ಅಂಬೇಡ್ಕರ್‌ರ ಪುಸ್ತಕ ಪ್ರೀತಿ
ಇಂದು ಅಂಬೇಡ್ಕರ್ ಪರಿನಿರ್ವಾಣ ದಿನ
‘‘ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ’’ ಎಂದು ಅಂಬೇಡ್ಕರ್ ಅವರು ಹೇಳಿದ್ದು ಎಷ್ಟು ಅರ್ಥಗರ್ಭಿತ. ಪುಸ್ತಕ ಓದಿದ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠಮಟ್ಟಕ್ಕೇರಿಸುತ್ತದೆ ಎನ್ನಲಿಕ್ಕೆ ಅಂಬೇಡ್ಕರ್ ಅವರೇ ಒಂದು ದೊಡ್ಡ ಉದಾಹರಣೆಯಾಗಿದ್ದಾರೆ.
ಪುಸ್ತಕಗಳು ನಿರ್ಜೀವ ವಸ್ತುಗಳಲ್ಲ. ಅವು ಜೀವನ ರೂಪಿಸುವ ಜೀವಂತ ಜ್ಞಾನ ದೇಗುಲಗಳಿದ್ದಂತೆ. ಅದಕ್ಕಾಗಿಯೇ ‘‘ತಲೆ ಬಗ್ಗಿಸಿ ಪುಸ್ತಕ ಓದಿದರೆ ತಲೆಯತ್ತಿ ನಿಲ್ಲುಂತೆ ಮಾಡುತ್ತದೆ’’ ಎಂಬುದು ಪುಸ್ತಕದ ಕುರಿತಾಗಿ ಹಿರಿಯರು ಹೇಳಿದ ಒಂದು ಮಹತ್ವದ ಉಕ್ತಿ. ಪ್ರಸ್ತುತದಲ್ಲಿ ಈ ಉಕ್ತಿಗೆ ತದ್ವಿರುದ್ಧವಾದ ಬೆಳವಣಿಗೆಗಳು ಪಠ್ಯಪುಸ್ತಕದ ಹೆಸರಿನಲ್ಲಿ ಜನ ಸಮುದಾಯದ ನಡುವೆ ತಲೆ ಎತ್ತುತ್ತಿರುವುದರಿಂದ ಕೂಡಿರುವುದಕ್ಕೆ, ಕೂಡಿ ಬಾಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪುಸ್ತಕವು ಮನಸ್ಸಿನ ಮಲಿನತೆಗೆ ಸಾಣೆ ಹಿಡಿಯುವ ಸಾಧನ ಹೇಗೋ ಹಾಗೆಯೇ ಮೌಢ್ಯವೆಂಬ ಕತ್ತಲೆಯನ್ನು ಓಡಿಸುವ ಅರಿವಿನ ಬೆಳಕು. ಆದರೆ, ಇಂದು ಪಠ್ಯಪುಸ್ತಕದ ಹೆಸರಲ್ಲಿ ಮೌಢ್ಯತೆ ಪ್ರತಿಪಾದನೆಯು ಪುಸ್ತಕದ ಮೌಲ್ಯ ಕುಸಿಯುವಂತೆ ಮಾಡಲಾಗುತ್ತಿದೆ. ಪುಸ್ತಕ ಓದಿ, ಪುಸ್ತಕ ಪ್ರೀತಿಸಿದ ಅನೇಕ ಮಹನೀಯರು ತಮ್ಮ ಜ್ಞಾನದ ಆಳ ಅಗಲದ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟಿ ತಾವು ಬೆಳೆದಿದ್ದಾರೆ, ಅನೇಕರನ್ನು ಬೆಳೆಸಿದ್ದಾರೆ. ಆ ಮೂಲಕ ಜಾಗತಿಕರಿಗೆ ಮಾದರಿಯಾಗಿದ್ದಾರೆ. ಅಂಥವರನ್ನು ಜಗತ್ತಿನೆದುರಿಗೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಕೂಡ ಪುಸ್ತಕ.
