ಮನುಷ್ಯರು ಎತ್ತರದಿಂದ ಬಿದ್ದರೆ ಬದುಕುಳಿಯುವುದು ಕಷ್ಟ....ಆದರೆ ಬೆಕ್ಕಿಗೆ ಹೆಚ್ಚಿನ ಅಪಾಯವಾಗುವುದಿಲ್ಲ. ಏಕೆ?

Update: 2017-02-09 09:18 GMT

ಕಿಟಕಿಯ ದಂಡೆಯ ಮೇಲೆ ನಿದ್ರೆ ಮಾಡುತ್ತಿದ್ದ ಬೆಕ್ಕು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿತೆನ್ನಿ. ಅದು ತಕ್ಷಣವೇ ಅತ್ತಿತ್ತ ಮಿಸುಕಾಡಿ ತನ್ನ ಕಾಲುಗಳು ಕೆಳಮುಖವಾಗುವಂತೆ ತನ್ನ ದೇಹವನ್ನು ಮೊದಲಿನ ಸ್ಥಿತಿಗೆ ತಂದುಕೊಳ್ಳುತ್ತದೆ.ನೆಲಕ್ಕೆ ತಲುಪುವಾಗ ಅದು ತನ್ನ ಕಾಲುಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಚಾಚುತ್ತ ಹೆಚ್ಚಿನ ಆಘಾತದಿಂದ ರಕ್ಷಿಸಿಕೊಳ್ಳುತ್ತದೆ.

ಕಾಲುಗಳ ಈ ಕಸರತ್ತು ಅದು ನೆಲವನ್ನು ತಲುಪುವ ಸಮಯವನ್ನು ವಿಳಂಬಿಸುತ್ತದೆ ಮತ್ತು ಬೆಕ್ಕಿಗೆ ಉಂಟಾಗಬಹುದಾದ ಅಪಾಯದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದೆ.

ಖ್ಯಾತ ವಿಜ್ಞಾನಿ ನ್ಯೂಟನ್‌ನ ಚಲನೆಯ ಎರಡನೇ ನಿಯಮದಂತೆ ಯಾವುದೇ ವಸ್ತುವಿನ ಮೇಲಿನ ಶಕ್ತಿಯನ್ನು ಹೆಚ್ಚಿಸಿದರೆ ಅದರ ವೇಗೋತ್ಕರ್ಷವೂ ಹೆಚ್ಚುತ್ತದೆ. ವಸ್ತುವಿನ ದ್ರವ್ಯರಾಶಿ ಹೆಚ್ಚಿದರೆ ಅದರ ವೇಗೋತ್ಕರ್ಷ ತಗ್ಗುತ್ತದೆ. ವಸ್ತುವಿನ ಮೇಲೆ ಶಕ್ತಿಯ ಒತ್ತಡವಿಲ್ಲದಿದ್ದರೆ ಅಲ್ಲಿ ವೇಗೋತ್ಕರ್ಷವೂ ಇರುವುದಿಲ್ಲ. ನಮಗೆಲ್ಲ ಅನುಭವಕ್ಕೆ ಬರುವ ಸಾಮಾನ್ಯ ಶಕ್ತಿಯೆಂದರೆ ನಮ್ಮ ಭೂಮಿಯ ಸೆಳೆತದ ಶಕ್ತಿ.

ಇದನ್ನೇ ನಾವು ಗುರುತ್ವಾಕರ್ಷಕ ಶಕ್ತಿ ಎಂದು ಕರೆಯುತ್ತೇವೆ. ಏನಾದರೂ ಭೂಮಿಯ ಮೇಲೆ ಬಿದ್ದಾಗ ಗುರುತ್ವಾಕರ್ಷಣ ಶಕ್ತಿಯ ಒತ್ತಡ ಅದರ ಮೇಲೆ ಬೀಳುತ್ತದೆ.

 ಈಗ ಮತ್ತೆ ನಮ್ಮ ಬೆಕ್ಕಿನ ಬಳಿಗೆ ಹೋಗೋಣ. ಬೆಕ್ಕು ಮೇಲಿನಿಂದ ಕೆಳಕ್ಕೆ ಬೀಳುವಾಗ ಗುರುತ್ವಾಕರ್ಷಣ ಶಕ್ತಿಯು ಅದನ್ನು ಸೆಳೆಯುತ್ತದೆ ಮತ್ತು ಇದರಿಂದಾಗಿ ಅದರ ಬೀಳುವ ವೇಗ ಹೆಚ್ಚಬೇಕಾಗುತ್ತದೆ.

