ಸಾರಿಗೆ ವಾಹನಗಳಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆ ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Update: 2017-02-23 14:07 GMT

ಬೆಂಗಳೂರು, ಫೆ. 23: ಇತ್ತೀಚಿಗೆ ಸಂಭವಿಸಿದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ವಾಹನಗಳಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರಿ, ಖಾಸಗಿ ಬಸ್ಸುಗಳು ಮತ್ತು ಲಾರಿಗಳಲ್ಲಿಯೂ ಅಗ್ನಿ ಶಾಮಕ ಉಪಕರಣ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಅಲ್ಲದೆ, ಪ್ರಯಾಣಿಕರ ಲಗೇಜ್ ಪರಿಶೀಲಿಸಲು ಸಾರಿಗೆ ಸಂಸ್ಥೆ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದರು.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ 24 ಸಾವಿರ ವಾಹನಗಳಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಸುವ ಸಂಬಂಧ ಟೆಂಡರ್ ಆಹ್ವಾನ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದ ಅವರು, ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಅವಘಡಕ್ಕೆ ಪೂಜಾ ಸಾಮಗ್ರಿ ಕಾರಣ: ನೆಲಮಂಗಲ ಸಮೀಪ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಪೂಜಾ ಸಾಮಗ್ರಿ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ ಎಂದರು.

ಡೀಸೆಲ್ ಟ್ಯಾಂಕ್, ಬಸ್ಸಿನ ಚಕ್ರಗಳು ಸೇರಿದಂತೆ ಎಲ್ಲವೂ ಸುಸ್ಥಿತಿಯಲ್ಲಿದ್ದು, ಯಾವುದೇ ತಾಂತ್ರಿಕ ತೊಂದರೆ ಇರಲಿಲ್ಲ. ಆದರೆ, ಪ್ರಯಾಣಿಕರ ಹೇಳಿಕೆಯನ್ವಯ ಬಸ್ಸಿನಲ್ಲಿ ಪೂಜಾ ಸಾಮಗ್ರಿ ಊದುಬತ್ತಿ, ಕರ್ಪೂರ, ಎಣ್ಣೆ, ತೆಂಗಿನಕಾರಿ ಸೇರಿ ಇನ್ನಿತರ ವಸ್ತುಗಳಿದ್ದವು ಎಂದು ಹೇಳಲಾಗಿದ್ದು, ಅದೇ ಕಾರಣಕ್ಕೆ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಮುಂದಿನ ವರ್ಷ ಇನ್ನೂ ಮೂರು ಸಾವಿರ ಹೊಸ ಬಸ್‌ಗಳನ್ನು ಖರೀದಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದ್ದು, ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದರು.

ಸಿಬ್ಬಂದಿ ನಿಯೋಜೆ: ತಮ್ಮ ಸರಕಾರ ಆಡಳಿತಕ್ಕೆ ಬಂದ ಮೂರು ವರ್ಷಗಳಲ್ಲಿ ಒಟ್ಟು 26 ಸಾವಿರ ಮಂದಿ ಸಿಬ್ಬಂದಿ ನಿಯೋಜನೆ ಮಾಡಿದ್ದು, ಒಟ್ಟು 1.20 ಲಕ್ಷ ಸಿಬ್ಬಂದಿ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎಂಟಿಸಿಯಲ್ಲಿ ಒಟ್ಟು 36,600 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ ಎಂದರು.

1650 ಹೊಸ ಬಸ್ ಖರೀದಿ

150 ವೋಲ್ವೋ ಬಸ್‌ಗಳು ಸೇರಿದಂತೆ ಬಿಎಂಟಿಸಿಗೆ 1650 ಹೊಸ ಬಸ್‌ಗಳನ್ನು ಖರೀದಿಸುತ್ತಿದ್ದು, ಮಾರ್ಚ್ ವೇಳೆಗೆ ಹೊಸ ಬಸ್‌ಗಳು ಸಂಚಾರ ಆರಂಭಿಸಲಿವೆ ಎಂದ ಅವರು, ನಾಲ್ಕು ನಿಗಮಗಳಿಗೆ ಒಟ್ಟು 5500 ಹೊಸ ಬಸ್ ಖರೀದಿಸುತ್ತಿದ್ದು, ಹಳೆಯ ವಾಹನಗಳನ್ನು ಬದಲಾಯಿಸಲಾಗುವುದು.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News