ಲೋಹದ ಹಕ್ಕಿಗಳ ಆಕರ್ಷಕ ಬೆರಗು-ಭಿನ್ನಾಣಕ್ಕೆ ವಿದ್ಯುಕ್ತ ತೆರೆ

Update: 2017-02-18 14:44 GMT

ಬೆಂಗಳೂರು, ಫೆ. 18: ಐದು ದಿನಗಳಿಂದ ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ವೈವಿಧ್ಯಮಯ ಕಸರತ್ತಿನ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದ ಲೋಹದ ಹಕ್ಕಿಗಳ ಆಕರ್ಷಕ ‘ಏರೋ ಇಂಡಿಯಾ’ ಹನ್ನೊಂದನೆ ವೈಮಾನಿಕ ಪ್ರದರ್ಶನಕ್ಕೆ ಶನಿವಾರ ತೆರೆಬಿದ್ದಿದೆ.

ತೇಜಸ್ಸು, ಸುಖೋಯ್, ದ್ರುವ, ಚೀತಾ, ರುದ್ರ, ಅತ್ಯಾಧುನಿಕ ಹಾಕ್-ಐ ಸೂರ್ಯಕಿರಣ್, ಎಂಬೆರೆರ್, ಎಲ್‌ಸಿಎ ಸೇರಿದಂತೆ ಹತ್ತಾರು ಯುದ್ಧ ವಿಮಾನಗಳ ರೋಮಾಂಚನಕಾರಿ ದೃಶ್ಯಕಲೆಯನ್ನು ದೇಶ-ವಿದೇಶಗಳ ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ.

ಐದು ದಿನಗಳು ನಡೆದ ವೈಮಾನಿಕ ಪ್ರದರ್ಶನದಲ್ಲಿ ದೇಶೀಯ ನಿರ್ಮಿತ ತೇಜಸ್ಸು, ಭಾರತೀಯ ವಾಯುಪಡೆಯ ಬೆನ್ನೆಲುಬು ಸುಖೋಯ್, ರಫಾಯಲ್, ಎಫ್-16 ಸೇರಿದಂತೆ ಇನ್ನಿತರ ಯುದ್ಧ ವಿಮಾನಗಳು ಶಕ್ತಿ-ಸಾಮರ್ಥ್ಯವನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿವೆ.

 ಆಕರ್ಷಕ ವೈಮಾನಿಕ ಪ್ರದರ್ಶನಕ್ಕೆ ಕೊನೆಯ ದಿನವಾದ ಇಂದು ಜನ ಸಾಗರವೇ ಹರಿದು ಬಂದಿತ್ತು. 2019ರಂದು ನಡೆಯಲಿರುವ ವೈಮಾನಿಕ ಪ್ರದರ್ಶನ ಬೆಂಗಳೂರು ಅಥವಾ ಗೋವಾದಲ್ಲಿ ನಡೆಯಲಿದೆಯೋ ಎಂಬ ಅನಿಶ್ಚಿತತೆಯ ಮಧ್ಯೆಯೇ ಲೋಹದ ಹಕ್ಕಿಗಳ ಹಾರಾಟಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ.

