ಸೇತುವೆಗಳ ಕಟ್ಟಿ

Update: 2017-02-25 16:01 GMT

ಕೆಲವು ಉತ್ತಮ ಪ್ರೈಮರಿ ಶಾಲೆಗಳಲ್ಲಿ ಸರ್ಕಲ್ ಟೈಮ್ ಎಂದಿರುತ್ತದೆ. ಇದರಲ್ಲಿ ಒಂದಷ್ಟು ಕಾಲ ಎಲ್ಲಾ ಮಕ್ಕಳೂ ವರ್ತುಲಾಕಾರದಲ್ಲಿ ಟೀಚರ್ ಜೊತೆ ಕುಳಿತು ತಮ್ಮ ತಮ್ಮ ಸಮಸ್ಯೆಗಳನ್ನು ಹಾಗೆಯೇ ಸಂತೋಷಗಳನ್ನೂ ನೇರಾನೇರ ಹೇಳುವರು. ಹಾಗೆ ಕಿರುಕುಳ ಕೊಡುವವರ ಬಗ್ಗೆಯೂ ತಿಳಿಸಿದಾಗ ಅದನ್ನು ಶಿಕ್ಷಕರು ವ್ಯವಧಾನದಿಂದ ಕೇಳಿ, ನಂತರ ಅದಕ್ಕೆ ಸಮಾಧಾನಕರವಾದಂತಹ ನಡೆಯನ್ನು ಹೊಂದಬೇಕು.

ರಾಗಿಂಗ್ ರಹಿತ ಶಾಲಾವಲಯವನ್ನು ಅಥವಾ ಕ್ಯಾಂಪಸನ್ನು ಸೃಷ್ಟಿಸಲು ಖಂಡಿತ ಸಾಧ್ಯವಿದೆ. ಅದಕ್ಕೆ ಆಡಳಿತ ಮಂಡಲಿ ಮಾತ್ರವಲ್ಲ, ಶಿಕ್ಷಕರ ಸಮೂಹವೂ ಅತೀವ ಆಸಕ್ತಿ ವಹಿಸಬೇಕಾಗುತ್ತದೆ.

ಶಿಕ್ಷೆ ಪರಿಹಾರವಲ್ಲ

ಸಾಮಾನ್ಯವಾಗಿ ಯಾರು ಬಲಿಪಶುವೋ ಅವನಿಗೆ ಅನುಕಂಪದ ಸಾಂತ್ವನ ನೀಡುವ ಭರದಲ್ಲಿ ಅಪರಾಧಿ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿಯು ಶಿಕ್ಷೆ, ದಂಡನೆ, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಇದು ಹೇಗೆಂದರೆ ಒಬ್ಬ ವಿದ್ಯಾರ್ಥಿಯನ್ನು ರಕ್ಷಿಸಲು ಹೋಗಿ ಮತ್ತೊಬ್ಬ ವಿದ್ಯಾರ್ಥಿಯನ್ನು ೋವಿಗೊಳಮಾಡಿದಂತೆ.

ಕೆಲವು ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಈ ಒಂದು ಬಹಳ ಅವೈಜ್ಞಾನಿಕವಾದಂತಹ ವಿಚಾರಣೆ ಮತು್ತ ತೀರ್ಮಾನಗಳು ಸಂಭವಿಸುತ್ತವೆ.

ಬಹಳಷ್ಟು ಕಡೆ ನೀವಿದನ್ನು ನೋಡಿರುತ್ತೀರಿ.

