ಕಬೀರನ ಇನ್ನೊಂದು ಮುಖ!

Update: 2017-02-04 18:46 GMT

ಕಾದಂಬರಿ

‘‘ಕಬೀರನಿಗೆ ಪಾರಿವಾಳಗಳ ಬಗ್ಗೆ ತುಂಬಾ ಗೊತ್ತು...ಅವನು ನನ್ನ ಫ್ರೆಂಡ್...ಪರಿಚಯ ಮಾಡ್ಲಾ...? ಅವನಿಗೆ ನೆಲ್ಲಿಕಾಯಿ ಮರ ಇರುವ ಜಾಗ ಗೊತ್ತು...ಅವನು ಈಜಿ ಕಂಚಿಕಲ್ಲಿನವರೆಗೆ ಹೋಗಿ ಅದರ ತುತ್ತ ತುದಿ ಏರುತ್ತಾನಂತೆ...’’ ಪಪ್ಪು ಹೆಮ್ಮೆಯಿಂದ ಹೇಳಿದ.

‘‘ನನಗ್ಯಾಕೋ ಅವನು, ಅವನ ಜಾತಿಯವರು ಇಷ್ಟವಿಲ್ಲ....’’ ಜಾನಕಿ ಮುಖ ಸಿಂಡರಿಸಿದಳು.

‘‘ಅವನು ನೇತ್ರಾವತಿ ನದಿಯ ಆಚೆಯ ದಡಕ್ಕೆ ಹೋಗಿ ಬರುತ್ತಾನೆ ಗೊತ್ತಾ...ಅವನ ಕೈಯಲ್ಲಿ ನದಿಯ ಮೊಟ್ಟೆಗಳಿವೆ...’’ ‘‘ನದಿಯ ಮೊಟ್ಟೆಗಳೇ?’’

‘‘ಹೂಂ...ಬಿಳಿಯೆಂದರೆ ಬಿಳಿಯಾದ ಉರುಟುರುಟಾದ ಕಲ್ಲುಗಳು...ಕೆಲವು ಬಣ್ಣಗಳ ಕಲ್ಲುಗಳೂ ಇವೆ....ಆಚೆ ದಡದಲ್ಲಿ ಬೇಕಾದಷ್ಟು ಸಿಗುತ್ತವಂತೆ...ನನಗೂ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ. ಅವು ನದಿಯ ಮೊಟ್ಟೆಗಳಂತೆ...’’ ಜಾನಕಿ ಗಹಗಹಿಸಿ ನಗತೊಡಗಿದಳು ‘‘ನದಿ ಎಲ್ಲಾದರೂ ಮೊಟ್ಟೆ ಇಡುತ್ತವೆಯೇ....ಅವನು ಕಲಿಯುವುದರಲ್ಲಿ ದಡ್ಡ. ನಿನಗಾದರೂ ಗೊತ್ತಾಗಬೇಡವೇ?’’ ಕೇಳಿದಳು.

ಪಪ್ಪು ಪೆಚ್ಚಾದ. ‘‘ಅವನ ಜಾತಿಯವರೇ ಹಾಗೆ. ಸುಳ್ಳು ಹೇಳುವುದರಲ್ಲಿ ನಂಬರ್ ವನ್...’’ ಜಾನಕಿ ಗಂಭೀರವಾದಳು.

‘‘ಪಾರಿವಾಳದ ಮೊಟ್ಟೆಗಳನ್ನು ಅವನು ನನಗೆ ತೋರಿಸಿದ. ಅದು ಮರಿಯಾದರೆ ನನಗೂ ತೋರಿಸುತ್ತೇನೆ ಎಂದು ಹೇಳಿದ....’’ ಪಪ್ಪುವಿಗೆ ಕಬೀರನನ್ನು ಬಿಟ್ಟುಕೊಡುವುದು ಇಷ್ಟವಿರಲಿಲ್ಲ. ‘‘ಅವರ ಜಾತಿಯವರು ಪಾರಿವಾಳಗಳನ್ನು, ಅದರ ಮರಿಗಳನ್ನು ಕೊಂದು ತಿಂತಾರೆ ಗೊತ್ತಾ...’’ ಜಾನಕಿ ಗುಟ್ಟೊಂದನ್ನು ಸ್ಫೋಟಿಸಿದಳು.

