ಪ್ರಜಾಪ್ರಭುತ್ವ ಅಳಿಯಲು ಬಿಟ್ಟರೆ ಭಾರತದ ವಿನಾಶ ಖಂಡಿತ : ನಿಡುಮಾಮಿಡಿ ಶ್ರೀ

Update: 2017-02-04 17:08 GMT

ಭಾರತದಲ್ಲಿ ಕೇವಲ ಹಿಂದುಗಳು ಮಾತ್ರ ವಾಸವಾಗಿರುವುದಲ್ಲ. ಈ ದೇಶ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಗಳನ್ನು ಹೊಂದಿರುವ ಮಹಾನ್ ಪರಂಪರೆಯನ್ನು ಹೊಂದಿರುವ ದೇಶ. ಇಲ್ಲಿ ಯಾವುದೇ ಒಂದು ಧರ್ಮ ಸಾರ್ವಭೌಮ ಧರ್ಮವಾಗಬಾರದು.ಒಂದು ವೇಳೆ ಹಾಗಾದರೆ ಈಗ ಇರುವ ಧರ್ಮ ನಿರಪೇಕ್ಷ ಭಾರತದ ಪ್ರಜಾಸತ್ತೆ ನಾಶವಾದೀತು. ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿಯೇ ಮುಂದುವರಿಯಬೇಕು ಅದು ಸಂವಿಧಾನದ ಆಶಯವೂ ಹೌದು. ಇಂತಹ ವ್ಯವಸ್ಥೆಯಲ್ಲಿ ಮಾತ್ರ ಎಲ್ಲಾ ಧರ್ಮಗಳ ಜನ ಪರಸ್ಪರ ಗೌರವದಿಂದ, ಸ್ವಾಭಿಮಾನದೊಂದಿಗೆ ಬದುಕಬಲ್ಲರು. ಎಲ್ಲಾ ಧರ್ಮದ ಜನರಿಗೆ ನ್ಯಾಯಸಿಗಲು ಸಾಧ್ಯ. ಸೌಹಾರ್ದ, ಸಾಮರಸ್ಯದಿಂದ ಮಾತ್ರ ಒಂದು ರಾಷ್ಟ್ರದ ವಿಕಾಸ ಸಾಧ್ಯ. ಪ್ರಜಾಪ್ರಭುತ್ವ ಉಳಿದರೆ ಮಾತ್ರ ಭಾರತ ಉಳಿಯುತ್ತದೆ. ಪ್ರಜಾಪ್ರಭುತ್ವ ಅಳಿದರೆ ಭಾರತದ ಅಳಿವು ತಪ್ಪಿದ್ದಲ್ಲ.

ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಭಾರತ ಗಣತಂತ್ರದ 68ನೆ ಆಚರಣೆಯ ಸಂದರ್ಭದಲ್ಲಿ ನಾಡಿನ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಗಳೂರಿಗೆ ಇತ್ತೀಚೆಗೆ ಆಗಮಿಸಿದ ಸಂದರ್ಭದಲ್ಲಿ ವಾರ್ತಾಭಾರತಿಯೊಂದಿಗಿನ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ: ಭಾರತ ಸಂವಿಧಾನದ ಆಶಯಗಳು 67 ವರ್ಷಗಳ ನಂತರ ಎಷ್ಟರ ಮಟ್ಟಿಗೆ ಈಡೇರಿಕೆ ಆಗಿವೆ...?

