ದುರ್ಬಲ ಬಹುಸಂಖ್ಯಾತರು

Update: 2017-02-18 16:17 GMT

ನಮ್ಮ ನೀತಿ ನಿರೂಪಕರು ಈ ವರ್ಗದ ಕಾರ್ಮಿಕರು ಎದುರಿಸುತ್ತಿರುವ ಅಭದ್ರತೆಯನ್ನು ನಿವಾರಿಸುವುದು ಮಾತ್ರವಲ್ಲದೆ ಈ ಕಾರ್ಮಿಕರು ಇನ್ನೂ ಹೆಚ್ಚಿನ ಔಪಚಾರಿಕ ಮತ್ತು ಆ ಮೂಲಕ ಹೆಚ್ಚು ನಿಯಂತ್ರಿತ ಮತ್ತು ಹೆಚ್ಚು ಸುರಕ್ಷಿತ ಉದ್ಯೋಗ ಸ್ವರೂಪಗಳನ್ನು ಪಡೆಯುವಂತೆ ಮಾಡುತ್ತದೆಂದು ನಿರೀಕ್ಷಿಸಬೇಕಾಗುತ್ತದೆ. ಇದಾಗಬೇಕೆಂದರೆ ಈ ವರ್ಗದ ಕಾರ್ಮಿಕರ ದುಡಿಯುವ ಪರಿಸ್ಥಿತಿಗಳನ್ನು ಹೆಚ್ಚೆಚ್ಚು ನಿಯಂತ್ರಣಕ್ಕೆ ಒಳಪಡಿಸುವ ಮತ್ತು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಮತ್ತು ಸಂಪರ್ಕ ರಚನೆಗಳನ್ನು ಹೊಂದಲು ಪ್ರಭುತ್ವ ಬೆಂಬಲ ನೀಡಬೇಕಾಗುತ್ತದೆ. ಇದರ ಅರ್ಥ ಸಣ್ಣ ಉದ್ಯಮಿಗಳು ಮತ್ತು ವ್ಯವಹಾರಸ್ಥರು ಎದುರಿಸುವ ಅತೀ ದೊಡ್ಡ ಅಡೆತಡೆಗಳಾದ ಸಂಕೀರ್ಣವಾದ ಅಧಿಕಾರಶಾಹಿ ನಿಯಮಾವಳಿಗಳು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವತ್ತಲೂ ಗಮನಹರಿಸುವುದೇ ಆಗಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯು ಹೊರತಂದಿರುವ ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಕಣ್ಣೋಟ- ಪ್ರವೃತ್ತಿ-2016 (The World Employment and Social Outlook-Trends  2016) ವರದಿಯಲ್ಲಿನ ಜಾಗತಿಕ ಅತಂತ್ರ ಉದ್ಯೋಗದ (Vulnerable Employment) ಬಗೆಗಿನ ಅಂದಾಜಿನ ಪ್ರಕಾರ ಭಾರತದಲ್ಲಿ 2017ರಲ್ಲಿ ಶೇ.3.5ರಷ್ಟಿರುವ ಉದ್ಯೋಗದ ದರ 2018ಕ್ಕೆ ಶೇ.3.4ಕ್ಕೆ ಕುಸಿದರೂ ಉದ್ಯೋಗ ರಹಿತರ ಸಂಖ್ಯೆ ಮಾತ್ರ 2016ರಲ್ಲಿ 1.77 ಕೋಟಿಯಷ್ಟಿದ್ದು 2018ಕ್ಕೆ 1.8 ಕೋಟಿಗಳಿಗೆ ಏರಲಿದೆ.

