ರ‍್ಯಾಗಿಂಗ್

Update: 2017-02-04 16:49 GMT

ರ‍್ಯಾಗಿಂಗ್ನ ಘೋರ ಪರಿಣಾಮವೆಂದರೆ ಕಿರುಕುಳಕ್ಕೆ ಒಳಗಾದ ಮಕ್ಕಳು ತಮ್ಮೆಡನೆ ಮೊದಲಿನಿಂದಲೂ ಮಧುರ ಬಾಂಧವ್ಯವನ್ನು ಹೊಂದಿರುವವರಿಂದಲೂ ವಿಮುಖರಾಗಿಬಿಡುತ್ತಾರೆ. ಏಕೆಂದರೆ ತನ್ನ ಗೋಳು ಹೇಳಿಕೊಳ್ಳುವುದರಿಂದ ಅವರ ಮನಸ್ಸಿಗೆ ಬೇಸರವಾಗಿ ತನ್ನಿಂದ ವಿಮುಖರಾಗುತ್ತಾರೆ ಎಂದು ಹೆದರುವುದು ಒಂದಾದರೆ, ತಾನು ಇಂತಹ ಸಂದರ್ಭ ಅಥವಾ ಪೀಡಕರನ್ನು ಎದುರಿಸಲಾಗದ ದುರ್ಬಲ ಎಂದು ಭಾವಿಸುತ್ತಾರೆ ಎಂದು ಸಂಕೋಚಿಸಲೂಬಹುದು.

ಆದ್ದರಿಂದ ಎಷ್ಟೋ ಸಲ ಆಡದೆ ಇರುವ ಮಾತುಗಳಿಂದ ಆಚೆಗೆ ಮಕ್ಕಳ ವಿಷಯಗಳನ್ನು ಅವರ ನಡವಳಿಕೆ ಮತ್ತು ಸ್ವಭಾವದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ತಿಳಿಯಬೇಕಾಗುತ್ತದೆ. ಇನ್ನು ಸಮಾಲೋಚನೆಯನ್ನೂ ಕೂಡ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ನಡೆಸಬೇಕಾಗುತ್ತದೆ.

ನಮ್ಮ ಮಗು ರ‍್ಯಾಗಿಂಗ್ಗೆ ಒಳಗಾಗುತ್ತಿದೆಯೇ?

ಪೋಷಕರಿಗೆ ಇದೊಂದು ಭಯಾನಕ ದುಃಸ್ವಪ್ನ. ಏಕೆಂದರೆ ತಂದೆ ತಾಯಿಗಳ, ಒಡಹುಟ್ಟುಗಳ, ಓರಗೆಯವರ ಎಷ್ಟೇ ಪ್ರೀತಿ ಮತ್ತು ಅಗಾಧವಾದ ಮಮತೆಯನ್ನು ಹೊಂದಿದ್ದರೂ ಆ ಮಕ್ಕಳು ಇನ್ನಾರೋ ವಿಕೃತ ಮನಸ್ಥಿತಿಯ ಮಕ್ಕಳ ಕ್ರೌರ್ಯಕ್ಕೆ ಬಲಿಯಾಗುವುದನ್ನು ಕಲ್ಪಿಸಿಕೊಳ್ಳಲೂ ಕಷ್ಟವಾಗುವುದು. ಮನೆಯಲ್ಲಿ ಮುದ್ದಿನ ಕವಚದಲ್ಲಿ ರಕ್ಷಿತವಾಗಿರುವಂತಹ ಮಕ್ಕಳು ಶಾಲೆಯಲ್ಲಿ, ಕಾಲೇಜುಗಳಲ್ಲಿ ಅಥವಾ ಹಾಸ್ಟೆಲ್‌ಗಳಲ್ಲಿ ನಡೆವಂತಹ ರ್ಯಾಗಿಂಗ್‌ನ ಕ್ರೌರ್ಯವನ್ನು ಎದುರಿಸಲಾಗದೇ ಬದುಕನ್ನು ಕೊನೆಗಣಿಸಿಕೊಂಡಿರುವಂತಹ ಅನೇಕಾನೇಕ ಉದಾಹರಣೆಗಳಿವೆ.

