ಕೇರಳ ಸರಕಾರದ ಪ್ರಕಾರ ಈ ಮೂರು ಮದ್ಯವಲ್ಲ !

Update: 2017-02-14 07:23 GMT

ತಿರುವನಂತಪುರಂ,ಫೆ.14: ಕಳ್ಳು, ಬಿಯರ್, ವೈನ್‌ಗಳನ್ನು ಮದ್ಯವೆಂದು ಪರಿಗಣಿಸಬಾರದೆಂದು ಕೇರಳ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಸಲ್ಲಿಸಿದೆ. ಹೆದ್ದಾರಿ ಬದಿ ಮದ್ಯದಂಗಡಿಯನ್ನು ಬೇರೆಡೆಗೆ ವರ್ಗಾಯಿಸಬೇಕೆನ್ನುವ ಆದೇಶದಲ್ಲಿ ಸ್ಪಷ್ಟತೆ ಬೇಕೆಂದು ರಾಜ್ಯ ಸರಕಾರ ಸುಪ್ರೀಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದೆ. ಶೇಂದಿ, ಬಿಯರ್, ವೈನ್ ಮದ್ಯವಲ್ಲ ಎಂದು ಕೇರಳ ಸರಕಾರದ ನಿಲುವಾಗಿದ್ದು , ಇದೇ ವಿಷಯದಲ್ಲಿ ಬೆವ್‌ಕೊ ಕೂಡಾ ಸುಪ್ರೀಂಕೋರ್ಟಿಗೆ ಅರ್ಜಿಸ ಲ್ಲಿಸಲಿದೆ.

   ಹೆದ್ದಾರಿ ಪಕ್ಕದ ಮದ್ಯದಂಗಡಿಗಳನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟು ನೀಡಿದ ತೀರ್ಪಿನಲ್ಲಿ ಬಾರುಗಳು, ಶೇಂದಿ ಅಂಗಡಿಗಳು ಸಹಿತ ಎಲ್ಲ ಮದ್ಯದಂಗಡಿಗಳು ಸೇರಿದೆಯೇ ಎಂದು ವಿವಾದ ಸೃಷ್ಟಿಯಾಗಿದೆ. ಈ ಹಿಂದೆ ಕೇರಳ ಸರಕಾರದ ಕಾನೂನು ಕಾರ್ಯದರ್ಶಿ ಬಿ.ಜಿ. ಹರೀಂದ್ರನಾಥ್, ಬಾರ್‌ಗಳು, ಶೇಂದಿ ಅಂಗಡಿಗಳ ಸಹಿತ ಎಲ್ಲ ಮದ್ಯದಂಗಡಿಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಿಂದ 500 ಮೀಟರ್ ಒಳಪ್ರದೇಶಕ್ಕೆ ವರ್ಗಾಯಿಸಬೇಕಾಗಿದೆ ಎಂದು ರಾಜ್ಯ ಸರಕಾರಕ್ಕೆ ಕಾನೂನು ಸಲಹೆ ನೀಡಿದ್ದರು.

  ಈ ಬಗ್ಗೆ ಕೇರಳ ಸರಕಾರ ಅಡ್ವೊಕೇಟ್ ಜನರಲ್ ಸಿ.ಪಿ. ಸುಧಾಕರ ಪ್ರಸಾದ್‌ರಿಂದ ಕಾನೂನು ಸಲಹೆ ಕೇಳಿತ್ತು. ಅವರು ಸುಪ್ರೀಂಕೋರ್ಟನ್ನೆ ಸಂಪರ್ಕಿಸಲು ಸಲಹೆ ನೀಡಿದ್ದರು. ಇದಕ್ಕಿಂತ ಮೊದಲು ಅಸ್ಸಾಂ,ಪುದುಚೇರಿ, ಮಹಾರಾಷ್ಟ್ರ ಸಹಿತ ಒಂಬತ್ತು ರಾಜ್ಯಗಳು ಇದೇರೀತಿ ಸ್ಪಷ್ಟತೆ ಕೇಳಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿವೆ. ಒಂದು ವಾರದೊಳಗೆ ಜಸ್ಟಿಸ್ ಚಂದ್ರಚೂಡರಿರುವ ಸುಪ್ರೀಂಕೋರ್ಟಿನ ವಿಶೇಷ ಪೀಠ ವಿಷಯವನ್ನು ವಿವರವಾಗಿ ಪರಿಶೀಲಿಸುತ್ತದೆ.

ಮದ್ಯದಂಗಡಿಯ ತೆರವಿನ ಸಮಯ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಬೇಕೆಂದು ಬೆವ್‌ಕೊ ಸುಪ್ರೀಂಕೋರ್ಟನ್ನು ವಿನಂತಿಸಲಿದೆ. ಸುಪ್ರೀಂಕೋರ್ಟಿನ ತೀರ್ಪು ಪ್ರಕಾರ ಬೇವ್‌ಕೊ 180ರಷ್ಟು ಔಟ್‌ಲೆಟ್‌ಗಳನ್ನು ಬೇರೆಡೆಗೆ ವರ್ಗಾಯಿಸಬೇಕಾಗುತ್ತದೆ. ಈವರೆಗೆ 30 ಔಟ್‌ಲೆಟ್‌ಗಳನ್ನು ಬೇರೆಡೆಗೆ ವರ್ಗಾಯಿಸಿದೆ. ಒಂಬತ್ತು ಔಟ್‌ಲೆಟ್‌ಗೆ ಪಂಚಾಯತ್ ಸ್ಟಾಪ್ ಮೆಮೊ ನೀಡಿದೆ. ವಿವಿಧ ಪ್ರದೇಶಗಳಲ್ಲಿ ಬಲವಾದ ವಿರೋಧ ಇರುವ ಕಾರಣದಿಂದ ಬೆವರೇಜಸ್ ಔಟ್‌ಲೆಟ್‌ಗಳನ್ನು ಬೇರೆಡೆಗೆ ವರ್ಗಾಯಿಸಲು ಎಂಟು ತಿಂಗಳ ಕಾಲಾವಕಾಶ ಬೇಕಿದೆ ಎಂದು ಬೆವ್‌ಕೊ ಸುಪ್ರೀಂಕೋರ್ಟಿಗೆ ತಿಳಿಸಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News