ಐದು ದಿನಗಳ ಪ್ರದರ್ಶನದಲ್ಲಿ ಭಾರತದ 270 ಹಾಗೂ ದೇಶದ 290 ಕಂಪೆನಿಗಳು ಸೇರಿದಂತೆ 560ಕ್ಕೂ ವಿವಿಧ ಕಂಪೆನಿಗಳು ತಮ್ಮ-ತಮ್ಮ ರಾಷ್ಟ್ರಗಳ ರಕ್ಷಣಾ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ರಾಷ್ಟ್ರೀಯ ಏರೋನಾಟಿಕ್ ಲಿಮಿಟೆಡ್(ಎನ್‌ಎಎಲ್) ಸೇರಿದಂತೆ ಖಾಸಗಿ ಸ್ವಾಮ್ಯದ ವಿಮಾನಯಾನ ಉಪಕರಣಗಳ ಉತ್ಪಾದನಾ ಸಂಸ್ಥೆಗಳು ಲಕ್ಷಾಂತರ ಕೋಟಿ ರೂ.ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಅಲ್ಲದೆ, ದೇಶದ ವಿಮಾನಯಾನ ಮತ್ತು ರಕ್ಷಣಾ ವಲಯದಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳು ವಿಮಾನಗಳಿಗೆ ಸಂಬಂಧಿಸಿದ ಉಪಕರಣ ಖರೀದಿ ಹಾಗೂ ವಿನಿಮಯ ಮಾಡಿಕೊಳ್ಳಲು ಒಪ್ಪಂದ ಏರ್ಪಟ್ಟಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲಿ ವಿದೇಶಿ ಕಂಪೆನಿಗಳು ರಕ್ಷಣಾ ಪರಿಕರಗಳು, ವಿಮಾನಗಳನ್ನು ಉತ್ಪಾದನೆ ಸಂಬಂಧ ಕೇಂದ್ರ ಸರಕಾರ ವಿದೇಶಿ ಕಂಪೆನಿಗಳಿಗೆ ಮುಕ್ತ ಆಹ್ವಾನ ನೀಡಿದೆ.

ಬಂಡವಾಳ ಹೂಡಿಕೆಗೆ ಮುಂದೆ ಬರುವ ಕಂಪೆನಿಗಳಿಗೆ ಅಗತ್ಯ ನೆರವು ಮತ್ತು ಸಹಾಯ ನೀಡುವುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರಕಟಿಸಿದ್ದು, ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ದೇಶೀಯ ಖಾಸಗಿ ಕಂಪೆನಿಗಳಿಗೆ ಅನುವು ಮಾಡಿಕೊಡಲು ನಿಯಮಗಳನ್ನು ಸರಳೀಕರಣ ಮಾಡಿದೆ. ಭವಿಷ್ಯದಲ್ಲಿ ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳನ್ನು ತೆರೆಯುವಲ್ಲಿ ವೈಮಾನಿಕ ಪ್ರದರ್ಶನ ಯಶಸ್ವಿಯಾಗಿದೆ.

ಯಲಹಂಕ ವಾಯುನೆಲೆಯಲ್ಲಿನ ವಾಯುನೆಲೆಯಲ್ಲಿ ನಡೆಯುತ್ತಿರುವ ಕಡೆಯ ದಿನದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಪಾಸ್ ಪಡೆದಿದ್ದ ಜನರು ಬೆಳಗ್ಗೆಯೇ ಆಗಮಿಸಿದ್ದರಿಂದ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಸಂಚಾರ ದಟ್ಟಣೆ: ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಕೊನೆಯ ದಿನವಾದ ಶನಿವಾರ ಬೆಳಗ್ಗೆ 7ಗಂಟೆಯಿಂದ ಲಕ್ಷಾಂತರ ಮಂದಿ ಸಾರ್ವಜನಿಕರು ತಮ್ಮ ಕಾರು, ಬೈಕ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಳ್ಳಾರಿ ರಸ್ತೆ ಮೂಲಕ ಯಲಹಂಕ ವಾಯುನೆಲೆಯತ್ತ ಧಾವಿಸಿದ್ದರಿಂದ ಆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹರ ಸಾಹಸಪಡಬೇಕಾಯಿತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು, ವಾಯುನೆಲೆ ತಲುಪುವ ಕಾತರ ಎಲ್ಲರಲ್ಲಿಯೂ ಮನೆಮಾಡಿತ್ತು. ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವರು ಸೇರಿದಂತೆ ಆ ಭಾಗದ ಎಲ್ಲರ ದೃಷ್ಟಿಯೂ ಆಗಸದತ್ತ ನೆಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News