಖ್ಯಾತ ನ್ಯಾಯವಾದಿಗಳಾದ ವಾರಿಶಾ ಫರಾಸಟ್ ಹಾಗೂ ಪ್ರೀತಾ ಝಾ ಬರೆದಿರುವ ಈ ಪುಸ್ತಕವು 2002ರ ಗುಜರಾತ್ ಗಲಭೆಯಲ್ಲಿ ರಾಜ್ಯ ಸರಕಾರದ ಉತ್ತರದಾಯಿತ್ವದ ಬಗ್ಗೆಯೂ ತನಿಖೆ ನಡೆಸಿದ್ದು (ಗುಜರಾತ್ ಹಿಂಸಾಚಾರದಲ್ಲಿ ಮೃತಪಟ್ಟ ಅಂದಾಜು 1100 ಮಂದಿಯಲ್ಲಿ 800 ಮಂದಿ ಮುಸ್ಲಿಮರು), ಪೊಲೀಸರ ಪಕ್ಷಪಾತ ಹಾಗೂ ಗಲಭೆ ನಿರತರ ಜೊತೆ ಅವರು ಶಾಮೀಲಾಗಿರುವ ಬಗ್ಗೆ ವಿವರವಾದ ಚಿತ್ರಣವನ್ನು ನೀಡಿದೆ. ಇನ್ನು ಕೆಲವು ಪ್ರಕರಣಗಳಲ್ಲಿ, ಮುಸ್ಲಿಮರನ್ನು ಕೊಲ್ಲುವಂತೆಯೂ ಪೊಲೀಸರು ಗಲಭೆಕೋರರನ್ನು ಪ್ರಚೋದಿಸುತ್ತಿದ್ದರು ಇಲ್ಲವೇ ಹಾಗೆ ಸಂಭವಿಸುವಂತೆ ಮಾಡಲು ಸುಮ್ಮನೆ ನಿಂತುಕೊಳ್ಳುತ್ತಿದ್ದರು.
ಗಲಭೆಕೋರರ ಜೊತೆ ಪೊಲೀಸರು ಶಾಮೀಲಾಗಿರುವ ಇಂತಹ ಪ್ರಕರಣಗಳು ಹೊಸದೇನೂ ಅಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ಹಲವಾರು ವರ್ಷಗಳಿಂದ ಪೊಲೀಸರು ಹಿಂಸಾನಿರತ ಗುಂಪುಗಳ ಪ್ರಬಲವಾದ ಅಸ್ತ್ರಗಳಾಗಿ ಅಥವಾ ಗುರಾಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸುದೈವಶಾತ್ ಅರೆಸೈನಿಕ ಪಡೆಗಳು ಹಾಗೂ ಸೇನೆಯು ಅಪಾರ ಶಿಸ್ತನ್ನು ಮೈಗೂಡಿಸಿಕೊಂಡಿದೆ ಹಾಗೂ ಗಲಭೆಕೋರರ ಜೊತೆಗಿನ ಸಂಪರ್ಕದಿಂದ ದೂರವಿರಿಸಲ್ಪಟ್ಟಿದೆ ಎಂದು ನಮ್ಮ ಮುಂದೆ ಹೆಮ್ಮೆಯಿಂದ ಹೇಳಿಕೊಂಡು ಬರಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಇದು ಸತ್ಯವೇ ಆಗಿರಬಹುದಾದರೂ, ಎಲ್ಲಾ ಸಂದರ್ಭಗಳಲ್ಲೂ ಹಾಗಾಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಭಾಗಲ್ಪುರದಲ್ಲಿ ಶಾಂತಿಯ ಮರುಸ್ಥಾಪನೆಗಾಗಿ ಕರೆತರಲಾದ ಗಡಿಭದ್ರತಾ ಪಡೆ ಹಾಗೂ ಸೇನಾ ತುಕಡಿಗಳಿಗೆ ಸ್ಥಳೀಯ ಪೊಲೀಸರೇ ತಪ್ಪುಮಾರ್ಗದರ್ಶನ ಮಾಡಿದ್ದರು. ಕಾಶ್ಮೀರ, ಚತ್ತೀಸ್‌ಗಢ ಹಾಗೂ ಮಣಿಪುರದಂತಹ ರಾಜ್ಯಗಳಲ್ಲಿ ಸ್ಥಳೀಯ ಸಮುದಾಯದ ಜೊತೆ ನಿಕಟವಾದ ಸಂಪರ್ಕವನ್ನು ಹೊಂದುವಂತಹ ರೀತಿಯಲ್ಲಿ ಸೇನೆಯನ್ನು ನಿಯೋಜಿಸಲಾಗಿತ್ತು. ಒಂದು ಸಮುದಾಯದ ನಾಗರಿಕರ ಮೇಲೆ ನಡೆದ ದೌರ್ಜನ್ಯಗಳಲ್ಲಿ ಅವು ಹಿಂಸಾನಿರತರ ಜೊತೆ ಕೈಜೋಡಿಸಿದ್ದಲ್ಲದೆ, ಕಾನೂನುಬಾಹಿರ ಹತ್ಯೆಗಳನ್ನು ಕೂಡಾ ನಡೆಸಿದ್ದವು.
