ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಾಹಿದ್ ಅಫ್ರಿದಿ ವಿದಾಯ

Update: 2017-02-20 03:28 GMT

ಶಾರ್ಜಾ, ಫೆ.20: ಪಾಕಿಸ್ತಾನ ಕ್ರಿಕೆಟ್‌ನ ದಂತಕಥೆ ಎನಿಸಿದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 21 ವರ್ಷಗಳ ಅವರ ವರ್ಣರಂಜಿತ ಕ್ರಿಕೆಟ್ ಬದುಕು ಕೊನೆಗೊಂಡಂತಾಗಿದೆ.

ಟೆಸ್ಟ್ ಹಾಗೂ ಏಕದಿನ ಪಂದ್ಯದಿಂದ ಈ ಮುನ್ನವೇ ನಿವೃತ್ತಿ ಘೋಷಿಸಿದ್ದ ಅವರು, ಕಳೆದ ವರ್ಷ ಭಾರತದಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ್ದರು. ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸಿದರೂ ಚುಟುಕು ಕ್ರಿಕೆಟ್ ವೃತ್ತಿ ಮುಂದುವರಿಸಿದ್ದರು.

ತಮ್ಮ ವೃತ್ತಿಬದುಕಿನ ಎರಡನೆ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಾಧಿಸಿ ವಿಶ್ವದಾಖಲೆ ಸ್ಥಾಪಿಸಿದ್ದರು. ಈ ದಾಖಲೆ 17 ವರ್ಷಗಳ ಕಾಲ ಉಳಿದುಕೊಂಡು ಬಂದಿತ್ತು. ವೃತ್ತಿಬದುಕಿನ ಎರಡನೆ ಭಾಗದಲ್ಲಿ ಬೌಲಿಂಗ್ ಆಲ್‌ರೌಂಡರ್ ಆಗಿಯೂ ರೂಪುಗೊಂಡ ಅವರು, ಪಾಕಿಸ್ತಾನ ಕ್ರಿಕೆಟ್ ತಂಡ ಚುಟುಕು ಕ್ರಿಕೆಟ್‌ನಲ್ಲಿ ಪ್ರಭುತ್ವ ಸ್ಥಾಪಿಸುವಲ್ಲಿ ಇವರ ಕೊಡುಗೆ ಮಹತ್ವದ್ದು. 27 ಟೆಸ್ಟ್‌ನಲ್ಲಿ 1,176 ರನ್ ಗಳಿಸಿರುವ ಆಫ್ರಿದಿ ಅವರ ಗರಿಷ್ಠ ಸ್ಕೋರ್ 156. 48 ಟೆಸ್ಟ್ ವಿಕೆಟ್‌ಗಳನ್ನೂ ಇವರು ಪಡೆದಿದ್ದಾರೆ. 398 ಏಕದಿನ ಪಂದ್ಯಗಳನ್ನು ಆಡಿರುವ ಅವರು 8,064 ರನ್ ಪಡೆದಿದ್ದು, ಮಾಂತ್ರಿಕ ಲೆಗ್‌ಸ್ಪಿನ್ ಮೂಲಕ 395 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಏಕದಿನದಲ್ಲಿ ಇವರ ಗರಿಷ್ಠ ಸ್ಕೋರ್ 124.

ಚುಟುಕು ಕ್ರಿಕೆಟ್‌ನಲ್ಲಿ 98 ಪಂದ್ಯಗಳನ್ನು ಆಡಿರುವ ಅಫ್ರಿದಿ 1,405 ರನ್ ಗಳಿಸಿದ್ದು, 97 ವಿಕೆಟ್ ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News