ಒಂದು ಮಗುವು ಮತ್ತೊಂದು ಮಗುವನ್ನು ಹೊಡೆಯುತ್ತದೆ. ಆಗ ಹೊಡೆದ ಮಗುವನ್ನು ಪೋಷಕರು ಅಥವಾ ಶಿಕ್ಷಕರು ಹೊಡೆಯುತ್ತಾರೆ. ಜೊತೆಗೆ ಇಂತಹ ಮಾತುಗಳೂ ಕೂಡ ಸೇರುತ್ತವೆ. ‘‘ಯಾಕೆ ಹೊಡೆದೆ? ಅವನಿಗೆ ನೋವಾಗಲ್ವಾ? ಈಗ ನಿಂಗೂ ನೋವಾದಂತೆ ಅವನಿಗೂ ನೋವಾಯ್ತು ತಾನೇ? ಹೊಡೀತೀಯಾ? ಹೊಡೀತೀಯಾ?’’ ಎಂದು ಹೊಡೆಯುತ್ತಿರುತ್ತಾರೆ. ನಾನಂತೂ ಬೆರಗಾಗುತ್ತೇನೆ. ಅವನಿಗೆ ನೋವಾಯಿತೆಂದರೆ ಇವನಿಗೆ ನೋವು ಮಾಡುವುದೇ? ಅವನಿಗೆ ಆದ ನೋವಿನ ಅನುಭವವನ್ನು ಇವನಿಗೆ ಕೊಡುವುದಾದರೆ, ಇವನಿಗೆ ಆಗುತ್ತಿರುವ ನೋವಿನ ಅನುಭವ ಹೊಡೆಯುತ್ತಿರುವ ಶಿಕ್ಷಕರಿಗೆ, ಪೋಷಕರಿಗೆ ಆಗುವುದು ಬೇಡವೇ? ಅವರಿಗೆ ನೋವಿನ ಅನುಭವವನ್ನು ಮನಗಾಣಿಸಲು ನೋವನ್ನುಕೊಡುವ ಅಧಿಕಾರ ಹೇೆ ಸಿಕ್ಕೀತೆಂದು ಯಾರು ಹೇಳುತ್ತಾರೆ?

ಹೊಡೆದನೆಂದು ಹೊಡೆದು ಶಿಕ್ಷೆ ನೀಡುವುದು. ಇದು ಅತ್ಯಂತ ಅವಿವೇಕದ ಕ್ರಮ. ಹಾಗೆಯೇ ಮಗುವಿನ ಮನಶಾಸ್ತ್ರದ ಪ್ರಕಾರ ಅತ್ಯಂತ ಅವೈಜ್ಞಾನಿಕ ಕ್ರಮವೂ ಹೌದು. ಶಿಕ್ಷೆಯ ಭಯದಿಂದ ಸಜ್ಜನರಾಗಿರುವುದೆಂದರೆ ಅವರ ಸಜ್ಜನಿಕೆ ಪ್ರಾಮಾಣಿಕವಲ್ಲ ಎಂದಾಯಿತು. ಪ್ರಾಮಾಣಿಕವಲ್ಲದ ಸಜ್ಜನಿಕೆ ಮತ್ತು ಸನ್ನಡತೆ ಎಷ್ಟರ ಮಟ್ಟಿಗೆ ಉಳಿದೀತು? ಮಾನ್ಯವಾದೀತು?

ಅಂತರವಿರಿಸುವುದು

ಮಕ್ಕಳು ಜಗಳವಾಡುತ್ತಾರೆಂದು ಅವರಲ್ಲಿ ಅಂತರವನ್ನು ಇರಿಸುವುದೂ ಕೂಡಾ ಒಂದು ಸಾಮಾನ್ಯ ವಿಧಾನ. ರ್ಯಾಗಿಂಗ್ ಮಾಡುವ ಮಕ್ಕಳನ್ನು ಇತರ ಮಕ್ಕಳೊಂದಿಗೆ ಬೆರೆಯದಂತೆ ನೋಡಿಕೊಳ್ಳುವುದು, ಒರಟು ಸ್ವಭಾವದ ಮಕ್ಕಳನ್ನು ಸಾತ್ವಿಕ ಮತ್ತು ಶಿಷ್ಟ ಮಕ್ಕಳೊಂದಿಗೆ ಬೆರೆಯದಂತೆ ನೋಡಿಕೊಳ್ಳುವುದು ಅಲ್ಲಲ್ಲಿ ಕಾಣುತ್ತೇವೆ. ಹಿರಿಯರು ಸಾತ್ವಿಕ ಮಕ್ಕಳಿಗೆ ಹೀಗೆ ಹೇಳುವುದುಂಟು, ‘‘ಅವನು ಸರಿ ಇಲ್ಲ ಅಂತ ಗೊತ್ತು ತಾನೇ? ಯಾತಕ್ಕೆ ಅವನ ತಂಟೆಗೆ ಹೋಗ್ತೀಯಾ? ನಿನ್ನ ಪಾಡಿಗೆ ನೀನು ಇರು. ಅವನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ’’.