ಅತಂತ್ರ ಉದ್ಯೋಗದ ಬಗ್ಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO )ಯ ನಿರ್ವಚನವು ಯಾವುದೇ ಯೋಗ್ಯ ದುಡಿಯುವ ವಾತಾವರಣವನ್ನು ಹೊಂದಿರದ, ಸೂಕ್ತವಾದ ಸಾಮಾಜಿಕ ಭದ್ರತೆಗಳನ್ನು ಪಡೆದಿರದ, ಕಾರ್ಮಿಕ ಸಂಘಟನೆ ಅಥವಾ ಅಂತಹ ಯಾವುದೇ ಪರಿಣಾಮಕಾರಿ ಪ್ರಾತಿನಿಧ್ಯದ ಅವಕಾಶಗಳನ್ನು ಪಡೆದಿರದ ಸ್ವಯಂ ಉದ್ಯೋಗಿಗಳನ್ನು ಮತ್ತು ಸಂಬಳ ಸಾರಿಗೆ ಇರದ ಕುಟುಂಬ ಕಾರ್ಮಿಕರನ್ನು ಒಳಗೊಳ್ಳುತ್ತದೆ. 

ಈ ವರದಿಯು ಜಾಗತಿಕ ಮಟ್ಟದಲ್ಲಿ ಅಂತಹ ಅತಂತ್ರ ಕಾರ್ಮಿಕರ ಪ್ರಮಾಣ ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರ ಬೆಳವಣಿಗೆಯನ್ನು ಕಂಡಿದ್ದು ಮುಂದಿನ ಎರಡು ವರ್ಷಗಳಲ್ಲಿ ಅದು ವಾರ್ಷಿಕ 0.2ರಷ್ಟು ಕುಸಿಯಲಿದೆ ಎಂದು ಅಂದಾಜಿಸಿದೆ. ಜಗತ್ತಿನ ಒಟ್ಟಾರೆ ಉದ್ಯೋಗಗಳಲ್ಲಿ ಈ ಬಗೆಯ ಉದ್ಯೋಗವು 2017ರಲ್ಲಿ ಶೇ.42ಕ್ಕಿಂತ ಹೆಚ್ಚೇ ಇರಲಿದ್ದು ಜಗತ್ತಿನ 140 ಕೋಟಿ ಜನರನ್ನು ಒಳಗೊಂಡಿರುತ್ತದೆ. ಮುನ್ನುಗ್ಗುತ್ತಿರುವ ದೇಶಗಳಲ್ಲಿ (Emerging Countries& ILO )

ಭಾರತವನ್ನು ಈ ಪಟ್ಟಿಯಲ್ಲಿ ಸೇರಿಸುತ್ತದೆ) ಪ್ರತೀ ಇಬ್ಬರು ಕಾರ್ಮಿಕರಲ್ಲಿ ಒಬ್ಬರು ಈ ವರ್ಗಕ್ಕೆ ಸೇರಿದ್ದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತೀ ಐವರಲ್ಲಿ ನಾಲ್ವರು ಈ ವರ್ಗಕ್ಕೆ ಸೇರುತ್ತಾರೆ. ಜಗತ್ತಿನಲ್ಲಿ ಅತಂತ್ರ ಉದ್ಯೋಗಗಳಿಂದ ಬಾಧಿತವಾದ ಭೂಭಾಗಗಳು ದಕ್ಷಿಣ ಏಶ್ಯಾ ಮತ್ತು ಸಬ್ ಸಹರನ್ ಆಫ್ರಿಕಾ ಆಗಿದ್ದು ಜಾಗತಿಕವಾಗಿ ಇಂತಹ ಉದ್ಯೋಗಿಗಳ ಸಂಖ್ಯೆ ಪ್ರತೀವರ್ಷ 1.1 ಕೋಟಿಯಷ್ಟು ಹೆಚ್ಚಲಿದೆ. ಭಾರತದ ಬಗ್ಗೆ ನೀಡಿರುವ ಅಂಕಿಅಂಶಗಳು ನಿರೀಕ್ಷಿತವೇ ಆಗಿದೆ. ಭಾರತದ ಬಹುಸಂಖ್ಯಾತ ಶ್ರಮಿಕರು, ಶೇ.92 ರಷ್ಟು, ಇರುವುದೇ ಅನೌಪಚಾರಿಕ ಕ್ಷೇತ್ರಗಳಲ್ಲಿ.

