ಶ್ರೇಷ್ಠತೆಯ ಹುಡುಕಾಟದಲ್ಲಿ ಗೋಡೆಗಳ ಜಂಜಾಟ!

Update: 2017-02-21 18:39 GMT

ಚುನಾವಣಾ ಪೂರ್ವದಲ್ಲಿ ಡೊನಾಲ್ಡ್ ಟ್ರಂಪ್ ಆಡಿದ ಮಾತು ಗಳೆಲ್ಲವೂ ಅನುಷ್ಠಾನಕ್ಕಿಳಿಯುವುದಿಲ್ಲ ಎಂಬ ನಂಬಿಕೆ ನಿಧಾನವಾಗಿ ಕರಗುತ್ತಿದೆ. ಟ್ರಂಪ್ ತಾನಾಡಿದ ಪ್ರತೀ ಮಾತನ್ನೂ ಅನುಷ್ಠಾನಕ್ಕಿಳಿಸುವ ಉತ್ಸಾಹದಲ್ಲಿರುವುದು, ಅಧಿಕಾರಾವಧಿಯ ಪ್ರಾರಂಭಿಕ ವಾರಗಳಲ್ಲೇ ಸ್ಪಷ್ಟವಾಗಿದೆ. ‘ಅಮೆರಿಕ ಮೊದಲು’ ಎಂಬ ಪರಿಕಲ್ಪನೆಯಿಂದ ಪ್ರಭಾವಿತರಾಗಿ ಟ್ರಂಪ್ ಇತರ ದೇಶಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸುತ್ತಿರುವುದೂ ರಹಸ್ಯವಾಗಿ ಉಳಿದಿಲ್ಲ. ವಿಭಿನ್ನ ಕಾರಣಗಳಿಗೋಸ್ಕರ ಅಮೆರಿಕ ಪ್ರವೇಶಿಸುವ ಇತರ ದೇಶಗಳ ವಲಸಿಗರಿಗೆ ಬಾಗಿಲು ಮುಚ್ಚುವ ಪ್ರಕ್ರಿಯೆ ಈಗಾಗಲೇ ತುಂಬಾ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ.

ಇತ್ತೀಚೆಗೆ ‘ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌ರವರೇ ತಮ್ಮ ಗುರಿ, ಅಮೆರಿಕದೊಳಗೆ ಬರಲು ಬಯಸುವವರನ್ನು ತಡೆದು ಭೌತಿಕ ಮತ್ತು ಮಾನಸಿಕ ಗೋಡೆಗಳನ್ನು ನಿರ್ಮಿಸುವುದು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿಯವರೆಗೆ ಅಮೆರಿಕದೊಳಗೆ ಪ್ರವೇಶ ಪಡೆದುಕೊಳ್ಳುವುದು ಅತ್ಯಂತ ಸುಲಭದ ಕೆಲಸವಾಗಿತ್ತು ಎಂದಿರುವ ಟ್ರಂಪ್, ಮುಂದಕ್ಕೆ ಅಮೆರಿಕ ಪ್ರವೇಶ ಅತ್ಯಂತ ಕಷ್ಟಕರ ಪ್ರಕ್ರಿಯೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ವ್ಯಕ್ತಿ, ಸಮುದಾಯ ಅಥವಾ ರಾಷ್ಟ್ರ ಶ್ರೇಷ್ಠತೆಯತ್ತ ಸಾಗಬೇಕಾದಲ್ಲಿ ಎಲ್ಲರನ್ನೂ ಒಪ್ಪಿಕೊಂಡು ಮಾನವ ಕುಲದ ಸಹೋದರತೆಯನ್ನು ಪ್ರತಿಪಾದಿಸಬೇಕೇ ವಿನಃ ದೃಷ್ಟಿಕೋನಗಳನ್ನು ಸಂಕುಚಿತಗೊಳಿಸುವ ಗೋಡೆಗಳ ನಿರ್ಮಾಣದಲ್ಲಿ ಸಮಯ ವ್ಯರ್ಥ ಮಾಡುವುದು ಸರ್ವಥಾ ಸರಿಯಲ್ಲ. ಇವತ್ತಿಗೆ ಮೆಕ್ಸಿಕೊ ಗಡಿಯಲ್ಲಿ ಟ್ರಂಪ್ ಕಟ್ಟ ಹೊರಟಿರುವ ಭೌತಿಕ ಗಡಿ ಗೋಡೆ, ಕೆಲ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸದಂತೆ ಹೊರಡಿಸಿರುವ ಸುಗ್ರೀವಾಜ್ಞೆ ನಮ್ಮೆಲ್ಲರಿಗೂ ಗೋಚರವಾಗಿರುವ ಮತ್ತು ಚರ್ಚೆಗೊಳಗಾಗಿರುವ ವಿಷಯ. ಕಣ್ಣಿಗೆ ಕಾಣುವ ಭೌತಿಕ ಗೋಡೆಗಳನ್ನು ಮುಂದೊಂದು ದಿನ ಕೆಡವಬಹುದಾದರೂ, ಟ್ರಂಪ್ ನಿರ್ಮಿಸುತ್ತಿರುವ ಮಾನಸಿಕ ಗೋಡೆಗಳು ಅಂತಾರಾಷ್ಟ್ರೀಯ ವ್ಯವಸ್ಥೆಯ ಮೇಲೆ ಅನಾರೋಗ್ಯಕರ ಪರಿಣಾಮ ಬೀರುವುದು ಖಂಡಿತ.

