ಕನ್ನಡ ಚಿತ್ರಗಳಿಗೆ ಸಹಾಯಧನ ಹೆಚ್ಚಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಸಲಹೆ

Update: 2017-02-09 16:51 GMT

ಮೈಸೂರು, ಫೆ.9: ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಹಾಯ ಧನವನ್ನು ಹೆಚ್ಚಳ ಮಾಡುವಂತೆ ರಾಜ್ಯಪಾಲ ವಜೂಭಾಯಿ  ವಾಲ ಸಲಹೆ ನೀಡಿದರು.

ಮೈಸೂರಿನ ಅರಮನೆ ಮುಂಭಾಗ ನಡೆದ 9ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಇತ್ತೀಚಿನ ದಿನಗಳಲ್ಲಿ ಸಿನೆಮಾ ಮಾಡುವುದು ಕಷ್ಟದ ಕೆಲಸ. ಒಂದು ಉತ್ತಮ ಚಿತ್ರ ನಿರ್ಮಾಣ ಮಾಡಬೇಕೆಂದರೆ ನಿರ್ಮಾಪಕ ಮತ್ತು ನಿರ್ದೇಶಕರ ಶ್ರಮ ಬಹಳಷ್ಟು ಇರುತ್ತದೆ. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಳೆದ ವರ್ಷ 125 ಚಿತ್ರಗಳಿಗೆ ತಲಾ ಹತ್ತು ಲಕ್ಷ ಪ್ರೋತ್ಸಾಹ ಧನ ನೀಡಲಾಯಿತು. ಈ ಹಣ ನಿರ್ಮಾಣದ ದೃಷ್ಟಿಯಿಂದ ಸಾಲದು. ಹಾಗಾಗಿ ಅತ್ಯುತ್ತಮವಾಗಿ ಮೂಡಿ ಬರುವ ಮೂರು ಚಿತ್ರಗಳಿಗೆ ತಲಾ 50 ಲಕ್ಷ ರೂ. ನೀಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಟ್ಟು 18 ವಿಭಾಗಗಳಲ್ಲಿ 240 ಚಿತ್ರಗಳು ಪ್ರದರ್ಶನ ಕಂಡಿದ್ದು, ಕನ್ನಡದ 40 ಚಿತ್ರಗಳು ಸೇರಿವೆ. ಈ ಪೈಕಿ ನಾಲ್ಕು ವಿಭಾಗಳಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ನೀಡಲಾಯಿತು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೀಡುವ ಬೆಸ್ಟ್ ಏಶಿಯನ್ ಚಲನಚಿತ್ರ ಪ್ರಥಮ ಪ್ರಶಸ್ತಿ ಏ ಫಾದರ್ ವಿಲ್ ಪಡೆದುಕೊಂಡಿತ್ತು. ದ್ವಿತೀಯ ಪ್ರಶಸ್ತಿ ಕೇರಳದ ಕಾಡು ಪೋಕುನ್ನ ನೇರಮ್ ಹಾಗೂ ತೃತೀಯ ಪ್ರಶಸ್ತಿಯನ್ನು ಕನ್ನಡದ ಹರಿಕಥಾ ಪರಸಂಗ ಚಿತ್ರ ಪಡೆಯಿತು.
ಕನ್ನಡ ಚಲನಚಿತ್ರ ಅಕಾಡಮಿ ಕೊಡುವ 2016 ಅತ್ಯುತ್ತಮ ಕನ್ನಡ ಚಲನಚಿತ್ರ ರಾಮ ರಾಮ ರೇ ಪ್ರಥಮ, ಪಲ್ಲಟ ದ್ವಿತೀಯ, ಗೋಧಿಬಣ್ಣ ಸಾಧಾರಣ ಮೈಕಟ್ಟು ತೃತೀಯ ಸ್ಥಾನ ಗಿಟ್ಟಿಸಿಕೊಂಡವು. ಪ್ರಥಮ ಸ್ಥಾನಕ್ಕೆ 3 ಲಕ್ಷ ನಗದು, ದ್ವಿತೀಯ 2ಲಕ್ಷ ರೂ, ತೃತೀಯ 3ಲಕ್ಷರೂ. ನಗದು ಹೊಂದಿದ್ದು ಪ್ರಶಸ್ತಿ, ಫಲಕಗಳನ್ನೊಳಗೊಂಡಿದೆ.

ಉತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ದೊಡ್ಮನೆ ಹುಡುಗ ಪ್ರಥಮ, ಜಗ್ಗುದಾದ ದ್ವಿತೀಯ, ಕೋಟಿಗೊಬ್ಬ 2 ತೃತೀಯ ಬಹುಮಾನ ಪಡೆದುಕೊಂಡವು.

 ಅರಮನೆ ಆವರಣದಲ್ಲಿ ನಿರ್ಮಿಸಲಾಗಿದ್ದ ಹಂಪಿಯ ವಿಜಯ ವಿಠಲ ವೇದಿಕೆಯಲ್ಲಿ ನಡೆದ ವರ್ಣರಂಜಿತ ಸಮಾರಂಭಕ್ಕೆ ದೇಶದ ವಿವಿಧೆೆಡೆಗಳಿಂದ ಆಗಮಿಸಿದ್ದ ಸಿನಿಪ್ರಿಯರು, ಕನ್ನಡ ಚಲನಚಿತ್ರದ ನಟ ನಟಿಯರು ಸೇರಿಂದಂತೆ ಸಾವಿರಾರು ಮಂದಿ ಸಾಕ್ಷಿಯಾದರು.
ಸಮಾರಂಭದಲ್ಲಿ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಶಾಸಕ ಸೋಮಶೇಖರ್, ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News