ಹಾಲನ್ನು ಮಿಲ್ಕ್‌ಕುಕರ್‌ನಲ್ಲಿ ಕಾಯಿಸಿದರೇಕೆ ಉಕ್ಕುವುದಿಲ್ಲ...?

Update: 2017-02-17 11:05 GMT

ಸಾದಾ ಪಾತ್ರೆಯಲ್ಲಿ ಹಾಲು ಕಾಯಿಸುವಾಗ ಅದು ಉಕ್ಕಿ ಮೇಲಕ್ಕೆ ಬರುತ್ತದೆ. ತಕ್ಷಣ ಬೆಂಕಿಯನ್ನು ಆರಿಸದಿದ್ದರೆ ಹಾಲು ಹೊರಕ್ಕೂ ಉಕ್ಕುತ್ತದೆ. ಅದೇ ಮಿಲ್ಕ್‌ಕುಕರ್‌ನಲ್ಲಿ ಹಾಲನ್ನು ಕಾಯಿಸುವಾಗ ಅದು ಮೇಲಕ್ಕೆ ಉಕ್ಕುವುದಿಲ್ಲ......ಏಕೆ ಗೊತ್ತಾ?

ಇದಕ್ಕೆ ಉತ್ತರ ಕಂಡುಕೊಳ್ಳುವ ಮುನ್ನ ಹಾಲು ಏನೇನನ್ನು ಒಳಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಲು ಶೇ.85ಕ್ಕೂ ಅಧಿಕ ನೀರನ್ನು ಹೊಂದಿದ್ದು, ಕೊಬ್ಬು,ಪ್ರೋಟಿನ್,ಸಕ್ಕರೆ ಮತ್ತು ಖನಿಜಾಂಶಗಳು ಇತರ ಘಟಕಗಳಾಗಿವೆ. ಹೀಗಾಗಿ ಹಾಲಿನ ಕುದಿಯುವ ಬಿಂದು ನೀರಿನ ಕುದಿಯುವ ಬಿಂದು(100 ಡಿಗ್ರಿ ಸೆಂಟಿಗ್ರೇಡ್) ವಿಗಿಂತ ಸುಮಾರು ಅರ್ಧ ಡಿ.ಸೆಂ.ಹೆಚ್ಚಿರುತ್ತದೆ.

ಆದರೆ ಹಾಲು ಕುದಿಯುವ ಮುನ್ನ ಕಡಿಮೆ ಸಾಂದ್ರತೆಯನ್ನು ಹೊಂದಿರುವ ಕೊಬ್ಬು ಮತ್ತು ಪ್ರೋಟಿನ್‌ನಂತಹ ಘಟಕಗಳು ಭಾಗಶಃ ಪ್ರತ್ಯೇಕಗೊಳ್ಳುತ್ತವೆ ಮತ್ತು ಕೆನೆಯ ರೂಪದಲ್ಲಿ ಮೇಲ್ಭಾಗದಲ್ಲಿ ತೇಲುತ್ತಿರುತ್ತವೆ. ಈ ಕೆನೆ ಪದರವು ಸಾಮಾನ್ಯವಾಗಿ ತನ್ನ ಮೂಲಕ ನೀರಿನ ಆವಿಯು ಹೊರಕ್ಕೆ ಹೋಗಲು ಅವಕಾಶ ನೀಡುವುದಿಲ್ಲ.

 ಹಾಲನ್ನು ಸಾದಾ ಪಾತ್ರೆಯಲ್ಲಿ ಕುದಿಸಿದಾಗ ಅದರ ಉಷ್ಣತೆಯು ಕುದಿಯುವ ಬಿಂದುವಿಗಿಂತಲೂ ಹೆಚ್ಚಾಗುತ್ತದೆ ಮತ್ತು ಕೆನೆ ಪದರದ ಕೆಳಗೆ ಭಾರೀ ಪ್ರಮಾಣದಲ್ಲಿ ನೀರಿನ ಆವಿಯು ಉತ್ಪತ್ತಿಯಾಗುತ್ತದೆ ಮತ್ತು ಒತ್ತಡದಿಂದಾಗಿ ಮೇಲಿರುವ ಕೆನೆ ಪದರವು ಉಬ್ಬತೊಡಗುತ್ತದೆ. ಇನ್ನಷ್ಟು ಉಬ್ಬಲು ಪಾತ್ರೆಯಲ್ಲಿ ಸ್ಥಳಾವಕಾಶ ಸಿಗದಿದ್ದಾಗ ಅದು ಪಾತ್ರೆಯಿಂದ ಹೊರಕ್ಕೆ ಚೆಲ್ಲುತ್ತದೆ.

 ಇನ್ನೊಂದೆಡೆ ಮಿಲ್ಕ್ ಕುಕರ್‌ನಲ್ಲಿ ಹಾಲನ್ನು ಕಾಯಿಸಿದಾಗ ಇವೆಲ್ಲ ಪ್ರಕ್ರಿಯೆಗಳು ನಡೆಯುವುದಿಲ್ಲ. ಮಿಲ್ಕ್ ಕುಕರ್ ಹೊರಮೈ ಮತ್ತು ಒಳಮೈ ಹೊಂದಿದ್ದು, ಇವೆರಡರ ನಡುವಿನ ತೆರವು ಜಾಗದಲ್ಲಿ ನೀರಿರುತ್ತದೆ ಮತ್ತು ಈ ನೀರು ಹಾಲಿಗಿಂತ ಕಡಿಮೆ ಉಷ್ಣತೆಯಲ್ಲಿ ಕುದಿಯುತ್ತದೆ. ನೀರಿನ ಕುದಿಯುವಿಕೆ ಮುಂದುವರಿದಂತೆ ಪೂರೈಕೆಯಾಗುವ ಬಿಸಿಯು 100 ಡಿ.ಸೆಂ.ಉಷ್ಣತೆಯಲ್ಲಿ ದ್ರವ ನೀರನ್ನು ಆವಿಯನ್ನಾಗಿ ಪರಿವರ್ತಿಸಲು ಬಳಕೆಯಾಗುತ್ತದೆ ಮತ್ತು ಕುಕರ್ ಪಾತ್ರೆಯ ಉಷ್ಣತೆ 100 ಡಿ.ಸೆಂ.ನಲ್ಲಿಯೇ ಇರುತ್ತದೆ. ಪಾತ್ರೆಯಲ್ಲಿ ಕುದಿಸಿದ ಸಂದರ್ಭದಲ್ಲಿ ಕಂಡು ಬರುವ ಕೆನೆ ಪದರ ಇಲ್ಲಿಯೂ ಸೃಷ್ಟಿಯಾಗುತ್ತದೆ.

ಆದರೆ ಉಷ್ಣತೆಯು ಹಾಲಿನ ಕುದಿಯುವ ಬಿಂದುವಿಗಿಂತ ಕಡಿಮೆಯಿರುವುದರಿಂದ ಅದು ಆವಿಯ ಗುಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುವುದಿಲ್ಲ ಮತ್ತು ಕೆನೆ ಪದರವು ಉಬ್ಬುವುದಿಲ್ಲ. ಹೀಗಾಗಿ ಹಾಲು ಹೊರಕ್ಕೆ ಉಕ್ಕುವುದಿಲ್ಲ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News