ವಿದ್ಯಾಭ್ಯಾಸ, ಕ್ರೀಡಾ ಮತ್ತು ಕಲಾ ತರಬೇತಿ ಶಿಬಿರಗಳಲ್ಲಿ, ಹಾಸ್ಟೆಲ್‌ಗಳಲ್ಲಿ, ಎನ್‌ಎಸ್‌ಎಸ್ ಅಥವಾ ಎನ್‌ಸಿಸಿಗಳಂತಹ ಕ್ಯಾಂಪುಗಳಲ್ಲಿ ಸ್ವಲ್ಪಮೃದು ಸ್ವಭಾವದ ಅಥವಾ ಮುಗ್ಧ ಸ್ವಭಾವದ ಮಕ್ಕಳು ತರಲೆ ಮಕ್ಕಳ ಅಥವಾ ಕ್ರೌರ್ಯದಿಂದ ಸಂತೋಷ ಪಡುವಂತಹ ಮನಸ್ಥಿತಿಯ ಸಹಪಾಠಿಗಳಿಂದ ಕಿರುಕುಳಕ್ಕೆ ಈಡಾಗುತ್ತಾರೆ. ಕೆಲವೊಮ್ಮೆ ಈ ಕಿರುಕುಳಗಳು ಎಷ್ಟು ಘೋರ ರೂಪಕ್ಕೆ ಹೋಗುತ್ತವೆಂದರೆ ಅಕಸ್ಮಾತ್ ಆಗಿ ಕಿರುಕುಳದ ಸ್ವರೂಪ ರ್ಯಾಗಿಂಗ್ ಮಾಡುವವರ ಊಹೆಯನ್ನೂ ಮೀರಿ ಅಂಗಭಂಗದಂತಹ ಅಪಘಾತಗಳಿಂದ ಹಿಡಿದು ಸಾವು ಕೂಡ ಸಂಭವಿಸಬಹುದು. ಕೆಲವೊಮ್ಮೆ ಸತತವಾಗಿ ಕಿರುಕುಳಕ್ಕೆ ಈಡಾಗುವ ಮಕ್ಕಳು ಮೊದಲಿನ ಆತ್ಮವಿಶ್ವಾಸ, ಗಟ್ಟಿ ಅಥವಾ ಸ್ವಸ್ಥ ಮನಸ್ಥಿತಿಗಳನ್ನು ಕಳೆದುಕೊಳ್ಳುವುದಲ್ಲದೇ, ಅಭ್ಯಾಸದ ಮೂಲಕವಾಗಿಯೋ ಅಥವಾ ಸ್ವಯಂ ಸೃಜನಾತ್ಮಕವಾಗಿ ಪಡೆದುಕೊಂಡಿರುವಂತಹ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸದಲ್ಲಿ, ಆಟ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದಲ್ಲದೇ ಮಂಕಾಗಿಬಿಡುತ್ತಾರೆ. ಕೆಲವರು ಖಿನ್ನತೆಗೆ ಜಾರಿದರೆ ಮತ್ತೆ ಕೆಲವರು ಸಂಪೂರ್ಣವಾಗಿ ಭಾವನಾತ್ಮಕ ಕುಸಿತದಿಂದ ಕಂಗೆಡುತ್ತಾರೆ.

