ಕರ್ಣಾಟಕ ಬ್ಯಾಂಕ್ ನಡೆದು ಬಂದ ದಾರಿ

Update: 2017-02-17 14:04 GMT

ರಾಷ್ಟ್ರದ ಬ್ಯಾಂಕಿಂಗ್ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. 1906 ರಿಂದ 1945ರ ಅವಧಿಯಲ್ಲಿ, ವಿವಿಧ ಸ್ತರದ ಸುಮಾರು 22 ಬ್ಯಾಂಕ್‌ಗಳಿಗೆ ಜನ್ಮನೀಡಿದ ಜಿಲ್ಲೆ ದಕ್ಷಿಣ ಕನ್ನಡ ಮೊದಲು ಮದ್ರಾಸ್ ಪ್ರಾಂತ್ಯದ ಅಧೀನದಲ್ಲಿದ್ದು ಅನಂತರ ಕಾಸರಗೋಡು ಮತ್ತು ಅಮೀನದೇವಿ ದ್ವೀಪಗಳನ್ನು ಹೊರತುಪಡಿಸಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು. ಈ ಜಿಲ್ಲೆಯ ಅಭಿವೃದ್ಧಿಯ ನಕಾಶೆಯಲ್ಲಿ, ಜಿಲ್ಲೆಯ ಜನರಲ್ಲಿ ಜನ್ಮತ: ಮೈದಳೆದಿರುವ ಸಂಶೋಧನಾತ್ಮಕ ಮತ್ತು ಸಾಹಸೀ ಪ್ರವೃತ್ತಿ ಮತ್ತು ಇವರ ಔದ್ಯೋಗಿಕ ಮನೋಭಾವ ಎದ್ದು ಕಾಣುವಂತಹುದು.

ಇಪ್ಪತ್ತನೇ ಶತಮಾನದ ಆರಂಭವು ಜಿಲ್ಲೆಯಲ್ಲಿ ದೇಶಭಕ್ತಿಯ ಹೊಸ ಹುರುಪು, ಹೊಸ ಕಂಪನ್ನು ಜಿಲ್ಲೆಯ ನೆಲದ ಕಣಕಣದಲ್ಲಿ ಸೂಸಿತು. ಸ್ವದೇಶೀ ಚಳುವಳಿಯ ಹೊಸ ಗಾಳಿ ಜಿಲ್ಲೆಯಲ್ಲಿ ಬಿರುಗಾಳಿಯಂತೆ ಆವರಿಸಿತು. ಅಗಾದ ಉತ್ಸಾಹದೊಂದಿಗೆ ಅನೇಕ ವ್ಯಾಪಾರಿಗಳು, ಕೃಷಿಕರು, ವೈದ್ಯರು ಹಾಗೂ ವಕೀಲರು ಜಿಲ್ಲೆಯಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಕನಸಿಗೆ ನೀರೆರೆದರು. ಸರಿಸುಮಾರು ಇದೇ ಸಮಯದಲ್ಲಿ ಮಹಾತ್ಮಗಾಂಧೀಜಿಯವರ ಶಿಷ್ಯರಲ್ಲೊಬ್ಬರಾದ ಶ್ರೀ ಕಾರ್ನಾಡು ಸದಾಶಿವರಾಯರು ಜಿಲ್ಲೆಯ ಜನಸಾಮಾನ್ಯರ ಹೃದಯದಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದರು. ರಾಷ್ಟ್ರೀಯತೆಯ ಈ ಕಿಡಿ ಪ್ರಾಜ್ವಲ್ಯಮಾನವಾಗುತ್ತಾ ಮುಂದೆ 1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದಲ್ಲಿ ರಾಷ್ಟ್ರಭಕ್ತಿಯ ದೀವಟಿಗೆಯಾಗಿ ಉಜ್ವಲಿಸಿತು.

ಇದೇ ಸಮಯಘಟ್ಟದಲ್ಲಿ ಜಿಲ್ಲೆಯ ರೈತಾಪಿ ವರ್ಗ, ಹೋಟೆಲ್ ಉದ್ಯಮ, ಸಣ್ಣ ವ್ಯಾಪಾರಸ್ಥರು ಇದೇ ಮುಂತಾದ ಅವಶ್ಯಕ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವಂತೆ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಜಿಲ್ಲೆಯ ದ್ರಾವಿಡ ಬ್ರಾಹ್ಮಣ ಸಮುದಾಯದ ಪ್ರಮುಖ ವಕೀಲರು ಮತ್ತು ವ್ಯಾಪಾರಸ್ಥರ ಒಂದು ಗುಂಪು ನಿರ್ಧರಿಸಿತು. ಮದ್ರಾಸ್ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಡಾ. ಯು. ರಾಮರಾವ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ತುಂಬಿದ ಸಭೆಯೊಂದರಲ್ಲಿ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಿರ್ಧಾರವನ್ನು ಫೆಬ್ರವರಿ 18, 1924ರಂದು ಜಿಲ್ಲೆಯ ಕಿರಿಯ ಕಂಪೆನಿ ನೋಂದಣಿ ಅಧಿಕಾರಿಗಳಿಂದ ಸ್ಥಾಪನಾ ದೃಡೀಕರಣ ಪತ್ರ (ಅಡಿಣಜಿಛಿಚಿಣಟಿ ಜಿ ಟಿಛಿಡಿಠಿಣಚಿಡಿಟಿ) ವೊಂದನ್ನು ಪಡೆಯುವ ಮೂಲಕ ಕಾರ್ಯಗತ ಗೊಳಿಸಲಾಯಿತು. ಈ ಮಹಾನ್ ಚೇತನಗಳ ಕನಸಿನ ಕೂಸು ಕರ್ಣಾಟಕ ಬ್ಯಾಂಕ್ ಜನ್ಮ ತಾಳಿತು. ಈ ಮಹಾನ್ ಚೇತನಗಳ ದೂರದೃಷ್ಟಿ ಎಷ್ಟು ನಿಖರವಾಗಿತ್ತು ಎಂದರೆ, ಮುಂದೆ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗುವುದನ್ನು ಅವರು ತಮ್ಮ ಕನಸಿಗೆ ಕರ್ಣಾಟಕ ಬ್ಯಾಂಕ್ ಎಂದು ನಾಮಕರಣ ಮಾಡುವುದರ ಮೂಲಕ ಗ್ರಹಿಸಿದ್ದರು!