ನೀಡುಮಾಮಿಡಿಶ್ರೀ: ಸಂವಿಧಾನದ ಆಶಯದಂತೆ ದೇಶದಲ್ಲಿ ಪೂರ್ಣ ಪ್ರಮಾಣದ ಗಣರಾಜ್ಯದ ಆಡಳಿತ ನಡೆಯುತ್ತಿಲ್ಲ. ನೈಜ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ತ ಮಾಂಸಗಳಿಲ್ಲದೆ ಬರೀ ಅಸ್ಥಿ ಪಂಜರದಂತೆ ದುರ್ಬಲವಾಗಿದೆ. ಸಂವಿಧಾನದ ಮೂಲ ಆಶಯದಲ್ಲಿ ಒಂದಾದ ಸಾಮಾಜಿಕ ನ್ಯಾಯದಿಂದ ವಂಚಿತರಾದ ಅನೇಕ ಸಮುದಾಯಗಳು ಇನ್ನೂ ನಮ್ಮ ದೇಶದಲ್ಲಿವೆ. ಪ್ರಸಕ್ತ ಕೆಲವರಿಗೆ ಮಾತ್ರ ಗಣತಂತ್ರ ವ್ಯವಸ್ಥೆಯ ಫಲ ದೊರೆತಿದೆ. ದೇಶದಲ್ಲಿ ದಲಿತರ ಅಸ್ಪಶ್ಯರ ಸ್ಥಿತಿ ಶೋಚನೀಯವಾಗಿದೆ. ಆದಿವಾಸಿಗಳಿಗೆ, ಅಲೆಮಾರಿಗಳಿಗೆ ನ್ಯಾಯ ದೊರೆಯುತ್ತಿಲ್ಲ. ಬಡವರ ಗೋಳನ್ನು ಕೇಳುವವರಿಲ್ಲ. ದುರ್ಬಲರ ಮೇಲೆ ದಬ್ಬಾಳಿಕೆ ನಿರಂತರವಾಗಿದೆ.

ಅಲ್ಪ ಸಂಖ್ಯಾತರನ್ನು ತಿರಸ್ಕಾರದಿಂದ ನೊಡಲಾಗುತ್ತಿದೆ. ಇವೆಲ್ಲದರ ನಡುವೆ ಅಸಹಾಯಕ ಸಮುದಾಯ ಮೂಕ ಪ್ರೇಕ್ಷಕರಾಗಿ ಇರಬೇಕಾದ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಜನರನ್ನು ಮತಹಾಕುವ ಪ್ರಾಣಿಗಳೆಂದು ಪರಿಗಣಿಸುವ ರಾಜಕೀಯ ವ್ಯವಸ್ಥೆ ದೇಶದಲ್ಲಿದೆ. ದೇಶದಲ್ಲಿ ಆಳವಾಗಿ ಬೇರೂರಿರುವ ಊಳಿಗಮಾನ್ಯ ವ್ಯವಸ್ಥೆ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ದೇಶದ ಕಟ್ಟ ಕಡೆಯ ಪ್ರಜೆಗೂ ಪ್ರಜಾಪ್ರಭುತ್ವದ ಫಲ ದೊರೆತಾಗ ಮಾತ್ರ ಸದೃಢ ಪ್ರಜಾಪ್ರಭುತ್ವ ನೆಲೆಗೊಳ್ಳಲು ಸಾಧ್ಯ.

ಪ್ರ:ದೇಶದ ಬಹುಸಂಸ್ಕೃತಿ ಅಪಾಯದಲ್ಲಿದೆ ಎಂದು ನಿಮಗನಿಸುತ್ತಿದೆಯೇ..?

