ಸ್ವಾಯತ್ತತೆಯ ಮೇಲೆ ಸವಾರಿ

Update: 2017-01-21 18:29 GMT

ನಮ್ಮ ರಾಜಕಾರಣಿಗಳಿಗೆ ಭಾರತದ ಸಂವಿಧಾನದ ಬಗ್ಗೆ ಎಷ್ಟು ಗೌರವ, ಪ್ರೀತಿ ಇದೆ? ಸಂವಿಧಾನದ ಪಾವಿತ್ರ್ಯ, ಸಂಸದೀಯ ವ್ಯವಸ್ಥೆಗಳ ರಕ್ಷಣೆಯಲ್ಲಿ ಎಂಥ ಕಾಳಜಿ, ಕಳಕಳಿಗಳಿವೆ? ಈ ಪ್ರಶ್ನೆಗೆ ಪ್ರಾಮಾಣಿಕವಾದ ಉತ್ತರ ಬೇಕಾದರೆ, ಲವಲೇಶವೂ ಇಲ್ಲ ಎನ್ನುವುದೇ ಅದಾಗಿರುತ್ತದೆ. ಇದಕ್ಕೆ ನಮ್ಮ ಮಂತ್ರಿಮಹೋದಯರು, ಶಾಸಕರು, ಸಂಸದರುಗಳ ಸಂಸದೀಯ ನಡವಳಿಕೆಗಳಿಗಿಂತ ಮಿಗಿಲಾದ ನಿದರ್ಶನ ಬೇಕಿಲ್ಲ. ಸಂವಿಧಾನ ಎತ್ತಿಹಿಡಿಯುವುದಾಗಿ ಮಾತಿನಲ್ಲಿ ಪ್ರಮಾಣ ಮಾಡುತ್ತಾರಾದರೂ ಕೃತಿಯಲ್ಲಿ ಇದಕ್ಕೆ ತದ್ವಿರುದ್ಧವಾದ ನಡೆಗಳೇ ಹೆಚ್ಚು. ಈ ಬಗ್ಗೆ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ(ಸುಪ್ರೀಂಕೋರ್ಟ್) ಪದೇಪದೇ ಎಚ್ಚರಿಸಿದರೂ ‘ನಾಯಿ ಬಾಲ ಡೊಂಕೇ’.ಮಾದರಿಯಾಗಿ ಒಂದು ನಿದರ್ಶನವನ್ನು ನೋಡೋಣ.

