‘ಡೈರಿ ಬಿಡುಗಡೆ’ ಬಿಜೆಪಿ ಷಡ್ಯಂತ್ರ:ಡಾ.ಜಿ.ಪರಮೇಶ್ವರ್

Update: 2017-02-24 18:27 GMT

ಬೆಂಗಳೂರು, ಫೆ. 24: ಡೈರಿಯಲ್ಲಿದೆ ಎನ್ನಲಾದ ಅಂಶಗಳ ಬಿಡುಗಡೆ ಹಿಂದೆ ಬಿಜೆಪಿ ಷಡ್ಯಂತ್ರ ಅಡಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಕಾನೂನು ತನ್ನದೆ ಆದ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡೈರಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರದ್ದೆ ಆಗಿದ್ದು, ಅದರಲ್ಲಿರುವ ಅಕ್ಷರ ಅವರದ್ದೇ ಆಗಿದ್ದರೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಇದು ಬಿಜೆಪಿ ಷಡ್ಯಂತ್ರವಾಗಿದೆ ಎಂದು ದೂರಿದರು.

ಡೈರಿ ಸತ್ಯಾಸತ್ಯತೆ ಬಹಿರಂಗಕ್ಕೆ ತನಿಖೆ ಆಗಬೇಕು. ಆದರೆ, ಗೋವಿಂದರಾಜು ಅವರು ಡೈರಿ ತನ್ನದಲ್ಲ. ಅದರಲ್ಲಿನ ಅಕ್ಷರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪಕ್ಷದಿಂದ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ನಿಷಿಯಲ್‌ಗಳಿರುವುದು ತಾಂತ್ರಿಕ ವಿಚಾರ. ಹೀಗಾಗಿ ಅದು ಅಪ್ರಸ್ತುತ. ಆದಾಯ ತೆರಿಗೆ ಇಲಾಖೆ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅವರೇ ತನಿಖೆ ನಡೆಸಿ ಸತ್ಯವನ್ನು ತಿಳಿಸಬೇಕು. ಅಲ್ಲಿಯ ತನಕ ಎಲ್ಲರೂ ಕಾಯಬೇಕು ಎಂದು ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.

ಐಟಿ ದಾಳಿ ವೇಳೆ ಡೈರಿ ವಶಪಡಿಸಿಕೊಂಡಿದ್ದಲ್ಲಿ ಅದರಲ್ಲಿನ ಉಲ್ಲೇಖದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿರಬೇಕು. ಹಾಗಿದ್ದರೆ ಇಷ್ಟು ದಿನ ಅವರು ಏನು ಮಾಡುತ್ತಿದ್ದರು. ಕ್ರಮವನ್ನೇಕೆ ಕೈಗೊಳ್ಳಲಿಲ್ಲ. ಇದೆಲ್ಲ ಬಿಜೆಪಿ ತನ್ನ ವೈಯಕ್ತಿಕ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News