ಪ್ರಥಮ ಮಹಾಯುದ್ಧಕ್ಕೂ ಮೊದಲು ಅಮೆರಿಕ ದಶಕಗಳ ಕಾಲ ಹೊರಜಗತ್ತಿನಿಂದ ದೂರವಾಗಿ ‘ಭವ್ಯ ಏಕಾಂತದ ತತ್ವ’ (Splendid Isolationaism) ಪಾಲಿಸಿತ್ತಾದರೂ, ಏಕಾಂತದ ಗಾಂಭೀರ್ಯತೆಯನ್ನು ಆಗಿನ ಅಮೆರಿಕನ್ ವ್ಯವಸ್ಥೆ ಕಾಪಾಡಿಕೊಂಡು ಬಂದಿತ್ತು ಎನ್ನುವುದು ಗಮನಾರ್ಹ. ಇವಿಷ್ಟೇ ಅಲ್ಲದೆ ಅಮೆರಿಕವನ್ನು ದಿಗ್ಬಂಧನಕ್ಕೊಳಪಡಿಸಿ ಪ್ರವೇಶ ನಿಷೇಧಿಸುವ ಟ್ರಂಪ್ ಯೋಜನೆಗಳಲ್ಲಿ ಆ ಗಾಂಭೀರ್ಯತೆಗಳಿಲ್ಲ ಎಂಬ ವಿಚಾರವನ್ನು ಅಮೆರಿಕದ ಪ್ರಖ್ಯಾತ ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ

 ‘‘ಮೆಕ್ಸಿಕೊದಿಂದ ಅಮೆರಿಕಕ್ಕೆ ಬರುವ ವಲಸಿಗರನ್ನು ತಡೆಯಲು ಮೆಕ್ಸಿಕೊ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನದ ಗಡಿಯಲ್ಲಿ ಗೋಡೆಯೊಂದನ್ನು ನಿರ್ಮಿಸಬೇಕು ಮತ್ತು ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮೆಕ್ಸಿಕೊ ಭರಿಸಬೇಕು’’ ಎಂದು ಚುನಾವಣಾ ಪ್ರಚಾರದಲ್ಲೇ ಟ್ರಂಪ್ ಎಚ್ಚರಿಕೆ ನೀಡಿದ್ದರು. ಅಧ್ಯಕ್ಷನಾದ ಬಳಿಕವೂ ತನ್ನ ನಿಲುವಲ್ಲಿ ಕಿಂಚಿತ್ತೂ ಬದಲಾವಣೆ ಮಾಡಿಕೊಳ್ಳದ ಟ್ರಂಪ್ ಗಡಿಯಲ್ಲಿ ಗೋಡೆ ಕಟ್ಟುವಂತೆ ಮೆಕ್ಸಿಕೊಗೆ ತಾಕೀತು ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಸಿರಿಯಾ, ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮನ್‌ಗಳ ಜನ ಅಮೆರಿಕದತ್ತ ವಲಸೆ ಬರುವುದನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ ಟ್ರಂಪ್ ನಡೆ ವ್ಯಾಪಕ ಟೀಕೆಗೆ ಗ್ರಾಸವಾಗಿ ಕೊನೆಗೆ ಟ್ರಂಪ್ ಮುಖಭಂಗ ಅನುಭವಿಸಬೇಕಾಯ್ತು. ಇಷ್ಟಕ್ಕೂ ದೇಶದ ಸುತ್ತ ಗೋಡೆ ಕಟ್ಟಿಕೊಂಡು ಅಮೆರಿಕ ಸಾಧಿಸಬೇಕಾಗಿರುವುದಾದರೂ ಏನು? ಈ ಭೌತಿಕ ಮತ್ತು ಮಾನಸಿಕ ಗೋಡೆಗಳ ನಿರ್ಮಾಣದಿಂದ ಟ್ರಂಪ್ ಗಳಿಸುವ ಪರಮಾರ್ಥವಾದರೂ ಏನು? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತದೆ. ಅಂಕಿ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ನೋಡುವುದಾದರೆ, 1975ರಿಂದ ಅಮೆರಿಕದ ಮಣ್ಣಿನಲ್ಲಿ ಸಂಭವಿಸಿದ ಉಗ್ರ ದಾಳಿಗಳಲ್ಲಿ ನಿಷೇಧಕ್ಕೊಳಗಾದ ಏಳು ರಾಷ್ಟ್ರಗಳ ಪಾತ್ರ ಲವಲೇಶವೂ ಇಲ್ಲ ಮತ್ತು ಈ ದೇಶಗಳ ವಲಸಿಗರು ಒಬ್ಬ ಅಮೆರಿಕನ್ನನ ಸಾವಿಗೂ ಕಾರಣರಾಗಿಲ್ಲ!

