ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಫೆಬ್ರವರಿ ಗಡುವು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

Update: 2017-01-23 14:13 GMT

ಬೆಂಗಳೂರು, ಜ. 23: ಗ್ರಾಮೀಣ(94‘ಸಿ’) ಮತ್ತು ನಗರ ಪ್ರದೇಶ(94‘ಸಿಸಿ’)ದ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಗಡುವನ್ನು ಫೆಬ್ರವರಿ ಅಂತ್ಯದವರೆಗೂ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಫೆ.21 ಮತ್ತು ನಗರ ಪ್ರದೇಶದಲ್ಲಿ ಫೆ.27ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಅಕ್ರಮ-ಸಕ್ರಮ ಯೋಜನೆಯಡಿ ಈವರೆಗೂ ರಾಜ್ಯಾದ್ಯಂತ ಒಟ್ಟು 30 ಲಕ್ಷ ಅರ್ಜಿಗಳು ಬಂದಿದ್ದು, ಇದೀಗ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ ಎಂದ ಅವರು, ಎಲ್ಲರಿಗೂ ಸೂರು ಕಲ್ಪಿಸುವ ದೃಷ್ಟಿಯಿಂದ ಅವಧಿ ವಿಸ್ತರಣೆ ಮಾಡಲಾಗಿದೆ ಎಂದರು.

ದರ ಇಳಿಕೆ: ಅಕ್ರಮ-ಸಕ್ರಮಕ್ಕೆ ನಿಗದಿಪಡಿಸಿದ್ದ ದರದಲ್ಲಿ ಶೇ.50ರಷ್ಟು ಇಳಿಕೆ ಮಾಡಲಾಗಿದೆ. ಈ ಹಿಂದೆ 50್ಡ 80 ಅಳತೆಗೆ 6 ಸಾವಿರ ರೂ.ನಿಂದ 3 ಸಾವಿರ ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಅದೇ ರೀತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತರಿಗೆ ಮತ್ತಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಿಂದ 18ಕಿಮೀ ದೂರ ವಿರುವ ಗ್ರಾಮೀಣ ಪ್ರದೇಶಗಳಿಗೂ ಅಕ್ರಮ-ಸಕ್ರಮ ಅನ್ವಯವಾಗಲಿದೆ. ಬಡ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರಕಾರ ಮೇಲ್ಕಂಡ ಕ್ರಮ ಕೈಗೊಂಡಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಅಧಿಕಾರಿಗಳು ಸೂಕ್ತ ದಾಖಲೆ ಸಿದ್ದಪಡಿಸಿ ಜನರಿಗೆ ಸಕ್ರಮ ಮಾಡಿಕೊಡಬೇಕೆಂದು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News