ಆಪಾದನೆ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ ಸವಾಲು

Update: 2017-02-22 16:34 GMT

ಕಲಬುರಗಿ, ಫೆ.22: ‘ಸತ್ಯಮೇವ ಜಯತೆ ರ್ಯಾಲಿ’ ನಡೆಸುವ ಮುನ್ನ ಗೋವಿಂದ ರಾಜು ಮನೆಯಲ್ಲಿ ಡೈರಿ ಸಿಕ್ಕಿರುವುದು ಹಾಗೂ ಅದರಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿರುವ ಮಾಹಿತಿ ಇರುವುದು ಸತ್ಯವೆ ಅಥವಾ ಸುಳ್ಳೊ ಎಂಬುದನ್ನು ರಾಜ್ಯದ ಜನತೆಗೆ ಮೊದಲು ತಿಳಿಸಿ ಎಂದು ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಿಗೆ ಈಗಲಾದರೂ ಸತ್ಯ ಗೊತ್ತಾಗಿ ರ್ಯಾಲಿ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಅದಕ್ಕೂ ಮುಂಚಿತವಾಗಿ ಸಿಬಿಐ ದಾಳಿ ಸಂದರ್ಭದಲ್ಲಿ ಡೈರಿ ಸಿಕ್ಕಿರುವುದು, ಹೈಕಮಾಂಡ್‌ಗೆ ಕಪ್ಪ ನೀಡಿರುವ ಮಾಹಿತಿ ಇರುವುದು ಸತ್ಯವೆ ಅಥವಾ ಸುಳ್ಳೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ನಾನು ಮಾಡಿರುವ ಆಪಾದನೆ ಸುಳ್ಳಾಗಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದ ಯಡಿಯೂರಪ್ಪ, ಸಂಸದರು ಪತ್ರ ಬರೆದು ದಾಳಿ ವೇಳೆ ಸಿಕ್ಕಿರುವ ಡೈರಿ ಬಗ್ಗೆ ಮಾಹಿತಿ ಕೇಳಿದರೆ, ಸಿಬಿಐನವರು ನೀಡುತ್ತಾರೆ. ರಾಜ್ಯದ ಕೆಲ ಸಂಸದರು ಸಿಬಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರಗಳು ಇಲ್ಲಿವೆ ಎಂದು ಪ್ರದರ್ಶಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದುಬಾರಿ ಬೆಲೆಯ ವಜ್ರಖಚಿತ ಕೈಗಡಿಯಾರ, ಅರ್ಕಾವತಿ ಡಿ ನೋಟಿಫಿಕೇಷನ್ ಸೇರಿದಂತೆ ಅನೇಕ ಗುರುತರವಾದ ಆರೋಪಗಳನ್ನು ಜನ ಇನ್ನು ಮರೆತಿಲ್ಲ. ಸುಲಭವಾಗಿ ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಲು ತಾನು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಯಾರು ತಪ್ಪು ಮಾಡಿದ್ದರೂ ಅದನ್ನು ಬಯಲಿಗೆಳೆಯಬೇಕಾದ್ದು ಮುಖ್ಯಮಂತ್ರಿಯಾದವರ ಕರ್ತವ್ಯ. ಬಿಜೆಪಿಯವರು ತಪ್ಪು ಮಾಡಿದ್ದರೆ ಅದನ್ನು ದಾಖಲೆ ಸಹಿತವಾಗಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ ಅವರು, ನಾನು ಜವಾಬ್ದಾರಿ ಸ್ಥಾನದಲ್ಲಿದ್ದು, ಆಧಾರ ರಹಿತವಾದ ಆರೋಪಗಳನ್ನು ಮಾಡುವುದಿಲ್ಲ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲಿ ಎಂದ ಅವರು, ಬಿಬಿಎಂಪಿಗೆ ನಗರದ ಜನತೆ ನೀಡಿರುವ ತೆರಿಗೆಯ ಪಾಲು ಸಮಾರು 3 ಸಾವಿರ ಕೋಟಿ ರೂ.ಗಳಿಗೆ ಸಂಬಂಧಿಸಿದ ಸೂಕ್ತವಾದ ದಾಖಲಾತಿಗಳನ್ನು ನೀಡದೆ ಕಾಂಗ್ರೆಸ್ ಸರಕಾರ ಹಣವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News