ಹಾಗೆಯೇ ರಾಜಸಿಕ ಮತ್ತು ತಾಮಸಿಕ ಮಕ್ಕಳಿಗೂ ಹೇಳುವುದುಂಟು, ‘‘ಪಾಪ ಅವನ ಪಾಡಿಗೆ ಅವನು ಇದ್ದಾನೆ ತಾನೇ? ಅವನ ತಂಟೆಗೆ ಏಕೆ ಹೋಗ್ತೀಯಾ? ಅವನೇನಾದರೂ ನಿನ್ನತಂಟೆಗೆ ಬಂದನಾ? ಇನ್ನೊಂದು ಸಲ ಅವನ ತಂಟೆಗೆ ಹೋದರೆ ಸುಮ್ಮನಿರಲ್ಲ. ನೋಡು ಏನು ಮಾಡ್ತೀವಿ ಅಂತ’’.

ಮಕ್ಕಳಲ್ಲಿ ಸಂತ ಮಕ್ಕಳು, ಸೈತಾನ ಮಕ್ಕಳು ಅಂತ ಇಲ್ಲ. ಪೋಷಕರು ಮತ್ತು ಶಿಕ್ಷಕರು ದುಷ್ಟರಿಗೆ ಶಿಕ್ಷೆ ನೀಡುವ, ಶಿಷ್ಟರನ್ನು ರಕ್ಷಣೆ ಮಾಡುವ ಅವತಾರ ಎತ್ತುವಷ್ಟಿಲ್ಲ. ಎಷ್ಟು ಕಾಲ ಶಿಷ್ಟ ಮಗುವಿನ ಬೆನ್ನ ಹಿಂದೆಯೇ ಇದ್ದು ಸರ್ವಾಂತರ್ಯಾಮಿ ಮತ್ತು ಸರ್ವಶಕ್ತ ಪೋಷಕರು ಮತ್ತು ಶಿಕ್ಷಕರು ಕಾಪಾಡುವರು? ಮಕ್ಕಳ ನಡುವೆ ಅಂತರ ಕಲ್ಪಿಸಿದಷ್ಟೂ ಅವು ಕಂದಕಗಳಾಗುತ್ತವೆ.

ಹಾಗೆ ಉಂಟಾದ ಕಂದಕಗಳನ್ನು ಅವರು ಎಂದಿಗೂ ದಾಟುವುದಿಲ್ಲ. ಅಂತರ ಕಾಪಾಡಿಕೊಳ್ಳುವುದು ಎಂದರೆ ಕಂದಕವನ್ನು ಕಾಯ್ದುಕೊಂಡಂತೆಯೇ ಹೊರತು ಇನ್ನೇನೂ ಅಲ್ಲ. ಇಷ್ಟು ಮಕ್ಕಳಲ್ಲಿ ಅಭ್ಯಾಸವಾಯಿತೆಂದರೆ ದೊಡ್ಡವಾದ ಮೇಲೂ ಮುಂದುವರಿಯುತ್ತದೆ.