ಸಂಸದೀಯ ಪ್ರಜಾಸತ್ತೆಯಲ್ಲಿ ಶಾಸನ ಮಾಡುವುದು ಶಾಸನ ಸಭೆಗಳ ಕರ್ತವ್ಯ. ಸರ್ವೋಚ್ಚ ನ್ಯಾಯಾಲಯ ಇತ್ತೀಚಿನ ಮಹತ್ವದ ತೀರ್ಪೊಂದರಲ್ಲಿ ಸಂಸದೀಯ ಪ್ರಜಾಸತ್ತೆಯ ಈ ಮೂಲಭೂತ ತತ್ತ್ವವನ್ನು ಪುನರುಚ್ಚರಿಸಿ ಸರಕಾರಗಳು ಸುಗ್ರೀವಾಜ್ಞೆ ಹೊರಡಿಸುವ ಸಂದರ್ಭಗಳಲ್ಲಿ, ‘ಮಾಡಬಹುದಾದ್ದು- ಮಾಡಬಾರದ್ದನ್ನು’ ಸ್ಪಷ್ಟವಾಗಿ ತಿಳಿಸಿದೆ. ಸಂವಿಧಾನದಲ್ಲಿನ ಸುಗ್ರೀವಾಜ್ಞೆ ಕುರಿತ ವಿಧಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರುಪಯೋಗ ಪಡಿಸಿಕೊಂಡಿರುವುದೇ ಹೆಚ್ಚು. ಎಂದೇ ಬುದ್ಧಿ ಹೇಳುವುದು ಅನಿವಾರ್ಯವೆನಿಸಿರಬೇಕು ಸರ್ವೋಚ್ಚ ನ್ಯಾಯಾಲಯಕ್ಕೆ. ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಅವಕಾಶ ಕಲ್ಪಿಸುವ ಸಂವಿಧಾನದ 123 ಮತ್ತು 124 ವಿಧಿಗಳು ಶಾಸನಗಳಿಗೆ ಪರ್ಯಾಯ ಮೂಲವಲ್ಲ, ಒಂದು ಸುಗ್ರೀವಾಜ್ಞೆಯ ಆಯಸ್ಸು ಮುಗಿದ ನಂತರ ಮತ್ತೊಂದು ಸುಗ್ರೀವಾಜ್ಞೆ ಮೂಲಕ ಮತ್ತೊಮ್ಮೆ ಅದಕ್ಕೆ ಜೀವ ತುಂಬುವುದು ಸಂವಿಧಾನಕ್ಕೆ ಎಸಗುವ ಅಪಚಾರವಾಗುತ್ತದೆ ಎಂದು ಏಳು ಮಂದಿ ನ್ಯಾಯಾಧೀಶರ ಸಂವಿಧಾನ ನ್ಯಾಯಪೀಠ ತೀರ್ಪು ನೀಡಿರುವುದು ಸಕಾಲಿಕ ಎಚ್ಚರಿಕೆಯೇ ಆಗಿದೆ. ಸುಗ್ರೀವಾಜ್ಞೆಗಳಿಗೆ ನ್ಯಾಯಾಂಗದ ಪರಾಮರ್ಶನೆಯಿಂದ ವಿನಾಯಿತಿ ಇಲ್ಲ, ಸುಗ್ರೀವಾಜ್ಞೆ ಹೊರಡಿಸಬೆಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವಂಥ ಸಾಕ್ಷ್ಯಾಧಾರಗಳನ್ನು ರಾಷ್ಟ್ರಪತಿಗಳು/ರಾಜ್ಯಪಾಲರಿಗೆ ಒದಗಿಸಲಾಗಿತ್ತೇ ಎಂಬುದನ್ನು ನ್ಯಾಯಾಲಯ ಪರೀಕ್ಷಿಸಬಹುದಾಗಿದೆ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ. ಅನ್ಯ ಕಾರಣಗಳಿಗಾಗಿ ಅಧಿಕಾರ ದುರುಪಯೋಗವಾಗುವುದನ್ನು ತಪ್ಪಿಸಲು ಇಂಥದೊಂದು ಕ್ರಮ ಅಗತ್ಯವೇ ಸರಿ.

ಶಾಸನಸಭೆ ಅಧಿವೇಶನ ಇಲ್ಲದಿದ್ದ ಸಮಯದಲ್ಲಿ ತುರ್ತಿನ ಮಹತ್ವದ ವಿಷಯಗಳ ಬಗ್ಗೆ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವನ್ನು ಸಂವಿಧಾನ ಕಾರ್ಯಾಂಗಕ್ಕೆ ನೀಡಿರುವುದು ದಿಟ. ಸುಗ್ರೀವಾಜ್ಞೆ ಎಂದರೆ ಶಾಸನಸಭೆ ಸಮಾವೇಶಗೊಳ್ಳದಿದ್ದ ಕಾಲಾವಧಿಯಲ್ಲಿ ಅದೊಂದು ಶಾಸನವೇ. ಎಂದೇ ಶಾಸನಸಭೆಯ ಮುಂದಿನ ಅಧಿವೇಶನದಲ್ಲಿ ಸಭೆಯ ಮುಂದೆ ಅದನ್ನು ಮಂಡಿಸಬೇಕು. ಸುಗ್ರೀವಾಜ್ಞೆ ಹೊರಡಿಸಿದ ಆರು ವಾರಗಳೊಳಗಾಗಿ ಶಾಸನ ಸಭೆ ಅದಕ್ಕೆ ಅನುಮತಿ ನೀಡಬೇಕು.ಇಲ್ಲವಾದಲ್ಲಿ ಅದು ಅಸಿಂಧುವಾಗುತ್ತದೆ. ಶಾಸನ ಸಭೆಗಳ ಕಾರ್ಯಕಲಾಪಗಳನ್ನು ಧರಣಿ ಇತ್ಯಾದಿ ಅಡಚಣೆಗಳಿಂದ ಭಂಗಗೊಳಿಸುವ ಇತ್ತೀಚಿನ ನಡಾವಳಿಯಿಂದಾಗಿಯೋ ಏನೋ ಒಂದಲ್ಲ ಒಂದು ಕಾರಣದಿಂದ ಸರಕಾರ ಸುಗ್ರೀವಾಜ್ಞೆ ಗಳನ್ನು ಶಾಸನ ಸಭೆ ಮುಂದೆ ಮಂಡಿಸುವುದರಲ್ಲಿ ವಿಫಲವಾಗಿರುವ ನಿದರ್ಶನಗಳಿವೆ.