ರ‍್ಯಾಗಿಂಗ್ಗ್‌ನ ಘೋರ ಪರಿಣಾಮವೆಂದರೆ ಕಿರುಕುಳಕ್ಕೆ ಒಳಗಾದ ಮಕ್ಕಳು ತಮ್ಮೆಡನೆ ಮೊದಲಿನಿಂದಲೂ ಮಧುರ ಬಾಂಧವ್ಯವನ್ನು ಹೊಂದಿರುವವರಿಂದಲೂ ವಿಮುಖರಾಗಿಬಿಡುತ್ತಾರೆ. ಏಕೆಂದರೆ ತನ್ನ ಗೋಳು ಹೇಳಿಕೊಳ್ಳುವುದರಿಂದ ಅವರ ಮನಸ್ಸಿಗೆ ಬೇಸರವಾಗಿ ತನ್ನಿಂದ ವಿಮುಖರಾಗುತ್ತಾರೆ ಎಂದು ಹೆದರುವುದು ಒಂದಾದರೆ, ತಾನು ಇಂತಹ ಸಂದರ್ಭ ಅಥವಾ ಪೀಡಕರನ್ನು ಎದುರಿಸಲಾಗದ ದುರ್ಬಲ ಎಂದು ಭಾವಿಸುತ್ತಾರೆ ಎಂದು ಸಂಕೋಚಿಸಲೂಬಹುದು. ಆದ್ದರಿಂದ ಎಷ್ಟೋ ಸಲ ಆಡದೆ ಇರುವ ಮಾತುಗಳಿಂದ ಆಚೆಗೆ ಮಕ್ಕಳ ವಿಷಯಗಳನ್ನು ಅವರ ನಡವಳಿಕೆ ಮತ್ತು ಸ್ವಭಾವದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ತಿಳಿಯಬೇಕಾಗುತ್ತದೆ. ಇನ್ನು ಸಮಾಲೋಚನೆಯನ್ನೂ ಕೂಡ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ನಡೆಸಬೇಕಾಗುತ್ತದೆ. ಹೌದು, ಖಂಡಿತವಾಗಿಯೂ ಇದು ಮಗುವಿನ ಗುಣಧರ್ಮದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಅದರ ಪ್ರಕಾರವೇ ಪ್ರಶ್ನಾವಳಿಯನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದು ಕೆಲವೊಮ್ಮೆ ತೀರಾ ಪತ್ತೇದಾರಿ ಅಥವಾ ಗೂಢಾಚಾರಿಯ ಕೆಲಸವನ್ನೂ ಕೂಡ ಹೋಲುತ್ತದೆ.

ನಮ್ಮ ಕಾರ್ಪಣ್ಯಕ್ಕೆ ಮಕ್ಕಳಲ್ಲಿ ನಡೆಯುವ ಈ ಕಿರುಕುಳಗಳು ಪೋಷಕರಿಗಾಗಲಿ ಅಥವಾ ಶಾಲಾ ಮಂಡಳಿಯವರಿಗಾಗಲಿ ತಿಳಿಯುವುದೇ ಇಲ್ಲ. ಇನ್ನೂ ದುರಂತವೆಂದರೆ ಅವರು ಮೌಖಿಕವಾಗಿ ನಡೆದ ಕಿರುಕುಳದ ಬಗ್ಗೆ ಹೇಳಿದಾಗ ಅದು ಅಷ್ಟೊಂದು ಘೋರ ಸ್ವರೂಪದ್ದು ಅಂತ ಅನ್ನಿಸುವುದೇ ಇಲ್ಲ. ಅದಕ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಮಾತ್ರವೇ ಕೇಳಿಸುವಿಕೆಯಲ್ಲಿರುತ್ತದೆ.

ಇನ್ನೂ ಕೆಲವೊಮ್ಮೆ ಪೋಷಕರು ಮಕ್ಕಳು ತಮಗಾಗುವ ರ್ಯಾಗಿಂಗ್‌ನ ಬಗ್ಗೆ ಹೇಳಿದಾಗ ‘‘ನಿಮ್ಮ ಟೀಚರ್ ಅಥವಾ ಪ್ರಿನ್ಸಿಪಾಲ್‌ಗೆ ಹೇಳು’’ ಅಥವಾ ‘‘ನೀನೂ ಒಂದು ಬಾರಿಸು’’ ಎಂದು ಹೇಳಿ ಸುಮ್ಮನಾಗಿಬಿಡುವರು. ಇನ್ನೂ ಕೆಲವೊಮ್ಮೆ, ‘‘ಸರಿ, ಬರ್ತೀನಿ. ಅವನಿಗೆ ಸರಿಯಾಗಿ ಮಾಡ್ತೀನಿ’’ ಅಂತ ಹೇಳಿ ಮಕ್ಕಳ ದೂರು ಎಂದು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ಮಗುವಿಗೆ ದಿನದಿಂದ ದಿನಕ್ಕೆ ಮಾತ್ರವಲ್ಲ, ಗಳಿಗೆಯಿಂದ ಗಳಿಗೆಗೆ ಹಿಂಸೆಯಾಗುತ್ತಿರುತ್ತದೆ. ಸ್ಥೂಲದಲ್ಲಿ ಹಿಂಸೆಯು ಹೆಚ್ಚಾದಷ್ಟೂ ಅದರ ಅಡ್ಡ ಪರಿಣಾಮ ನೇರವಾಗಿ ಮತ್ತು ಸೂಕ್ಷ್ಮ ರೂಪದಲ್ಲಿ ಮನಸ್ಸು ಮತ್ತು ಭಾವನೆಗಳ ಮೇಲೆ ಉಂಟಾಗುತ್ತಿರುತ್ತದೆ.