ಅಂಬೇಡ್ಕರ್ ಅವರು ಮೆಟ್ರಿಕುಲೇಷನ್ ಪರೀಕ್ಷೆ ಪಾಸಾದಾಗ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಕೆಳೂಸ್ಕರ್ ಅವರು ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಗ್ರಂಥವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾರೆ. ಅಂಥ ಒಂದು ಪುಸ್ತಕ ಅಂಬೇಡ್ಕರ್ ಅವರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್ ಅವರನ್ನು ವಿಶ್ವಶ್ರೇಷ್ಠನನ್ನಾಗಿಸಿದ್ದು ಕಣ್ಣೆದುರಿಗಿದೆ. ಅಂಬೇಡ್ಕರ್ ಅವರು ಬಡತನದಲ್ಲಿಯೇ ಓದಿದವರು. ಮಗನ ಓದಿಗಾಗಿ ಶ್ರಮಿಸಿದ ರಾಮಜಿ ಸಕ್ಪಾಲ್ ಪುಸ್ತಕಗಳನ್ನು ಖರೀದಿಸಲು ಹೆಣ್ಣು ಮಕ್ಕಳ ಒಡವೆಗಳನ್ನು ಒತ್ತೆ ಇಡಲು, ಮಾರಲು ಹಿಂಜರಿಯಲಿಲ್ಲ. ಬಡತನ, ಜಾತಿನಿಂದನೆಯಿಂದ ನೊಂದ ಅಂಬೇಡ್ಕರ್ ಓದುವುದನ್ನು ಸಾಧನ ಮಾಡಿಕೊಂಡರು. ಅವರು ವಿಶ್ವಪ್ರಸಿದ್ಧಿ ಪಡೆಯಲು ಹಣ, ಸಂಪತ್ತು, ಅಂತಸ್ತು, ಜಾತಿ ಕಾರಣವಾಗಲಿಲ್ಲ, ಅವರಲ್ಲಿರುವ ಜ್ಞಾನ ಕಾರಣವಾಗಿತ್ತು. ಅವರೊಬ್ಬ ಶ್ರೇಷ್ಠ ಓದುಗರಾಗಿದ್ದರು. ಛಲವೇ ಅವರ ಶಕ್ತಿ, ತುಂಬ ಸ್ವಾಭಿಮಾನಿಯಾದ ಅವರು ಜೀವಿತದ ಅವಧಿಯಲ್ಲಿ ಓದಿದ್ದು, ಜ್ಞಾನ ಪಡೆದಿದ್ದು, ನಮ್ಮ ಹಾಗೆ ಒಂದೆರಡು ವಿಷಯಗಳನ್ನಲ್ಲ. ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲಿಷ್, ಫ್ರೆಂಚ್, ಸಂಸ್ಕೃತ, ಕಾನೂನು, ತತ್ವಜ್ಞಾನ, ಸಾಹಿತ್ಯ, ಸಂಸ್ಕೃತಿ, ಧರ್ಮ ಒಂದೇ ಎರಡೇ; ಅವರು ಮಾತಾಡಲು ನಿಂತರೆ ಗ್ರಂಥಾಲಯಕ್ಕೆ ಬಾಯಿ ಬಂದಂತಾಗುತ್ತಿತ್ತೆಂಬುದು ಪ್ರತ್ಯಕ್ಷದರ್ಶಿ ಪಾಟೀಲ ಪುಟ್ಟಪ್ಪನವರು ಪುಸ್ತಕ ಮಳಿಗೆಯಲ್ಲಿ ಕುಳಿತಾಗ ಪ್ರಾಸಂಗಿಕವಾಗಿ ನನ್ನೊಂದಿಗೆ ಹಂಚಿಕೊಂಡಿದ್ದರು.