‘‘ಅಮೆರಿಕಕ್ಕೆ ಹೊರಗಿನಿಂದ ಬರುವ ಜನರನ್ನು ತಡೆಯುವ ನಿರ್ಧಾರದಿಂದ ನಾನು ಸಾವಿರಾರು ಅಮೆರಿಕನ್ನರ ಪ್ರಾಣ ಉಳಿಸುತ್ತಿದ್ದೇನೆ’’ ಎನ್ನುತ್ತಿರುವ ಟ್ರಂಪ್ ಮಾತಿನಲ್ಲಿ ಸತ್ಯಕ್ಕಿಂತ ಜೊಳ್ಳೇ ಎದ್ದು ಕಾಣುತ್ತಿದೆ. ವಿದೇಶಿಯರು ಅಮೆರಿಕ ಭದ್ರತೆ ಮತ್ತು ಸುರಕ್ಷತೆಗೆ ಮಾರಕವಾಗುತ್ತಾರೆ ಎಂಬ ಮಾತಿಗೆ ದೃಢವಾದ ಸಾಕ್ಷಿ ಆಧಾರಗಳಿಲ್ಲ. ಕ್ಯಾಟೊಸ್ ನೌರಾಸ್ಟೆಹ್ ಸರ್ವೇಯ ಪ್ರಕಾರ ಪ್ರತೀ ವರ್ಷ ಸಾವನ್ನಪ್ಪುವ 3.64 ಬಿಲಿಯನ್ ಅಮೆರಿಕನ್ನರಲ್ಲಿ ಒಬ್ಬ ಮಾತ್ರ ವಲಸಿಗರಿಂದ ಕೊಲ್ಲಲ್ಪಡುವ ಅವಕಾಶವಿರುತ್ತದೆ. ಅಮೆರಿಕದಲ್ಲಿ ವಲಸಿಗರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಕಡಿಮೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ದಾಖಲೆಗಳು. ಅಮೆರಿಕದ ಮಾಧ್ಯಮಗಳು ಕೂಡ ಅಮೆರಿಕದಲ್ಲೇ ಹುಟ್ಟಿ ಬೆಳೆದ ಪ್ರಜೆಗಳು ಮಾಡುವ ಹಿಂಸಾತ್ಮಕ ಅಪರಾಧಗಳಿಗೆ ಹೋಲಿಸಿದಲ್ಲಿ ವಲಸಿಗರು ಸಾವಿರ ಪಾಲು ವಾಸಿ ಎಂದು ಅಭಿಪ್ರಾಯ ಪಡುತ್ತವೆ. ವಲಸಿಗರು ಅಪಾಯಕಾರಿಗಳಲ್ಲ ಎಂಬ ಪುರಾವೆಗಳಿಗೆಲ್ಲ ಟ್ರಂಪ್ ಕೊಡುವ ಸಮರ್ಥನೆಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿವೆ.

ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಯಹೂದಿಗಳು ಅಮೆರಿಕದೊಳಗೆ ಪ್ರವೇಶ ಪಡೆದುಕೊಂಡಾಗ ಇಲ್ಲದ ಸಮಸ್ಯೆ ಇದೀಗ ಎದುರಾಗಿದೆ. ಅಮೆರಿಕ ಪ್ರಪ್ರಥಮ ಅಣ್ವಸ್ತ್ರ ಬಾಂಬ್‌ನ ಸಂಶೋಧನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ವಿದೇಶೀ ವಿಜ್ಞಾನಿಗಳೇ! ಅಮೆರಿಕ ಇವತ್ತು ಎದೆ ತಟ್ಟಿ ಹೇಳಿಕೊಳ್ಳುವ ಹಲವಾರು ಶ್ರೇಷ್ಠ ಅನ್ವೇಷಣೆಗಳ ಹಿಂದಿನ ರೂವಾರಿಗಳು, ಬೃಹತ್ ಕಂಪೆನಿಗಳ ಸೂತ್ರ ಹಿಡಿದು ಮುನ್ನಡೆಸಿದವರೆಲ್ಲರೂ ಎಲ್ಲಿಂದಲೋ ಅಮೆರಿಕಕ್ಕೆ ಬಂದ ಪರದೇಶಿಗಳೇ ಎನ್ನುವುದನ್ನು ಟ್ರಂಪ್ ಮರೆತಂತಿದೆ. ಅಮೆರಿಕ ಸೇನೆಯಲ್ಲಿ ಕಾರ್ಯನಿರ್ವಹಿಸಿ ಪ್ರಾಣತ್ಯಾಗ ಮಾಡಿದ ಹಲವಾರು ಸೈನಿಕರು ಬೇರೆ ದೇಶದಿಂದ ವಲಸೆ ಬಂದವರು. ಆದರೆ ವಲಸಿಗರು ಅಮೆರಿಕಕ್ಕೋಸ್ಕರ ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು, ವಲಸಿಗರೆಂಬ ಏಕೈಕ ಕಾರಣಕ್ಕೆ ಟ್ರಂಪ್ ಕಡೆಗಣಿಸಿದ್ದು ಕೃತಘ್ನತೆಯ ಪರಮಾವಧಿ.

ಶೀತಲ ಸಮರದುದ್ದಕ್ಕೂ ದ್ವೇಷ ಮತ್ತು ವೈರತ್ವಗಳಿಗೆ ಸಾಕ್ಷಿಯಂತಿದ್ದ ಬರ್ಲಿನ್ ಗೋಡೆಯನ್ನು ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಒಂದಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೇಳುತ್ತಾರೆ, ‘‘ಶ್ರೇಷ್ಠ ಮತ್ತು ಶಕ್ತಿಶಾಲಿ ರಾಷ್ಟ್ರಗಳು ಗೋಡೆಗಳನ್ನು ಕಟ್ಟುವುದಿಲ್ಲ ಬದಲಿಗೆ ಗೋಡೆಗಳನ್ನು ನಾಶ ಮಾಡುತ್ತವೆ.’’ ಹೌದು, ಗೋಡೆ ಕಟ್ಟಿಕೊಳ್ಳುವುದು ದುರ್ಬಲರು ಮತ್ತು ಕೀಳರಿಮೆಯುಳ್ಳವರ ಮನಸ್ಥಿತಿಯೇ ಹೊರತು ಬಲಿಷ್ಠರ ಸಾಧನವಲ್ಲ. ಇವೆಲ್ಲದರ ಮಧ್ಯೆ ಟ್ರಂಪ್ ಗಮನಿಸಬೇಕಾದ ಇನ್ನೊಂದು ವಿಷಯವಿದೆ, ಮುಂದೊಂದು ದಿನ ಟ್ರಂಪ್ ಕಟ್ಟಿಕೊಂಡ ಗೋಡೆಗಳನ್ನು ಕೆಡವಲು ಮನಸ್ಸು ಮಾಡಿದರೂ ಗೋಡೆಯಾಚೆಗಿನ ಮನಸ್ಸುಗಳು ಅಮೆರಿಕವನ್ನು ಒಪ್ಪಿಕೊಳ್ಳದೆ ಇರುವ ಸಾಧ್ಯತೆಯಿದೆ. ‘‘ಗೋಡೆಗಳು ಯಾವುದೇ ದೇಶವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲಾರವು’’ ರೇಗನ್ ಮಾತುಗಳನ್ನು ಟ್ರಂಪ್ ಅರ್ಥೈಸಿಕೊಳ್ಳಬೇಕಿದೆ.

Writer - ಕೀರ್ತಿರಾಜ್, ಬಂಟ್ವಾಳ

contributor

Editor - ಕೀರ್ತಿರಾಜ್, ಬಂಟ್ವಾಳ

contributor

Similar News