ಬೆಳಕಿಗೆ ಬಾರದ ರ‍್ಯಾಗಿಂಗ್ಗಳು

ಕೆಲವು ಶಾಲೆಗಳು ತಮ್ಮ ಸಂಸ್ಥೆಯ ಮಕ್ಕಳಲ್ಲಿ ನಡೆಯುವ ರ್ಯಾಗಿಂಗ್‌ಗಳ ಬಗ್ಗೆ ತೀವ್ರ ನಿಗಾ ಇಡುತ್ತವೆ. ಅದಕ್ಕಾಗಿ ಕೆಲವು ಪಾಲಿಸಿಗಳನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಸಾಮಾನ್ಯವಾಗಿ ಅವರೂ ಕೂಡ ತಮ್ಮ ಶಾಲಾವಲಯದಿಂದ ವಿಷಯವು ಹೊರಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವು ಸ್ಕೂಲ್ ಅಥವಾ ಕಾಲೇಜ್ ಕ್ಯಾಂಪಸ್ ಒಳಗೇ ಬಚ್ಚಿಟ್ಟು ಕೊಳ್ಳುತ್ತದೆ.

ಇನ್ನು ವಸತಿ ಶಾಲೆಗಳಲ್ಲಂತೂ ಆ ಬಗೆಯ ಕಿರುಕುಳದ ಮಾಹಿತಿಗಳು ಹೊರಗೆ ಸೋರಿದರೆ ತಮ್ಮ ಶಾಲೆಗೆ ಆಗುವಂತಹ ದಾಖಲಾತಿಯ ಮೇಲೆ ನಕಾರಾತ್ಮಕವಾದ ಪರಿಣಾಮಗಳು ಉಂಟಾಗುತ್ತವೆ ಎಂದು ಹಿಂಜರಿಯುತ್ತಾರೆ. ಇನ್ನು ಪೊಲೀಸರಿಗೆ ಅಥವಾ ಮಕ್ಕಳ ಇಲಾಖೆಗೆ ದೂರುಕೊಡುವುದಂತೂ ದೂರವೇ ಉಳಿಯಿತು.ಏಕೆಂದರೆ ಅವರೇ ಮೊದಲು ಅಪರಾಧ ಪ್ರಜ್ಞೆ ಉಳ್ಳವರಾಗಿರುತ್ತಾರೆ.

ಇನ್ನು ಪೋಷಕರೂ ಅಷ್ಟೆ ತಮ್ಮ ಮಗುವು ಕಿರುಕುಳಕ್ಕೆ ಒಳಗಾಯಿತೆಂದರೆ ಅಥವಾ ಕಿರುಕುಳ ಕೊಡುವ ಅಪರಾಧಿ ಎಂಬುದು ತಿಳಿದುಬಂದರೆ ಶಾಲೆ ಬಿಡಿಸಿ ಬೇರೊಂದು ಶಾಲೆಗೆ ಸೇರಿಸುತ್ತಾರೆ. ಪೊಲೀಸು ಅಥವಾ ವ್ಯವಸ್ಥೆ ಎಂದು ಹೋದರೆ ಸಂಸ್ಥೆ ಮತ್ತು ಕುಟುಂಬ ಎರಡಕ್ಕೂ ಕೂಡ ಅನವಶ್ಯಕ ಸಮಯ ಮತ್ತು ಸಂಪನ್ಮೂಲಕ್ಕೆ ಧಕ್ಕೆ ಎಂದು ಅಲ್ಲಲ್ಲಿಗೇ ಮುಚ್ಚಿ ಹಾಕಲು ಯತ್ನಿಸುತ್ತಾರೆ. ಸಾವಿನಂತಹ ದುರಂತ ಸಂಭವಿಸಿದರೆ ಮಾತ್ರವೇ ಸುದ್ಧಿಯಾಗುವುದು.