ಅಂಬೇಡ್ಕರ್ ಅವರು ಪ್ರತಿಭಾವಿಲಾಸಕ್ಕಾಗಿ ಆತ್ಮಾನಂದಕ್ಕಾಗಿ ಓದಿದವರಲ್ಲ, ಬರೆದವರಲ್ಲ. ಸಮಾಜದ ಹಿತಕ್ಕಾಗಿ, ಅಕ್ಷರ ವಂಚಿತ ಬಹುಸಂಖ್ಯಾತ ಸಮುದಾಯದ ಬಿಡುಗಡೆಗಾಗಿ ಹಗಲು ರಾತ್ರಿಯೆನ್ನದೆ, ಆರೋಗ್ಯದ ಬಗ್ಗೆ ಲೆಕ್ಕ ಹಾಕದೆ ಓದಿ ಬರೆದ ಜಗತ್ತಿನ ಶ್ರೇಷ್ಠ ವ್ಯಕ್ತಿ, ಅಷ್ಟೇ ಅಲ್ಲ ಮಹಾನ್ ಪುಸ್ತಕಪ್ರೇಮಿ ಅಂಬೇಡ್ಕರ್ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಶ್ರೇಷ್ಠ ಚಿಂತಕರಾದ ಡಾ. ಜಾನ್ಸನ್ ಒಂದೆಡೆ ‘‘ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನು ಯಾರೂ ಓದುವುದಿಲ್ಲ. ಓದಬೇಕಾಗಿಯೂ ಇಲ್ಲ’’ ಎಂದು ಅಭಿಪ್ರಾಯ ಪಟ್ಟಿದ್ದಿದೆ. ಈ ತತ್ವಕ್ಕೆ ವಿರುದ್ಧವಾಗಿದ್ದ ಅಂಬೇಡ್ಕರ್ ಅವರು ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನು ಬಿಡದೆ ಓದುತ್ತಿದ್ದರು. ಖರೀದಿ ಮಾಡಿ ತಂದ ಯಾವುದೇ ಗ್ರಂಥವನ್ನು ಆಮೂಲಾಗ್ರವಾಗಿ ಓದಿ ಕರಗತಮಾಡಿಕೊಳ್ಳುತ್ತಿದ್ದರು. ಕುಳಿತಲ್ಲಿಯೇ ತಮ್ಮ ಗ್ರಂಥಾಲಯದ ಕಬಾರ್ಡಿನಲ್ಲಿರುವ ಪುಸ್ತಕದ ಬಣ್ಣ, ಕಟ್ಟು ಯಾವ ಸೈಜಿನದು, ಅದು ಯಾವ ಕಬಾರ್ಡಿನಲ್ಲಿದೆ, ಯಾವ ಪುಟದಲ್ಲಿ ಏನಿದೆ ಎಂಬುದನ್ನು ಹೇಳುವ ಜ್ಞಾಪಕ ಶಕ್ತಿ ಅವರಿಗಿತ್ತು. ಪುಸ್ತಕಗಳೊಂದಿಗಿನ ಒಡನಾಟ ವಿಶಿಷ್ಟ ಮತ್ತು ವಿಶೇಷವಾಗಿತ್ತು.
ಸಿಸಿರೊ ಓದಿಗಾಗಿ ಜೀವಕೊಡಲು ಸಿದ್ಧನಾಗಿದ್ದ. ಗಿಬ್ಬನ್ ‘‘ಎಲ್ಲ ವೈಭವವನ್ನು ಕೊಟ್ಟರೂ ನನ್ನ ಗ್ರಂಥ ಸಂಗ್ರಹವನ್ನು ಕೊಡುವುದಿಲ್ಲ’’ ಎಂದಿದ್ದರು. ‘‘ಪುಸ್ತಕಗಳ ಬದಲಿಗೆ ಅರಸೊತ್ತಿಗೆಯನ್ನು ಕೊಟ್ಟರೂ ಅದು ನನಗೆ ಬೇಡ’’ ಎಂದು ಮೆಕಾಲೆ ಹೇಳಿದ್ದರು. ತನ್ನ ಗ್ರಂಥ ರಾಶಿಯಿಂದ ದೂರವಾಗಬೇಕಾಗಿ ಬಂದಾಗ ವಾಲ್ಟರ್ ಸ್ಕಾಟ್ ಗೊಳೋ ಎಂದು ಅತ್ತು ಬಿಟ್ಟಿದ್ದನಂತೆ. ಗಾಂಧೀಜಿಯವರು ‘‘ಪುಸ್ತಕ ಓದುವ ಹವ್ಯಾಸವುಳ್ಳವರು, ಎಲ್ಲಿ ಹೋದರೂ ಸಂತೋಷವಾಗಿರಬಲ್ಲರು’’ ಎಂದಿದ್ದಾರೆ. ‘‘ಜಗತ್ತನ್ನು ಬೆಳಗಲು ಸೂರ್ಯಬೇಕು ಬದುಕನ್ನು ಬೆಳಗಲು ಪುಸ್ತಕ ಸಾಕು’’ ಎಂಬುದು ರಂವೀಂದ್ರನಾಥ ಟಾಗೋರ್ ಅವರ ಅಭಿಪ್ರಾಯ. ‘‘ಉತ್ತಮ ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ’’ ಎಂಬುದು ಜವಾಹರಲಾಲ್ ನೆಹರೂ ಅವರ ಉಕ್ತಿಯಾಗಿದೆ. ಇವರೆಲ್ಲರಿಗೂ ಮಿಗಿಲಾದುದು ಅಂಬೇಡ್ಕರ್ ಅವರ ಪುಸ್ತಕ ಪ್ರೀತಿ. ‘‘ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ’’ ಎಂದು ಅಂಬೇಡ್ಕರ್ ಅವರು ಹೇಳಿದ್ದು ಎಷ್ಟು ಅರ್ಥಗರ್ಭಿತ. ಪುಸ್ತಕ ಓದಿದ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠಮಟ್ಟಕ್ಕೇರಿಸುತ್ತದೆ ಎನ್ನಲಿಕ್ಕೆ ಅಂಬೇಡ್ಕರ್ ಅವರೇ ಒಂದು ದೊಡ್ಡ ಉದಾಹರಣೆಯಾಗಿದ್ದಾರೆ. ಪುಸ್ತಕಗಳಿಂದ ಪ್ರತಿಭಾ ಸಂಪನ್ನರಾಗಿದ್ದ ಅಂಬೇಡ್ಕರ್ ‘ರಾಷ್ಟ್ರಕೃತಿ’ ಎಂದು ನಾವು ಗೌರವಿಸುವ ‘ಸಂವಿಧಾನ’ ನಮಗೆ ನೀಡಿಲ್ಲವೆ!
