ಇನ್ಫೋಸಿಸ್ ಆಡಳಿತದ ವಿರುದ್ಧ ಸರ್ಕಾರಿ ಸಂಸ್ಥೆಗಳಿಗೆ ಅನಾಮಧೇಯ ದೂರು

Update: 2017-02-20 10:04 GMT

ಬೆಂಗಳೂರು, ಫೆ.20: ಇನ್ಫೋಸಿಸ್ ಆಡಳಿತ ಮಂಡಳಿಯು ಗಂಭೀರ ಕಾರ್ಪೊರೇಟ್ ವಿಷಯಗಳನ್ನು ಮತ್ತು ಸಿಇಒ ವಿಶಾಲ್ ಸಿಕ್ಕಾ ಅವರಿಗೆ ಸಂಬಂಧಿಸಿದ ಹಿತಾಸಕ್ತಿಗಳ ಸಂಘರ್ಷದ ವಿಷಯಗಳನ್ನು ಬಗೆಹರಿಸಿಲ್ಲ ಎಂದು ಆರೋಪಿಸಿ ಸೆಬಿ ಮತ್ತು ಅಮೆರಿಕದ ಸೆಕ್ಯೂರಿಟಿಸ್ ಎಕ್ಸಚೇಂಜ್ ಕಮಿಷನ್(ಎಸ್‌ಇಸಿ)ಗಳಿಗೆ ಇ-ಮೇಲ್ ಮೂಲಕ ಅನಾಮಿಕ ದೂರೊಂದು ಸಲ್ಲಿಕೆಯಾಗಿದೆ.

ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿಯಾಗಿರುವ ಇನ್ಫೋಸಿಸ್‌ನ ಶೇರುಗಳು ಭಾರತೀಯ ಮತ್ತು ಅಮೆರಿಕನ್ ಶೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿವೆ.

ತಾನು ಕಂಪನಿಯ ಓರ್ವ ಉದ್ಯೋಗಿ ಎಂದು ಹೇಳಿಕೊಂಡಿರುವ ದೂರುದಾರರು, ತಾನು ಸೆಬಿ ಮತ್ತು ಎಸ್‌ಇಸಿ ಜೊತೆ ಮಾತನಾಡಲು ಮತ್ತು ಮಾಹಿತಿಯನ್ನು ಬಹಿರಂಗಗೊಳಿಸಲು ಸಿದ್ಧ, ಆದರೆ ತನಗೆ ರಕ್ಷಣೆ ಒದಗಿಸಬೇಕು ಎಂದು ಹೇಳಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿರುವ ಇನ್ಫೋಸಿಸ್ ಇವೆಲ್ಲ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳು ಎಂದು ಹೇಳಿದೆ. ದೂರುಗಳನ್ನು ತಾನು ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ತನಗೆ ಬರುವ ದೂರುಗಳ ತನಿಖೆಗಾಗಿ ಸೂಕ್ತ ಪ್ರಕ್ರಿಯೆ ಇದೆ. ದೂರು ತನಗೆ ನೇರವಾಗಿ ಅಥವಾ ನಿಯಂತ್ರಣ ಪ್ರಾಧಿಕಾರಗಳ ಮೂಲಕ ಬಂದರೆ ತಾನು ಅದಕ್ಕೆ ಉತ್ತರಿಸುತ್ತೇನೆ ಎಂದು ಅದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಪನಾಯಾ ಕಂಪನಿಯನ್ನು 200 ಮಿ.ಡಾ.ಗಳಿಗೆ ಖರೀದಿಸಿರುವುದು ಹಿತಾಸಕ್ತಿಗಳ ಸಂಘರ್ಷದ ವಿಷಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಲ್ ಅವರು ತನ್ನ ನಿರ್ಗಮನ ಪೂರ್ವ ಅವಧಿಯಲ್ಲಿ ನಡೆದಿದ್ದ ಈ ಖರೀದಿಯ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಆಂಗ್ಲ ದೈನಿಕವೊಂದು ಇತ್ತೀಚಿಗೆ ವರದಿ ಮಾಡಿತ್ತು.

 ಸೆಬಿಗೆ ಬಂದಿರುವ ದೂರಿಗೆ ಸಂಬಂಧಿಸಿದಂತೆ ನಾವು ಕಂಪನಿಯ ಉತ್ತರವನ್ನು ಕೇಳಿದ್ದೇವೆ ಮತ್ತು ಅದು ಶೇರುಗಳಿಗೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದೆಯೇ ಎನ್ನುವುದನ್ನು ಪರಿಶೀಲಿಸಲಿದ್ದೇವೆ ಎಂದು ಹಿರಿಯ ಸೆಬಿ ಅಧಿಕಾರಿಯೋರ್ವರು ತಿಳಿಸಿದರು.

ಪನಾಯಾ ಖರೀದಿಯಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಇನ್ಫೋಸಿಸ್ ಹೇಳಿಕೊಂಡಿದೆ. ಫೆ.13ರಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪನಾಯಾ ಖರೀದಿಯಲ್ಲಿ ಸಿಇಒ ಸಿಕ್ಕಾ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಆಡಳಿತ ಮಂಡಳಿಯು ಅವರಿಗೆ ಬೆಂಬಲವಾಗಿ ನಿಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News