ಇನ್ನೂ ಕೆಲವು ಪೋಷಕರು ಮತ್ತು ಶಿಕ್ಷಕರು ಇಂತಹ ರ್ಯಾಗಿಂಗ್‌ಗಳನ್ನು ಈ ವಯಸ್ಸಿನಲ್ಲಿ ಸರ್ವೇ ಸಾಮಾನ್ಯ ಎಂದು ಪರಿಗಣಿಸಿ ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಬುದ್ಧಿ ಬಂದ ಮೇಲೆ ಸರಿ ಹೋಗುತ್ತಾರೆ ಎಂದು ಉಪೇಕ್ಷಿಸುತ್ತಾರೆ.

ಆದರೆ ರ್ಯಾಗಿಂಗ್‌ನ ಪ್ರಾರಂಭಿಕ ಸೂಚನೆಗಳು ಕಾಣುತ್ತಿದ್ದಂತೆ ಶಿಕ್ಷಕರಾಗಲಿ ಅಥವಾ ಪೋಷಕರಾಗಲಿ ಎಚ್ಚೆತ್ತುಕೊಂಡುಬಿಡಬೇಕು.

ಸಣ್ಣ ಮಕ್ಕಳು ಈ ಹುಡುಗ ಹಾಗೆ ಮಾಡಿದ ಹೀಗೆ ಮಾಡಿದ ಎಂದು ದೂರು ಸಲ್ಲಿಸಬಹುದು. ಆದರೆ ಮಕ್ಕಳು ಬೆಳೆದಂತೆ ಹಲವು ಕಾರಣಗಳಿಂದ ಪೋಷಕರಿಗೆ ಹೇಳದೇ ಹೋಗಬಹುದು. ಕಾರಣಗಳಲ್ಲಿ ಕೆಲವು ಹೀಗಿರುತ್ತದೆ.

1. ತಾನು ಯಾರು ಏನೋ ತೊಂದರೆ ಮಾಡಿದರೂ ನೀನೇನೋ ಮಾಡಿರುತ್ತೀಯಾ ಅದಕ್ಕೇ ಹಾಗೆ ಮಾಡಿರುತ್ತಾನೆ ಎಂದು ಹೇಳುವ ಮನಸ್ಥಿತಿಯ ಪೋಷಕರಿರಬಹುದು.

2. ಬೆಳಗ್ಗೆ ಬೇಗ ಏಳುವುದಿಲ್ಲ, ಶಾಲೆಯಲ್ಲಿ ಸರಿಯಾಗಿ ಓದುವುದಿಲ್ಲ ಅಥವಾ ಮನೆಯಲ್ಲಿ ಒಡಹುಟ್ಟುಗಳ ಜೊತೆ ಜಗಳವಾಗುವುದು; ಹೀಗೆ ಹಲವು ಕಾರಣಗಳಿಂದ ಬೈಸಿಕೊಳ್ಳುವ ಮಕ್ಕಳು ತಾನು ಹೇಳುವ ದೂರಿಗೆ ಮಾನ್ಯತೆ ದೊರೆಯುವುದಿಲ್ಲ ಅಥವಾ ಕೇಳಿಸಿಕೊಳ್ಳುವುದೇ ಇಲ್ಲ ಎಂದು ಸುಮ್ಮನೇ ತಾವೇ ಒಳಗೆ ಬೇಗುದಿ ಅನುಭವಿಸುತ್ತಿರುತ್ತಾರೆ.

3. ಇನ್ನು ವಸತಿ ಶಾಲೆಯಲ್ಲಿ ಅಥವಾ ವಿದ್ಯಾರ್ಥಿ ನಿಲಯಗಳಲ್ಲಿ ಓದುವ ಮಕ್ಕಳು ಎಂದೋ ಒಮ್ಮೆ ಸಿಗುವ ಪೋಷಕರೊಡನೆ ತಮ್ಮ ಬೇಸರದ ವಿಷಯಗಳನ್ನು ಹೇಳಿಕೊಳ್ಳಲು ಇಚ್ಛಿಸುವುದಿಲ್ಲ.

4. ಈಗ ಬೇಡ, ಮುಂದೆ ಹೇಳೋಣ ಎಂದು ಮುಂದೂಡುತ್ತಲೂ ಹೇಳದೇ ಹೋಗಬಹುದು.