ಪಪ್ಪು ದಂಗಾಗಿದ್ದ. ‘‘ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಗೆದ್ದರೆ ಅವರು ಪಟಾಕಿ ಸಿಡಿಸ್ತಾರೆ ಗೊತ್ತಾ? ಒಳಗೊಳಗೆ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡ್ತಾರೆ...’’

ಪಪ್ಪು ಕೇಳುತ್ತಾ ಕಲ್ಲಾಗಿ ಬಿಟ್ಟ. ‘‘ನೀನು ಅವನ ಜೊತೆಗೆ ಓಡಾಡುವುದು ನನಗಿಷ್ಟವಿಲ್ಲ...’’ ಜಾನಕಿ ಹಾಗೆಂದು ಹೇಳಿ, ಅಲ್ಲಿಂದ ಹೊರಟೇ ಬಿಟ್ಟಳು.

ಮರುದಿನ ಪಪ್ಪು ತನ್ನ ಬೆಂಚನ್ನು ಬದಲಿಸಿದ. ಕಬೀರ ಅವನನ್ನು ಹುಡುಕಿಕೊಂಡು ಬಂದು ‘‘ನೆಲ್ಲಿಕಾಯಿ ತಂದಿದ್ದೇನೆ...ಬೇಕಾ?’’ ಎಂದು ಕೇಳಿದರೆ ‘ಬೇಡ’ ಎಂದು ಮುಖ ತಿರುಗಿಸಿದ.

ಕಬೀರ ಪೆಚ್ಚಾದ. ಗೆಳೆಯನ ಸಿಟ್ಟಿಗೆ ಕಾರಣ ಗೊತ್ತಿರಲಿಲ್ಲ. ಬೆಂಚನ್ನು ಬೇರೆ ಬದಲಿಸಿದ್ದಾನೆ. ಅದೂ, ಮೇಷ್ಟ್ರಿಗೆ ಹತ್ತಿರ ಇರುವ ಎದುರಿನ ಬೆಂಚಲ್ಲಿ ಕೂತಿದ್ದ. ಇಲ್ಲವಾಗಿದ್ದರೆ ಕಬೀರನೇ ತನ್ನ ಚೀಲದೊಂದಿಗೆ ಅವನ ಬಳಿ ಹೋಗುತ್ತಿದ್ದ. ಕಲಿಯುವುದರಲ್ಲಿ ದಡ್ಡನಾಗಿದ್ದ ಕಬೀರನಿಗೆ ಎದುರಿನ ಬೆಂಚು ಎಂದರೆ ಭಯ. ಅದರಲ್ಲಿ ಕೂತವರೆಲ್ಲ ಮಹಾ ಬುದ್ಧಿವಂತರು ಎಂದೇ ಕಬೀರ ತಿಳಿದಿದ್ದ. ಬೆಂಚು ಬದಲಾಯಿಸಿದ ತಕ್ಷಣ ಪಪ್ಪು ಜಾನಕಿಯ ಕಡೆಗೆ ಕಣ್ಣು ಹೊರಳಿಸಿದ್ದ. ಅವಳು ಅವನನ್ನು ನೋಡಿ ಕಿರುನಗೆ ಬೀರಿದಳು. ತನ್ನ ನಿರ್ಧಾರ ಜಾನಕಿಗೆ ತುಂಬಾ ಖುಷಿಕೊಟ್ಟಿದೆ ಎನ್ನುವುದು ಪಪ್ಪುವಿಗೆ ಗೊತ್ತಾಗಿ ಅವನು ತುಂಬಾ ಸಂತೋಷಗೊಂಡ. ಕಬೀರನ ಮೇಲಿದ್ದ ಸಿಟ್ಟು ಇನ್ನೂ ಹೆಚ್ಚಾಯಿತು.

