5 ಮುಸ್ಲಿಮ್ ಬಾಹುಳ್ಯದ ದೇಶಗಳಿಗೆ ಕುವೈತ್ ವೀಸಾ ನಿಷೇಧ

Update: 2017-02-02 14:43 GMT

ಕುವೈತ್ ಸಿಟಿ, ಫೆ. 2: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕ ಪ್ರವೇಶವನ್ನು ನಿಷೇಧಿಸಿದ ಬೆನ್ನಿಗೇ, ಇಂಥದೇ ಕ್ರಮವೊಂದನ್ನು ಕುವೈತ್ ತೆಗೆದುಕೊಂಡಿದೆ.

ಅದು ಸಿರಿಯ, ಇರಾಕ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದೆ.

ಇರಾನ್, ಇರಾಕ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ದೇಶಗಳ ನಿವಾಸಿಗಳಿಗೆ ಅಮೆರಿಕದ ವೀಸಾ ನೀಡುವುದನ್ನು ಟ್ರಂಪ್ ಆಡಳಿತ 90 ದಿನಗಳ ಕಾಲ ತಡೆಹಿಡಿದಿದೆ ಹಾಗೂ ಜಗತ್ತಿನಾದ್ಯಂತದ ನಿರಾಶ್ರಿತರ ಪ್ರವೇಶ ಪ್ರಕ್ರಿಯೆಯನ್ನು 120 ದಿನಗಳ ಕಾಲ ನಿಲ್ಲಿಸಿದೆ.

ವಲಸಿಗರೊಂದಿಗೆ ಭಯೋತ್ಪಾದಕರೂ ನುಸುಳುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಐದು ನಿಷೇಧಿತ ದೇಶಗಳ ಭಾವೀ ವಲಸಿಗರು ವೀಸಾಗಳಿಗಾಗಿ ಅರ್ಜಿ ಹಾಕಬಾರದು ಎಂದು ಕುವೈತ್ ಸರಕಾರ ಹೇಳಿದೆ ಎಂದು ‘ಸ್ಪೂತ್ನಿಕ್ ಇಂಟರ್‌ನ್ಯಾಶನಲ್’ ವರದಿ ಮಾಡಿದೆ.

ಟ್ರಂಪ್ ಆದೇಶಕ್ಕಿಂತಲೂ ಮೊದಲು ಸಿರಿಯ ರಾಷ್ಟ್ರೀಯರ ಪ್ರವೇಶಕ್ಕೆ ನಿಷೇಧ ಹೇರಿದ್ದ ಏಕೈಕ ದೇಶ ಕುವೈತ್ ಆಗಿತ್ತು. ಸಿರಿಯನ್ನರಿಗೆ ವೀಸಾ ನೀಡುವುದನ್ನು ನಿಷೇಧಿಸುವ ಆದೇಶವನ್ನು ಸಿರಿಯ 2011ರಲ್ಲೇ ಹೊರಡಿಸಿತ್ತು.

2015ರಲ್ಲಿ ಕುವೈತ್‌ನ ಶಿಯಾ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ನಡೆಸಿತ್ತು. ಅದರಲ್ಲಿ 27 ಕುವೈತ್ ರಾಷ್ಟ್ರೀಯರು ಮೃತಪಟ್ಟಿದ್ದರು.
ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಸದಸ್ಯ ದೇಶವಾಗಿರುವ ಕುವೈತ್, ಜಿಸಿಸಿ ಮತ್ತು ಇರಾನ್‌ನಗಳ ನಡುವಿನ ಉದ್ವಿಗ್ನತೆಯಲ್ಲೂ ಒಳಗೊಂಡಿದೆ.

ಅಮೆರಿಕದ ವಲಸೆ ನಿಷೇಧ ಆಂತರಿಕ ವ್ಯವಹಾರ: ಯುಎಇ

ಅಬುಧಾಬಿ, ಫೆ. 2: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳ ಅಮೆರಿಕ ಪ್ರವೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ನಿಷೇಧ ಆ ದೇಶದ ಆಂತರಿಕ ವ್ಯವಹಾರವಾಗಿದೆ ಹಾಗೂ ಯಾವುದೇ ಧರ್ಮವನ್ನು ಅದು ಗುರಿಯಾಗಿಸಿಲ್ಲ ಎಂದು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದ ವಿದೇಶ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೇದ್ ಹೇಳಿದ್ದಾರೆ.