5. ತಾನೇ ಸರಿಮಾಡಿಕೊಂಡು ಬಿಡೋಣ ಎಂದೋ ಅಥವಾ ಇತರ ಸ್ನೇಹಿತರು ಕೊಟ್ಟಿರುವ ಧೈರ್ಯದಿಂದಲೋ ಪೋಷಕರು ಮತ್ತು ಶಿಕ್ಷಕರವರೆಗೂ ದೂರನ್ನು ಒಯ್ಯದೇ ಇರಬಹುದು.

6. ಕೆಲವು ಮಕ್ಕಳು ತಾವೇ ನಿಭಾಯಿಸಿಕೊಳ್ಳೋಣ ಎಂದು ಸುಮ್ಮನಾಗುತ್ತಾರೆ.

7. ಕೆಲವು ಮಕ್ಕಳು ತಮ್ಮ ತಂದೆ ತಾಯಿ ತಮ್ಮದೇ ಆದಂತಹ ಕೆಲಸದ ಗಡಿಬಿಡಿಯಲ್ಲಿ ತೊಳಲುತ್ತಿರುವಾಗ ಹೇಳಲು ಇಚ್ಛಿಸುವುದಿಲ್ಲ. ಸಮಯಕ್ಕಾಗಿ ಕಾಯುತ್ತಾರೆ.

8. ಕೆಲವು ಮಕ್ಕಳು ತಾವು ನೇರವಾಗಿ ಹೇಳಲು ಮನಸ್ಸು ಮಾಡದಿದ್ದರೂ ಪೋಷಕರೇ ತಿಳಿದುಕೊಳ್ಳಲೆಂದು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅವುಗಳನ್ನು ಪೋಷಕರು ಗಮನಿಸದೆ ಹೋದರೆ ಬೇಸರಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ಕೆಲವೊಮ್ಮೆ ತನ್ನ ಪೋಷಕರು ತನ್ನ ಕಡೆಗೆ ಗಮನ ಕೊಡುತ್ತಿಲ್ಲವೆಂದು ಅವರ ಬಗ್ಗೆಯೂ ಉದಾಸೀನ ಭಾವವನ್ನು ಹೊಂದಿ ಖಿನ್ನತೆಗೆ ಜಾರುತ್ತಾರೆ.

ಇನ್ನು ರ್ಯಾಗಿಂಗ್‌ನ ಸ್ವರೂಪಗಳು ಶಾಲೆಗಳ ಹಂತಗಳಿಂದ ಹಂತಕ್ಕೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದಲೂ ಬದಲಾವಣೆಗಳನ್ನು ಹೊಂದಿರುತ್ತವೆ. ನಿಜಕ್ಕೂ ನಮ್ಮ ದೇಶದಲ್ಲಿ ಎಂತೆಂತಹ ರ್ಯಾಗಿಂಗ್‌ಗಳು ಆಗುತ್ತವೆ? ಅವುಗಳ ಕಾರಣ ಪರಿಣಾಮಗಳೇನು ಎಂದು ಮುಂದೆ ನೋಡೋಣ.

ರ‍್ಯಾಗಿಂಗ್ನಿಂದ ಆಗುವ ಮುಖ್ಯ ಪರಿಣಾಮಗಳು

1.ದೈಹಿಕವಾದಂತಹ ಹಲ್ಲೆಗಳು ಆಗಿ ಅಂಗಭಂಗವಾಗಬಹುದು.

2. ಲೈಂಗಿಕತೆಗೆ ಹತ್ತಿರವಾಗಿ ಅಥವಾ ನೇರವಾಗಿ ಲೈಂಗಿಕವಾಗಿ ಉಂಟಾಗುವ ಕಿರುಕುಳಗಳಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ನಕಾರಾತ್ಮಕ ಪರಿಣಾಮಗಳಾಗಬಹುದು.