ಎನ್.ಡಿ.ಎ. ಸರಕಾರ 2014ರಲ್ಲಿ ಹೊರಡಿಸಿದ ಭೂ ಸ್ವಾಧೀನ ಸುಗ್ರೀವಾಜ್ಞೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗದ ಕಾರಣ ಮೂರು ಸಲ ಈ ಸುಗ್ರೀವಾಜ್ಞೆಯ ಪುನರಾವರ್ತನೆಯಾಗಿತ್ತು. ಕೊನೆಗೆ ಮೂರನೆಯ ಸಲವೂ ಲೋಕಸಭೆಯಲ್ಲಿ ಮಂಡನೆಯಾಗದೆ ಅಸಿಂಧುವಾಯಿತು. ಬಿಹಾರ ಸರಕಾರ ಶಾಲೆಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ 1989 ರಿಂದ 1992ರ ವರೆಗೆ ಒಂದೇ ಸುಗ್ರೀವಾಜ್ಞೆಯನ್ನು ಮತ್ತೆಮತ್ತೆ ಹೊರಡಿಸಿದ ನಿದರ್ಶನವಿದೆ. ಎಲ್ಲ ಸಂದರ್ಭಗಳಲ್ಲೂ ಸುಗ್ರೀವಾಜ್ಞೆ ಹೊರಡಿಸು ವುದು ಹಾಗೂ ಶಾಸನ ಸಭೆಯ ಮುಂದೆ ತರದೇ ಅದನ್ನೇ ಪುನುರುಜ್ಜೀವಗೊಳಿಸುವಂಥ ಕ್ರಮದಿಂದ ಶಾಸನ ಸಭೆಗಳ ಅಸ್ತಿತ್ವವನ್ನೇ ಕಡೆಗಣಿಸಿದಂತಾಗುತ್ತದೆ. ಇದು ಸಂಸದೀಯ ಪ್ರಜಾಸತ್ತೆಗೆ ತೋರುವ ಅಗೌರವ, ಅನಾದರ. ಲೋಕಸಭೆ, ವಿಧಾನ ಸಭೆಗಳನ್ನು ಕಡೆಗಣಿಸಿ ಸಂಸದೀಯ ಪ್ರಜಾಸತ್ತೆಯನ್ನು ಹಗುರವಾಗಿ ಕಾಣುವ ಪ್ರವೃತ್ತಿ ಇತ್ತೀಚಿನ ದಿನಗಳ ಒಂದು ದುಷ್ಟ ಬೆಳವಣಿಗೆಯಾಗಿದೆ.

ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ತುಂಬ ಮುತುವರ್ಜಿವಹಿಸಿ ಬೆಳೆಸಿದ ಸಂಸದೀಯ ಸಂಸ್ಥೆ-ಸಂರಚನೆಗಳನ್ನು ತಾತ್ಸಾರದಿಂದ ಕಾಣುವುದು ಸಂಸದೀಯ ಪ್ರಜಾಸತ್ತೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಪ್ರವೃತ್ತಿಯನ್ನು ಎತ್ತಿ ತೋರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳ ಕಾರ್ಯಕಲಾಪಗಳಿಗೆ ಅಡ್ಡಿ-ಪಡಿಸುವುದಕ್ಕಿಂತ ಉತ್ತಮ ನಿದರ್ಶನ ಮತ್ತೊಂದು ಬೇಕೆ? ಒಂದಲ್ಲ ಒಂದು ನೆಪ ಒಡ್ಡಿ ಸಭಾಧ್ಯಕ್ಷರ ಮುಂದಿನ ಬಾವಿಗೆಬಿದ್ದು ಘೋಷಣೆಗಳನ್ನು ಕೂಗುವುದರೊಂದಿಗೆ ಸದನದ ಕಲಾಪಕ್ಕೆ ಅಡಚಣೆಮಾಡುವ, ಸದನದ ಗೌರವಕ್ಕೆ ಭಂಗ ತರುವ ರಾಜಕೀಯ ತಂತ್ರವನ್ನು ಭಾರತೀಯ ಜನತಾ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದಾಗ ಮಾಡುತ್ತಿತ್ತು. ಈಗ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅಧಿಕಾರೂಢ ಬಿಜೆಪಿಗೆ ಅದನ್ನೇ ತಿರುಗು ಬಾಣವಾಗಿಸಿವೆ. ಸದನಗಳ ಕಾರ್ಯಕಲಾಪ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಅಧಿಕಾರಾರೂಢ ಪಕ್ಷದ ಜವಾಬ್ದಾರಿ. ಸಂಸದೀಯ ವ್ಯವಹಾರಗಳ ಖಾತೆಯ ಸಚಿವರು ಈ ಹೊಣೆ ಹೊರಬೇಕು.