ಸಶಸ್ತ್ರ ಪಡೆಗಳಲ್ಲಿ ‘ದಂಗೆ’
ಕಳೆದ ವಾರ ಅರೆಸೈನಿಕ ಪಡೆಯಲ್ಲಿ ಬಂಡಾಯದ ಲಕ್ಷಣಗಳು ಗೋಚರಿಸಿದ್ದವು. ಬಿಎಸ್‌ಎಫ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಲ್ ಹಾಗೂ ಭೂಸೇನೆಗೆ ಸೇರಿದ ನಾಲ್ವರು ಯೋಧರು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ತಮಗೆ ನೀಡಲಾಗುತ್ತಿರುವ ಆಹಾರ, ವೇತನ ಹಾಗೂ ಕೆಲಸದ ದುಸ್ಥಿತಿಯ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಮೇಲಾಧಿಕಾರಿಗಳ ಸಾಕು ನಾಯಿಯನ್ನು ವಿಹಾರಕ್ಕೆ ಕೊಂಡೊಯ್ಯುವಂತಹ ನಿಕೃಷ್ಟ ಕೆಲಸಗಳನ್ನು ತಮ್ಮಿಂದ ಮಾಡಿಸಿಕೊಳ್ಳಲಾಗುತ್ತಿದೆಯೆಂದು ಅವರು ಅಲವತ್ತುಕೊಂಡಿದ್ದರು. ಸಾಮಾಜಿಕ ಜಾಲತಾಣಗಳು ಜನಪ್ರಿಯಗೊಳ್ಳುವುದಕ್ಕೆ ಮುನ್ನ ಯೋಧರ ಹತಾಶೆಗಳನ್ನು ಸಾರ್ವಜನಿಕರ ಕಣ್ಣಿನಿಂದ ಮರೆಮಾಚುವುದು ಸುಲಭವಾಗಿತ್ತು. ಸೈನಿಕನೊಬ್ಬ ಭಾವಾವೇಶಗೊಂಡ ಕ್ಷಣದಲ್ಲಿ ಅದನ್ನು ವ್ಯಕ್ತಪಡಿಸಲು ಆತನ ಬಳಿ ಮೊಬೈಲ್ ಫೋನ್ ಅಥವಾ ಇನ್ನಾವುದೇ ಉಪಕರಣಗಳು ಲಭ್ಯವಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ವಿವಾದಕ್ಕೀಡಾಗಿರುವ ಈ ನಾಲ್ವರು ಸೈನಿಕರು ಅಧುನಿಕ ಸಮಾಜದಲ್ಲಿರುವ ಇತರರಂತೆಯೇ ವರ್ತಿಸಿದ್ದಾರೆ. ತಮ್ಮ ಹತಾಶೆಗಳನ್ನು ಅದುಮಿಟ್ಟುಕೊಳ್ಳುವ ಬದಲು ಅವರು ಈ ನೂತನ ಮೀಡಿಯಾಗಳನ್ನು ಅಸ್ತ್ರವಾಗಿ ಬಳಸಿಕೊಂಡು, ತಮ್ಮ ಶಿಬಿರಗಳು ಹಾಗೂ ಕಂಟೋನ್ಮೆಂಟ್‌ಗಳ ಆಚೆಗೆ ಇರುವ ಜಗತ್ತಿನ ಮುಂದೆ ನೋವನ್ನು ತೋಡಿಕೊಂಡರು. ಹಲವು ವರ್ಷಗಳಿಂದ ಸಮವಸ್ತ್ರಧಾರಿ ಪಡೆಗಳಲ್ಲಿ ಅಂತಃಕಲಹಗಳು ಹೆಚ್ಚುತ್ತಿದ್ದು, ಸಾಮಾನ್ಯವಾಗಿ ಸೈನಿಕನೊಬ್ಬ ತನ್ನ ಸಹದ್ಯೋಗಿಗಳು ಅಥವಾ ಮೇಲಧಿಕಾರಿಗಳೆಡೆಗೆ ತನ್ನ ಬಂದೂಕನ್ನು ತಿರುಗಿಸಿದಾಗ ಮಾತ್ರವೇ ಅದು ಸಾರ್ವಜನಿಕರ ಗಮನಕ್ಕೆ ಬರುತ್ತದೆ. ಕಳೆದ ವಾರ ತನಗೆ ರಜೆ ನಿರಾಕರಿಸಲಾಯಿತೆಂಬ ಕಾರಣಕ್ಕಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧನೊಬ್ಬ ತನ್ನ ನಾಲ್ವರು ಸಹದ್ಯೋಗಿಗಳನ್ನೇ ಗುಂಡಿಕ್ಕಿ ಹತ್ಯೆಗೈದಿದ್ದ!,
ಕಳೆದ ವಾರ ಆನ್‌ಲೈನ್ ಮೂಲಕ ನಡೆದ ಯೋಧರ ಬಂಡಾಯವು ನಮ್ಮ ಮುಂದೆ ಎರಡು ಪ್ರಶ್ನೆಗಳನ್ನಿಡುತ್ತದೆ. 100 ಕೋಟಿ ಮೊಬೈಲ್‌ಫೋನ್ ಸಂಪರ್ಕವಿರುವ ದೇಶದಲ್ಲಿ ಸೈನಿಕನೊಬ್ಬನಿಗೆ ಮೊದಲಿಗಿಂತ ಹೆಚ್ಚಿನ ಸ್ವಾತಂತ್ರ, ಹೆಚ್ಚಿನ ರಿಯಾಯಿತಿ ನೀಡಬೇಕಿದೆ ಹಾಗೂ ತಮ್ಮ ಹತಾಶೆ ಗಳನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ದೊರೆಯಬೇಕಿದೆ ಅಥವಾ ಶಿಸ್ತೇ ಪ್ರಧಾನವಾಗಿರುವ 10.40 ಲಕ್ಷ ಸೈನಿಕರು ಹಾಗೂ ಹೆಚ್ಚುಕಮ್ಮಿ ಅಷ್ಟೇ ಸಂಖ್ಯೆಯ ಅರೆಸೈನಿಕ ಪಡೆಗಳನ್ನು ಹೊಂದಿರುವ ಜಗತ್ತಿನ ಮೂರನೆ ಅತಿ ದೊಡ್ಡ ಸೇನೆಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಯಾಕೆ ಅವಕಾಶ ನೀಡಬಾರದು?.
ಟಿವಿ ಚರ್ಚಾಗೋಷ್ಠಿಗಳಲ್ಲಿ ಅಥವಾ ಸುದ್ದಿಪತ್ರಿಕೆಗಳ ಅಂಕಣಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲು ಚೆನ್ನಾಗಿರುತ್ತವೆ. ಆದರೆ ಇಲ್ಲಿ ಸ್ವೀಕಾರಾರ್ಹ ಉತ್ತರವೊಂದಿದೆ. ಸೈನಿಕರಿಂದ ವೈಯಕ್ತಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಯಾವುದೇ ವಿಷಯವನ್ನು ಪ್ರಸಾರ ಮಾಡಕೂಡದು ಹಾಗೂ ಯಾವುದೇ ಸೈನಿಕನು ಸಾಮಾನ್ಯ ನಾಗರಿಕನಂತೆ ವರ್ತಿಸಬಾರದು ಇಲ್ಲವೇ ಅದೇ ರೀತಿಯ ಸ್ವಾತಂತ್ರವನ್ನು ನಿರೀಕ್ಷಿಸಕೂಡದು.