  ಬ್ಯಾಂಕಿನ ಒಟ್ಟು ಬಂಡವಾಳವನ್ನು ರೂ. 20ರ ಮುಖಬೆಲೆಯ 5 ಲಕ್ಷ ಶೇರುಗಳಲ್ಲಿ ರೂ. ಒಂದು ಕೋಟಿಯನ್ನಾಗುವಂತೆ ಮಾಡಲಾಯಿತು. ಕರ್ಣಾಟಕ ಬ್ಯಾಂಕಿನ ಪ್ರಪ್ರಥಮ ಶೇರುದಾರರಾಗಿದ್ದವರು, ಶ್ರೀ ನೆಲ್ಲಿಕಾಯಿ ವೆಂಕಟರಾವ್, ಶ್ರೀ ಪೇಜಾವರ ನಾರಾಯಣಾಚಾರ್ಯ, ಶ್ರೀ ಕಲ್ಮಾಡಿ ಲಕ್ಷ್ಮಿನಾರಾಯಣ ರಾವ್, ಶ್ರೀ ಬಿ.ಆರ್.ವ್ಯಾಸರಾಯ ಆಚಾರ್, ಶ್ರೀ ಪಾಂಗಾಳ ಸುಬ್ಬರಾವ್, ಶ್ರೀ ಉಡುಪಿ ವೆಂಕಟರಾವ್, ಶ್ರೀ ಶೇಷ ಭಟ್ ಭಿಢೆ, ಶ್ರೀ ನರಿಕೊಂಬು ರಾಮರಾವ್, ಶ್ರೀ ಕಕ್ಕುಂಜೆ ಸದಾಶಿವ ಅಡಿಗ.

 ಈ ಒಂಬತ್ತು ಮಹನೀಯರು ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿ ರಾರಾಜಮಾನರಾದರು. ಬ್ಯಾಂಕಿನ ಮುಖ್ಯ ಕೇಂದ್ರ ಸ್ಥಾನ ಮತ್ತು ಮೊದಲ ಶಾಖೆಯಾಗಿ ಶ್ರೀ ಶೇಷ ಭಟ್ ಭಿಢೆಯವರ ಡೊಂಗರಕೇರಿ ಮಂಗಳೂರಿನ ನಿವಾಸ ಗುರುತಿಸಿಕೊಂಡಿತು (ಈ ನಿವಾಸವನ್ನು ಮುಂದೆ 1932ರಲ್ಲಿ ಬ್ಯಾಂಕ್ ರೂ. 9000/-ಕ್ಕೆ ಖರೀದಿಸಿತು). ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಮಂಗಳೂರಿನ ಬಾರ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಹೆಸರು ಮಾಡಿದ್ದ ಮಂಗಳೂರಿನ ಪ್ರಖ್ಯಾತ ವಕೀಲರಾಗಿದ್ದ ಶ್ರೀ ಬಿ.ಆರ್.ವ್ಯಾಸರಾಯ ಆಚಾರ್ ಇವರು ಘನತೆಯನ್ನು ತಂದರು. ಹೈಕೋರ್ಟ್ ವಕೀಲರಾದ ಶ್ರೀ ಪಿ. ವಾಸುದೇವರಾಯರು ಬ್ಯಾಂಕಿನ ಮೊದಲ ಕಾನೂನು ಸಲಹೆಗಾರರಾಗಿ ನಿಯುಕ್ತಿಗೊಂಡರು. ಲೆಕ್ಕಪರಿಶೋಧಕರಾಗಿ ಮದ್ರಾಸಿನ ಶ್ರೀ ಎಂ.ಕೆ.ದಾಂಡೇಕರ್ ಹಾಗೂ ಬ್ಯಾಂಕಿನ ಪ್ರಥಮ ಕಾರ್ಯದರ್ಶಿಯಾಗಿ ಪಾಂಗಾಳ ರಾಮಚಂದ್ರರಾಯರು ಆಯ್ಕೆಯಾದರು. ಬ್ಯಾಂಕ್ ತನ್ನ ಮೊದಲ ವ್ಯವಹಾರವನ್ನು ಮೇ 23, 1924ರಂದು ಮಂಗಳೂರಿನ ಡೊಂಗರಕೇರಿಯಲ್ಲಿ ಯಶಸ್ವಿಯಾಗಿ ಪ್ರಾರಂಭಿಸಿತು. ಬ್ಯಾಂಕಿನ ಮೊದಲ ವ್ಯವಸ್ಥಾಪಕರಾಗಿ ಕಲ್ಮಾಡಿ ಗೋಪಾಲಕೃಷ್ಣರಾಯರು ಗುರುತಿಸಿಕೊಳ್ಳುತ್ತಾರೆ.