ಅಧಿಕಾರಾರೂಢ ಪಕ್ಷಕ್ಕೇ ಸದನದಲ್ಲಿ ಕಾರ್ಯಕಲಾಪ ನಡೆಸುವುದು ಬೇಡವಾದಲ್ಲಿ ಯಾರನ್ನು ದೂರ ಬೇಕು? ಸಂಸತ್ತಿನ ಕಳೆದೆರಡು ಅಧಿವೇಶನಗಳನ್ನು ಗಮನಿಸಿದಾಗ ಇಂಥ ಗುಮಾನಿಯುಂಟಾಗುತ್ತದೆ. ತನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುವಂಥ ಚರ್ಚೆ ಸರಕಾರಕ್ಕೆ ಹೇಗೆ ಪ್ರಿಯವಾದೀತು? ಕಳೆದ ಅಧಿವೇಶನದಲ್ಲಿ ನೋಟುಗಳ ಅಮಾನ್ಯೀಕರಣದ ಮೇಲಿನ ಚರ್ಚೆ ಸಹಜವಾಗಿಯೇ ಸರಕಾರವನ್ನು ಪೇಚಿಗೆ ಸಿಕ್ಕಿಸುವ ಸ್ವರೂಪದ್ದಾಗಲಿತ್ತು. ಎಂದೇ ವಿರೋಧ ಪಕ್ಷಗಳು ಸೃಷ್ಟಿಸಿದ ಬಿಕ್ಕಟ್ಟನ್ನು ಬಗೆಹರಿಸಿ ಚರ್ಚೆಗೆ ಅವಕಾಶಮಾಡಿಕೊಡುವಂಥ ವಾತಾವರಣ ಉಂಟುಮಾಡಲು ಆಡಳಿತ ಪಕ್ಷ ಗಂಭೀರ ಪ್ರಯತ್ನಗಳನ್ನೇನೂ ಮಾಡಲಿಲ್ಲ. ಸ್ವತ: ಪ್ರಧಾನ ಮಂತ್ರಿಗಳೇ ಸಂಸದೀಯ ಸಂಪ್ರದಾಯಾನುಸಾರವಾಗಿ ಸ್ಪಂದಿಸಿ ಸದನದಲ್ಲಿ ಉಪಸ್ಥಿತರಿದ್ದು ವಿರೋಧಿಗಳ ದನಿಯನ್ನು ಆಲಿಸುವಷ್ಟು ಸೌಜನ್ಯ ತೋರಿದ್ದಿದ್ದರೆ ಬಿಕ್ಕಟ್ಟು ಸುಲಭವಾಗಿ ಪರಿಹಾರವಾಗುತ್ತಿತ್ತು. ಹಿಂದಿನ ಪ್ರಧಾನಿಗಳು ಇಂಥ ಪರಿಸ್ಥಿತಿಯಲ್ಲಿ ಸದನದಿಂದ ಪಲಾಯನ ಮಾಡಿದ ನಿದರ್ಶನಗಳಿಲ್ಲ. ನೆಹರೂ ಅವರು ಕೃಪಲಾನಿ, ಲೋಹಿಯಾರಂಥ ತಮ್ಮ ಕಡು ವಿರೋಧಿಗಳ ಭಾಷಣವನ್ನು ಗಂಟೆಗಟ್ಟಳೆ ತದೇಕಚಿತ್ತರಾಗಿ ಆಲಿಸಿ ಉತ್ತರ ಕೊಟ್ಟ ನಿದರ್ಶನಗಳು ಸಂಸದೀಯ ಇತಿಹಾಸದಲ್ಲಿವೆ. ಆದರೆ, ಸಂಸತ್ತಿನ ಉಭಯ ಸದನಗಳಲ್ಲಿ ಈಗಿನ ಪ್ರಧಾನ ಮಂತ್ರಿಗಳ ನೆಪಮಾತ್ರದ ಹಾಜರಿಯನ್ನು ಕಂಡಾಗ ಅವರಿಗೆ ಸಂಸತ್ತು ಅಂದರೆ ಅಲರ್ಜಿಯಿರಬಹುದೇನೋ ಎಂಬ ಸಂಶಯ ಮೂಡುತ್ತದೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ ವಿಧಾನ ಸಭೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದುದು ಅಪರೂಪ ಎಂಬ ವರದಿಗಳಿವೆ. ಇದು ಸಂಸದೀಯ ಪ್ರಜಾಸತ್ತೆಗೆ ಸಲ್ಲದ ನಡೆ. ಹೋಗಲಿ ವಿರೋಧ ಪಕ್ಷಗಳಾದರೂ ಮತದಾನಕ್ಕೆ ಅವಕಾಶ ನೀಡುವ ವಿಧಿಯನ್ವಯ ಚರ್ಚೆಗೆ ಪಟ್ಟುಹಿಡಿಯದಿದ್ದರೆ ನೋಟು ಅಮಾನ್ಯೀಕರಣದ ಬಗ್ಗೆ ಉಪಯುಕ್ತ ಚರ್ಚೆ ಸಾಧ್ಯವಿತ್ತು. ಅವರೂ ತಮ್ಮ ಪಟ್ಟನ್ನು ಬಿಡಲಿಲ್ಲ. ಈ ಹಟದ ಮನೋಭಾವ ಕಂಡಾಗ ಉಭಯತ್ರ ಸಂಸದೀಯ ಪ್ರಜಾಸತ್ತೆ ಬಗ್ಗೆ ಗಂಭೀರ ಕಾಳಜಿ ಇಲ್ಲವೇನೋ ಎಂದು ಸಂದೇಹಿಸುವಂತಾಗುತ್ತದೆ. ಕಾಟಾಚಾರಕ್ಕೆಂಬಂತೆ ಸಂಸತ್ತು ಕಾರ್ಯನಿರ್ವಹಿಸುತ್ತಿರುವಾಗ ಜನಸಾಮಾನ್ಯರಲ್ಲಿ ಇನ್ನೆಂಥ ಭಾವನೆ ಬರಲು ಸಾಧ್ಯ?

