ಸೂರ್ಯಾಸ್ತ ಕೆಂಪು ಬಣ್ಣದಲ್ಲಿ ಕಂಗೊಳಿಸುವುದೇಕೆ?

Update: 2017-02-05 18:07 GMT

ಹೆಚ್ಚಿನ ಸೂರ್ಯಾಸ್ತಗಳು ಕೆಂಪು ಬಣ್ಣದಲ್ಲಿರುತ್ತವೆ, ಏಕೆಂದರೆ ವಾತವರಣದಲ್ಲಿರುವ ಧೂಳಿನ ಸಣ್ಣಕಣಗಳು ಕೆಂಪು ಬೆಳಕಿನ ಅಲೆಗಳನ್ನು ಕನಿಷ್ಠ ಪ್ರಮಾಣದಲ್ಲಿ ಚದುರಿಸುತ್ತವೆ.

ಬೆಳಕು ನಮ್ಮ ಕಣ್ಣಿಗೆ ಬಿಳಿಯದಾಗಿ ಕಂಡರೂ ಅದು ವಾಸ್ತವದಲ್ಲಿ ಹಲವಾರು ಬಣ್ಣಗಳಿಂದ ಕೂಡಿರುತ್ತದೆ. ಪ್ರಿಸ್ಮ್ ಅಥವಾ ಪಟ್ಟಕದ ಮೂಲಕ ಬಿಳಿಯ ಬೆಳಕನ್ನು ಹಾಯಿಸಿದರೆ ಈ ವಿವಿಧ ಬಣ್ಣಗಳನ್ನು ಕಾಣಬಹುದಾಗಿದೆ.

ಪ್ರತಿಯೊಂದೂ ಬಣ್ಣವು ಬೆಳಕಿನ ತರಂಗವಾಗಿದ್ದು ಬೇರೆ ಬೇರೆ ತರಂಗಾಂತರವನ್ನು ಹೊಂದಿರುತ್ತದೆ. ಸಣ್ಣ ತರಂಗಗಳು ನೀಲಿ ಬಣ್ಣದ್ದಾಗಿದ್ದರೆ,ಉದ್ದ ತರಂಗಗಳು ಕೆಂಪು ಬಣ್ಣದ್ದಾಗಿರುತ್ತವೆ. ಹಸಿರು,ಹಳದಿ ಮತ್ತು ಕಿತ್ತಳೆಯಂತಹ ಬಣ್ಣಗಳ ತರಂಗಗಳ ಗಾತ್ರ ಪಟ್ಟಕದ ನೀಲಿ ಮತ್ತು ಕೆಂಪು ಕೊನೆಗಳ ನಡುವಿನಲ್ಲಿರುತ್ತವೆ.

 ಸೂರ್ಯನ ಬೆಳಕಿನ ಕಿರಣ ಭೂಮಿಯ ವಾತಾವರಣವನ್ನು ತಲುಪಿದಾಗ ಬೆಳಕಿನ ತರಂಗಗಳು ಗಾಳಿಯಲ್ಲಿನ ಧೂಳು,ನೀರಿನ ಹನಿಗಳು,ಮಂಜಿನ ಹರಳುಗಳು ಮತ್ತು ಅನಿಲ ಕಣಗಳಂತಹ ವಸ್ತುಗಳ ಜೊತೆಗೆ ಬೆರೆಯುತ್ತದೆ. ಈ ಕಣಗಳಿಂದ ಬೆಳಕಿನ ತರಂಗಗಳು ವಿಭಿನ್ನ ದಿಕ್ಕುಗಳಲ್ಲಿ ಚದುರುತ್ತವೆ.

ನಮ್ಮ ವಾತಾವರಣದಲ್ಲಿರುವ ಗಾಳಿಯಲ್ಲಿನ ಕಣಗಳು ಸೂರ್ಯನ ಬೆಳಕಿನಲ್ಲಿರುವ ನೀಲಿ ಬಣ್ಣವನ್ನು ಕೆಂಪು ಬಣ್ಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತವೆ. ಇದೇ ಕಾರಣದಿಂದ ಹಗಲು ವೇಳೆಯಲ್ಲಿ ಆಗಸವು ಹೆಚ್ಚಾಗಿ ನೀಲಿ ಬಣ್ಣದ್ದಾಗಿ ಕಂಡು ಬರುತ್ತದೆ.

ಈ ಕಣ್ಣಿಗೆ ಕಾಣುವ ಬೆಳಕಿನ ವ್ಯಾಪ್ತಿಯಲ್ಲಿ ಕೆಂಪು ಬೆಳಕಿನ ತರಂಗಗಳು ಗಾಳಿಯಲ್ಲಿನ ಅಣಿಲ ಕಣಗಳಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚದುರಿಸಲ್ಪಡುತ್ತವೆ.

 ಹೀಗಾಗಿ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಬೆಳಕು ಸುದೀರ್ಘ ಪಥವನ್ನು ಹಾದು ನಮ್ಮ ಕಣ್ಣುಗಳನ್ನು ತಲುಪುವಾಗ ನೀಲಿ ಬಣ್ಣವು ಹೆಚ್ಚುಕಡಿಮೆ ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ ಮತ್ತು ಹೆಚ್ಚಾಗಿ ಕೆಂಪು ಮತ್ತು ಹಳದಿ ಬಣ್ಣಗಳು ಉಳಿದು ಕೊಂಡಿರುತ್ತವೆ. ಇದರ ಪರಿಣಾಮವಾಗಿ ನಮಗೆ ಸೂರ್ಯಾಸ್ತವು ವರ್ಣರಂಜಿತವಾಗಿ ಕಾಣುತ್ತದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News