ಗಮನಿಸಿ ನೋಡಿ, ಹಿರಿಯರಲ್ಲಿಯೇ ಕೆಲವರು ಎಂದೆಂದಿಗೂ ಕಂದಕವನ್ನು ಮುಚ್ಚುವ ಅಥವಾ ಸೇತುವೆಯನ್ನು ಕಟ್ಟಿಕೊಳ್ಳುವ ಕೆಲಸ ಮಾಡುವುದೇ ಇಲ್ಲ. ಜೊತೆ ಜೊತೆಯಾಗಿಯೇ ಕೆಲಸ ಮಾಡುವ ಸಂದರ್ಭ ಬಂದಾಗಲೂ ಆಂತರಿಕ ಕಂದಕವನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಮುಖದಲ್ಲಿನ, ಮನದಲ್ಲಿನ ಬಿಗುವು ಮುಕ್ತವಾಗಿರಲೂ ಬಿಡುವುದಿಲ್ಲ. ಇಬ್ಬರ ಸಾಮರ್ಥ್ಯವನ್ನು ಧಾರೆ ಎರೆದು ಒಂದು ರಚನಾತ್ಮಕ ಕೆಲಸವನ್ನೂ ಮಾಡಲಾಗುವುದಿಲ್ಲ. ಇವೆಲ್ಲವೂ ಬಾಲ್ಯದಲ್ಲಿ ಅಂತರವನ್ನು ಕಾಯ್ದುಕೊಂಡಿರುವ ಪರಿಣಾಮವೇ. ಆದರೆ ಅದು ದೊಡ್ಡವರ ಸ್ಮರಣೆಗೆ ಎಂದಿಗೂ ಬರುವುದೇ ಇಲ್ಲ. ಇನ್ನೂ ಘೋರವೆಂದರೆ ತಂದೆ ಮಕ್ಕಳಲ್ಲೇ, ಕೆಲವೊಮ್ಮೆ ಒಡಹುಟ್ಟುಗಳಲ್ಲೂ ಇಂತಹ ಅಂತರವನ್ನು ಕಾಯ್ದಿರಿಸಿಕೊಳ್ಳಲಾಗುತ್ತದೆ.

ಉತ್ತಮ ಅಭ್ಯಾಸಿ ಮತ್ತು ಸೋಮಾರಿ, ಶಿಸ್ತು ಮತ್ತು ಅಶಿಸ್ತು, ಶುದ್ಧ ಮತ್ತು ಕೊಳಕು, ಒರಟ ಹಾಗೂ ಮೃದು, ಬುದ್ಧಿವಂತ ಹಾಗೂ ದಡ್ಡ, ಚುರುಕು ಮತ್ತು ಮಂದ, ಉಳ್ಳವರ ಮಕ್ಕಳು ಮತ್ತು ಬಡವರ ಮಕ್ಕಳು, ಬಂಡವಾಳದಾರರ ಮಕ್ಕಳು ಮತ್ತು ಕಾರ್ಮಿಕರ ಮಕ್ಕಳು, ವೈಟ್ ಕಾಲರ್ ಮಕ್ಕಳು ಮತ್ತು ಕಪ್ಪು ಕಾಲರ್ ಅಥವಾ ಕಾಲರ್ರೇ ಇಲ್ಲದ ಮಕ್ಕಳು, ದುಷ್ಟ ಮತ್ತು ಶಿಷ್ಟ, ಸಂತ ಮತ್ತು ಸೈತಾನ; ಹೀಗೆ ಅನೇಕಾನೇಕ ಕಾರಣಗಳಿಂದ ಮನೆಯಲ್ಲಿರುವ ಮಕ್ಕಳ ಮತ್ತು ಸಮಾಜದಲ್ಲಿಯೂ ಮಕ್ಕಳ ನಡುವೆ ಕಾಯ್ದುಕೊಳ್ಳುವ ಅಂತರಗಳು ದುರಂತಗಳನ್ನು ಉಂಟುಮಾಡುವಂತಹ ಕಂದಕಗಳಾಗುತ್ತವೆ.