ನಿಡುಮಾಮಿಡಿಶ್ರೀ:    ಅಂತಹ ಲಕ್ಷಣಗಳು ಈಗಾಗಲೇ ಗೋಚರಿಸ ತೊಡಗಿವೆ. ರಾಮಮಂದಿರ ನಿರ್ಮಾಣ, ಏಕ ರೂಪ ನಾಗರಿಕ ಸಂಹಿತೆಯ ಪ್ರಸ್ತಾಪ, ಆರ್ಟಿಕಲ್ 370ರ ರದ್ಧತಿಯ ವಿಚಾರ, ಸಂವಿಧಾನವನ್ನು ಬದಲಾಯಿಸುವ ಯತ್ನ, ಅಲ್ಪ ಸಂಖ್ಯಾತರ ಮೇಲೆ ದ್ವೇಷ ಸಾಧನೆ, ಹಿಂದೂ ರಾಷ್ಟ್ರ ನಿರ್ಮಾಣದ ಯತ್ನ... ಮೊದಲಾದ ಎಲ್ಲಾ ಸಂಗತಿಗಳು ದೇಶದ ಬಹು ಸಂಸ್ಕೃತಿಗೆ, ಸೌಹಾರ್ದ ಸಾಮರಸ್ಯ ಭಾವನೆಗಳಿಗೆ ಧಕ್ಕೆ ತರುವ ಸಂಗತಿಗಳಾಗಿವೆ. ಕೋಮುವಾದ ಉಗ್ರವಾದ ಎರಡೂ ಪ್ರಜಾಪ್ರಭುತ್ವಕ್ಕೆ ಮಾರಕ. ಕೋಮುವಾದದ ಸಿದ್ಧಾಂತದಿಂದ ಉಗ್ರವಾದ ಬೆಳೆದಿದೆ. ಅಲ್ಪಸಂಖ್ಯಾತರನ್ನು ಪರಕೀಯರು ದಾಳಿಕೋರರು ಎಂಬಂತೆ ಬಿಂಬಿಸಲಾಗುತ್ತಿದೆ.

ಈ ದೇಶದ ಎಲ್ಲಾ ಅನಿಷ್ಟಗಳಿಗೂ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಅವರ ದೇಶ ಪ್ರೇಮವನ್ನು ಸದಾ ಅನುಮಾನದಿಂದ ನೊಡಲಾಗುತ್ತಿದೆ. ಅಲ್ಪಸಂಖ್ಯಾತರು ತಮ್ಮದೇ ದೇಶದಲ್ಲಿ ಭಯದ, ಆತಂಕದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ವಿಷಾದಕರ ಸಂಗತಿಯಾಗಿದೆ. ರಾಜಕೀಯ ಅಧಿಕಾರಕ್ಕಾಗಿ ಸಮುದಾಯವನ್ನು ದಾಳಗಳನ್ನಾಗಿ ಮಾಡುತ್ತಿರುವ ಈ ಆಕ್ರಮಣಕಾರಿ ನಡವಳಿಕೆ ಖಂಡನಾರ್ಹ. ಭಾರತದ ವಿಕಾಸಕ್ಕೆ ಕೊಡುಗೆ ನೀಡುತ್ತಿರುವ ಅಲ್ಪ ಸಂಖ್ಯಾತರು ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಈ ನೆಲದಲ್ಲಿ ಹುಟ್ಟಿ ಬಾಳಿ ಬದುಕಿದ್ದಾರೆ. ದೇಶ ಪ್ರೇಮವನ್ನು ಮೆರೆದಿದ್ದಾರೆ. ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಸೌಹಾರ್ದ ಪರಂಪರೆಯನ್ನು ನಾಶ ಮಾಡಲು ಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ಜನ ಎಚ್ಚರದಿಂದ ಇರಬೇಕಾಗಿದೆ.

ಪ್ರ: ಕೇಂದ್ರ ಸರಕಾರದ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ?

ನಿಡುಮಾಮಿಡಿ ಶ್ರೀ:  ದೇಶದಲ್ಲಿ ಕೇಂದ್ರ ಸರಕಾರ ತಾಂತ್ರಿಕವಾಗಿ ಮಾತ್ರ ಇದೆ. ಅಲ್ಲಿರುವುದು ಮೋದಿಯವರ ಏಕ ಚಕ್ರಾಧಿಪತ್ಯ. ಪ್ರಧಾನ ಮಂತ್ರಿ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಮಹತ್ವಾಕಾಂಕ್ಷೆ ತಪ್ಪೇನು ಅಲ್ಲ. ಏನನ್ನಾದರೂ ಹೊತಸತನ್ನು ಮಾಡಬೇಕೆನ್ನುವ ಆತುರ ಅವರಿಗಿದ್ದಂತೆ ಕಾಣುತ್ತದೆ. ಅದೂ ಸ್ವಾಗತಾರ್ಹ. ಆದರೆ ಅವರ ಮಹತ್ವಾಕಾಂಕ್ಷೆಯಿಂದಾಗಿ ಅವರಲ್ಲಿ ಸರ್ವಾಧಿಕಾರಿ ನಾಯಕನ, ಮಿಲಿಟರಿ ನಾಯಕನ ವರ್ತನೆಗಳು ಕಂಡು ಬರುತ್ತಿವೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿರುವ ವಿರೋಧ ಪಕ್ಷಗಳನ್ನು ಮಾತ್ರವಲ್ಲ ತಮ್ಮ ಆಡಳಿತ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನ ಕೈ ಗೊಳ್ಳುತ್ತಿದ್ದಾರೆ. ಸರ್ವಾಧಿಕಾರಿ ಸಿದ್ಧಾಂತಹೊಂದಿರುವ ಸಂಘಟನೆಯೊಂದರಿಂದ ಅವರು ಪ್ರೇರಣೆ ಪಡೆದವರಾಗಿರುವುದು ಇದಕ್ಕೆ ಮೂಲ ಕಾರಣ.