ಬ್ಯಾಂಕ್ ತನ್ನ ಮೊದಲ ವ್ಯವಹಾರ ವರ್ಷದ ಅಂತ್ಯದಲ್ಲಿ ರೂ. 68,000/- ಠೇವಣಿ ಹಾಗೂ ರೂ. 1,22,000/- ಮುಂಗಡವನ್ನು ದಾಖಲಿಸಿತು. (ಬ್ಯಾಂಕಿನ ಸಿ.ಡಿ.ಅನುಪಾತ ಶೇ 178 ರಷ್ಟು ಎತ್ತರದಲ್ಲಿತ್ತು!). ಸ್ವೀಕೃತ ಪಾಲು ಬಂಡವಾಳ ರೂ. 54,000/- ಮತ್ತು ನಿವ್ವಳ ಲಾಭ ರೂ. 4,000/- ವಾಗಿತ್ತು. ಬ್ಯಾಂಕ್ ತನ್ನ ಮೊದಲ ವ್ಯವಹಾರ ವರ್ಷದ ಅಂತ್ಯಕ್ಕೆ ಶೇರುದಾರರಿಗೆ ಶೇ. 6.25ರಷ್ಟು ಲಾಭಾಂಶವನ್ನು ಘೋಷಿಸಿತು. ಹೊಸ ಶಾಖೆಗಳನ್ನು ತೆರೆಯುವುದು ಸುಲಭ ಸಾಧ್ಯವಾಗಿದ್ದರೂ ಕೂಡ, ಬ್ಯಾಂಕ್ ತನ್ನ ಡೊಂಗರಕೇರಿಯ ಶಾಖೆಯಿಂದಲೇ 1930ರ ವರೆಗೆ ಕಾರ್ಯಾಚರಿಸಿತು.

1930ರಲ್ಲಿ ಬ್ಯಾಂಕ್ ತನ್ನ ದ್ವಿತೀಯ ಶಾಖೆಯನ್ನು ಮದ್ರಾಸ್‌ನ ಜಾರ್ಜ್ ಟೌನ್ (ಈಗಿನ ತಂಬುಚೆಟ್ಟಿ ಬೀದಿ)ನಲ್ಲಿ ಪ್ರಾರಂಭಿಸಿತು. ಆಗ ಬ್ಯಾಂಕಿನ ಠೇವಣಿ ರೂ. 5,44,000/- ಮತ್ತು ಮುಂಗಡ ರೂ. 5,69,000/- ದಷ್ಟು ಎತ್ತರಕ್ಕೆ ಬೆಳೆದಿತ್ತು (31.12.1929ರ ಅಂತ್ಯಕ್ಕೆ). ಬ್ಯಾಂಕ್ 1929ರಲ್ಲಿ ರೂ. 16,000/- ನಿವ್ವಳ ಲಾಭವನ್ನು ದಾಖಲಿಸಿ ಶೇರುದಾರರಿಗೆ ಶೇ. 8ರ ಲಾಭಾಂಶವನ್ನು ಘೋಷಿಸಿತು.

ಮದ್ರಾಸ್‌ನಲ್ಲಿ ತನ್ನ ಶಾಖೆಯನ್ನು ತೆರೆಯುವ ಮೂಲಕ, ಅಲ್ಲಿ ತನ್ನ ಶಾಖೆಯನ್ನು ತೆರೆದ ಪ್ರಪ್ರಥಮ ದಕ್ಷಿಣ ಭಾರತೀಯ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ಯಾಂಕ್ ತನ್ನ ಮೂರನೇ ಶಾಖೆಯನ್ನು 1934ರಲ್ಲಿ ಉಡುಪಿಯ ರಥಬೀದಿಯಲ್ಲಿ ಪ್ರಾರಂಭಿಸಿತು. ಬ್ಯಾಂಕ್‌ನ ನಾಲ್ಕನೇ ಶಾಖೆ, ಸ್ಥಾಪಕ ನಿರ್ದೇಶಕರಾದ ಕಕ್ಕುಂಜೆ ಸದಾಶಿವ ಅಡಿಗರ ಹುಟ್ಟೂರಾದ ಕುಂದಾಪುರದಲ್ಲಿ 1937ರಲ್ಲಿ ಕಾರ್ಯಾರಂಭಿಸಿತು. 1939 ಇಸವಿಯ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ. 15.33 ಲಕ್ಷ ಹಾಗೂ ಮುಂಗಡ ರೂ. 14.98 ಲಕ್ಷದ ಮಟ್ಟವನ್ನು ಮುಟ್ಟಿತ್ತು. ಮುಂಗಡ ಸಿಂಹಪಾಲು ಚಿನ್ನದ ಅಡವಿನ ಸಾಲಕ್ಕೆ ಸಂದಿತ್ತು. ಇದೇ ವರ್ಷದಲ್ಲಿ ಬ್ಯಾಂಕ್ ರೂ. 25,000/- ನಿವ್ವಳ ಲಾಭ ಗಳಿಸಿ, ಶೇ. 8.5 ರ ಲಾಭಾಂಶವನ್ನು ಶೇರುದಾರರಿಗೆ ಹಂಚಿತು.

ಮುಂದಿನ ಏಳು ವರ್ಷಗಳಲ್ಲಿ ಅಂದರೆ 1944ರಲ್ಲಿ ತನ್ನ ಮತ್ತೆರಡು ಶಾಖೆಗಳನ್ನು ಪುತ್ತೂರು ಹಾಗೂ ಕಾರ್ಕಳದಲ್ಲಿ ತೆರೆಯಿತು. ಈ ಅವಧಿಯಲ್ಲಿ ಬ್ಯಾಂಕಿನ ಆಡಳಿತ ವರ್ಗ ಮತ್ತು ಕಾರ್ಯಾಚರಣೆಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಲಿಲ್ಲ. ಬ್ಯಾಂಕಿನ ಸಿಬ್ಬಂದಿ ವರ್ಗದಲ್ಲೂ ಹೆಚ್ಚಿನ ಏರುಪೇರು ಈ ಅವಧಿಯಲ್ಲಿ ಆಗಿರಲಿಲ್ಲ.

