‘ಬರ ಪರಿಹಾರ’ಕ್ಕೆ ಕೇಂದ್ರದಿಂದ ಪೈಸೆ ಅನುದಾನವೂ ಬಿಡುಗಡೆಯಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-01-23 14:15 GMT

ಬೆಂಗಳೂರು, ಜ. 23: ಬರ ಪರಿಹಾರ ಕಾರ್ಯಕ್ಕೆ ರಾಜ್ಯ ಸರಕಾರವು ಸಲ್ಲಿಸಿದ್ದ ಮನವಿಗೆ ಕೇಂದ್ರ 1,782 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಆದರೆ, ಬರ ಪರಿಹಾರಕ್ಕೆ ಈವರೆಗೂ ಒಂದು ಪೈಸೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 121ನೆ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪದಲ್ಲಿನ ನೇತಾಜಿ ಪ್ರತಿಮೆಯಡಿಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬರ ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರಕ್ಕೆ 2016ರ ಅಕ್ಟೋಬರ್ 27ರಂದು ಸಲ್ಲಿಸಿದ ಮನವಿಗೆ ಭರವಸೆ ದೊರೆತಿದೆಯೇ ಹೊರತು, ಅದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಬರ ಪರಿಹಾರಕ್ಕೆ ಅನುದಾನ ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯ.

ಅದು ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಹದಿನಾಲ್ಕನೆ ಹಣಕಾಸು ಆಯೋಗದ ಮಾರ್ಗಸೂಚಿಗಳ ಪ್ರಕಾರವೂ ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರಕಾರವು ಆದ್ಯತೆಯ ಮೇರೆಗೆ ಅನುದಾನವನ್ನು ಒದಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅಲ್ಲದೆ, 2009ರ ಅಕ್ಟೋಬರ್‌ನಲ್ಲಿ ರಾಜ್ಯದ ನೆರೆ ಪರಿಹಾರಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ 2 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿ, ಪರಿಹಾರದ ಮೊತ್ತವನ್ನು ದೊರಕಿಸಿಕೊಟ್ಟಿದ್ದರು ಎಂದ ಅವರು, ಬರ ಪರಿಹಾರ ಕಾಮಗಾರಿಗಳ ಕುರಿತಂತೆ ವಿಪಕ್ಷಗಳು ಅನಗತ್ಯ ಟೀಕೆ ಬಿಟ್ಟು ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಮೇಲೆ ಒತ್ತಡ ಹೇರಬೇಕೆಂದು ಸಲಹೆ ಮಾಡಿದರು.

ಶುಭಾಶಯ ಕೋರಿಕೆಗೆ ಭೇಟಿ: ರಾಜ್ಯಪಾಲ ವಜುಭಾಯಿ ವಾಲಾರ 80ನೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ತಾವು ರಾಜಭವನಕ್ಕೆ ತೆರಳುತ್ತಿದ್ದು, ಅದು ಬಿಟ್ಟು ಬೇರ್ಯಾವುದೇ ವಿಚಾರಗಳನ್ನು ಈ ವೇಳೆ ಅವರೊಂದಿಗೆ ಚರ್ಚಿಸುವುದಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ, ನೇತಾಜಿ ಅವರ ಅಪ್ರತಿಮ ದೇಶಾಭಿಮಾನ, ಆದರ್ಶ ಪ್ರಾಯವನ್ನು ಹೊಂದುವ ಕುರಿತಂತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬೆಂ.ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್ ಚಂದ್ರ ಕುಂಟಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ರಾಜ್ಯ ಸರಕಾರ ‘ಕಂಬಳ’ ಕ್ರೀಡೆ ಪರವಾಗಿದೆ. ತಮಿಳುನಾಡಿನಲ್ಲಿ ನಡೆಯುವ ‘ಜಲ್ಲಿಕಟ್ಟು’ ಮಾದರಿಯಲ್ಲೆ ರಾಜ್ಯದಲ್ಲಿನ ಕಂಬಳ ಕ್ರೀಡೆಗೂ ಅವಕಾಶ ಕಲ್ಪಿಸಬೇಕು’

-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News