ಇಡೀ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು. ನಾನು ಹೇಳಿದಂತೆ ದೇಶವಾಸಿಗಳು ನಡೆಯಬೇಕು. ಅದಕ್ಕೆ ವಿರುದ್ಧವಾಗಿರುವವರನ್ನು ಮಟ್ಟ ಹಾಕಬೇಕು ಎಂಬ ಧೋರಣೆ ಕಾಣಿಸಿಕೊಳ್ಳುತ್ತಿದೆ. ಇಂತಹ ನಡೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ತರುವ ಸಾಧ್ಯತೆ ಇದೆ. ಈ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಅವರು ಯಾವ ರೀತಿಯ ನಾಯಕತ್ವದವರು ಎನ್ನುವ ಬಗ್ಗೆ ಜನಾಭಿಪ್ರಾಯ ಹೊರಬೀಳಬಹುದು.

ಪ್ರ:ದೇಶದಲ್ಲಿ 1000 ಹಾಗೂ 500ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಉದ್ದೇಶ ಈಡೇರಿಕೆಯಾಗಿದೆಯೇ?

ನಿಡುಮಾಮಿಡಿ ಶ್ರೀ:   ನೋಟು ಅಮಾನ್ಯಗೊಳಿಸಿದ ಉದ್ದೇಶ ಒಳ್ಳೆಯದು. ಆದರೆ ಅದನ್ನು ಅನುಷ್ಠಾನಕ್ಕೆ ತಂದ ವಿಧಾನ ಅತ್ಯಂತ ಕೆಟ್ಟದಾಗಿತ್ತು. ದೇಶದಲ್ಲಿ ಎಲ್ಲಾ ಕಾಲದಲ್ಲೂ ಶೇ. 4-5ರಷ್ಟು ಕಾಳಧನ ಹೊಂದಿರುವವರು ಇದ್ದೆ ಇರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯಸಂಗತಿಯಾಗಿತ್ತು. ಆದರೆ ಅವರನ್ನು ನಿಯಂತ್ರಿಸಬೇಕೆನ್ನುವ ನೆಪದಲ್ಲಿ ದೇಶದಲ್ಲಿರುವ ಶೇ. 95ರಷ್ಟು ಜನರನ್ನು ಅವಮಾನಿಸುವ ಅಗತ್ಯ ಏನಿತ್ತು..?

ನೋಟು ಅಮಾನ್ಯ ಗೊಳಿಸಿದ ಸಂದರ್ಭದಲ್ಲಿ ಪ್ರಧಾನಿ ನೀಡಿದ ಕಾರಣಗಳು ...ಒಂದು ಕಪ್ಪು ಹಣಕ್ಕೆ ತಡೆ, ಖೋಟಾ ನೋಟು ಚಲಾವಣೆಗೆ ತಡೆ, ಭ್ರಷ್ಟಾಚಾರಕ್ಕೆ ಕಡಿವಾಣ ಎಂದಾಗಿತ್ತು.