ಅಂದು ಸಂಜೆ ಇಬ್ಬರು ಜೊತೆಯಾಗಿ ನಡೆದರು. ಅವಳು ಮಾತು ಮಾತಿಗೆ ‘ಪ್ರತಾಪ’ ಎಂದು ಕರೆಯುವುದು ತುಂಬಾ ಇಷ್ಟವಾಯಿತು. ಇಡೀ ತರಗತಿಯಲ್ಲಿ ಪ್ರತಾಪ ಎಂದು ಬಾಯಿ ತುಂಬಾ ತನ್ನ ಹೆಸರನ್ನು ಕರೆಯುವ ಜಾನಕಿಯನ್ನು ಹೊರತು ಪಡಿಸಿದ ಇನ್ನೊಬ್ಬ ಗೆಳೆಯ ಪಪ್ಪುವಿಗೆ ಇರಲೇ ಇಲ್ಲ. ಪಪ್ಪು ಜೊತೆಗಿನ ಸ್ನೇಹಕ್ಕೆ ಗುರೂಜಿಯಿಂದ ಯಾವ ಅಭ್ಯಂತರವೂ ಇದ್ದಿರಲಿಲ್ಲ. ಜಾನಕಿಯ ಜೊತೆಗಿನ ಸ್ನೇಹ ಪಪ್ಪುವಿಗೆ ಶಾಲೆಯನ್ನು ಪ್ರೀತಿಸುವಂತೆ ಮಾಡಿತು. ಶಾಲೆಗೆ ಹೊರಡುವುದೆಂದರೆ ಅವನು ಸಂಭ್ರಮಿಸುತ್ತಿದ್ದ. ಅಲ್ಲಿ ತನಗಾಗಿ ಜಾನಕಿ ಕಾಯುತ್ತಿದ್ದಾಳೆ ಎನ್ನುವ ತವಕದಲ್ಲಿ. ಜಾನಕಿ ಹೆಚ್ಚು ಹತ್ತಿರವಾದಂತೆ, ಕಬೀರ ಅವನ ಮನಸ್ಸಿನಿಂದ ದೂರವಾಗುತ್ತಾ ಹೋಗುತ್ತಿದ್ದ. ಒಂದು ದಿನ ಕಬೀರ ಸಂಭ್ರಮದಿಂದ ಬಂದು ಹೇಳಿದ ‘‘ಪಾರಿವಾಳದ ಮೊಟ್ಟೆಗಳು ಮರಿಯಾಗಿವೆ. ಪುಟ್ಟ ಪುಟ್ಟ ಮರಿಗಳು. ನೋಡುತ್ತೀಯಾ?’’

ಮೊಟ್ಟೆ ಮರಿಯಾಗಿರುವುದು ಕೇಳಿ ರೋಮಾಂಚನಗೊಂಡಿದ್ದ.. ಪಪ್ಪುವಿಗೆ ನೋಡಬೇಕು ಎಂದು ತುಂಬಾ ಆಸೆಯಾಯಿತು. ಆದರೆ ದೂರದಲ್ಲಿ ನಿಂತು ಜಾನಕಿ ತನ್ನನ್ನು ನೋಡುತ್ತಿದ್ದಾಳೇನೋ ಎಂದು ಭಯವಾಯಿತು. ಪಪ್ಪು ಮಾತನಾಡಲಿಲ್ಲ. ಕಬೀರನೂ ವೌನವಾದ. ಇದ್ದಕ್ಕಿದ್ದಂತೆ ಪಪ್ಪು ಕೇಳಿ ಬಿಟ್ಟ ‘‘ನಿಮ್ಮ ಜಾತಿಯವರು ಪಾರಿವಾಳವನ್ನು, ಅದರ ಮರಿಗಳನ್ನು ತಿನ್ನುತ್ತಾರಂತೆ ಹೌದಾ?’’

ಕಬೀರ ಏನು ಉತ್ತರಿಸಬೇಕು ಎಂದು ಗೊತ್ತಾಗದೆ ಪೆಚ್ಚಾದ. ಪಪ್ಪು ಉತ್ತರ ಸಿಕ್ಕಿತು ಎಂಬಂತೆ ಅವನ ಎದುರಿಂದ ಮುಖ ಸಿಂಡರಿಸಿ ನಡೆದು ಜಾನಕಿಯನ್ನು ಹುಡುಕುತ್ತಾ ಹೋದ.