ದೂರಿಗೆ ಕಾರಣ
ಸೈನಿಕರು ಸೋಶಿಯಲ್ ಮೀಡಿಯಾಗಳಲ್ಲಿ ಎತ್ತಿರುವ ವಿಷಯಗಳಲ್ಲಿ ಯಾವುದೇ ಹುರುಳಿಲ್ಲವೆಂದು ನಾನಿಲ್ಲಿ ವಾದಿಸಲಾರೆ. ಡೆಹ್ರಾಡೂನ್‌ನಲ್ಲಿ ಸೇನೆಯ 42ನೆ ಪದಾತಿ ದಳದಲ್ಲಿ ನಿಯೋಜಿಸಲ್ಪಟ್ಟಿರುವ ಯೋಧ ಲಾನ್ಸ್ ನಾಯಕ್ ಯಜ್ಞ ಪ್ರತಾಪ್ ಸಿಂಗ್ ಮೇಲಾಧಿಕಾರಿಗಳ ಸಾಕು ನಾಯಿಗಳನ್ನು ತಾವು ವಾಯುವಿಹಾರಕ್ಕೆ ಕರೆದುಕೊಂಡು ಹೋಗಬೇಕಾಗಿರುವುದು ಹಾಗೂ ಅವರ ಮಕ್ಕಳ ಪಾಲನೆ ಮಾಡುವುದು ಮತ್ತಿತರ ಮನೆಕೆಲಸಗಳನ್ನು ತಮ್ಮಿಂದ ಮಾಡಿಸಲಾಗುತ್ತಿದೆಯೆಂದು ಸಾಮಾಜಿಕ ಜಾಲತಾಣದ ಮುಂದೆ ಅಲವತ್ತುಕೊಂಡಿದ್ದರು. ದೇಶಾದ್ಯಂತ ಪೊಲೀಸ್, ಸೇನೆ ಹಾಗೂ ಅರೆಸೈನಿಕಪಡೆ ಮತ್ತಿತರ ಸಮವಸ್ತ್ರಧಾರಿ ಪಡೆಗಳಲ್ಲಿ ಕೆಳದರ್ಜೆಯ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳ ಮನೆಗೆಲಸಕ್ಕೆ ನಿಯೋಜಿಸುವುದು ಸಾಮಾನ್ಯವಾಗಿದೆ. ಸೇನೆಯಲ್ಲಿ ಇವರನ್ನು ‘ಸಹಾಯಕ್’ ಹಾಗೂ ಪೊಲೀಸ್ ಪಡೆಗಳಲ್ಲಿ ‘ಆರ್ಡರ್ಲಿ’ಗಳೆಂದು ಕರೆಯಲಾಗುತ್ತದೆ. ಮೇಲಾಧಿಕಾರಿಗಳ ಬೂಟುಗಳನ್ನು ಪಾಲಿಶ್‌ಗೊಳಿಸುವುದು, ಅಡುಗೆ, ಮದ್ಯ ತಂದುಕೊಡುವುದು, ಕಸಗುಡಿಸುವುದು, ಉದ್ಯಾನ ಪಾಲನೆ ಇತ್ಯಾದಿ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತದೆ. ಲಾನ್ಸ್ ನಾಯ್ಕ್ ಸಿಂಗ್‌ರ ವೀಡಿಯೊ ವೈರಲ್ ಆದ ಬಳಿಕ ನೂತನ ಸೇನಾ ವರಿಷ್ಠ ಬಿಪಿನ್ ಸಿಂಗ್ ರಾವತ್ ಪತ್ರಿಕಾಗೋಷ್ಠಿಯೊಂದನ್ನು ಕರೆದು ‘ಸಹಾಯಕ್’ ಪದ್ಧತಿಯ ಪುನರ್‌ವಿಮರ್ಶೆ ಮಾಡುವುದನ್ನು ತಾನು ಬೆಂಬಲಿಸುವುದಾಗಿ ಹೇಳಿದ್ದಾರೆ. ಕೆಲವೊಮ್ಮೆ ಸುಧಾರಣೆಯ ಕಿಡಿಹಚ್ಚಲು ಪ್ರಚಾರದ ಅಗತ್ಯವಿರುತ್ತದೆ. 