ವಕೀಲ ವೃತ್ತಿಯಲ್ಲಿದ್ದಾಗ ವ್ಯಾಜ್ಯವೊಂದರಲ್ಲಿ ಅಂಬೇಡ್ಕರ್ ವಾದಿಸಿದ್ದರಿಂದ ಐದುನೂರು ರೂಪಾಯಿ ಸಂಭಾವನೆ ಬಂದಿರುತ್ತದೆ. ಅದರಿಂದ ದವಸಧಾನ್ಯ, ವಸ್ತು, ಒಡವೆಗಳನ್ನು ಖರೀದಿಸದೆ ತಕ್ಷಣ ಪುಸ್ತಕ ಖರೀದಿಸಿ ತರುತ್ತಾರೆ. ಮನೆಗೆ ಬಂದು ಓದಲು ಕುಳಿತಿರಬೇಕಾದರೆ, ಪತ್ನಿ ರಮಾಬಾಯಿ ಅಡುಗೆ ಮಾಡಿ ಊಟ ಬಡಿಸಲು ಮುಂದಾಗಿ, ಮೇಲಿಂದ ಮೇಲೆ ಊಟಕ್ಕೆ ಬರಲು ಕರೆದಾಗ, ‘‘ರಮಾ ನಾನು ಐದುನೂರು ರೂಪಾಯಿ ಖರ್ಚು ಮಾಡಿ ಪುಸ್ತಕ ತಂದು ಓದುತ್ತಿದ್ದೇನೆ! ಓದುವುದಕ್ಕಿಂತ ನಿನಗೆ ಊಟವೇ ಹೆಚ್ಚಾಯಿತೆ?’’ ಎಂದರಂತೆ. ಇದರಿಂದ ಗೊತ್ತಾಗುವುದೇನಂದರೆ ಅಂಬೇಡ್ಕರ್ ಅವರಿಗೆ ಓದು, ಪುಸ್ತಕವೆಂದರೆ ಅದೊಂದು ದೊಡ್ಡ ಹಸಿವು ಅನ್ನುವುದು ಖಚಿತವಾಗುತ್ತದೆ. ಒಮ್ಮೆ ಮದನ ಮೋಹನ ಮಾಳವೀಯ ಅವರು ಅಂಬೇಡ್ಕರ್ ಅವರ ಪುಸ್ತಕ ಭಂಡಾರವನ್ನು ಕಂಡು ‘‘ಅಂಬೇಡ್ಕರ್ ಅವರೇ ನಿಮ್ಮ ಈ ಪುಸ್ತಕಗಳನ್ನು ನಾನು ಎರಡು ಲಕ್ಷ ರೂಪಾಯಿಗಳಿಗೆ ಖರೀದಿಸುತ್ತೇನೆ ಕೊಟ್ಟು ಬಿಡಿ’’ ಎಂದಿದ್ದರಂತೆ, ಅದಕ್ಕುತ್ತರವಾಗಿ ಅಂಬೇಡ್ಕರ್ ಅವರು ‘‘ಈ ಪುಸ್ತಕಗಳು ಇಲ್ಲವಾದರೆ ನನ್ನ ಜೀವವೇ ಹೋದಂತೆ’’ ಎಂದು ಉತ್ತರಿಸಿದರಂತೆ.