ಸಂಸದೀಯ ಪ್ರಜಾಸತ್ತೆಯ ತತ್ವ ಆದರ್ಶಗಳು ಅವಗಣನೆಗೆ ಗುರಿಯಾಗುತ್ತಿರುವುದಕ್ಕೆ ಇನ್ನೂ ಕೆಲವು ಉದಾಹರಣೆಗಳಿವೆ. ಸಂಸದೀಯ ಪ್ರಜಾಸತ್ತೆಯ ಮುಖ್ಯ ಅಂಗಗಳಾದ ಕೆಲವು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾರ್ಯಾಚರಣೆಗಳಲ್ಲಿ ಇದನ್ನು ನಾವು ಕಾಣಬಹುದು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದನಂತರ ನ್ಯಾಯಾಂಗ, ಯೋಜನಾ ಆಯೋಗ, ಐ.ಸಿ.ಎಚ್.ಆರ್. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ, ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್, ವಿಶ್ವವಿದ್ಯಾನಿಲಯಗಳು,ಖಾದಿ ಗ್ರಾಮೋದ್ಯೋಗ ಮಂಡಳಿ ಮೊದಲಾದ ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿರುವುದು ಈಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿರುವುದನ್ನು ಯಾರೂ ಅಲ್ಲಗಳೆಯಲಾರರು. ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಇತ್ತೀಚಿನದು.

ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ತನ್ನ ತತ್ವಸಿದ್ಧಾಂತ, ಆದರ್ಶಗಳನ್ನು ಅನುಷ್ಠಾನಕ್ಕೆ ತರಲೆತ್ನಿಸುವುದು ಸಹಜ ನಡವಳಿಕೆಯೇ. ಬಿಜೆಪಿಯೂ ಅದಕ್ಕೆ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಅದು ಅನುಸರಿಸುತ್ತಿರುವ ಮಾರ್ಗ ಮಾತ್ರ ರೂಕ್ಷವಾದದ್ದು. ಭಾರತೀಯ ಪ್ರಜಾಸತ್ತೆಯಲ್ಲಿನ ನೆಹರೂ ಪರಂಪರೆ ಬಗ್ಗೆ ಅದಕ್ಕಿರುವ ‘ಪ್ರೀತಿ’ ಸರ್ವವಿಧಿತವಾದದ್ದು. ಅಧಿಕಾರಕ್ಕೆ ಬಂದ ಕೂಡಲೇ ನೆಹರೂ ಪರಂಪರೆಯನ್ನು ಅಳಿಸಿಹಾಕುವ ಉತ್ಸಾಹದಲ್ಲಿ ಅದು ಮಾಡಿದ ಮೊದಲ ಕಾರ್ಯ, ಯೋಜನಾ ಆಯೋಗವನ್ನು ಬರಖಾಸ್ತುಗೊಳಿಸಿದ್ದು. ಯೋಜನಾ ಆಯೋಗದ ಜಾಗಕ್ಕೆ ನೀತಿ ಆಯೋಗವನ್ನು ತಂದಿತು. ಈ ನೀತಿ ಆಯೋಗದ ‘ನೀತಿ’ ಏನು? ಅದರ ಅಧಿಕಾರ, ಕರ್ತವ್ಯಗಳೇನು? ಖಚಿತವಾಗಿ ಮತದಾರರಿಗೆ ತಿಳಿಯದು. ಯೋಜನೆಗಳ ರೂಪುರೇಖೆಗಳ ವಿಮರ್ಶೆ, ಹಣಕಾಸು ವೆಚ್ಚಗಳ ಪರಾಮರ್ಶೆ, ಫಲಾಫಲಗಳ ವಿಶ್ಲೇಷಣೆ, ಆದ್ಯತೆಗಳ ನಿಷ್ಕರ್ಶೆ ಇತ್ಯಾದಿಗಳ ಮೂಲಕ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಮಾರ್ಗದರ್ಶನ ಮಾಡಬೇಕೆಂದು ನಿರೀಕ್ಷಿಸಲಾಗುವ ನೀತಿ ಆಯೋಗ ಪ್ರಧಾನ ಮಂತ್ರಿಗಳ ‘ಹೌದಪ್ಪ’ ಆಯೋಗವಾಗಿರುವಂತಿದೆ. ಸದ್ಯದಲ್ಲಂತೂ ಅದು ಡಿಜಿಟಲ್‌ಗೆ ಪರಿವರ್ತನೆ ಹೊಂದುವವರಿಗೆ ಬಹುಮಾನ ಹಂಚುವ ಕಾರ್ಯದಲ್ಲಿ ನಿರತವಾಗಿದೆ.

ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವೆ ತಿಕ್ಕಾಟ ಹೊಸದಲ್ಲವಾದರೂ ಈಗಿನ ಸಂಘರ್ಷಕ್ಕೆ ಬೇರೆಯದೇ ಆದ ಆಯಾಮವಿದೆ. ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ್ದು ಈ ಸಂಘರ್ಷ. ನ್ಯಾಯಾಧೀಶರ ನೇಮಕಕ್ಕೆ ಇದ್ದ ನೇಮಕ ಮಂಡಲಿ ವ್ಯವಸ್ಥೆ ಜಾಗದಲ್ಲಿ ತನ್ನನ್ನೂ ಒಳಗೊಂಡಂತೆ ಹೊಸ ವ್ಯವಸ್ಥೆ ಜಾರಿಗೆ ತರುವ ಸರಕಾರದ ಯತ್ನ ವಿಫಲವಾದ ನಂತರ ವಿವಾದ ಹುಟ್ಟಿಕೊಂಡಿದೆ. ನೇಮಕ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ಮತ್ತು ಸರಕಾರದ ನಡುವೆ ಒಮ್ಮತದ ಒಡಂಬಡಿಕೆ ಆಗಬೇಕಿದೆ. ಸರಕಾರ ಸೂಚಿಸಿರುವ ಒಮ್ಮತದ ಒಡಂಬಡಿಕೆಗೆ ಸರ್ವೋಚ್ಚ ನ್ಯಾಯಾಲಯದ ಸಹಮತವಿಲ್ಲ. ನೇಮಕಗಳಲ್ಲಿ ಪಾರದರ್ಶಕತೆ ಇರಬೇಕಾದ್ದರಿದ ಅಭ್ಯರ್ಥಿಗಳ ಜಾತಕ ಜಾಲಾಡುವ ನಿಯಮವಿರಬೇಕೆಂಬುದು ಸರಕಾರದ ನಿಲುವು. ಆದರೆ ಜಾತಕ ಜಾಲಾಡುವ ನಿಯಮದ ಬಗ್ಗೆ ಸರ್ವೋಚ್ಚ ನ್ಯಾಯಲಯಕ್ಕೆ ಒಲವಿಲ್ಲ. ಜಾತಕ ಜಾಲಾಡುವ ಸಮಿತಿಯಲ್ಲಿ ಕಾರ್ಯಾಂಗ ಮೇಲುಗೈ ಪಡೆಯಬಹುದು, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಹಿತಾಸಕ್ತಿ ನೆಪಗಳನ್ನೊಡ್ಡಿ ಸರಕಾರ ತನ್ನ ಶಿಫಾರಸುಗಳ ಮೇಲೆ ವೀಟೊ ಚಲಾಯಿಸಬಹುದು ಎಂಬ ಶಂಕೆ ಸರ್ವೋಚ್ಚ ನ್ಯಾಯಾಲಯದ್ದು. ಈ ಶಂಕೆಯಲ್ಲಿ ಹುರುಳಿಲ್ಲದೇ ಇಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇಮಕದ ವಿಷಯದಲ್ಲಿ ನ್ಯಾಯಾಂಗದ ಸ್ವಾಯತ್ತ್ತತೆಯಲ್ಲಿ ಹಸ್ತಕ್ಷೇಪ ಮಾಡಿದ ನಿದರ್ಶನವಿದೆ. ಈಗಿನ ಸರಕಾರದ ಹುನ್ನಾರವೂ ನ್ಯಾಯಾಂಗದಲ್ಲಿ ತನ್ನವರನ್ನು ಪ್ರತಿಷ್ಠಾಪಿಸುವುದೇ ಆಗಿದೆ. ಸ್ವಾಯತ್ತ ಸಂಸ್ಥೆಗಳ ಆಯಕಟ್ಟಿನ ಹುದ್ದೆಗಳಲ್ಲಿ ತನ್ನವರನು ಕೂರಿಸುವ ಮೋದಿ ಸರಕಾರದ ಹುನ್ನಾರ ಎನ್.ಸಿ.ಎಚ್.ಆರ್, ಫಿಲ್ಮ್ ಇನ್‌ಸ್ಟಿಟ್ಯೂಟ್ ಮೊದಲಾದ ಸಂಸ್ಥೆಗಳ ಮುಖ್ಯಸ್ಥರ ನೇಮಕಗಳಲ್ಲಿ ಈಗಾಗಲೇ ಬಯಲಾಗಿದೆ. ಯಾವ ಸರಕಾರವೇ ಮಾಡಲಿ ಇದು ಸಂವಿಧಾನಬಾಹಿರವಾದುದು.

 ಸ್ವಾಯತ್ತ ಸಂಸ್ಥ್ಥೆಗಳ ಆಯಕಟ್ಟಿನ ಹುದ್ದೆಗಳಲ್ಲಿ ತಮ್ಮ ‘ಹೌದಪ್ಪ’ಗಳಿರಬೇಕೆಂಬ ಮೋದಿ ಸರಕಾರದ ಸುಪ್ತ ಆಸೆಗೆ ಇತ್ತೀಚಿನ ನಿದರ್ಶನ ರಿಸರ್ವ್ ಬ್ಯಾಂಕಿನದು. ರಘುರಾಂ ರಾಜನ್ ಅವರ ಸೇವಾ ಅವಧಿ ವಿಸ್ತರಿಸಲಿಲ್ಲ. ನೋಟು ಅಮಾನ್ಯೀಕರಣದಲ್ಲಿ ರಾಜನ್ ಅವರ ಸೇವೆಯನ್ನು ವಿಸ್ತರಿಸದೇ ಇದ್ದುದರ ಗುಟ್ಟು ಈಗ ಬಹಿರಂಗವಾಗಿದೆ. ನೋಟು ಅಮಾನ್ಯೀಕರಣದ ಬಗ್ಗೆ ಜನವರಿಯಿಂದಲೇ ಚರ್ಚೆ ನಡೆದಿತ್ತೆಂದು ಗವರ್ನರ್ ಉರ್ಜಿತ್ ಪಟೇಲರು ಹೇಳಿದ್ದಾರಾದರೂ ನಿರ್ಧಾರ ಸ್ವಯಂಪ್ರೇರಿತವೆಂದು ಘಂಟಾಘೋಷವಾಗಿ ಹೇಳಿಲ್ಲ. ಜನವರಿಯಿಂದ ಚರ್ಚೆ ನಡೆದಿರಬಹುದಾದರೂ ರಘುರಾಮ ರಾಜನ್ ಅದರ ಪರ ಇರಲಿಲ್ಲ.