3. ಮಾನಸಿಕವಾಗಿ ಮನಸ್ಥಿತಿ ಕೆಡುವುದಲ್ಲದೆ, ನರ ದೌರ್ಬಲ್ಯದಂತಹ ಗಂಭೀರ ಮತ್ತು ದೀರ್ಘಕಾಲದ ಕೆಡುಕುಂಟಾಗಬಹುದು. 4. ಭಾವನಾತ್ಮಕವಾಗಿ ಅತೀವವಾದ ಏರಿಳಿತಗಳು, ಒತ್ತಡದ ಸ್ಥಿತಿಗಳು, ವ್ಯಕ್ತಪಡಿಸಲಾಗದೆ ಅದನ್ನು ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುವುದು ಅಥವಾ ವ್ಯಕ್ತಪಡಿಸದೇ ಇರುವುದು; ಇತ್ಯಾದಿಗಳಾಗಿ ಭಾವನಾತ್ಮಕವಾದಂತಹ ಸ್ವಾಸ್ಥ್ಯವನ್ನು ಕಳೆದುಕೊಳ್ಳುವುದು.

5. ವಿದ್ಯಾಭ್ಯಾಸ ಮತ್ತು ಪ್ರತಿಭೆಯ ವಿಷಯಗಳಲ್ಲಿ ಅವರಿಗೆ ಹಿನ್ನಡೆಯಾಗುವುದು.

6. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡು ಮನೆಯವರಿಂದ ಮತ್ತು ಶಿಕ್ಷಕರಿಂದ ತೆಗಳಿಸಿಕೊಂಡು ತಾನು ಯಾರಿಗೂ ಬೇಡವಾದವರೆಂಬ ಭಾವದಿಂದ ಪರಿಸರ ಮತ್ತು ಸಮಾಜದ ಬಗ್ಗೆ ಜಿಗುಪ್ಸೆ ತಾಳಬಹುದು.

7. ಆತ್ಮಹತ್ಯೆಗೂ ಮುಂದಾಗಬಹುದು.

8. ಏನೋ ಮಾಡಲು ಹೋಗಿ ಏನೋ ಆಗಿ ಮಗುವು ಆಕಸ್ಮಿಕವಾಗಿ ಮರಣವನ್ನಪ್ಪಬಹುದು.

9. ರ್ಯಾಗಿಂಗ್‌ಗೆ ಒಳಗಾದ ಮಗುವು ಒಂದು ವೇಳೆ ಅದರಿಂದ ಹೊರಗೆ ಬಂದರೂ ಸಮಾಜದಲ್ಲಿ ಇತರರನ್ನು ಎದುರಿಸಲು ಸಾಧ್ಯವಾಗದಿರುವಂತಹ ಪುಕ್ಕಲು ಸ್ವಭಾವದ್ದಾಗಬಹುದು. ಇದು ಮುಖೇಡಿತನಕ್ಕೆ ದಾರಿಯಾಗುತ್ತದೆ. ಮಗುವು ನಿರ್ಭಯವಾಗಿ ವ್ಯವಹರಿಸುವ ಸಾಮರ್ಥ್ಯ ಮತ್ತು ಚಾತುರ್ಯವನ್ನು ಕಳೆದುಕೊಳ್ಳುತ್ತದೆ.

10. ಕೆಲವೊಮ್ಮೆ ವ್ಯತಿರಿಕ್ತವಾಗಿ ತಾನು ಅನುಭವಿಸಿದ ಕಿರುಕುಳಗಳಿಗೆ ಪ್ರತಿಕಾರವೇನೋ ಎಂಬಂತೆ ಅಥವಾ ಸೇಡು ತೀರಿಕೊಳ್ಳುವಂತೆ ತಾನೂ ತನಗಿಂತ ದುರ್ಬಲ ಮನಸ್ಕರ ಮೇಲೆ ಅಥವಾ ಮೃದು ಸ್ವಭಾವದವರ ಮೇಲೆ ದಬ್ಬಾಳಿಕೆ ಮಾಡುತ್ತಾ ಕಿರುಕುಳವನ್ನು ಮಾಡುತ್ತಾರೆ.