ಸೇತುವೆಗಳಾಗಿ

ಕೆಲವು ಉತ್ತಮ ಪ್ರೈಮರಿ ಶಾಲೆಗಳಲ್ಲಿ ಸರ್ಕಲ್ ಟೈಮ್ ಎಂದಿರುತ್ತದೆ. ಇದರಲ್ಲಿ ಒಂದಷ್ಟು ಕಾಲ ಎಲ್ಲಾ ಮಕ್ಕಳೂ ವರ್ತುಲಾಕಾರದಲ್ಲಿ ಟೀಚರ್ ಜೊತೆ ಕುಳಿತು ತಮ್ಮ ತಮ್ಮ ಸಮಸ್ಯೆಗಳನ್ನು ಹಾಗೆಯೇ ಸಂತೋಷಗಳನ್ನೂ ನೇರಾನೇರ ಹೇಳುವರು. ಹಾಗೆ ಕಿರುಕುಳ ಕೊಡುವವರ ಬಗ್ಗೆಯೂ ತಿಳಿಸಿದಾಗ ಅದನ್ನು ಶಿಕ್ಷಕರು ವ್ಯವಧಾನದಿಂದ ಕೇಳಿ, ನಂತರ ಅದಕ್ಕೆ ಸಮಾಧಾನಕರವಾಂತಹ ನಡೆಯನ್ನು ಹೊಂದಬೇಕು.

ಉದಾಹರಣೆಗೆ ಕಿರುಕುಳ ಅನುಭವಿಸಿದ ಮಗುವು ಕಿರುಕುಳ ಕೊಟ್ಟ ಮಗುವಿನ ಬಗ್ಗೆ ಹೇಳಿದಾಗ ಎರಡೂ ಮಗುವಿನ ಸಕಾರಾತ್ಮಕ ಅಂಶಗಳನ್ನು ಹೇಳಿ, ಒಬ್ಬರಿಗೊಬ್ಬರು ನಕಾರಾತ್ಮಕ ಭಾವಗಳನ್ನು ಕ್ಷಮಿಸಿ ನಂತರ ಸ್ನೇಹಿರಾಗಿರುವಂತೆ ಪ್ರೇರೇಪಿಸುವುದು.

ಒಂದು ಘಟನೆಯನ್ನು ಗಮನಿಸಿ: ಅದೊಂದು ನಾಲ್ಕನೆಯ ತರಗತಿಯ ಮಕ್ಕಳ ಸರ್ಕಲ್ ಟೈಮ್. ಹಾರಿಸ್ ತನ್ನ ಸಹಪಾಠಿ ಶ್ಯಾಮ್ ಸುಂದರ್‌ನ ತಿಂಡಿಯ ಡಬ್ಬವನ್ನು ನೆಲಕ್ಕೆ ಹಾಕಿ ಒಳಗಿರುವುದನ್ನು ಚೆಲ್ಲಿದ್ದ. ಅಲ್ಲದೇ ಅದನ್ನು ಕೇಳಲು ಬಂದ ಶ್ಯಾಂನ ಹೊಡೆದಿದ್ದ. ಅದನ್ನು ಶ್ಯಾಂ ಶಿಕ್ಷಕಿಗೆ ಹೇಳಿದ.

ಶಿಕ್ಷಕಿ ಹೀಗೆ ಹೇಳಿದಳು, ‘‘ಹೌದಾ? ನನಗೆ ನಂಬಕ್ಕೇ ಆಗ್ತಿಲ್ಲ. ಹಾರಿಸ್ ನನ್ನ ಅಚ್ಚುಮೆಚ್ಚಿನ ಹುಡುಗ. ಅವನು ಹಾಗೆ ಮಾಡಲ್ವಲ್ಲಾ. ಬಹುಶಃ ಬೆಳಗ್ಗೆ ಟಿಫಿನ್ ಮಾಡಿದ್ದು ಸಾಕಾಗಲಿಲ್ಲ ಅಂತ ಅನ್ನಿಸತ್ತೆ. ಅಲ್ವಾ ಹಾರಿಸ್?’’ ಅದಕ್ಕೆ ಹಾರಿಸ್ ಹಾಗೇೂ ಇಲ್ಲ ಎಂದು ತಲೆಯಾಡಿಸಿದ.