ಬ್ಯಾಂಕಿನ ಇತಿಹಾಸದಲ್ಲಿ 1945ನೇ ಇಸವಿ ಒಂದು ಅವಿಸ್ಮರಣೀಯ ವರ್ಷ. ಇದೇ ವರ್ಷ ಬ್ಯಾಂಕಿನ ಸ್ಥಾಪಕ ನಿರ್ದೇಶಕರಲ್ಲೊಬ್ಬರಾದ ಕಕ್ಕುಂಜೆ ಸದಾಶಿವ ಅಡಿಗರ ಮಗ, 31 ಹರೆಯದ ಕಕ್ಕುಂಜೆ ಸೂರ್ಯನಾರಾಯಣ ಅಡಿಗರು ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾದರು. ಬ್ಯಾಂಕಿನ ಸ್ಥಾಪಕ ನಿರ್ದೇಶಕ ಶ್ರೀ ಕಕ್ಕುಂಜೆ ಸದಾಶಿವ ಅಡಿಗರು ಇದೇ ವರ್ಷ ನಿಧನರಾದರು. ವರ್ಷದ ಅಂತ್ಯದಲ್ಲಿ ದಕ್ಷಿಣ ಕನ್ನಡದಲ್ಲಿನ ಐದು ಶಾಖೆಗಳೂ ಸೇರಿ ಒಟ್ಟು ಏಳು ಶಾಖೆಗಳನ್ನು ಬ್ಯಾಂಕ್ ಹೊಂದಿತ್ತು. ಬ್ಯಾಂಕಿನ ಒಟ್ಟು ಠೇವಣಿ ರೂ. 39.33 ಲಕ್ಷ ಮುಂಗಡ ಸಾಲ ರೂ. 20.81 ಲಕ್ಷ ಹಾಗೂ ನಿವ್ವಳ ಲಾಭ ರೂ. 0.22 ಲಕ್ಷದ ಏರುಗತಿಯನ್ನು ದಾಖಲಿಸಿತು.

ಭಾರತ ದೇಶವು 1947ರಲ್ಲಿ ಸ್ವಾತಂತ್ರ್ಯ ಪಡೆಯುವುದರೊಂದಿಗೆ ದೇಶದಲ್ಲಿ ರಾಜಕೀಯ ಯುಗಾಂತರವಾಯಿತು. ಇದರೊಂದಿಗೆ ದೇಶದ ಸಂಸ್ಥೆಗಳ ಮೇಲೆ ಸ್ವಲ್ಪ ಮಟ್ಟಿನ ಸರಕಾರಿ ನಿಯಂತ್ರಣವೂ ಪ್ರಾರಂಭವಾಯಿತು.

ಬ್ಯಾಂಕ್ ತನ್ನ ರಜತ ಜಯಂತಿ ವರ್ಷವನ್ನು 1949ರಲ್ಲಿ ರೂ. 0.75 ಲಕ್ಷ ನಿವ್ವಳ ಲಾಭ ಮತ್ತು ಶೇರುದಾರರಿಗೆ ಶೇ. 6.25ರ ಲಾಭಾಂಶ ಘೋಷಣೆಯ ಮೂಲಕ ಸಂಭ್ರಮದಿಂದ ಆಚರಿಸಿತು. 1949ರಲ್ಲಿ ಬ್ಯಾಂಕಿನ ಠೇವಣಿ ರೂ. 55.59ಲಕ್ಷ ಮತ್ತು ಮುಂಗಡ ರೂ. 39.39ಲಕ್ಷವನ್ನು ಮೀರಿತ್ತು ಹಾಗೂ ಬ್ಯಾಂಕ್ ಒಟ್ಟು 9 ಶಾಖೆಗಳನ್ನು ಹೊಂದಿತ್ತು. ಜಿಲ್ಲೆಯ ಹೊರಗಿನ ಶಾಖೆಗಳಲ್ಲಿ 1946ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾದ ಶಾಖೆ ಮತ್ತು 1947ರಲ್ಲಿ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಪ್ರಾರಂಭವಾದ ಶಾಖೆ ಸೇರ್ಪಡೆಯಾದವು.

ಬ್ಯಾಂಕಿನ ಆಡಳಿತದಲ್ಲಿ ಹೆಚ್ಚಿನ ವೃತ್ತಿಪರತೆ ಮತ್ತು ವ್ಯವಹಾರದಲ್ಲಿ ಕುಶಲತೆ ತರುವ ದೃಷ್ಟಿಯಿಂದ, ಆಗ ತಾನೆ ಮದ್ರಾಸಿನ ಮೆ ಪ್ರೇಸರ್ ಮತ್ತು ರಾಸ್ ಸಂಸ್ಥೆಯಲ್ಲಿ ಕಲಿತು ಲೆಕ್ಕಪರಿಶೋಧಕರಾಗಿ ತೇರ್ಗಡೆಯಾದ ಶ್ರೀ ಕೆ.ಎನ್.ಬಾಸ್ರಿ ಅವರನ್ನು 15-06-1979ರಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನೇಮಿಸಲಾಯಿತು. ಇದೇ ಸಮಯದಲ್ಲಿ ಶ್ರೀ ಬಿ.ಆರ್.ವ್ಯಾಸರಾಯ ಆಚಾರ್‌ರವರು ಬ್ಯಾಂಕಿನ ಒಬ್ಬರೇ ಅಂಶಕಾಲಿಕ ಅಧ್ಯಕ್ಷರಾಗಿದ್ದರು.