***

ಮೂರುವರ್ಷಗಳ ಕಾಲ ತೊರೆಯಂತೆ ತಿಳಿಯಾಗಿ ಹರಿಯುತ್ತಿದ್ದ ಜಾನಕಿಯ ಸ್ನೇಹ ಪಪ್ಪುವಿನ ಪಾಲಿಗೆ ಪ್ರೀತಿಯಾಗಿ ಬದಲಾದದ್ದು ಒಂದು ಆಕಸ್ಮಿಕ ಸನ್ನಿವೇಶದಲ್ಲಿ. ಬಹುಶಃ ಹತ್ತನೆಯ ತರಗತಿಯಲ್ಲಿರಬೇಕು. 1999ನೆ ಇಸವಿಯ ಶಾಲೆಯ ಆರಂಭದ ತಿಂಗಳು ಅದು. ಪಪ್ಪುವಂತೂ ಶಾಲೆ ಯಾವಾಗ ಆರಂಭವಾಗುತ್ತದೆಯೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ. ಶಾಲೆ ಆರಂಭವಾಗಿ ಒಂದು ತಿಂಗಳೂ ಕಳೆದಿರಲಿಲ್ಲ. ಅದೊಂದು ದಿನ ಜಾನಕಿ ಯಾಕೋ ತುಸು ಮಂಕಾಗಿದ್ದಳು. ‘‘ಏನಾಯ್ತೆ...?’’ ಪಪ್ಪು ಆತಂಕದಿಂದ ಕೇಳಿದ್ದ.

‘‘ನಿನಗೆ ಗೊತ್ತಿಲ್ವಾ?’’ ಅವಳು ಪ್ರಶ್ನೆ ಹಾಕಿದಳು. ಅವಳು ಮಾತನಾಡುವ ದಾಟಿಯೇ ಅದು. ಪ್ರತಿಯೊಂದನ್ನು ‘‘ನಿನಗೆ ಗೊತ್ತಿಲ್ವಾ?’’ ಎಂದೇ ಆರಂಭಿಸುತ್ತಾಳೆ.

ಪಪ್ಪು ಅವಳ ಮುಖವನ್ನೇ ನೋಡಿ ‘ಇಲ್ಲ’ ಎಂದು ತಲೆಯಾಡಿಸಿದ.

‘‘ಭಾರತದ ಗಡಿಗೆ ಪಾಕಿಸ್ತಾನೀಯರು ನುಗ್ಗಿದ್ದಾರಂತೆ. ಅಪ್ಪ ಯಾರೊಟ್ಟಿಗೋ ಮಾತನಾಡುತ್ತಿದ್ದರು. ಭಾರತ-ಪಾಕಿಸ್ತಾನ ಯುದ್ಧವಂತೆ...’’

‘‘ಅದಕ್ಕೆ?’’ ಇವನು ಮುಗ್ಧವಾಗಿ ಕೇಳಿದ.

ಅವಳು ವೌನವಾಗಿದ್ದಳು. ಕೆಲವೊಮ್ಮೆ ಜಾನಕಿ ಪಪ್ಪುವಿಗೆ ಅರ್ಥವೇ ಆಗುತ್ತಿರಲಿಲ್ಲ. ಅವಳ ದುಃಖವೇನು ಎನ್ನುವುದು ಇವನಿಗೆ ಗೊತ್ತೇ ಆಗುತ್ತಿರಲಿಲ್ಲ. ‘‘ಗಡಿಯಲ್ಲಿ ದುಷ್ಟ ಪಾಕಿಸ್ತಾನೀ ರಕ್ಕಸರು ನಮ್ಮ ನೂರಾರು ಯೋಧರನ್ನು ಕೊಂದು ಹಾಕಿದ್ದಾರಂತೆ...’’ ಅವಳು ಹೇಳಿದಳು.

ವಿಷಯವೇನೋ ಗಂಭೀರವಾದದ್ದು ಅನ್ನಿಸಿತು. ಅವಳು ಮುಂದುವರಿಸಿದಳು ‘‘ಆದರೂ ನಮ್ಮ ಯೋಧರು ಬಿಟ್ಟಿಲ್ಲ. ಅವರೂ ಸಾವಿರಾರು ಪಾಕಿಸ್ತಾನೀಯರನ್ನು ಕೊಂದು ಹಾಕುತ್ತಿದ್ದಾರೆ....’’