2015ರಲ್ಲಿ ಕರ್ನಾಟಕದಲ್ಲಿ ಪೊಲೀಸರು ಮುಷ್ಕರಕ್ಕಿಳಿಯುವ ಬೆದರಿಕೆ ಹಾಕಿದ್ದರಿಂದಾಗಿ, ರಾಜ್ಯ ಸರಕಾರವು ಅವಸರಸರವಾಗಿ ಪ್ರಕಟನೆಯೊಂದನ್ನು ನೀಡಿ, ಆರ್ಡರ್ಲಿಗಳಾಗಿ ನಿಯೋಜಿಸಲ್ಪಟ್ಟಿದ್ದ 3 ಸಾವಿರ ಕಾನ್ಸ್‌ಟೇಬಲ್‌ಗಳನ್ನು, ಪೊಲೀಸ್ ಅಧಿಕಾರಿಗಳ ಮನೆಗಳಿಂದ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ತಿಳಿಸಿತು.
ನಾಟಕ
‘‘ಆಹಾರದ ಗುಣಮಟ್ಟವನ್ನು ಸುಧಾರಿಸಿ, ಅಶಿಸ್ತಿನ ವರ್ತನೆಗಾಗಿ ಅವರನ್ನು ದೂಷಿಸದಿರಿ’’ ಎಂದು ಕಳಪೆ ದಾಲ್ ಹಾಗೂ ಕರಟಿದ ರೊಟ್ಟಿಯನ್ನು ಯೋಧರಿಗೆ ಉಣಬಡಿಸಲಾಗುತ್ತಿದೆಯೆಂದು ಫೇಸ್‌ಬುಕ್‌ನಲ್ಲಿ ದೂರಿದ್ದ ಬಿಎಸ್‌ಎಫ್ ಸೈನಿಕ ತೇಜ್‌ಬಹಾದ್ದೂರ್ ಯಾದವ್‌ನ ಸಹೋದರ ಅನುರಾಗ್ ಸುದ್ದಿ ಜಾಲತಾಣವೊಂದರ ಮುಂದೆ ಹೇಳಿಕೊಂಡಿದ್ದಾರೆ. ಕೆಲಸದ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರಿಕೊಂಡಿದ್ದ ಸಿಆರ್‌ಪಿಎಫ್ ಯೋಧನ ಕುಟುಂಬ ಕೂಡಾ ಇದೇ ರೀತಿಯ ವಾದ ಮಂಡಿಸಿದೆ. ಸಿಆರ್‌ಪಿಎಫ್, ಭಾರತದ ಅತ್ಯಂತ ಒತ್ತಡಕ್ಕೊಳಗಾದ ಸಮವಸ್ತ್ರಧಾರಿ ಪಡೆಯಾಗಿದೆ. ಸಿಆರ್‌ಪಿಎಫ್ ಎಂದರೆ ಚಲ್ತೆ ರಹೋ ಪ್ಯಾರೆ (ನಡೆಯುತ್ತಲೇ ಇರು ಚಿನ್ನಾ) ಎಂಬ ಅನಧಿಕೃತ ಹೆಸರು ಥಳಕುಹಾಕಿಕೊಂಡಿದೆ. ಈ ಪದವು ಸಿಆರ್‌ಪಿಎಫ್ ಎದುರಿಸುತ್ತಿರುವ ಒತ್ತಡವನ್ನು ಪ್ರತಿಧ್ವನಿಸುತ್ತದೆ. ಒಂದು ಪ್ರದೇಶದಲ್ಲಿ ದೀರ್ಘಕಾಲದವರೆಗೆ ಶಾಂತಿಸ್ಥಾಪನೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬೆನ್ನಲ್ಲೇ ಸಿಆರ್‌ಪಿಎಫ್ ಯೋಧರನ್ನು ಇನ್ನೊಂದು ಹೊಸ ಸಂಘರ್ಷದ ವಲಯಕ್ಕೆ ರವಾನಿಸಲಾಗುತ್ತದೆ. ಪದೇ ಪದೇ ರಜೆಯನ್ನು ನಿರಾಕರಿಸುವುದರಿಂದ ಹಿಡಿದು ಹೊಸ ನೇಮಕಾತಿಯನ್ನು ನಡೆಸದೆ ಇರುವುದು ಇವೆಲ್ಲಾ ಕಾರಣಗಳಿಂದಾಗಿ ಅವರಿಗೆ ವಿಶ್ರಾಂತಿ ಹಾಗೂ ತರಬೇತಿಗೆ ಅತ್ಯಂತ ಕಡಿಮೆ ಕಾಲಾವಕಾಶ ದೊರೆಯುತ್ತಿದೆ.
