ಜಮ್ಮು-ಕಾಶ್ಮೀರದ ಪರ್ವೇಝ್ ರಿಗೆ ಅವಕಾಶ

Update: 2017-01-23 09:28 GMT

ಮುಂಬೈ, ಜ.23: ಇಂಗ್ಲೆಂಡ್ ವಿರುದ್ಧ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಜಮ್ಮು-ಕಾಶ್ಮೀರದ ಆಲ್‌ರೌಂಡರ್ ಪರ್ವೇಝ್ ರಸೂಲ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಟ್ವೆಂಟಿ-20 ಸರಣಿಯಲ್ಲಿ ಭಾರತದ ಪ್ರಮುಖ ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಗೆ ವಿಶ್ರಾಂತಿ ನೀಡಲು ನಿರ್ಧರಿಸಿರುವ ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಈ ಇಬ್ಬರ ಬದಲಿಗೆ ಪರ್ವೇಝ್ ಹಾಗೂ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾರಿಗೆ ಮಣೆ ಹಾಕಿದೆ.

ಜಡೇಜ ಹಾಗೂ ಅಶ್ವಿನ್ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಫ್ ಸ್ಪಿನ್ನರ್ ಅಶ್ವಿನ್ ಎರಡು ಪಂದ್ಯಗಳಲ್ಲಿ ವಿಕೆಟ್‌ನ್ನು ಪಡೆದಿರಲಿಲ್ಲ.

ಮಿಶ್ರಾ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೆಯ ಬಾರಿ ಆಡಿದ್ದರು. ಆ ಪಂದ್ಯದಲ್ಲಿ ಅವರು 5 ವಿಕೆಟ್ ಗೊಂಚಲು ಕಬಳಿಸಿ 3-2 ಅಂತರದಿಂದ ಸರಣಿ ಜಯಿಸಲು ನೆರವಾಗಿದ್ದರು. ಸರಣಿಯಲ್ಲಿ ಒಟ್ಟು 15 ವಿಕೆಟ್ ಪಡೆದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಮತ್ತೊಂದೆಡೆ, ಪರ್ವೇಝ್ 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕೈಕ ಏಕದಿನ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ 60 ರನ್‌ಗೆ 2 ವಿಕೆಟ್ ಪಡೆದಿದ್ದರು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ಜ.26 ರಂದು ಆರಂಭವಾಗಲಿದೆ. ಟಿ-20 ಪಂದ್ಯಗಳು ಕಾನ್ಪುರ, ನಾಗ್ಪುರ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News