ಕೃಷಿಕ್ಷೇತ್ರವು ಇಳಿಮುಖವಾಗಿರುವುದರಿಂದ ಅತೀ ದೊಡ್ಡ ಸಂಖ್ಯೆಯಲ್ಲಿ ಭೂರಹಿತರು ಮತ್ತು ಸಣ್ಣ ರೈತರು ಈ ಕ್ಷೇತ್ರಕ್ಕೆ ಅದರಲ್ಲೂ ವಿಶೇಷವಾಗಿ ನಿರ್ಮಾಣ ಕ್ಷೇತ್ರಕ್ಕೆ ದೂಡಲ್ಪಡುತ್ತಿದ್ದಾರೆ. ಗಾಬರಿಗೊಳಿಸುವ ವಿಷಯವೆಂದರೆ ಔಪಚಾರಿಕ ಕ್ಷೇತ್ರದಲ್ಲಿ ಹೊಸದಾಗಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಗಳು ಸಹ ಯಾವುದೇ ಕಾರ್ಮಿಕ ಸೌಲಭ್ಯ ಅಥವಾ ಸಾಮಾಜಿಕ ಭದ್ರತೆಗಳಿರದ ಅನೌಪಚಾರಿಕ ಸ್ವರೂಪದಲ್ಲೇ ಇರುವುದು. ಸರಕಾರದ ಯಾವುದೇ ನಿಯಂತ್ರಣವಿಲ್ಲದಿದ್ದರೂ ಈ ಕ್ಷೇತ್ರವು ಪ್ರಭುತ್ವವು ನೆರವಿಗೆ ಬಾರದ ಜನ ಸಮುದಾಯಕ್ಕೆ ಉದ್ಯೋಗವನ್ನು ದೊರಕಿಸುವ ಮೂಲಕ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ.

ಹೀಗಾಗಿ ಇಂತಹ ಕಾರ್ಮಿಕ ವರ್ಗವು ಹೆಚ್ಚಾಗಿ ಉತ್ಪಾದನೆ, ನಿರ್ಮಾಣ, ಸಾರಿಗೆ, ಸಂಗ್ರಹ, ಸಗಟು ಮತ್ತು ಚಿಲ್ಲರೆ ವ್ಯಾಪಾರಗಳ ಕ್ಷೇತ್ರದಲ್ಲೇ ಕಾಣಬರುವುದು ಸಕಾರಣವಾಗೇ ಇದೆ. ಈ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಅತೀ ಹೆಚ್ಚಿದ್ದು ಕೂಲಿಯಲ್ಲಿ ಲಿಂಗ ತಾರತಮ್ಯ ಮತ್ತು ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಾ ಪುರುಷ ಕಾರ್ಮಿಕರಿಗಿಂತಲೂ ಇನ್ನೂ ಹೆಚ್ಚಿನ ಅತಂತ್ರತೆಯನ್ನು ಅನುಭವಿಸುತ್ತಾರೆ. ನಮ್ಮ ನೀತಿ ನಿರೂಪಕರು ಈ ವರ್ಗದ ಕಾರ್ಮಿಕರು ಎದುರಿಸುತ್ತಿರುವ ಅಭದ್ರತೆಯನ್ನು ನಿವಾರಿಸುವುದು ಮಾತ್ರವಲ್ಲದೆ ಈ ಕಾರ್ಮಿಕರು ಇನ್ನೂ ಹೆಚ್ಚಿನ ಔಪಚಾರಿಕ ಮತ್ತು ಆ ಮೂಲಕ ಹೆಚ್ಚು ನಿಯಂತ್ರಿತ ಮತ್ತು ಹೆಚ್ಚು ಸುರಕ್ಷಿತ ಉದ್ಯೋಗ ಸ್ವರೂಪಗಳನ್ನು ಪಡೆಯುವಂತೆ ಮಾಡುತ್ತದೆಂದು ನಿರೀಕ್ಷಿಸಬೇಕಾಗುತ್ತದೆ.