 ಇದ್ದಕ್ಕಿದ್ದಂತೆ ಈ ಉದ್ದೇಶಕ್ಕೆ ಬದಲಾಗಿ ಕ್ಯಾಶ್‌ಲೆಸ್ ಸಮಾಜ, ಡಿಜಿಟಲ್ ವ್ಯವಹಾರ ಬಗ್ಗೆ ಆತುರ ತೋರುತ್ತಿದ್ದಾರೆ. ಭಾರತದ ಆರ್ಥಿಕ ವ್ಯವಸ್ಥೆಯನ್ನು ಶಿಸ್ತಿಗೆ ಒಳ ಪಡಿಸುವ ಬದಲು ಬಂಡವಾಳ ಶಾಹಿಗಳ ರಕ್ಷಣೆಗೆ ಪ್ರಧಾನಿ ಮುಂದಾದಂತಿದೆ. ಸನ್ಮಾನ್ಯ ಪ್ರಧಾನಿಗಳು ಕಳೆದ ಮೂರು ವರ್ಷಗಳಲ್ಲಿ ಕಾರ್ಪೋರೇಟ್ ವಲಯದ ಬಗ್ಗೆ ಉದಾರ ನೀತಿ ತಳೆದಿದ್ದಾರೆ. 100ಕ್ಕೂ ಅಧಿಕ ಕಾರ್ಪೋರೇಟ್ ಕಂಪೆನಿಗಳ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಅವರಿಗೆ ಮನಸ್ಸು ಬರುತ್ತಿಲ್ಲ. ನೋಟು ಅಮಾನ್ಯಗೊಳಿಸಿದ ಫಲ ಈ ದೇಶದ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ದಲಿತರಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ದೊರೆಯುವಂತಾಗಬೇಕಿತ್ತು.

ಪ್ರ: ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ‘ಮಧ್ಯಮ ಮಾರ್ಗ’ದ ಚಿಂತನೆ ಬಗ್ಗೆ ಮಾತುಗಳು ಕೇಳಿ ಬರುತ್ತಿದೆಯಲ್ಲಾ..ಈ ಬಗ್ಗೆ ನಿಮ್ಮ ಅಭಿಪ್ರಾಯ ?

ನಿಡುಮಾಮಿಡಿ ಶ್ರೀ:    ದೇಶದಲ್ಲಿ ಬಿಜೆಪಿ ಪ್ರಬಲವಾಗುತ್ತಿರುವಂತೆ ಫ್ಯಾಶಿಸಂ ಶಕ್ತಿಗಳು ಬಲಗೊಳ್ಳುತ್ತಿವೆ. ಇಂತಹ ಸನ್ನಿವೇಶ ಕನ್ನಡ ಸಾಹಿತ್ಯದಲ್ಲಿ ಈ ‘ಮಧ್ಯಮ ಮಾರ್ಗ’ ಹುಟ್ಟಲು ಕಾರಣವಾಗಿದೆ. ಎಂ.ಎಂ.ಕಲ್ಬುರ್ಗಿಯವರ ಹತ್ಯೆಯ ಬಳಿಕ ಈ ಚಿಂತನೆ ಬೆಳಕಿಗೆ ಬರುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಈ ಮಧ್ಯಮ ಮಾರ್ಗ ಆಳುವ ಸರಕಾರ ಏನೇ ಮಾಡಿದರೂ ಅದನ್ನು ಒಪ್ಪಿಕೊಂಡು ವೌನವಾಗಿರುವುದು ಎಂದು ಅರ್ಥ. ಈ ಮಧ್ಯಮ ಮಾರ್ಗ ಎನ್ನ್ನುವುದು ಬುದ್ಧ, ಬಸವಣ್ಣನವರ ಕ್ರಾಂತಿಗೆ ವಿರುದ್ಧವಾಗಿ ಹುಟ್ಟಿಕೊಂಡ ಪ್ರತಿಗಾಮಿ ಶಕ್ತಿಗಳ ಚಟುವಟಿಕೆಯ ಮುಂದುವರಿಕೆಯ ಭಾಗವಾಗಿದೆಯೋ ಎನ್ನುವ ಅನುಮಾನ ಕಾಡುತ್ತಿದೆ. ಯಾವುದೇ ತಾತ್ವಿಕ ಸ್ಪಷ್ಟತೆ, ಸೈದ್ಧಾಂತಿಕ ಬದ್ಧತೆ, ಸಮಗ್ರತೆಯ ದೃಷ್ಟಿ ಕೋನಗಳಿಲ್ಲದ ಇಂತಹ ಚಿಂತನೆಗಳಿಂದ ನಮ್ಮ ಸಮಾಜಕ್ಕೆ ಒಳಿತಾಗದು. ಇದು ಅವಕಾಶವಾದಿ ಸಾಹಿತಿಗಳು ಹುಟ್ಟು ಹಾಕಿದ ಚಿಂತನೆ ಎನ್ನುವುದು ನನ್ನ ಅನಿಸಿಕೆ.

