ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಧ್ಯೇಯ ಸ್ವಾಗತ

Update: 2017-01-22 19:03 GMT

ಮಾನ್ಯರೆ,
ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಆರೋಗ್ಯ ಮೇಲೆ ಬೀರುವ ದೈಹಿಕ ಮತ್ತು ಮಾನಸಿಕ ದುಷ್ಪರಿಣಾಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇತ್ತೀಚೆಗಷ್ಟೇ ರಾಜ್ಯ ಮಟ್ಟದ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮುಂದಿನ 5 ವರ್ಷಗಳಲ್ಲಿ ಬಾಲ್ಯ ವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಧ್ಯೇಯ ಹೊಂದಿರುವುದು ಸ್ವಾಗತಾರ್ಹ.

ಗ್ರಾಮೀಣ ಪ್ರದೇಶದ ಹಿಂದುಳಿದ, ದೀನ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿನ ಬಡತನ, ಅನಕ್ಷರತೆ, ಮೂಢನಂಬಿಕೆ ಮತ್ತು ಆರ್ಥಿಕ ತೊಂದರೆಗಳಿಂದಾಗಿ ಬಾಲ್ಯ ವಿವಾಹಗಳು ಹೆಚ್ಚು ನಡೆಯುತ್ತಿವೆ. ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟಲು ಸರಕಾರ ಹಲವು ಕಠಿಣ ಕಾಯ್ದೆ ಕಾನೂನುಗಳನ್ನು ರೂಪಿಸಿದರು ಕೂಡಾ ಈ ಪದ್ಧತಿ ಇನ್ನೂ ಜೀವಂತವಾಗಿದೆ. ನಮ್ಮ ರಾಜ್ಯ ಬಾಲ್ಯ ವಿವಾಹ ಪದ್ಧತಿ ಆಚರಣೆಯಲ್ಲಿ 8ನೆ ಸ್ಥಾನ ಪಡೆದುಕೊಂಡಿದೆ.

ಆದ್ದರಿಂದ ಈ ಅನಿಷ್ಟ ಪದ್ಧತಿಯನ್ನು ನಮ್ಮ ರಾಜ್ಯದಿಂದ ನಿರ್ಮೂಲನೆ ಮಾಡಬೇಕಾದರೆ ಖುದ್ದು ಸರಕಾರವೇ ಪ್ರತೀ ವರ್ಷವೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಬಡವರ ಮದುವೆಯ ಭಾರವು ಕಡಿಮೆ ಮಾಡಿದಂತಾಗುತ್ತದೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಜೋತೆಗೆ ಸರ್ವ ಧರ್ಮಗಳಲ್ಲಿ ಸಾಮರಸ್ಯ ಮೂಡಿಸಿದಂತಾಗುತ್ತದೆ.ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News