11. ಇನ್ನೂ ಕೆಲವೊಮ್ಮೆ ಇಂತಹ ಕಿರುಕುಳಗಳನ್ನು ಅನುಭವಿಸುವ ಹಂತಗಳಲ್ಲಿ ಯಾವುದೇ ಅಪಘಾತ, ಆಕಸ್ಮಿಕಗಳಾಗದೇ ಬಂದರೂ ಕೂಡ ಮುಂದೆ ವಿಲಕ್ಷಣವಾದಂತಹ ಅಥವಾ ವಿಕೃತ ಮನಸ್ಥಿತಿಯವರಾಗಿ ಉಳಿಯಬಹುದು. ತಮ್ಮ ವಿಲಕ್ಷಣ ಒಲವು ಮತ್ತು ನಿಲುವುಗಳನ್ನು ಯಾರೊಂದಿಗೂ ವ್ಯಕ್ತಪಡಿಸದೆ ಹಾಗೆಯೇ ಅದುಮಿಟ್ಟುಕೊಂಡು ಅದು ಇನ್ನೇನೋ ರೀತಿಯ ಅಸಹಜದ ಗುಪ್ತಸ್ವಭಾವವಾಗಿಯೇ ಉಳಿಯಬಹುದು. ಇಂತಹವರು ಅಪ್ರಮಾಣಿಕರು ಮಾತ್ರವಲ್ಲದೇ ಆತ್ಮವಂಚಕರೂ ಆಗಿಬಿಡುತ್ತಾರೆ. ಕೆಲವೊಮ್ಮೆ ಅದನ್ನು ಸಹಜೀವಿಗಳು ಗುರುತಿಸುತ್ತಾರೆ. ಕೆಲವೊಮ್ಮೆ ಗುರುತಿಸುವುದಿಲ್ಲ.

ಒಟ್ಟಾರೆ ರ್ಯಾಗಿಂಗ್‌ನಿಂದ ಅನೇಕರೀತಿಯ ದುಷ್ಪರಿಣಾಮಗಳು ಉಂಟಾಗುವುದಂತೂ ಖಚಿತ. ಆದರೆ ರ್ಯಾಗಿಂಗ್‌ನಲ್ಲಿಯೂ ಕೂಡ ಅನೇಕ ವಿಧಗಳಿವೆ ಮತ್ತು ಹಂತಗಳಿವೆ. ಯಾವುದೇ ಶಾಲೆಗಳು ತಮ್ಮ ಶಾಲೆಯಲ್ಲಿ ರ್ಯಾಗಿಂಗ್ ನಡೆಯುವುದಿಲ್ಲ ಎಂದರೆ ಕಣ್ಣುಮುಚ್ಚಿಕೊಂಡು ಭರವಸೆಯನ್ನು ನಂಬುವಷ್ಟೇನಿಲ್ಲ.

ಸಾಧಾರಣ ಸರಕಾರಿ ಶಾಲೆಗಳಿಂದ ಹಿಡಿದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳವರೆಗೂ ರ್ಯಾಗಿಂಗ್ ನಡೆಯುತ್ತಿರುತ್ತದೆ. ಕೆಲವೊಮ್ಮೆ ಶಾಲೆಯ ಆಡಳಿತ ಮಂಡಳಿ ಗುರುತಿಸಿದರೂ ತಮ್ಮ ಶಾಲೆಗೆ ಕೆಟ್ಟ ಹೆಸರೆಂದು ಬಹಿರಂಗಗೊಳಿಸುವುದಿಲ್ಲ. ಕೆಲವೊಮ್ಮೆ ಗುರುತಿಸುವಲ್ಲಿಯೇ ವಿಫಲವಾಗಿರುತ್ತವೆ.

ಒಟ್ಟಾರೆ ಹೇಳಲು ಹೊರಟಿರುವುದೇನೆಂದರೆ ಶಾಲೆಗಳಲ್ಲಿ ರ್ಯಾಗಿಂಗ್‌ಗಳು ಇರುತ್ತವೆ ಮತ್ತು ಅದರಲ್ಲಿ ನಮ್ಮ ಮಕ್ಕಳು ಬಲಿಪಶುಗಳಾಗಿರಬಹುದು, ಅಪರಾಧಿಗಳಾಗಿರಬಹುದು ಅಥವಾ ತಟಸ್ಥ ಸಾಕ್ಷಿಗಳಾಗಿರಬಹುದು. ಆದ್ದರಿಂದ ಮಗುವಿನ ಸಮಗ್ರ ಬೆಳವಣಿಗೆಯ ಬಗ್ಗೆನಾವು ಗಮನಿಸುವಾಗ ರ್ಯಾಗಿಂಗ್‌ನ ಬಗ್ಗೆಯೂ ಕೂಡ ಗಮನಿಸಬೇಕಾಗುತ್ತದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News