ವಾಯುವು ತನ್ನ ಮೂಲಕ ಸಾಗುವ ವಸ್ತುವಿನ ಚಲನೆಗೆ ಪ್ರತಿರೋಧವನ್ನೊಡ್ಡುತ್ತದೆ. ಈ ಪ್ರತಿರೋಧಕ ಶಕ್ತಿಯನ್ನು ‘ಏರ್ ಡ್ರಾಗ್ ’ಎಂದು ಕರೆಯಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯು ಬೆಕ್ಕನ್ನು ಕೆಳಕ್ಕೆ ಎಳೆಯುತ್ತಿರುವಾಗ ಅದೇ ವೇಳೆ ವಾಯುವಿನ ಪ್ರತಿರೋಧ ಅದನ್ನು ಮೇಲಕ್ಕೆ ನೂಕುತ್ತಿರುತ್ತದೆ.

ಬೆಕ್ಕು ಕೆಳಕ್ಕೆ ಬೀಳಲು ಆರಂಭವಾದ ಕೂಡಲೇ ಯಾವುದೇ ವೇಗವಿರುವುದಿಲ್ಲ ಗುರುತ್ವಾಕರ್ಷಣ ಶಕ್ತಿಯಿಂದಾಗಿ ಅದು ಕೆಳಕ್ಕೆ ಬೀಳತೊಡಗುವಾಗ ವೇಗ ಹೆಚ್ಚುತ್ತದೆ ಮತ್ತು ಅದಕ್ಕನುಗುಣವಾಗಿ ಅದನ್ನು ಮೇಲಕ್ಕೆ ತಳ್ಳುವ ವಾಯುವಿನ ಪ್ರತಿರೋಧವೂ ಹೆಚ್ಚುತ್ತದೆ.

 ಅಂತಿಮವಾಗಿ ಅದೊಂದು ಸಮಯದಲ್ಲಿ ಕೆಳಮುಖ ಸೆಳೆತ ಮತ್ತು ಮೇಲ್ಮುಖ ನೂಕುವಿಕೆ ಸಮನಾಗಿಬಿಡುತ್ತವೆ. ಈ ಸಂದರ್ಭದಲ್ಲಿ ಬೆಕ್ಕು ಕೆಳಕ್ಕೆ ಸೆಳೆಯಲ್ಪಡುವುದಿಲ್ಲ, ಮೇಲಕ್ಕೂ ನೂಕಲ್ಪಡುವುದಿಲ್ಲ. ಹೀಗಾಗಿ ಅದರ ಮೇಲೆ ಯಾವುದೇ ಶಕ್ತಿಯ ಒತ್ತಡ ವಿರುವುದಿಲ್ಲ.

ನ್ಯೂಟನ್‌ನ ನಿಯಮದಂತೆ ಎಲ್ಲಿ ಶಕ್ತಿಯಿರುವುದಿಲ್ಲವೋ ಅಲ್ಲಿ ವೇಗೋತ್ಕರ್ಷವೂ ಇರುವುದಿಲ್ಲ. ವೇಗೋತ್ಕರ್ಷವಿಲ್ಲ ಎಂದರೆ ವೇಗದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅರ್ಥ,ಅಂದರೆ ಬೆಕ್ಕು ಕೆಳಕ್ಕೆ ಬೀಳುತ್ತಿರುತ್ತದೆ,ಆದರೆ ಸ್ಥಿರವಾದ ವೇಗದಲ್ಲಿ ಬೀಳುತ್ತಿರುತ್ತದೆ. ಇದನ್ನು ಟರ್ಮಿನಲ್ ವೆಲಾಸಿಟಿ ಅಥವಾ ಅಂತಿಮ ವೇಗ ಎಂದು ಕರೆಯಲಾಗುತ್ತದೆ.

ಈ ವೇಗದಲ್ಲಿ ಬೆಕ್ಕಿಗೆ ಬಿಡುಗಡೆಯ ಭಾವನೆ ಮೂಡುತ್ತದೆ ಮತ್ತು ಅದು ತನ್ನ ಕಾಲುಗಳನ್ನು ಇನ್ನಷ್ಟು ಮುಂದಕ್ಕೆ ಚಾಚುತ್ತದೆ ಹಾಗೂ ಗಾಳಿಯ ನೂಕುವಿಕೆಗೆ ಅದರ ದೇಹದ ಹೆಚ್ಚಿನ ಭಾಗ ತೆರೆದುಕೊಳ್ಳುತ್ತದೆ. ಇದು ಅದರ ಬೀಳುವ ವೇಗವನ್ನು ಇನ್ನಷ್ಟು ತಗ್ಗಿಸುತ್ತದೆ.

ಹೀಗೆ ಬೆಕ್ಕು ನೆಲವನ್ನು ತಲುಪುವಾಗ ಹೆಚ್ಚಿನ ವೇಗವಿರುವುದಿಲ್ಲ ಮತ್ತು ಅದರ ಕಾಲುಗಳು ಸಾಕಷ್ಟು ನಮ್ಯತೆಯನ್ನು ಹೊಂದಿರುವುದರಿಂದ ಅದಕ್ಕೆ ಹೆಚ್ಚಿನ ಪೆಟ್ಟು ಬೀಳುವುದಿಲ್ಲ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News