ಇಷ್ಟೆಲ್ಲ ವಿವರಗಳು ಇವಳಿಗೆ ಅದು ಹೇಗೆ ಗೊತ್ತಾಗಿ ಬಿಡುತ್ತದೆ? ಪಪ್ಪುವಿಗೆ ಅಚ್ಚರಿ. ಅವನ ದೃಷ್ಟಿ ಅಕಾರಣವಾಗಿ ಕಬೀರ ಕುಳಿತ ಬೆಂಚಿನ ಕಡೆ ಹೋಯಿತು.

ಅಂದು ಮನೆಗೆ ಬಂದವನೇ ಚಹಾ ಕುಡಿಯುವ ಸಂದರ್ಭದಲ್ಲಿ ತಾಯಿಯಲ್ಲಿ ಹಂಚಿಕೊಂಡಿದ್ದ

‘‘ಅಮ್ಮಾ ವಿಷಯ ಗೊತ್ತಾ?’’

‘‘ಏನು ಮಗಾ?’’

‘‘ಗಡಿಯಲ್ಲಿ ಯುದ್ಧವಂತೆ. ಪಾಕಿಸ್ತಾನೀಯರು ನುಗ್ಗಿದ್ದಾರಂತೆ. ಭಾರತದ ಸೈನಿಕರು ನೂರಾರು ಪಾಕಿಸ್ತಾನೀಯರನ್ನು ಕೊಂದು ಹಾಕಿದ್ದಾರಂತೆ...’’

ತಾಯಿಗೆ ಅದರಲ್ಲೇನೂ ಆಸಕ್ತಿಯಿದ್ದಂತಿರಲಿಲ್ಲ.

‘‘ನರಸಿಂಹಯ್ಯ ಸಿಕ್ಕಿದರು. ನೀನು ಕಳೆದ ರವಿವಾರ ಸಂಗೀತ ತರಗತಿಗೆ ಯಾಕೆ ಹೋಗಿಲ್ಲ...’’ ಲಕ್ಷ್ಮಮ್ಮ ಕೇಳಿದರು.

ನಾನು ಗಡಿಯಲ್ಲಿ ಯುದ್ಧದ ಬಗ್ಗೆ ಮಾತನಾಡುತ್ತಿದ್ದರೆ, ತಾಯಿ ಸಂಗೀತದ ಬಗ್ಗೆ ಕೇಳುತ್ತಿದ್ದಾಳೆ. ಪಪ್ಪುವಿಗೆ ತುಂಬಾ ಸಂಕಟವಾಯಿತು.

‘‘ಅಮ್ಮಾ...ನಮ್ಮ ದೇಶದ ಯೋಧರು ತುಂಬಾ ಜನ ಸತ್ತಿದ್ದಾರಂತಮ್ಮ...’’

‘‘ಅದಕ್ಕೆ ನೀನು ಸಂಗೀತ ಕ್ಲಾಸ್‌ಗೆ ಹೋಗಿಲ್ವಾ? ನಿನಗೆ ಯಾವ ಯುದ್ಧ ಮಾಡುವುದಕ್ಕಿತ್ತು?’’ ತಾಯಿ ಸಿಟ್ಟು ನಟಿಸಿ ಕೇಳಿದರು. ಪಪ್ಪುವಿಗೆ ತಾಯಿಯ ದಾಟಿ ಸರಿ ಬರಲಿಲ್ಲ. ಅಲ್ಲಿ ಗಡಿಯಲ್ಲಿ ನೂರಾರು ಯೋಧರು ಸಾಯುತ್ತಿದ್ದಾರೆ ಎನ್ನುವುದು ಕೇಳಿಯೂ ತಾಯಿಗೆ ಯಾಕೆ ಸಂಕಟವಾಗಲಿಲ್ಲ? ಜಾನಕಿ ಅದೆಷ್ಟು ದುಃಖದಿಂದ ಇದ್ದಳು!

‘‘ನಾನು ಸಂಗೀತ ಕಲಿಯುವುದಿಲ್ಲ’’ ಪಪ್ಪು ತಾಯಿಯ ಮಾತನ್ನೇ ಕತ್ತರಿಸಿ ಹಾಕಿದ.