ಅಭಿವೃದ್ಧಿ ಮಂತ್ರ ಜಪಿಸುತ್ತಲೇ ಮೋದಿಯುವರ ಸರಕಾರ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ನಡೆಸಿ ಅವುಗಳನ್ನು ದುರ್ಬಲಗೊಳಿಸುತ್ತಿರುವುದು ಅದರ ಮುಂದಿನ ಹೆಜ್ಜೆಯ ಸೂಚನೆಯಾಗಿದೆ. ಬಿಜೆಪಿಯ ರಹಸ್ಯ ಕಾರ್ಯಸೂಚಿಗಳು ಇನ್ನು ರಹಸ್ಯವಾಗಿ ಉಳಿದಿಲ್ಲ. ಹಿಂದೂ ಸರಕಾರ ಮತ್ತು ಏಕಪಕ್ಷಾಧಿಪತ್ಯ ರಾಜ್ಯ ವ್ಯವಸ್ಥೆ ಬಿಜೆಪಿಗೆ ಮತ್ತು ಅದರ ಮಾತೃ ಸಂಸ್ಥೆಯ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮಗಳು. ಏಕಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಬಿಜೆಪಿಯ ಒಲವು ಹಿಂದೆ ವ್ಯಕ್ತವಾಗಿರುವುದುಂಟು. ಈ ಬಾಬಿನಲ್ಲಿ ಚೈನಾ ಅದರ ಆದರ್ಶವಿದ್ದಂತಿದೆ. ಏಕಪಕ್ಷಾಧಿಪತ್ಯ ವ್ಯವಸ್ಥೆ ಎಂದ ಮೇಲೆ ಪ್ರಜಾಪ್ರಭುತ್ವ ಇರುವುದಾದರೂ ಹೇಗೆ? ಬಿಜೆಪಿಯ ಈ ಒಲವು ಅದರ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಲ್ಲಿ ಸ್ಪಷ್ಟವಾಗಿ ಬಹಿರಂಗ ಗೊಂಡಿದೆ.

ಎಲ್ಲ ಅಧಿಕಾರವನ್ನೂ ತಮ್ಮ ಕಪಿಮುಷ್ಟಿಯಲ್ಲಿ ಕೇಂದ್ರೀಕರಿಸಿಕೊಳ್ಳುತ್ತಾ ಸಂಸದೀಯ ಪ್ರಜಾಸತ್ತೆಯ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಮೋದಿಯವರ ಕ್ರಮಗಳು ಏಕಪಕ್ಷಾಧಿಪತ್ಯದ ಪ್ರಮುಖ ಲಕ್ಷಣವಾದ ನಿರಂಕುಶ ಪ್ರಭುತ್ವದ ಸ್ಪಷ್ಟ ಇಂಗಿತವೇ ಆಗಿದೆ. ‘ಕಾಂಗ್ರೆಸ್ ಮುಕ್ತ ಭಾರತ’ದ ಕನಸು ನನಸಾದರೆ ಈಗಾಗಲೇ ಗೋಚರಿಸುತ್ತಿರುವ ನಿರಂಕುಶ ಪ್ರಭುತ್ವ ವಿದ್ಯುಕ್ತಗೊಂಡಂತೆಯೇ ಸರಿ. ಆದರೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ಮುಂದೆ ಈ ಕನಸು ಭಗ್ನವಾಗುವ ಸಾಧ್ಯತೆಯೇ ಹೆಚ್ಚು. ಪ್ರಾದೇಶಿಕ ಪಕ್ಷಗಳನ್ನು ತನ್ನ ಹಿತಕ್ಕೆ ಮಣಿಸಿಕೊಳ್ಳುವ ಚಾಣಕ್ಯ ತಂತ್ರಗಳಿಗೂ ಬಿಜೆಪಿಯಲ್ಲಿ ಕೊರತೆಯಿಲ್ಲ. ಆದಾಗ್ಯೂ ಬಿಜೆಪಿ ಮತ್ತು ಆರೆಸ್ಸೆಸ್‌ಗಳ ಮನೋರಥ ಈಡೇರುವುದೆ-ಇಲ್ಲವೇ ಎನ್ನುವುದರಲ್ಲಿ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಫಲಿತಾಂಶ ನಿರ್ಣಾಯಕವಾಗಲಿದೆ.

Writer - ಜಿ.ಎನ್. ರಂಗನಾಥ್ ರಾವ್

contributor

Editor - ಜಿ.ಎನ್. ರಂಗನಾಥ್ ರಾವ್

contributor

Similar News