ಶ್ರೀ ಬಿ.ಆರ್.ವ್ಯಾಸರಾಯ ಆಚಾರ್‌ರವರು ತಮ್ಮ 34 ವರ್ಷಗಳ ಸುದೀರ್ಘ ಸೇವೆಯ ನಂತರ ಬ್ಯಾಂಕಿನ ಅಧ್ಯಕ್ಷರಾಗಿ 1958ರಲ್ಲಿ ನಿವೃತ್ತರಾದರು. ಇವರಿಂದ ತೆರವಾದ ಸ್ಥಾನವನ್ನು ತುಂಬಲು 1945ರಿಂದಲೂ ತಮ್ಮ ದಣಿವರಿಯದ ಸೇವೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಕೆ.ಎಸ್.ಎನ್. ಅಡಿಗರಿಗೆ ಹೊರತಾದ ವ್ಯಕ್ತಿ ಬೇರೊಬ್ಬರಿರಲಿಲ್ಲ. ಆದರೆ ಶ್ರೀ ಅಡಿಗರೂ ಕೂಡ, ಬ್ಯಾಂಕಿನ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕಿನ ಅಂಶಕಾಲಿಕ ಅಧ್ಯಕ್ಷರಾದರು. ಹಾಗಾಗಿ ಶ್ರೀ ಕೆ.ಎನ್ ಬಾಸ್ರಿಯವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರೆದರು. ತಮ್ಮ ಯಶಸ್ವೀ ವಕೀಲಿ ವೃತ್ತಿ ಮತ್ತು ರಾಜಕೀಯ ಕೆಲಸಕಾರ್ಯಗಳ ನಡುವೆಯೂ ಅಡಿಗರು ಬ್ಯಾಂಕಿನ ಅದೃಷ್ಟವನ್ನು ಹೊಳಪುಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇವರ ಶ್ರಮದ ಫಲವೋ ಎಂಬಂತೆ ಬ್ಯಾಂಕ್ 1959ರಲ್ಲಿ ಡಿದರ್ಜೆಯಿಂದ ಸಿದರ್ಜೆಗೆ ತೇರ್ಗಡೆಯಾಯಿತು. 1960ನೇ ದಶಕದ ಪ್ರಾರಂಭದೊಂದಿಗೆ ಬ್ಯಾಂಕ್, ಹಲವು ಸಣ್ಣ ಬ್ಯಾಂಕ್‌ಗಳನ್ನು ತನ್ನೊಳಗೆ ಸೇರ್ಪಡೆಗೊಳಿಸಿರು. 1960ರಲ್ಲಿ ಶೃಂಗೇರಿ ಶಾರದಾ ಬ್ಯಾಂಕ್ ಲಿ. ಮತ್ತು 1961 ರಲ್ಲಿ ಚಿತ್ರದುರ್ಗ ಬ್ಯಾಂಕ್ ಲಿ. ಗಳು ಕರ್ಣಾಟಕ ಬ್ಯಾಂಕ್‌ನಲ್ಲಿ ವಿಲೀನವಾದವು. ಇದರಲ್ಲಿ ಚಿತ್ರದುರ್ಗ ಬ್ಯಾಂಕ್ ಲಿ. ಮೈಸೂರು ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಯಾದ (1870) ಪ್ರತಿಷ್ಠಿತ ಬ್ಯಾಂಕ್ ಆಗಿತ್ತು. ಅಂತೆಯೇ ಬ್ಯಾಂಕ್ ಆಫ್ ಕರ್ನಾಟಕ 1966ರಲ್ಲಿ ಕರ್ಣಾಟಕಬ್ಯಾಂಕ್‌ನೊಟ್ಟಿಗೆ ವಿಲೀನಗೊಂಡಿತು.

ಇದೇ ವರ್ಷದಲ್ಲಿ ಬ್ಯಾಂಕಿನ ಪಾವತಿಸಲಾದ ಬಂಡವಾಳ (ಚಿಜ ಠಿ ಅಚಿಠಿಣಚಿಟ) ವನ್ನು ರೂ. 7.50 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಸಲಾಯಿತು. ಹೊಸ ಶಾಖೆಗಳನ್ನು ತೆರೆಯುವ ಕಾರ್ಯಸೂಚಿಯನ್ನು 1965ರ ನಂತರವೂ ಮುಂದುವರೆಸಲಾಯಿತು. ಬ್ಯಾಂಕ್ 1968ರಲ್ಲಿ ಸಿದರ್ಜೆಯಿಂದ ಬಿದರ್ಜೆಯ ಉನ್ನತ ಸ್ಥಾನಕ್ಕೆ ಏರಿತು.

ಬ್ಯಾಂಕ್ ತನ್ನ ಶಾಖೆಗಳ ಸಂಖ್ಯೆಯನ್ನು 1969ರ ಹೊತ್ತಿಗೆ 75ಕ್ಕೆ ಏರಿಸಿತು. ಒಟ್ಟು ಠೇವಣಿ ರೂ. 10 ಕೋಟಿಯ ಗೆರೆಯನ್ನು ದಾಟಿ ರೂ. 12.63 ಕೋಟಿಯಾಗಿತ್ತು. ಒಟ್ಟು ಮುಂಗಡ ರೂ. 8.90 ಕೋಟಿ, ನಿವ್ವಳ ಲಾಭ ರೂ. 3.05 ಲಕ್ಷವನ್ನು ದಾಖಲಿಸಿತು. ಬ್ಯಾಂಕಿನ ಸಿಬ್ಬಂದಿ ಸಂಖ್ಯೆ 672 ಆಗಿತ್ತು. ಶೃಂಗೇರಿ ಶಾರದಾ ಬ್ಯಾಂಕ್‌ನ್ನು ತನ್ನಲ್ಲಿ ವಿಲೀನಗೊಳಿಸುವ ಸಮಯದಲ್ಲಿ ಆ ಬ್ಯಾಂಕ್ ನಿರ್ವಹಿಸುತ್ತದ್ದ ನಿತ್ಯ ಉಳಿತಾಯ ಖಾತೆೆಯನ್ನು ಮಧುರ ಉಳಿತಾಯ ಖಾತೆಎಂದು ಮರುನಾಮಕರಣ ಮಾಡುವುದರ ಮೂಲಕ ಜನತೆಗೆ ವಿಸ್ತರಿಸಿ, ಬಹುಪಾಲು ಠೇವಣಿಯನ್ನು ಈ ಖಾತೆಯಡಿಯಲ್ಲಿ ಬ್ಯಾಂಕ್ ಸಂಗ್ರಹಿಸಿತು.