ಇದಾಗಬೇಕೆಂದರೆ ಈ ವರ್ಗದ ಕಾರ್ಮಿಕರ ದುಡಿಯುವ ಪರಿಸ್ಥಿತಿಗಳನ್ನು ಹೆಚ್ಚೆಚ್ಚು ನಿಯಂತ್ರಣಕ್ಕೆ ಒಳಪಡಿಸುವ ಮತ್ತು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಮತ್ತು ಸಂಪರ್ಕ ರಚನೆಗಳನ್ನು ಹೊಂದಲು ಪ್ರಭುತ್ವ ಬೆಂಬಲ ನೀಡಬೇಕಾಗುತ್ತದೆ. ಇದರ ಅರ್ಥ ಸಣ್ಣ ಉದ್ಯಮಿಗಳು ಮತ್ತು ವ್ಯವಹಾರಸ್ಥರು ಎದುರಿಸುವ ಅತೀ ದೊಡ್ಡ ಅಡೆತಡೆಗಳಾದ ಸಂಕೀರ್ಣವಾದ ಅಧಿಕಾರಶಾಹಿ ನಿಯಮಾವಳಿಗಳು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವತ್ತಲೂ ಗಮನಹರಿಸುವುದೇ ಆಗಿದೆ. ಆದರೂ ಕೇಂದ್ರದಲ್ಲಿರುವ ಎನ್‌ಡಿಎ ಸರಕಾರ ಮತ್ತು ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿರುವ ಭಾರತೀಯ ಜನತಾ ಪಕ್ಷ ಸಮಸ್ಯೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಎನ್‌ಡಿಎ ಸರಕಾರದ ಹೆಗ್ಗಳಿಕೆಯ ನೋಟು ನಿಷೇಧದ ಕ್ರಮವೂ ಸಹ ಅನೌಪಚಾರಿಕ ಕ್ಷೇತ್ರದಲ್ಲಿರುವ ಬಹುಸಂಖ್ಯಾತರ ಬದುಕನ್ನು ಅತ್ಯಂತ ಕ್ರೂರವಾಗಿ ಪ್ರಭಾವಿಸಿತಲ್ಲದೆ ಅವರ ಕುಟುಂಬಗಳನ್ನು ಕೇಳರಿಯದ ಸಂಕಷ್ಟಗಳಿಗೆ ದೂಡಿತು. ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್ಟಿನಲ್ಲಿ ನೋಟು ನಿಷೇಧದಿಂದಾಗಿ ಈ ವರ್ಗದ ಕಾರ್ಮಿಕರು ಗುರಿಯಾದ ಸಂಕಷ್ಟಗಳ ಬಗ್ಗೆಯಾಗಲೀ, ಅಥವಾ ಅದರಿಂದಾಗಿ ಮುಚ್ಚಿ ಹೋದ ಹಲವಾರು ಘಟಕಗಳ ಬಗ್ಗೆಯಾಗಲೀ ಸರಕಾರ ಪ್ರಸ್ತಾಪಿಸಿಯೂ ಇಲ್ಲ.

ಅದು ಮಾತ್ರವಲ್ಲದೆ, ಹಣಕಾಸು ಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ಕಾರ್ಮಿಕ ನೀತಿಯನ್ನು ಸರಳೀಕರಿಸಿ ಅವೆಲ್ಲವನ್ನೂ-ಕೂಲಿ ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ, ಭದ್ರತೆ ಮತ್ತು ದುಡಿಯುವ ವಾತಾವರಣವೆಂಬ ನಾಲ್ಕೇ ಸಂಹಿತೆಗಳಲ್ಲಿ ಒಗ್ಗೂಡಿಸುವುದಾಗಿ ಹೇಳಿದ್ದಾರೆ. ಅ

ಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಮತ್ತು ಅದರ ಅಸಮರ್ಪಕ ಅನುಷ್ಠಾನದ ಫಲಾನುಭವಿಗಳು ಸಂಘಟಿತ ಕ್ಷೇತ್ರದಲ್ಲಿ ಅಳಿದುಳಿದಿರುವ ಅತ್ಯಂತ ಕಡಿಮೆ ಸಂಖ್ಯೆಯ ಕಾರ್ಮಿಕರಾಗಿದ್ದು ಹೂಡಿಕೆದಾರರು ಹಣಹೂಡದಿರಲು ಬರದಿರುವುದಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಅತ್ಯಂತ ವಿಪರ್ಯಾಸಕರವಾಗಿದೆ. ಕಾರ್ಮಿಕ ಕಾನೂನುಗಳ ಬಗ್ಗೆ ಯಾವಾಗಲೂ ‘ಕಾಲ ಬಾಹಿರ’ ಎಂಬ ಗುಣವಾಚಕವನ್ನು ಬಳಸಲಾಗುತ್ತಿದ್ದು ಕೈಗಾರಿಕಾ ಸಂಬಂಧ ನೀತಿ ಸಂಹಿತೆ ಮಸೂದೆ-2016 ಮತ್ತು ಕೂಲಿ ವೇತನ ಮಸೂದೆ-2016 ಮಸೂದೆಗಳು ಒಮ್ಮೆ ಸಂಸತ್ತಿನಲ್ಲಿ ಅನುಮೋದನೆ ಪಡೆದ ನಂತರ ಆ ಜಾಗವನ್ನು ಆಕ್ರಮಿಸಿಕೊಳ್ಳಲಿವೆ.

ILO ವರದಿಯ ಪ್ರಕಾರ ಏಶ್ಯಾ-ಫೆಸಿಫಿಕ್ ಪ್ರದೇಶದಲ್ಲಿ ಅತಂತ್ರ ಕಾರ್ಮಿಕರ ಸಂಖ್ಯೆ ಹೆಚ್ಚಲಿದೆ. ಈ ಸ್ಥಿತಿಯನ್ನು ಸುಧಾರಿಸಲು ವರದಿಯು ಈಗಾಗಲೇ ಬಹುಚರ್ಚಿತವಾದ ಪರಿಹಾರಗಳನ್ನೇ ಸೂಚಿಸುತ್ತದೆ: ರಾಚನಿಕ ಬದಲಾವಣೆ, ಜನಸಂಖ್ಯಾ ಲಾಭದ ಅವಕಾಶ ಗಳನ್ನು ಹೊಂದಲು ಅತಂತ್ರ ವರ್ಗದ ಸಮುದಾಯಗಳ ಶಿಕ್ಷಣ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆ ಮಾಡುವುದು, ಕಾರ್ಮಿಕ ಬಾಹುಳ್ಯವಿರುವ ಕ್ಷೇತ್ರಗಳಾದ ಉಡುಪು, ಚರ್ಮೋತ್ಪನ್ನ, ಕೃಷಿ ಮತ್ತು ಆಹಾರ ಸಂಸ್ಕರಣದಂತಹ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಮತ್ತು ಭಾರತ ಕುಖ್ಯಾತ ರಫ್ತು ಶುಲ್ಕ ರಚನೆಗಳತ್ತ ಗಮನ ಹರಿಸುವುದು. ಭಾರತದ ಯಾವುದೇ ರಕ್ಷಣೆ ಇರದ ಬಹುಸಂಖ್ಯಾತ ಕಾರ್ಮಿಕ ವರ್ಗ ಉದ್ಯೋಗ ಭದ್ರತೆ ಮತ್ತು ಘನತೆಯಿಂದ ಕೂಡಿದ ವೃದ್ಧಾಪ್ಯ ಜೀವನವನ್ನು ಕಾಣುವುದನ್ನು ಖಾತರಿ ಪಡಿಸಿಕೊಳ್ಳಬೇಕೆಂದರೆ ಸರಕಾರವು ಈ ಮೇಲಿನ ಸಲಹೆಗಳನ್ನು ಒಪ್ಪಿಕೊಳ್ಳಲೇಬೇಕು

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News