ಪುಸ್ತಕವೆಂದರೆ ಅಂಬೇಡ್ಕರ್ ಅವರಿಗೆ ಪಂಚಪ್ರಾಣ, ಅದೊಂದು ಸಂಪತ್ತು. ಅವರು ಪುಸ್ತಕಗಳನ್ನು ನಿರ್ಜೀವ ವಸ್ತುಗಳೆಂದು ಭಾವಿಸಿರಲಿಲ್ಲ. ಹೀಗಾಗಿ ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸ್ವತಂತ್ರ ಗ್ರಂಥಾಲಯವನ್ನು ಹೊಂದಿದ್ದ ಆ ಕಾಲದ ಜಗತ್ತಿನ ಏಕೈಕ ವ್ಯಕ್ತಿ. ದುರದೃಷ್ಟದಿಂದ ಸಾಲಕ್ಕಾಗಿ ಕೋರ್ಟಿನ ಬೇಲೀಪ್ ಬಂದು ನನ್ನ ಪುಸ್ತಕಗಳಿಗೆ ಕೈ ಹಾಕಿದರೆ ಆತನನ್ನು ಇದ್ದಲ್ಲಿಯೇ ಕೊಂದು ಬಿಡುತ್ತೇನೆಂದು ಹೇಳಿದ್ದರಂತೆ. ಅಂಬೇಡ್ಕರ್ ಅವರಿಗೆ ಪುಸ್ತಕ, ಗ್ರಂಥಾಲಯವೆಂದರೆ ಜ್ಞಾನ ದೇಗುಲವಿದ್ದಂತೆ. ಅದಕ್ಕಾಗಿಯೇ ಅವರು ‘‘ಒಂದು ಮಂದಿರ ಕಟ್ಟಿಸಿದರೆ ಸಾವಿರ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ’’ ಎಂದು ಹೇಳಿದ್ದಲ್ಲದೆ, ‘‘ಸತ್ತು ಹೋದ ಮೇಲೆ ಮತ್ತೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, ಜನ ಓದುವ ಹಾಗೆ ಏನಾದರೂ ಬರೆದು ಬಿಟ್ಟು ಹೋಗಿ ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯಮಾಡಿ ಹೋಗಿ’’ ಎಂದು ಜನತೆಯನ್ನು ಎಚ್ಚರಿಸಿದ್ದರು. ಜಗತ್ತಿನಲ್ಲಿಯೇ ಹೆಚ್ಚು ಪುಸ್ತಕ ಓದಿದವರು ಅಂಬೇಡ್ಕರ್ ಎಂದು ಕೆಂಬ್ರಿಜ್‌ನ ಆಕ್ಸ್ ಫರ್ಡ್ ಗ್ರಂಥಾಲಯ ದಾಖಲಿಸಿದೆ. ಅಂತಹ ಒಬ್ಬ ಶ್ರೇಷ್ಠ ಓದುಗ, ಜ್ಞಾನಿ ಅಂಬೇಡ್ಕರ್ ಅವರನ್ನು ಇವತ್ತು ಜಗತ್ತು ಅರ್ಹವಾಗಿಯೇ ಗೌರವಿಸುತ್ತಿದೆ.