ಲಕ್ಷ್ಮಮ್ಮ ಒಮ್ಮೆಲೇ ತಲೆಯೆತ್ತಿದರು ‘‘ಮತ್ತೆ? ಮತ್ತೇನಾಗಬೇಕು ಅಂತ ಇದ್ದೀಯ?’’

‘‘ನಾನು ಯೋಧ ಆಗಿ ದೇಶಕ್ಕೆ ಹೋರಾಡ್ತೇನೆ...ತಾತನ ಹಾಗೆ...’’

ಅವನೇನೂ ಉದ್ದೇಶಪೂರ್ವಕ ಹೇಳಿದ್ದಲ್ಲ. ತಾಯಿಯ ಮೇಲೆ ಸಿಟ್ಟಿನಿಂದ ಹೇಳಿದ್ದ.

‘‘ನಿನ್ನ ತಾತ ಯೋಧ ಆಗಿರಲಿಲ್ಲ. ಅವರು ಉಪವಾಸ ಮಾಡಿ ವಿದೇಶಿಯರನ್ನು ದೇಶದಿಂದ ಓಡಿಸಿದ್ರು...’’ ಲಕ್ಷ್ಮಮ್ಮ ಉತ್ತರಿಸಿದರು.

ಪಪ್ಪು ನಿರುತ್ತರನಾದ. ಮರುದಿನ ಜಾನಕಿ ಸಿಕ್ಕಿದ್ದೇ ಅವನು ಕೇಳಿದ ‘‘ಪಾಕಿಸ್ತಾನೀಯರನ್ನು ಉಪವಾಸ ಮಾಡಿ ಓಡಿಸೋದಕ್ಕೆ ಆಗಲ್ವೇ?’’

ಜಾನಕಿ ಅಚ್ಚರಿಯಿಂದ ಪಪ್ಪುವನ್ನು ನೋಡಿದಳು. ‘‘ಅದೇ, ಗಾಂಧಿ ಬ್ರಿಟಿಷರನ್ನು ಉಪವಾಸ ಸತ್ಯಾಗ್ರಹ ಮಾಡಿ ಓಡಿಸಿದರಲ್ಲ, ಹಾಗೆ? ಗಡಿಯಿಂದ ಪಾಕಿಸ್ತಾನೀಯರನ್ನೂ ಅದೇ ರೀತಿ ಓಡಿಸೋದಕ್ಕೆ ಆಗೋದಿಲ್ವೇ?’’

ಒಮ್ಮೆಗೇ ಹೌದಲ್ಲ ಅನ್ನಿಸಿತ್ತು ಜಾನಕಿಗೆ. ‘‘ಬ್ರಿಟಿಷರಿಗಿಂತ ಕ್ರೂರಿಗಳು ಪಾಕಿಸ್ತಾನೀಯರು. ಉಪವಾಸ ಕೂತರೆ ಅಷ್ಟೇ...ಯೋಧರೆಲ್ಲ ಉಪವಾಸ ಮಾಡಿಯೇ ಸಾಯಬೇಕಾಗುತ್ತದೆ...’’

ಸ್ವಲ್ಪ ಹೊತ್ತಾದ ಬಳಿಕ ಜಾನಕಿ ಹೇಳಿದಳು ‘‘ನಿನಗೆ ಗೊತ್ತಾ? ಬ್ರಿಟಿಷರು ಗಾಂಧಿಯ ಉಪವಾಸಕ್ಕೆ ಹೆದರಿ ಓಡಿದ್ದಲ್ಲ ಅಂತೆ. ಸುಭಾಶ್ಚಂದ್ರ ಬೋಸ್ ಜರ್ಮನಿಯಿಂದ ಸೈನ್ಯದ ಜೊತೆ ಬರ್ತಾ ಇದ್ದಾರೆ ಎಂಬ ಸುದ್ದಿ ಸಿಕ್ಕಿ ಅವರು ಹೆದರಿ ಓಡಿದರಂತೆ...’’

