ಬೆಂಗಳೂರು ವಿವಿ: ಹೆಚ್ಚು ಅಂಕ ಪಡೆದು, ಕಣ್ಣೀರಿಟ್ಟ ರ‍್ಯಾಂಕ್ ವಿದ್ಯಾರ್ಥಿಗಳು!
ಬೆಂಗಳೂರು, ಜ.27: ಒಂದಲ್ಲಾ ಒಂದು ವಿವಾದದಿಂದಲೇ ಸುದ್ದಿಯಾಗುವ ಬೆಂಗಳೂರು ವಿಶ್ವವಿದ್ಯಾಲಯ ಮತ್ತೆ ವಿವಾದಕ್ಕೀಡಾಗಿದೆ. ಘಟಿಕೋತ್ಸವದ ವೇಳೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡದೆ ವಿವಿಯೂ ಅಚಾತುರ್ಯ ತೋರಿದ್ದು, ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿಯೇ ಕಣ್ಣೀರು ಹಾಕಿದರು.
ಶುಕ್ರವಾರ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 52 ನೆ ಘಟಿಕೋತ್ಸವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ 42,245 ವಿದ್ಯಾರ್ಥಿಗಳು ವಿವಿಧ ಪದವಿ ಸ್ವೀಕರಿಸಲು ಅರ್ಹತೆ ಪಡೆದಿದ್ದರು.
ಈ ವೇಳೆ ವಿವಿ ವಿವಿಧ ವಿಷಯಗಳಲ್ಲಿ ಪದವಿ ಪಡೆದ ಹಾಗೂ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಒಟ್ಟು 203 ಪದಕ ವಿತರಿಸಬೇಕಿತ್ತು. ಆದರೆ, ವಿವಿ ಕೇವಲ 100 ಚಿನ್ನದ ಪದಕ ವಿತರಿಸಿ ಉಳಿದ ವಿದ್ಯಾರ್ಥಿಗಳಿಗೆ 200-300 ರೂಪಾಯಿ ದುಡ್ಡು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಎಂ.ಎ. ಕನ್ನಡ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಎಂಟು ಪದಕ ಗಳಿಸಿದ ಸೌಜನ್ಯಗೆ ಕೇವಲ ಒಂದು ಪದಕ ನೀಡಲಾಗಿದೆ. ಎರಡು ಮೂರು ಪದಕ ವಿಜೇತ ವಿದ್ಯಾರ್ಥಿಗಳಿಗೆ ಕೇವಲ ಪ್ರಮಾಣ ಪತ್ರ ಪ್ರದಾನಿಸಲಾಗಿದೆ. ಇದರಿಂದ ವರ್ಷ ಪೂರ್ತಿ ಓದಿ ಪದಕ ಗಳಿಸಿ ಹೆತ್ತವರು, ಸಂಬಂಧಿಕರ ಮುಂದೇ ಪದಕ ಸ್ವೀಕರಿಸುವ ಕನಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ.
ಹಣವಿಲ್ಲ: ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ವಿವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಚಿನ್ನದ ದರ ಏರಿಕೆಯಾಗಿದೆ. ಈ ದರದಲ್ಲಿ ಪದಕ ಪ್ರದಾನಿಸುವುದು ಕಷ್ಟಕರ. ಹೀಗಾಗಿ, ಒಂದೊಂದೇ ನೀಡಲಾಗಿದೆ. ಅಲ್ಲದೆ, ಬೆಂಗಳೂರು ವಿವಿ ಬಳಿ ಹಣವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.