ತಾನು ಹೇಗೆ ಓದಿದೆ, ಹೆಚ್ಚಿನದನ್ನು ಹೇಗೆ ಸಾಧಿಸಿದೆ ಎನ್ನುವುದನ್ನು ಅವರೇ ಹೇಳಿದ್ದಾರೆ. ‘‘ನಾನು ಒಂದು ಬಡಕುಟುಂಬದಲ್ಲಿ ಹುಟ್ಟಿದೆ. ಬೇರೆಯವರಿಗಿಂತಲೂ ಉತ್ತಮವಾದ ಸೌಕರ್ಯಗಳಾಗಲಿ ಅಥವಾ ಆರೋಗ್ಯಕರ ಪರಿಸರವಾಗಲಿ ನನಗಿರಲಿಲ್ಲ. ನಾನು, ನನ್ನ ತಂದೆ ತಾಯಿ, ಸಹೋದರ ಸಹೋದರಿಯರು, ಅವರ ಮಕ್ಕಳು ಎಲ್ಲರೂ ಜೊತೆಯಲ್ಲಿ ಹತ್ತು ಚದರ ಅಡಿ ಅಳತೆಯ ಒಂದೇ ಕೋಣೆಯಲ್ಲಿ ವಾಸವಾಗಿದ್ದೆವು. ನಮ್ಮಲ್ಲಿದ್ದುದು ಒಂದೇ ಒಂದು ಮಿಣುಕು ಸೀಮೆ ಎಣ್ಣೆ ದೀಪ. ಎಲ್ಲ ಅಡ್ಡಿ ಆತಂಕಗಳನ್ನು ದಾಟಿ, ಕಡುಕಷ್ಟಗಳ ವಿರುದ್ಧ ಹೋರಾಡಿ ಇಷ್ಟೆಲ್ಲ ಸಾಧಿಸಿದ್ದೇನೆಂದ ಮೇಲೆ, ಈಗ ವಿಪುಲ ಆಧುನಿಕ ಸೌಕರ್ಯಗಳು ದೊರೆಯುತ್ತಿರುವ ನಿಮಗೆ ಅಷ್ಟನ್ನು ಸಾಧಿಸಲು ಏಕೆ ಕಷ್ಟವಾಗುತ್ತದೆ? ನಿರಂತರವಾದ ಹಾಗೂ ಸುದೀರ್ಘ ಪರಿಶ್ರಮದಿಂದ ವ್ಯಕ್ತಿಯು ಸಮರ್ಥನೂ, ಬುದ್ಧಿವಂತನೂ ಆಗುತ್ತಾನೆ. ನಿರಂತರ ಪರಿಶ್ರಮದಿಂದ ಮಾತ್ರ ನೀವುಗಳು ಯಶಸ್ಸು ಗಳಿಸಲು ಸಾಧ್ಯ. ಹುಟ್ಟಿನಿಂದ ಯಾರೂ ಸಹ ವೀರರಲ್ಲ. ನಾನು ಇಂಗ್ಲೆಂಡ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಂದು ಪದವಿಯನ್ನು ಮುಗಿಸಲು ಸಾಮಾನ್ಯವಾಗಿ ಎಂಟು ವರ್ಷಗಳು ಬೇಕಾಗಿದ್ದ ಒಂದು ಕೋರ್ಸನ್ನು ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಮುಗಿಸಿದೆ. ಇದಕ್ಕಾಗಿ ನಾನು ದಿನಕ್ಕೆ 21 ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿದ್ದೆ. ನನಗೀಗ ವಯಸ್ಸು ಐವತ್ತು ವರ್ಷಗಳ ಮೇಲಾಗಿದೆ. ಆದರೂ ನಾನು ಒಂದೇ ಸಮನೆ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಬಲ್ಲೆ. ಆದರೆ ಇಂದಿನ ಯುವಕರು? ಕೇವಲ ಅರ್ಧ ಗಂಟೆ ಕೆಲಸ ಮಾಡಿದರೂ ಅವರಿಗೆ ವಿರಾಮ ಬೇಕೆನಿಸುತ್ತದೆ. ಸಿಗರೇಟು ಸೇದಿ ಕಾಲು ಚಾಚಿ ಉರುಳಿಕೊಳ್ಳುತ್ತಾರೆ. ಇಲ್ಲವೆ ನಶೆ ತರುವಂತಹ ಪದಾರ್ಥವನ್ನು ಸೇವಿಸಿ ಬೇರೆಡೆ ಗಮನ ಹರಿಸುತ್ತಾರೆ. ಈ ವಯಸ್ಸಿನಲ್ಲಿಯೂ ನನಗೆ ಇಂಥ ಪದಾರ್ಥಗಳು ಬೇಕೆನಿಸುವುದಿಲ್ಲ’’ ಇದು ಅಂಬೇಡ್ಕರ್ ಅವರು (1943ರಲ್ಲಿ) ಎಂಟು ದಶಕಗಳ ಹಿಂದೆ ಹೇಳಿದ ಮಾತು. ಅವಿರತ ಪ್ರಯತ್ನ ಹಾಗೂ ಬದ್ಧತೆಯೆಂದರೆ ಇದು. ಇಂಥ ಬದ್ಧತೆಯ ನೆಲೆಯಲ್ಲಿ ಗೊಂದಲ ರಹಿತ ಪಠ್ಯಪುಸ್ತಕಗಳ ಮೂಲಕ ಮಕ್ಕಳನ್ನು ಸಿದ್ಧಗೊಳಿಸಿದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಟಾಗೋರ್ ಅವರನ್ನು ಅನುಸರಿಸಿಯಾರು.