ಶಾಲೆಯ ಪಠ್ಯದಲ್ಲಿ ಸುಭಾಶ್ಚಂದ್ರ ಬೋಸರ ಪಾಠ ಇದೆ. ಆದರೆ ಅದರಲ್ಲಿ ಇದೆಲ್ಲ ಇಲ್ಲ. ಗಾಂಧಿಯ ಬಗ್ಗೆಯೂ ಪಾಠ ಇದೆ. ಗಾಂಧಿ ಸ್ವಾತಂತ್ರ ತಂದುಕೊಟ್ಟರು ಎಂದೂ ಮೇಷ್ಟ್ರು ಹೇಳುತ್ತಾರೆ. ಹಾಗಾದರೆ ಜಾನಕಿ ಹೇಳುತ್ತಿರುವುದು?

ಒಮ್ಮೆಲೆ ಕೇಳಿದ ‘‘ಸುಭಾಶ್ಚಂದ್ರ ಬೋಸ್ ಪುತ್ತೂರಿಗೆ ಬಂದಿದ್ರಾ?’’

ಜಾನಕಿಗೂ ಗೊತ್ತಿರಲಿಲ್ಲ. ‘‘ಅವರು ಪುತ್ತೂರಿಗೆ ಬಂದಿದ್ರೆ ನನ್ನ ತಾತ ಅವರ ಜೊತೆ ಸೇರಿಕೊಳ್ತಾ ಇದ್ರು. ಗಾಂಧಿ ಜೊತೆ ಸೇರಿಕೊಳ್ತಾ ಇರಲಿಲ್ಲ...’’ ಪಪ್ಪು ಹೇಳಿದ.

‘‘ನಾಳೆ ಸಂಜೆ ಬಜತ್ತೂರಿನ ಬಸ್‌ಸ್ಟಾಂಡ್ ಪಕ್ಕದಲ್ಲಿ ಅಪ್ಪನ ಭಾಷಣ ಉಂಟು. ಬರ್ತೀಯಾ? ಕಾರ್ಗಿಲ್ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಅಪ್ಪ ಭಾಷಣ ಮಾಡ್ತಾರೆ....’’

‘‘ಮತ್ತೆ ಬರದೇ?’’ ಪಪ್ಪು ಭರವಸೆ ಕೊಟ್ಟ. ಕಾರ್ಗಿಲ್ ಯುದ್ಧ ನಡೆಯುತ್ತಿರುವಾಗ ಸುಮ್ಮನೆ ಇರುವುದು ಹೇಗೆ?

‘‘ನೀನು ಸೀದಾ ನನ್ನ ಮನೆಗೆ ಬಾ. ಅಲ್ಲಿಂದ ಅಪ್ಪನ ಜೊತೆಗೆ ಒಟ್ಟಿಗೆ ಸಭೆಗೆ ಹೋಗುವಾ...’’ ಜಾನಕಿ ಸಲಹೆ ನೀಡಿದಳು.

ಅವನಿಗೆ ಅದು ತುಂಬಾ ಇಷ್ಟವಾಯಿತು.

ಇದಾದ ಒಂದು ವಾರದಲ್ಲೇ ಕಾರ್ಗಿಲ್ ಯುದ್ಧದ ಕಾವು ಬಜತ್ತೂರು ಪ್ರೌಢಶಾಲೆಯ ಅಂಗಳಕ್ಕೇ ತಲುಪಿದ್ದು ಪಪ್ಪುವಿನ ಬದುಕಿಗೆ ಮಹತ್ತರ ತಿರುವೊಂದನ್ನು ಕೊಟ್ಟಿತು. ದೇಶದ ಯಾವುದೋ ಮೂಲೆಯಲ್ಲಿ ನಡೆಯುತ್ತಿದ್ದ ಕಾರ್ಗಿಲ್ ಯುದ್ಧ ಪಪ್ಪು ಎಂಬ ಹುಡುಗನೊಳಗಿನ ಸೇನಾನಿಯೊಬ್ಬನನ್ನು, ಪ್ರೇಮಿಯೊಬ್ಬನನ್ನು ಏಕಕಾಲದಲ್ಲಿ ಬಡಿದೆಬ್ಬಿಸಿದ್ದನ್ನು ಆಕಸ್ಮಿಕ ಎಂದು ತೇಲಿಬಿಡುವುದಾದರೂ ಹೇಗೆ?

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News