ಪ್ರ: ರಾಜ್ಯದಲ್ಲಿ ವೌಢ್ಯಪ್ರತಿಬಂಧಕ ಕಾಯ್ದೆ ಇನ್ನೂ ಏಕೆ ಜಾರಿಯಾಗಿಲ್ಲ..?

ನಿಡುಮಾಮಿಡಿಶ್ರೀ:     ರಾಜ್ಯದಲ್ಲಿ ಅಮಾನವೀಯವಾದ ಸಮಾಜಕ್ಕೆ ಹಾನಿಕರವಾದ ಕ್ರೂರ ವೌಢ್ಯ ಆಚರಣೆಗಳು ನಮ್ಮ ಸಮಾಜದಲ್ಲಿರುವುದು ನಿಜ. ಇಂತಹ ವೌಢ್ಯಾಚರಣೆಗಳಿಂದ ಮುಕ್ತವಾದಾಗಲೇ ನಾವು ಒಂದು ನಾಗರಿಕ ಸಮಾಜವನ್ನು ಕಂಡು ಕೊಳ್ಳಲು ಸಾಧ್ಯ. ಈ ಕಾಯ್ದೆ ಜಾರಿಗೆ ಬರಬೇಕೆನ್ನುವುದು ಈ ನಾಡಿನ ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯ. ಕೆಲವೇ ಕೆಲವು ಸ್ಥಾಪಿತ ಹಿತಾಸಕ್ತಿಗಳು ಇದನ್ನು ವಿರೋಧಿಸುತ್ತಿವೆ. ಸಮಾಜದ ಹಿತವನ್ನು ಕಾಪಾಡಲು ರಾಜ್ಯ ಸರಕಾರ ವಿಧೇಯಕದ ಮಂಡನೆಗೆ ಮುಂದಾಗಬೇಕು ಎಂದು ನಾನು ಆಗ್ರಹಿಸುತ್ತೇನೆ.

ಇದು ಸರಕಾರದ ಹೊಣೆಗಾರಿಕೆ. ಸಮಾಜದ ಹಿತಾಸಕ್ತಿಯನ್ನು ಬಯಸುವ ಬಹುಜನರ ಬೇಡಿಕೆಯನ್ನು ನಿರ್ಲಕ್ಷಿಸಿ, ಸ್ಥಾಪಿತ ಹಿತಾಸಕ್ತಿಯನ್ನು ಹೊಂದಿರುವ ಸಣ್ಣ ಗುಂಪಿನ ಒತ್ತಡಕ್ಕೆ ಮಣಿದು ಸರಕಾರ ಹಿಂದಕ್ಕೆ ಸರಿಯುವುದು ಸೂಕ್ತವಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಮೂಲಕ ಇಂತಹದೊಂದು ಕಾಯ್ದೆ ಜಾರಿಗೆ ಬಂದೇ ಬರುತ್ತದೆ ಎಂದು ಜನ ನಿರೀಕ್ಷಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರ ಅಲ್ಲಿನ ಸರಕಾರ ಕೈಗೊಂಡ ಕ್ರಮದ ಮಾದರಿಯಲ್ಲಿ, ರಾಜ್ಯದಲ್ಲಿ ಕಂಬಳಕ್ಕಾಗಿ ಜನರ ಆಗ್ರಹಕ್ಕೆ ರಾಜ್ಯಸರಕಾರ ಸ್ಪಂದಿಸಿದ ರೀತಿಯಲ್ಲಿ ಕರ್ನಾಟಕ ಸರಕಾರ ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಮುಂದಾಗಬೇಕು ಎಂದು ನಾನು ಆಗ್ರಹಿಸುತ್ತೇನೆ. ನನಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಈ ವಿಚಾರದಲ್ಲಿ ನಂಬಿಕೆ ಇದೆ. ಅವರ ಸಹೋದ್ಯೋಗಿಗಳು ಸ್ಪಂದಿಸುವರೆಂಬ ಆಶಾಭಾವನೆ ಹೊಂದಿದ್ದೇನೆ.