‘‘ಶ್ಯಾಂ ನೀನು ಇನ್ನು ಮೇಲೆ ನೀನು ತರೋ ತಿಂಡೀನಾ ಅವನ ಜೊತೆ ಶೇರ್ ಮಾಡಿಕೋ. ಹಾರಿಸ್ ನೀನೂ ಅಷ್ಟೇ. ನಿನ್ನದನ್ನ ಕೊಡು. ನನಗೆ ನಿಮ್ಮಿಬ್ಬರನ್ನೂ ಕಂಡರೆ ತುಂಬಾ ಇಷ್ಟ. ಹಾ, ಹಾರಿಸ್ ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತಾನೆ. ಶ್ಯಾಂ ತುಂಬಾ ಚೆನ್ನಾಗಿ ಹಾಡೇಳ್ತಾನೆ. ಈಗ ಅವನು ಹಾಡ್ತಾನೆ ಇವನು ಡಾನ್ಸ್ ಮಾಡ್ತಾನೆ.’’ ಶಿಕ್ಷಕಿಯ ಜೊತೆ ಸೇರಿ ಎಲ್ಲಾ ಹುಡುಗರೂ ಚಪ್ಪಾಳೆ ತಟ್ಟುತ್ತಾ ಅವರ ಡಾನ್ಸ್ ಮತ್ತು ಹಾಡು ಬೇಕೆಂದು ಕೂಾಡುತ್ತಾ ಪ್ರೋತ್ಸಾಹಿಸತೊಡಗಿದರು.

‘‘ನೀವಿಬ್ಬರೂ ಟೈ ತಗೊಳ್ಳಿ. ಆ ಕಡೆ ಹೋಗಿ ಯಾವ ಹಾಡು, ಯಾವ ಡಾನ್ಸ್ ಮಾಡೋದು ಅಂತ ಡಿಸೈಡ್ ಮಾಡಿ. ಹೋಗಿ ಹೋಗಿ, ವಂಡರ್ ಫುಲ್ ಕಿಡ್ಸ್’’ ಎಂದು ಆ ಮಕ್ಕಳನ್ನು ಪಕ್ಕಕ್ಕೆ ಕಳುಹಿಸಿದರು. ಹಾರಿಸ್ ಮತ್ತು ಶ್ಯಾಂ ಪಕ್ಕಕ್ಕೆ ಹೋಗಿ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು ‘‘ಯಾವುದು ಹೇಳ್ತೀಯೋ, ನೀನಾವುದು ಮಾಡ್ತಿೀಯಾ? ಯಾವುದು ನಿಂಗೆ ಗೊತ್ತು...’’

ಇದೊಂದು ಸಣ್ಣ ಉದಾಹರಣೆ. ಹೀಗೆ ಸಂದರ್ಭಾನುಸಾರವಾಗಿ ಶಿಕ್ಷಕರು ಮತ್ತು ಪೋಷಕರು ತಮ್ಮ ಅಭಿನಯ ಮತ್ತು ಇತರ ತಂತ್ರಗಾರಿಕೆಗಳ ಮೂಲಕ ಅವರನ್ನು ಒಂದು ಸಾಮಾನ್ಯವಾದ ರಚನಾತ್ಮಕವಾದ ಕೆಲಸಕ್ಕೆ ದೂಡಬೇಕು. ಮಕ್ಕಳು ಅವು. ಅವಕ್ಕೆ ಹಿರಿಯರದು ಅದೊಂದು ನಾಟಕವೆಂದೂ ತಿಳಿಯದು. ಆದರೆ ಅವರು ಗಂಭೀರವಾಗಿ ತಮ್ಮನ್ನು ತಾವು ಒಟ್ಟಾಗಿ ಕೆಲಸಕ್ಕೆ ಹಚ್ಚಿಕೊಳ್ಳುವರು. ಹಾಗೆಯೇ ತಮ್ಮನ್ನು ಪ್ರೀತಿಸುವ ಹಿರಿಯರ ಮುಂದೆ ಕಡೆಗಣಿಸಲ್ಪಡಲು ಅಥವಾ ನಿರಾಕರಿಸಲ್ಪಡಲು ಇಷ್ಟಪಡುವುದಿಲ್ಲ.