ಹೆಚ್ಚಿನ ಮುಸ್ಲಿಮರು ಮತ್ತು ಮುಸ್ಲಿಮ್ ದೇಶಗಳು ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದರು. ನಿಷೇಧಕ್ಕೊಳಪಟ್ಟ ದೇಶಗಳಲ್ಲಿ ‘ಸವಾಲುಗಳಿವೆ’ ಎಂದು ಹೇಳಿದ ಅವರು, ಅವುಗಳನ್ನು ಆ ದೇಶಗಳು ಮೊದಲು ನಿಭಾಯಿಸಬೇಕು ಎಂದರು.

‘‘ಅಮೆರಿಕ ತೆಗೆದುಕೊಂಡಿರುವ ನಿರ್ಧಾರವು ಆ ದೇಶದ ಸಾರ್ವಭೌಮತೆಯ ವ್ಯಾಪ್ತಿಯೊಳಗೆ ಬರುತ್ತದೆ’’ ಎಂದು ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಜೊತೆ ಅಬುಧಾಬಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಎಇ ವಿದೇಶ ಸಚಿವರು ಅಭಿಪ್ರಾಯಪಟ್ಟರು.


ಹಫೀಝ್ ಸಯೀದ್ ಪಾಕ್‌ನ ವಿದೇಶ ಪ್ರಯಾಣ ನಿರ್ಬಂಧ ಪಟ್ಟಿಗೆ

 ಇಸ್ಲಾಮಾಬಾದ್, ಫೆ. 2: ಮುಂಬೈ ಭಯೋತ್ಪಾದಕ ದಾಳಿಯ ಶಂಕಿತ ಸೂತ್ರಧಾರಿ ಹಫೀಝ್ ಸಯೀದ್‌ನನ್ನು ಪಾಕಿಸ್ತಾನ ವಿದೇಶ ಪ್ರಯಾಣ ನಿಯಂತ್ರಣ ಪಟ್ಟಿಗೆ ಸೇರಿಸಿದೆ. ಈ ಪಟ್ಟಿಯಲ್ಲಿರುವ ವ್ಯಕ್ತಿಗಳ ವಿದೇಶ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ.

ಅದೇ ವೇಳೆ, ಜಮಾಅತ್ ಉದ್ ದಾವಾದ ಮುಖ್ಯಸ್ಥನ ವಿರುದ್ಧ ‘ಪ್ರಬಲ ಸಾಕ್ಷ’ವನ್ನು ಸಲ್ಲಿಸುವಂತೆ ಭಾರತಕ್ಕೆ ಸೂಚಿಸಿದೆ. ‘‘ಸಯೀದ್‌ನ ರಾಜಕೀಯ ಚಟುವಟಿಕೆಗಳನ್ನು ಪಾಕಿಸ್ತಾನದ ಮೇಲೆ ಗೂಬೆ ಕೂರಿಸಲು ಭಾರತವು ನಿರಂತರವಾಗಿ ಬಳಸುತ್ತಿದೆ’’ ಎಂದು ಅದು ಆರೋಪಿಸಿದೆ.

ಹಫೀಝ್ ಸಯೀದ್ ಮತ್ತು ಇತರ 37 ಮಂದಿಯನ್ನು ವಿದೇಶ ಪ್ರಯಾಣ ನಿರ್ಬಂಧ ಪಟ್ಟಿಗೆ ಸೇರಿಸಿದ ಬೆನ್ನಿಗೇ, ಪುರಾವೆ ಒದಗಿಸುವಂತೆ ಭಾರತಕ್ಕೆ ಕರೆ ನೀಡುವ ಹೇಳಿಕೆಯನ್ನೂ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದೆ.

ಸಯೀದ್‌ನನ್ನು ಕಳೆದ ವಾರ ಲಾಹೋರ್‌ನಲ್ಲಿ ಗೃಹಬಂಧನದಲ್ಲಿಡಲಾಗಿತ್ತು. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕದ ನೂತನ ಆಡಳಿತ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಆದರೆ, ಸಯೀದ್‌ನನ್ನು ಗೃಹಬಂಧನದಲ್ಲಿಡುವ ಕ್ರಮ ಸರಕಾರದ ನೀತಿ ನಿರ್ಧಾರ ಎಂಬುದಾಗಿ ಪಾಕ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News