ಬ್ಯಾಂಕ್ 1970ನೇ ದಶಕಕ್ಕೆ ತನ್ನ ಚಟುವಟಿಕೆಗಳಲ್ಲಿ ಹೊಸ ಉನ್ನತಿಯನ್ನು ಸಾಧಿಸುವುದರ ಮೂಲಕ ಕಾಲಿಟ್ಟಿತು. 1970ನೇ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಪಾವತಿಸಲಾದ ಬಂಡವಾಳ ರೂ. 15 ಲಕ್ಷದಿಂದ ರೂ. 19.36 ಲಕ್ಷಕ್ಕೆ ಏರಿಕೆಯಾಗಿತ್ತು. 1971ನೇ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಠೇವಣಿ ರೂ. 19.09 ಕೋಟಿ, ಒಟ್ಟು ಮುಂಗಡ ರೂ. 11.79 ಕೋಟಿ ಮತ್ತು ನಿವ್ವಳ ಲಾಭ ರೂ. 4.78 ಲಕ್ಷವಾಗಿತ್ತು. ಮುಂಬೈನಲ್ಲಿ ಬ್ಯಾಂಕಿನ ಪ್ರಥಮ ಶಾಖೆ ಮುಂಬಯಿಯಲ್ಲಿ 1971ನೇ ಇಸವಿಯಲ್ಲಿ ಪ್ರಾರಂಭವಾಯಿತು. ಇದೇ ವರ್ಷದಲ್ಲಿ ಶ್ರೀಯುತ ಕೆ.ಎಸ್.ಎನ್. ಅಡಿಗರು ತಮ್ಮ ವಕೀಲಿ ವೃತ್ತಿ ಮತ್ತು ರಾಜಕೀಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬ್ಯಾಂಕಿನ ಪೂರ್ಣಕಾಲಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರು. ಶ್ರೀ ಕೆ.ಎನ್.ಬಾಸ್ರಿಯವರು ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಮುಂದುವರೆದರು. ಇದೇ ವರ್ಷದ ಅಂತ್ಯದ ಒಳಗೆ 22 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಶಾಖೆಗಳ ಸಂಖ್ಯೆ ಶತಕದ ಗಡಿಯನ್ನು ದಾಟಿ 109 ಶಾಖೆಗಳಾದವು. ಬ್ಯಾಂಕಿನ 100ನೇ ಶಾಖೆಯೆಂದು ಕರೆಸಿಕೊಂಡ ಕೀರ್ತಿ ಮೇಲ್‌ಪಾಲ್ (ಚಿಕ್ಕಮಗಳೂರು ಜಿಲ್ಲೆ) ಶಾಖೆಯದ್ದಾಯಿತು.
 

ಮುಂದಿನ ವರ್ಷ (1972) ಬ್ಯಾಂಕಿನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲಿನ ವರ್ಷವಾಗಿ ದಾಖಲಾಯಿತು. ಕೇಂದ್ರ ಸರಕಾರದ ರೈಲ್ವೇ ಮಂತ್ರಿಯಾದ ಶ್ರೀ ಟಿ.ಎ.ಪೈಯವರ ಅಮೃತಹಸ್ತದಿಂದ ಬ್ಯಾಂಕಿನ ನೂತನ ಕೇಂದ್ರ ಕಛೇರಿ ಮಂಗಳೂರಿನ ಕೊಡಿಯಾಲ್‌ಬೈಲಿನಲ್ಲಿ ಉದ್ಘಾಟಿಸಲ್ಪಟ್ಟಿತು.

ಬ್ಯಾಂಕ್ ಹೊಸ ಶಾಖೆಗಳನ್ನು ತೆರೆದು ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಕಾರ್ಯವನ್ನು 1970 ರ ದಶಕದಿಂದಲೇ ಪ್ರಾರಂಭಿಸಿತು. ಈ ದಶಕದ ಮೊದಲ ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಒಟ್ಟು 68 ಹೊಸ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಸಾಮರ್ಥ್ಯವನ್ನು ವಿಸ್ತರಿಸಿಕೊಂಡಿತು. ಇದರ ಪರಿಣಾಮವಾಗಿ ಬ್ಯಾಂಕ್ ತನ್ನ ಸುವರ್ಣ ಮಹೋತ್ಸವ ವರ್ಷವಾದ 1974ನೇ ಇಸವಿಯಲ್ಲಿ ರೂ. 33.14 ಕೋಟಿ ಠೇವಣಿ ಹಾಗೂ ರೂ. 22.09 ಕೋಟಿ ಮುಂಗಡ, 146 ಶಾಖೆಗಳು ಹಾಗೂ 1263 ಸಿಬ್ಬಂದಿ ವರ್ಗದವರೊಂದಿಗೆ ಬಲಿಷ್ಠ ಬ್ಯಾಂಕುಗಳಲ್ಲಿ ಅಗ್ರಣಿಯಾಗಿ ಗುರುತಿಸಿಕೊಂಡಿತು. ಬ್ಯಾಂಕಿನ ಇತಿಹಾಸದಲ್ಲಿ 1977ನೇ ಇಸವಿ ಅವಿಸ್ಮರಣೀಯ. ತನ್ನ ವ್ಯಕ್ತಿತ್ವವನ್ನು ನೇರ್ಪುಗೊಳಿಸುವ ದೃಷ್ಟಿಯಲ್ಲಿ ಮುಂದಡಿಯಿಟ್ಟ ಬ್ಯಾಂಕ್ ತನ್ನದೇ ಆದ ಛಾಪನ್ನು ವ್ಯವಹಾರ ಕ್ಷೇತ್ರದಲ್ಲಿ ಅಚ್ಚೊತ್ತಿತು. ಇದರ ಫಲವೇ ಇಂದು ನಮ್ಮ ಮುಂದಿರುವ ಬ್ಯಾಂಕಿನ ಚಿಹ್ನೆ. ಕರಾವಳಿಯ ಪ್ರಸಿದ್ಧ ಸಾಹಿತಿ, ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರ ಕಲ್ಪನಾ ಶಕ್ತಿಯ ಮೂಸೆಯಿಂದ ಮೈದಾಳಿದ ಚಿಹ್ನೆ, ಸ್ಥಿರತೆ, ಶಿಸ್ತು, ಸಾಮರಸ್ಯ ಹಾಗೂ ವಿಶ್ವಾಸದ ಸಂಕೇತವಾಗಿ ಗುರುತಿಸಿಕೊಂಡಿದೆ.

ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರವನ್ನು ಆರಂಭಿಸಿದ್ದು. ವಿದೇಶಿ ವಿನಿಮಯ ವ್ಯವಹಾರದ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಲಾಯಿತು (ಅನಂತರ ಈ ವಿಭಾಗ ಮುಂಬೈಗೆ ವರ್ಗಾವಣೆಗೊಂಡಿತು). ಹೊಸ 29 ಶಾಖೆಗಳು ಕಾರ್ಯಾರಂಭಿಸುವುದರೊಂದಿಗೆ 1977ನೇ ಇಸವಿಯಲ್ಲಿ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 210ಕ್ಕೆ ಏರಿತು. ಬ್ಯಾಂಕಿನ 200ನೇ ಶಾಖೆ ಎಂಬ ಹೆಮ್ಮೆಗೆ ನಾರ್ವೆ (ಚಿಕ್ಕಮಗಳೂರು ಜಿಲ್ಲೆ) ಪಾತ್ರವಾಯಿತು. ಬ್ಯಾಂಕಿನ ಪಾವತಿ ಬಂಡವಾಳ (ಠಿಚಿಜ-ಠಿ ಛಿಚಿಠಿಣಚಿಟ) ವು ರೂ. 20 ಲಕ್ಷದಿಂದ ರೂ. 30 ಲಕ್ಷಕ್ಕೆ ಏರಿತು.

ಕರ್ಣಾಟಕ ಬ್ಯಾಂಕು ತನ್ನ ಉದ್ಯೋಗಿಗಳ ಹಾಗೂ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾದ ಬಾಂಧವ್ಯ ಹೊಂದಿದೆ. ಉದ್ಯೋಗಿಗಳ ಹಿತರಕ್ಷಣೆಯ ಹೊಣೆ ಹೊತ್ತು ಕರ್ಣಾಟಕ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ (ಏಃಇಂ) 1964ರಲ್ಲಿ ರೂಪುಗೊಂಡಿತು.

ಪೂರ್ಣಕಾಲಿಕ ಅಧ್ಯಕ್ಷರಾಗಿ ಶ್ರೀ ಕೆ.ಎಸ್.ಎನ್ ಅಡಿಗರು ಬ್ಯಾಂಕಿನ ಚುಕ್ಕಾಣಿ ಹಿಡಿದು 1970 ರ ದಶಕದ ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಬ್ಯಾಂಕನ್ನು ಮುನ್ನಡೆಸಿದರು. ಫೆಬ್ರವರಿ 15, 1979 ರಂದು ಶ್ರೀಯುತ ಅಡಿಗರು ತಮ್ಮ 65ನೇ ವಯಸ್ಸಿನಲ್ಲಿ ಬ್ಯಾಂಕಿನ ಅಧ್ಯಕ್ಷಗಿರಿಯಿಂದ ನಿವೃತ್ತರಾದಾಗ, ಶ್ರೀ ಕೆ.ಎನ್.ಬಾಸ್ರಿಯವರು ಈ ಜವಾಬ್ದಾರಿಯನ್ನು ವಹಿಸಿಕೊಂಡರು. ಕೇಂದ್ರೀಯ ವಿದೇಶಿ ವಿನಿಮಯ ವಿಭಾಗವನ್ನು 1979ರ ಅವಧಿಯಲ್ಲಿ ಮುಂಬೈಗೂ ಹಾಗೂ ಸಿಬ್ಬಂದಿ ತರಬೇತಿ ಕಾಲೇಜನ್ನು ಡೊಂಗರಕೇರಿಯಿಂದ ಬ್ಯಾಂಕಿನ ಕೇಂದ್ರ ಕಛೇರಿಗೂ ಸ್ಥಳಾಂತರಿಸಲಾಯಿತು. ವಿದೇಶಿ ವಿನಿಮಯವನ್ನು ನಿರ್ವಹಿಸಲು ಆರು ಶಾಖೆಗಳಿಗೆ ಅನುಮತಿಯನ್ನು ನೀಡಲಾಯಿತು. ಬ್ಯಾಂಕ್ ರೂ. 100 ಕೋಟಿಯ ಠೇವಣಿ ಗಡಿಯನ್ನು ದಾಟಿ 31.12.1979 ರಲ್ಲಿ ರೂ. 104.24 ಕೋಟಿಗಳ ಠೇವಣಿಯನ್ನು ಹೊಂದಿದ ಘನತೆಗೆ ಪಾತ್ರವಾಯಿತು.