ಅಂತರ ಕಾಯುವ ಅಥವಾ ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಯ ಅವತಾರ ಎತ್ತಿದರೆ ಅವರು ತಾವು ದುಷ್ಟರಾಗಿಯೇ ಉಳಿಯಲು ನಿರ್ಧರಿಸುವರು.

ಸಕಾರಾತ್ಮಕ ಗುಣಗಳ ಪ್ರಶಂಸೆ

ಇನ್ನು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳ ನಡುವೆ ಕಿರುಕುಳಗಳನ್ನು ಕೊಡುವಂತಹ ಸೂಚನೆಗಳು ಕಂಡರೆ ಸರ್ಕಲ್ ಟೈಮ್ ಕೆಲಸಕ್ಕೆ ಬರುವುದಿಲ್ಲ. ಎಲ್ಲರ ಎದುರು ಹೇಳುವುದು ಅವರಿಗೆ ಅವಮಾನದ ವಿಷಯವಾಗಿ ಕಾಣುವುದಲ್ಲದೇ ದೈಹಿಕವಾಗಿ ಬಲಶಾಲಿಗಳೂ ಆಗಿರುವುದರಿಂದ ಹೊಡೆದಾಟಕ್ಕೆ ಮುಂದಾಗಿಬಿಡುತ್ತಾರೆ. ಅವರ ಅಹಂಕಾರಕ್ಕೆ ಪೆಟ್ಟು ಬಿದ್ದರಂತೂ ತೀರಿತು. ಗುಂಪುಗಾರಿಕೆಯಿಂದ ಒಬ್ಬರನ್ನೊಬ್ಬರು ಬಡಿದು ಹಾಕಲು ಯತ್ನಿಸುತ್ತಾರೆ. ಆದ್ದರಿಂದ ಇವರಲ್ಲಿ ಸಮಾಲೋಚನೆಯ ಶಿಬಿರಗಳನ್ನು ನಡೆಸಬೇಕು.

ಅವುಗಳಲ್ಲಿ ಕಿರುಕುಳ ಕೊಡುವ ಮತ್ತು ಒಳಗಾಗುತ್ತಿರುವ ಮಕ್ಕಳ ನಡುವೆ ಸಂವಾದ ಏರ್ಪಡಿಸುವ ಅಥವಾ ಅವರ ನಡುವೆ ಸಂವಹನೆ ನಡೆಯುವಂತಹ ಉದ್ದೇಶವನ್ನು ಹೊಂದಿರಬೇಕು. ಈ ಮಕ್ಕಳ ನಡುವೆ ಸೇತುವೆಯನ್ನು ನಿರ್ಮಿಸುವುದೇ ಆ ಶಿಬಿರಗಳ ಧ್ಯೇಯವಾಗಿರಬೇಕು. ಅದನ್ನು ಹಲವು ರೀತಿಗಳಲ್ಲಿ ನಡೆಸಬಹುದು.

 1.ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಯು ತನಗೆ ಕಿರುಕುಳ ಕೊಡುತ್ತಿರುವವರ ಹೆಸರನ್ನು ಹೇಳದೆಯೇ ತನ್ನ ತೊಂದರೆಯನ್ನೂ, ಅದರಿಂದ ತನಗೆ ಉಂಟಾಗಿರುವ ಅಳಲನ್ನೂ ತೋಡಿಕೊಳ್ಳಬಹುದು. ಆಗ ಸಭೆಯಲ್ಲಿ ಅವನ ಕುರಿತು ಉಂಟಾಗುವ ಅನುಕಂಪದ ಪ್ರಭಾವ ಕಿರುಕುಳ ಕೊಡುವವನ ಮೇಲೂ ಆಗುತ್ತದೆ ಹಾಗೂ ಅವನು ಕೊಂಚ ಅಧೀರನಾದರೆ ಇದರಿಂದ ತನಗೆ ತೊಂದರೆ ಉಂಟಾಗುತ್ತದೆ ಎಂದೂ ಮನವರಿಕೆ ಮಾಡಿಕೊಳ್ಳುತ್ತಾನೆ.