ಆದರೆ ಒಂದು ವೇಳೆ ಈ ಎಲ್ಲಾ ದೂರುಗಳನ್ನು ಸಿಂಧುವಾಗಿ ಪರಿಗಣಿಸಿದಲ್ಲಿ, ಅಶಿಸ್ತನ್ನು ಒಪ್ಪಿಕೊಳ್ಳಲು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡಿದವರನ್ನು ದಂಡಿಸದೆೆ ಇರುವುದು ಅಸಾಧ್ಯವಾದೀತು. 120ಕ್ಕೂ ಅಧಿಕ ಪ್ರಜೆಗಳಿರುವ ದೇಶವು ತನ್ನ ಭದ್ರತೆಗಾಗಿ ಸಮವಸ್ತ್ರದಲ್ಲಿರುವ ಮೂವತ್ತು ಲಕ್ಷ ಪುರುಷರು ಹಾಗೂ ಮಹಿಳೆಯರನ್ನು ಅವಲಂಭಿಸಿರುವಾಗ ಯಾವ ಯೋಧನೂ ಕೂಡಾ ಇಂತಹ ಮೇಲ್ಪಂಕ್ತಿಯನ್ನು ಹಾಕಕೂಡದು. ಯಾವುದೇ ಸನ್ನಿವೇಶಗಳಲ್ಲಿಯೂ ಈ ಪುರುಷರು ಹಾಗೂ ಮಹಿಳೆಯರು ತಮ್ಮ ಕುಂದುಕೊರತೆಗಳ ನಿವಾರಣಾ ವಿಧಾನಗಳು ಎಷ್ಟೇ ಅಸಮರ್ಪಕವಾಗಿದ್ದರೂ, ಅವುಗಳನ್ನು ಮೀರಿ ಭಾರತದ ಜನತೆಯೆದುರು ನೇರವಾಗಿ ದೂರಿಕೊಳ್ಳಬಾರದು. ಹೀಗೆ ಮಾಡಿದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್‌ಪೋನ್‌ಗಳ ಈ ಯುಗದಲ್ಲಿ ಸಹಜವಾಗಿ ಅಶಿಸ್ತು ಹಾಗೂ ಭಾವೋದ್ರೇಕಗಳು ಉಲ್ಬಣಾವಸ್ಥೆಯನ್ನು ತಲುಪುತ್ತವೆ. ಶಿಸ್ತಿನ ಜೊತೆ ರಾಜಿ ಮಾಡಿಕೊಂಡು, ಆಜ್ಞೆ ಹಾಗೂ ನಿಯಂತ್ರಣವನ್ನು ಗಲಭೆನಿರತ ಗುಂಪಿನ ಮುಂದೆ ಶರಣಾಗಿಸುವ ಪೊಲೀಸರಿಂದ ಆಗುವ ಹಾನಿಗೆ ನಾವು ಸಾಕ್ಷಿಗಳಾಗಿದ್ದೇವೆ. ಶಿಸ್ತಿನ ಕಟ್ಟಕಡೆಯ ಭದ್ರಕೋಟೆಯಾದ ಸೇನಾಪಡೆಗಳಲ್ಲಿಯೂ ಹಾಗೆ ಆಗಲು ಅವಕಾಶ ನೀಡಬಾರದು.