ಪ್ರ: ಭಾರತವನ್ನು ಹಿಂದೂ ರಾಷ್ಟ ಮಾಡಬೇಕೆನ್ನುವ ಸಂಕಲ್ಪ ಹೊಂದಿರುವವರ ಬಗ್ಗೆ ನಿಮ್ಮ ಅಭಿಪ್ರಾಯ?

ನಿಡುಮಾಮಿಡಿಶ್ರೀ:  ಭಾರತದಲ್ಲಿ ಕೇವಲ ಹಿಂದುಗಳು ಮಾತ್ರ ವಾಸವಾಗಿರುವುದಲ್ಲ. ಈ ದೇಶ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಗಳನ್ನು ಹೊಂದಿರುವ ಮಹಾನ್ ಪರಂಪರೆಯನ್ನು ಹೊಂದಿರುವ ದೇಶ. ಇಲ್ಲಿ ಯಾವುದೇ ಒಂದು ಧರ್ಮ ಸಾರ್ವಭೌಮ ಧರ್ಮವಾಗಬಾರದು.ಒಂದು ವೇಳೆ ಹಾಗಾದರೆ ಈಗ ಇರುವ ಧರ್ಮ ನಿರಪೇಕ್ಷ ಭಾರತದ ಪ್ರಜಾಸತ್ತೆ ನಾಶವಾದೀತು.

ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿಯೇ ಮುಂದುವರಿಯಬೇಕು ಅದು ಸಂವಿಧಾನದ ಆಶಯವೂ ಹೌದು. ಇಂತಹ ವ್ಯವಸ್ಥೆಯಲ್ಲಿ ಮಾತ್ರ ಎಲ್ಲಾ ಧರ್ಮಗಳ ಜನ ಪರಸ್ಪರ ಗೌರವದಿಂದ, ಸ್ವಾಭಿಮಾನದೊಂದಿಗೆ ಬದುಕಬಲ್ಲರು. ಎಲ್ಲಾ ಧರ್ಮದ ಜನರಿಗೆ ನ್ಯಾಯಸಿಗಲು ಸಾಧ್ಯ. ಸೌಹಾರ್ದ, ಸಾಮರಸ್ಯದಿಂದ ಮಾತ್ರ ಒಂದು ರಾಷ್ಟ್ರದ ವಿಕಾಸ ಸಾಧ್ಯ. ಪ್ರಜಾಪ್ರಭುತ್ವ ಉಳಿದರೆ ಮಾತ್ರ ಭಾರತ ಉಳಿಯುತ್ತದೆ. ಪ್ರಜಾಪ್ರಭುತ್ವ ಅಳಿದರೆ ಭಾರತದ ಅಳಿವು ತಪ್ಪಿದ್ದಲ್ಲ.

Writer - ಪುಷ್ಪರಾಜ್.ಬಿ.ಎನ್.

contributor

Editor - ಪುಷ್ಪರಾಜ್.ಬಿ.ಎನ್.

contributor

Similar News