24.12.76ರಂದು ಬೆಂಗಳೂರಿನಲ್ಲೊಂದು ಪ್ರಾದೇಶಿಕ ಕಚೇರಿಯ ಸ್ಥಾಪನೆಯಾಯಿತು. ಮದ್ರಾಸಿನ ಜಾರ್ಜ್ ಟೌನ್ ಶಾಖೆಯ ಸುವರ್ಣ ಮಹೋತ್ಸವವನ್ನು 1980ರಲ್ಲಿ ಆಚರಿಸಲಾಯಿತು. ಶ್ರೀ ಕೆ.ಎನ್ ಬಾಸ್ರಿಯವರು ಬ್ಯಾಂಕಿನ ಅಧ್ಯಕ್ಷಗಿರಿಯಿಂದ ಫೆಬ್ರವರಿ 1980ರಲ್ಲಿ ನಿವೃತ್ತರಾದರು. ನೂತನ ಅಧ್ಯಕ್ಷರಾಗಿ ಯುನೈಟೆಡ್ ಏಷಿಯನ್ ಬ್ಯಾಂಕ್, ಕೌಲಾಲಂಪುರ, ಮಲೇಷ್ಯ ಇದರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಪಿ. ರಘುರಾಮ್ ಅವರು ಅಧಿಕಾರ ವಹಿಸಿಕೊಂಡರು. ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಭಾಗೀಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಾರ್ಟರ್ಡ್ ಎಕೌಂಟೆಂಟ್ ಶ್ರೀ ಪಿ. ಸುಂದರ ರಾವ್ ಇವರನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಯಿತು. ಆಡಳಿತ ವಿಕೇಂದ್ರಿಕರಣದ ಮುಂದುವರಿಕೆಯಾಗಿ ಇನ್ನೂ ಆರು ವಿಭಾಗೀಯ ಕಛೇರಿಗಳನ್ನು ಹಾಸನ (ಮುಂದೆ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿತು). ಹುಬ್ಬಳ್ಳಿ, ಮಂಗಳೂರು, ಮೈಸೂರು, ಮುಂಬೈ ಹಾಗೂ ಮದ್ರಾಸ್‌ನಲ್ಲಿ ಪ್ರಾರಂಭಿಸಲಾಯಿತು. ಶ್ರೀ ಕೆ.ಎಸ್.ಎನ್. ಅಡಿಗರನ್ನು ಬ್ಯಾಂಕಿನ ಸೇವೆಗಾಗಿ ನಿರ್ದೇಶಕರ ಮಂಡಳಿಯಲ್ಲಿ ಪುನ: ಸೇರಿಸಿಕೊಳ್ಳಲಾಯಿತು. ಬ್ಯಾಂಕಿನ ಠೇವಣಿ ರೂ. 200 ಕೋಟಿಗಿಂತ ಕಡಿಮೆ ಇದ್ದ ಕಾರಣ ಬ್ಯಾಂಕ್ ರಾಷ್ಟ್ರೀಕರಣದ ಬೀಸುಗತ್ತಿಯಿಂದ ಪಾರಾಯಿತು.

ಬ್ಯಾಂಕಿನ ವಜ್ರಮಹೋತ್ಸವ ವರ್ಷವನ್ನು 1984ರಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಅದರ ವಜ್ರ ಮಹೋತ್ಸವ ವರ್ಷದ ಸವಿನೆನಪಿಗಾಗಿ, ಡೈಮಂಡ್ ಜ್ಯುಬಿಲಿ ಕ್ಯಾಶ್ ಸರ್ಟಿಫಿಕೇಟ್ (ಡಿಐಸಿಸಿ) ಎಂಬ ಠೇವಣಿ ಯೋಜನೆಯನ್ನು ಹೊರತರಲಾಯಿತು. ಬ್ಯಾಂಕಿನ ಗೃಹಪತ್ರಿಕೆ ಅಭ್ಯುದಯವನ್ನು ಇದೇ ವರ್ಷ ಪ್ರಾರಂಭಿಸಲಾಯಿತು. ಇದರಿಂದ ಬ್ಯಾಂಕಿನ ಸಿಬ್ಬಂದಿ ನಡುವೆ ಆಂತರಿಕ ಸಂವಹನ ಮತ್ತು ಅವರಲ್ಲಿನ ಸಾಹಿತ್ಯಿಕ ಪ್ರತಿಭೆ ಬೆಳಕು ಕಾಣುವಂತಾಯಿತು. ಬ್ಯಾಂಕಿನ ಮುಂಗಡ ಡಿಸೆಂಬರ್ 1984ರ ಅಂತ್ಯದಲ್ಲಿ ಶತಕದ ಗಡಿಯನ್ನು ದಾಟಿ ರೂ. 122.22 ಕೋಟಿಯನ್ನು ಮುಟ್ಟಿತು.

ಪಿ. ರಘುರಾಮ್ ಇವರು ಬ್ಯಾಂಕಿನ ಮುಂಗಡ ವಿಭಾಗದಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ತಂದರು ಹಾಗೂ ಸಿಬ್ಬಂದಿ ಹಕ್ಕುಗಳನ್ನು ನೇರ್ಪುಗೊಳಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಷನ್ (ಕೆಬಿಓಓ) ಅನ್ನು ಅಧೀಕೃತಗೊಳಿಸಿದರು. ಅವರ ಅಧಿಕಾರವಧಿಯಲ್ಲಿ ಬ್ಯಾಂಕಿಗೆ ಹಲವಾರು ಪ್ರತಿಭಾವಂತ, ಯುವ ಅಧಿಕಾರಿಗಳ ಸೇವೆ ದೊರೆತು ಅವರು ಮುಂದೆ ಬ್ಯಾಂಕಿನಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವಲ್ಲಿ ಸಹಕಾರಿಯಾಯಿತು. ಪಿ. ರಘುರಾಮ್‌ರವ�

Writer - ಶ್ರೀನಿವಾಸ ದೇಶಪಾಂಡೆ

contributor

Editor - ಶ್ರೀನಿವಾಸ ದೇಶಪಾಂಡೆ

contributor

Similar News