​ಬಿಜೆಪಿಗೆ ಅಮರ್‌ ಸಿಂಗ್ 'ಅಧಿಕೃತ' ಸೇರ್ಪಡೆ?

Update: 2017-02-12 04:29 GMT

ಹೊಸದಿಲ್ಲಿ, ಫೆ.12: ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್, ಸದ್ಯದಲ್ಲೇ ತಾನು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಪ್ರಕಟಿಸಿದ್ದಾರೆ.
"ಬಿಜೆಪಿ ಸೇರುವ ಬಗ್ಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಗೆಂದು ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳುತ್ತಿಲ್ಲ'' ಎಂದು ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಮುಲಾಯಂ ಸಿಂಗ್ ಕುಟುಂಬ ಕಲಹ ರಾಜಕೀಯ ಕಲಹವಾಗಿ ಮಾರ್ಪಟ್ಟ ಬಳಿಕ ಪಕ್ಷದಿಂದ ದೂರ ಉಳಿದಿರುವ ಅಮರ್‌ ಸಿಂಗ್, "ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್ ಪ್ರಚಾರಕರಾಗಿರಬಹುದು. ಆದರೆ ಅದೇ ವೇಳೆಗೆ ಅವರು ಚುನಾವಣೆಯನ್ನು ಅತ್ಯಧಿಕ ಅಂತರದಿಂದ ಗೆದ್ದಿದ್ದಾರೆ ಎನ್ನುವುದನ್ನು ಮರೆಯಬಾರದು" ಎಂದು ಹೇಳಿದ್ದಾರೆ.

"ಮೋದಿ ಬಿಜೆಪಿಯ ಪ್ರಧಾನಿ ಅಲ್ಲ; ದೇಶದ ಪ್ರಧಾನಿ. ಅವರಿಗೆ ಕುಟುಂಬ ಅಥವಾ ಮಕ್ಕಳು ಇಲ್ಲ. ಆದ್ದರಿಂದ ಅವರು ಅಧಿಕಾರದ ಚಕ್ರಾಧಿಪತ್ಯ ಸ್ಥಾಪಿಸುವುದಿಲ್ಲ" ಎಂದು ಸೂಚ್ಯವಾಗಿ ಹೇಳಿದರು. ಮುಲಾಯಂ ಸಿಂಗ್ ಅವರೂ ರಾಜಕೀಯ ಚಕ್ರಾಧಿಪತ್ಯ ಹೊಂದಿಲ್ಲ. ಮೋದಿ ಹಾಗೂ ಮುಲಾಯಂ ಇಬ್ಬರೂ ಸಮಾನರು ಎಂದು ಬಣ್ಣಿಸಿದರು.

"ಇನ್ನೊಂದೆಡೆ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿ ಹೀಗೆ ವಂಶ ಪಾರಂಪರ್ಯದ ಆಡಳಿತ ನಡೆಸುತ್ತಲೇ ಬಂದಿದ್ದಾರೆ. ಆದರೆ ಮೋದಿ ಅಂಥ ಸಂಪ್ರದಾಯ ಹೊಂದಿಲ್ಲ ಎಂದು ನುಡಿದರು.

ಮೋದಿ ಅಥವಾ ಮುಲಾಯಂ ಜತೆಗೆ ಇರುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ನಾನು ಯಾವಾಗಲೂ ಅಮರ್ ಸಿಂಗ್ ಅವರ ಜತೆಗೇ ಇದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News