ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ : ‘ರಾಜ್ಯಕ್ಕೆ 7.50 ಕೋಟಿ ರೂ.ಪಾವತಿಸುವಂತೆ ಕೋರಿ ಪತ್ರ’

Update: 2017-02-17 14:33 GMT

ಬೆಂಗಳೂರು, ಫೆ.17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸೇರಿದಂತೆ ಇನ್ನಿತರರ ವಿರುದ್ಧ ದಾಖಲಾಗಿದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನ್ಯಾಯಾಲಯಗಳಲ್ಲಿ ನಡೆದ ವಿಚಾರಣೆಗೆ ಖರ್ಚು ಮಾಡಲಾಗಿರುವ 7.50 ಕೋಟಿ ರೂ.ಗಳನ್ನು ಪಾವತಿಸುವಂತೆ ಕೋರಿ ರಾಜ್ಯ ಸರಕಾರವು ತಮಿಳುನಾಡು ಸರಕಾರಕ್ಕೆ ಪತ್ರ ಬರೆದಿದೆ.

ಜಯಲಲಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ 2005ರಿಂದ ರಾಜ್ಯದ ನ್ಯಾಯಾಲಯಗಳಲ್ಲಿ ವಿಚಾರಣೆ ಪ್ರಕ್ರಿಯೆಗಳು ನಡೆದಿದ್ದು, ಇದಕ್ಕಾಗಿ ಕರ್ನಾಟಕ ಸರಕಾರವು ಸುಮಾರು 7.50 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಈ ಮೊತ್ತವನ್ನು ರಾಜ್ಯಕ್ಕೆ ಮರು ಪಾವತಿಸುವಂತೆ ಸೂಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ತಮಿಳುನಾಡು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಪ್ರಕರಣದ ವಿಚಾರಣೆ ನಡೆಸುವ ಸಂಬಂಧ ತೀರ್ಮಾನವಾದ ಹಿನ್ನೆಲೆಯಲ್ಲಿ, 2005ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಬಳಿ ಜಯಲಲಿತಾ ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಸೇರುತ್ತಿದ್ದರು.

ಇದರಿಂದಾಗಿ, ಹೈಕೋರ್ಟ್ ಸುತ್ತಮುತ್ತಲು ಸಂಚಾರ ದಟ್ಟಣೆ ಹಾಗೂ ನ್ಯಾಯಾಲಯದ ಇತರ ಹಾಲ್‌ಗಳಲ್ಲಿ ನಡೆಯುವ ವಿಚಾರಣೆಗಳಿಗೂ ತೊಂದರೆಯಾಗುತ್ತಿದ್ದರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಪ್ರಕರಣದ ವಿಚಾರಣೆಯನ್ನು ಅಲ್ಲೆ ಮುಂದುವರೆಸಲಾಯಿತು.

 ಸರಿಸುಮಾರು 12 ವರ್ಷಗಳಷ್ಟು ಸುದೀರ್ಘವಾಗಿ ನಡೆದ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಸರಕಾರವು ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿದೆ. ಈ ಮೊತ್ತವನ್ನು ತಮಿಳುನಾಡು ಸರಕಾರ ಮರುಪಾವತಿಸಬೇಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ತಮಿಳುನಾಡು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News