ಬಂಡವಾಳ ಹೂಡಿಕೆಗೆ ಸರಕಾರದಿಂದ ಅಗತ್ಯ ನೆರವು: ಸಿಎಂ ಸಿದ್ದರಾಮಯ್ಯ

Update: 2017-01-22 13:42 GMT

ಬೆಂಗಳೂರು, ಜ.22: ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸಲು ಮುಂದೆ ಬರುವಂತಹ ಉದ್ಯಮಿಗಳಿಗೆ ಯಾವುದೇ ಕ್ಷೇತ್ರದಲ್ಲಾದರೂ ಬಂಡವಾಳ ಹೂಡಿಕೆಗೆ ಅಗತ್ಯವಾದ ನೆರವು ಒದಗಿಸಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ನಗರದ ನಾಗವಾರ ಬಳಿಯಿರುವ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಎಂಎಫ್ ಎಆರ್ ಸಂಸ್ಥೆಯ 4ನೆ ಹಂತವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರವು ಕೇವಲ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿಟ್ಟುಕೊಂಡು ಬಂಡವಾಳ ಆಕರ್ಷಣೆಗೆ ಮುಂದಾಗುತ್ತಿಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಆಕರ್ಷಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರವು ವಿಶ್ವದ ಅತ್ಯಂತ ಆಕರ್ಷಕ ನಗರವಾಗಿ ಮಾರ್ಪಟ್ಟಿದೆ. ಅಮೆರಿಕಾದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕುವ ಸಾಮರ್ಥ್ಯ ಬೆಂಗಳೂರಿಗಿದೆ. ಜಾಗತಿಕವಾಗಿ ಬೆಳವಣಿಗೆಯಾಗುತ್ತಿರುವ ವಿಜ್ಞಾನ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಡವಾಳ ಹೂಡಿಕೆದಾರರ ಪಾಲಿಗೆ ದೇಶದಲ್ಲೇ ಬೆಂಗಳೂರು ಮೊದಲ ಆಯ್ಕೆಯಾಗುತ್ತಿದೆ. ಸಮಗ್ರ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೂ ಗಮನ ಹರಿಸಬೇಕಾಗಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬದಲಾವಣೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎನ್‌ಎಫ್ ಎಆರ್ ಸಂಸ್ಥೆಯಿಂದಾಗಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಸಂಸ್ಥೆಯ ಮುಖ್ಯಸ್ಥ ಡಾ.ಪಿ.ಮುಹಮ್ಮದ್ ಅಲಿ, ಅನಿವಾಸಿ ಭಾರತೀಯರಾಗಿದ್ದು, ಅವರ ಸರಳತೆ ಹಾಗೂ ಕಾರ್ಯದಕ್ಷತೆಯಿಂದ ಬೆಂಗಳೂರಿನಲ್ಲಿ ನೂತನ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತ ಸರಕಾರದ ‘ಪ್ರವಾಸಿ ಭಾರತೀಯ ಸಮ್ಮಾನ್-2004’ ಪ್ರಶಸ್ತಿಗೆ ಪಾತ್ರರಾದ ಒಮನ್ ದೇಶದಲ್ಲಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಮುಹಮ್ಮದ್ ಅಲಿ ಪಾತ್ರರಾಗಿದ್ದಾರೆ. ಅಲ್ಲದೆ, ಗ್ಲಾಸ್ಗೋದ ಕಲೆಡೋನಿಯನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ನ್ನು ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉದ್ಯಮಿಗಳು ನಿರ್ಭೀತಿಯಿಂದ ಬಂಡವಾಳ ಹೂಡುವ ವಾತಾವರಣವಿದೆ. ಮುಂದಿನ ಕೆಲವು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ಅದಕ್ಕೆ ಅನುಗುಣವಾಗಿ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಅಳವಡಿಕೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಮಾರಂಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಯು.ಟಿ.ಖಾದರ್, ರೋಶನ್‌ಬೇಗ್, ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಸಂಸ್ಥೆಯ ಅಧ್ಯಕ್ಷ ಡಾ.ಪಿ.ಮುಹಮ್ಮದ್ ಅಲಿ, ನಿರ್ದೇಶಕರಾದ ಮೊಹಿದ್ದೀನ್ ರಿಝ್ವೆನ್, ಮೊಹಿದ್ದೀನ್ ಅಲಿ, ಶಾಸಕರಾದ ಎನ್.ಎ.ಹಾರಿಸ್, ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News