ಏಕೆಂದರೆ ಈ ಬಗೆಯ ತೊಂದರೆಗಳನ್ನು ಉಂಟು ಮಾಡುವುದು ಕಾನೂನು ಮತ್ತು ವ್ಯವಸ್ಥೆಯಲ್ಲಿ ಎಂತಹ ತಪ್ಪು ಅದಕ್ಕೆ ಎಂತಹ ಶಿಕ್ಷೆಯಾಗುತ್ತದೆ ಎಂದೂ ತಿಳಿಸಬಹುದು. ಹಾಗೆಯೇ ವಿದ್ಯಾರ್ಥಿ ದೆಸೆಯಲ್ಲಿ ತಿದ್ದಿಕೊಂಡರೆ ಎಂತಹ ಒಳ್ಳೆಯ ಭವಿಷ್ಯವಿದೆ ಎಂಬ ಪರಿಣಾಮಕಾರಿಯಾದಂತಹ ವಾತುಗಳನ್ನು ತಜ್ಞರು ಆಡಬಹುದು.

  2.ಸಭೆ ಅಥವಾ ಭಾಷಣವಲ್ಲದೇ ಆಂತರಿಕವಾಗಿ ಕಾರ್ಯಾಗಾರಗಳನ್ನು ನಡೆಸುವಾಗ ತೊಂದರೆಗೀಡಾಗುವ ಮತ್ತು ತೊಂದರೆ ಕೊಡುವ ವಿದ್ಯಾರ್ಥಿಗಳನ್ನು ಮುಖಾಮುಖಿಗೊಳಿಸಿ (ಇತರರ ಜೊತೆ) ಇಬ್ಬರೂ ಪರಸ್ಪರ ಒಪ್ಪುವ ಅಥವಾ ಪ್ರಶಂಸಿಸುವ ಮತ್ತು ನಿರಾಕರಿಸುವ ಅಥವಾ ಖಂಡಿಸುವ ಗುಣಗಳನ್ನು ಬರೆಯಿಸುವುದು. ನಂತರ ಅದನ್ನು ಶಿಕ್ಷಕರು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿ ಒಬ್ಬರಿಗೊಬ್ಬರು ಕೊಡುವಂತೆ ಮಾಡುವುದು.

ಅವರು ಪ್ರಶಂಸೆ ಮಾಡಿರುವಂತಹ ಗುಣ ಅಥವಾ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಇಬ್ಬರೂ ಸೇರಿ ಒಂದು ಕೆಲಸ ಮಾಡುವುದು. ಸಾಮೂಹಿಕವಾಗಿ ತಂಡ ನಿರ್ಮಿಸಿಯೂ ಮಾಡಬಹುದು. ಒಟ್ಟಾರೆ ಒಬ್ಬರ ಸಾಮರ್ಥ್ಯ ಮತ್ತು ಪ್ರತಿಭೆಗಳು ಪೂರಕವಾಗಿ ಕೆಲಸ ಮಾಡಿದರೆ ರಚನಾತ್ಮಕವಾದ ಸಂಗತಿಗಳು ಘಟಿಸುತ್ತವೆ. ಒಬ್ಬರ ದ್ವೇಷ ಮತ್ತು ಕೋಪಗಳನ್ನು ಹರಿಹಾಯತೊಡಗಿದರೆ ವಿನಾಶಕರ ಸಂಗತಿಗಳು ಘಟಿಸುತ್ತವೆ ಎಂಬುನ್ನು ಮನವರಿಕೆ ಮಾಡಿಸುವುದು.

  3.ದೂರುಗಳನ್ನು ಸ್ವೀಕರಿಸಿರುವ ಶಿಕ್ಷಕರು, ಸ್ವಯಂಸೇವಕರು ಅಥವಾ ಕಾರ್ಯಕರ್ತರು ಇಬ್ಬರೂ ಹುಡುಗರನ್ನು ಗಮನಿಸುವುದು. ಅವರ ಮನೋಧರ್ಮಗಳನ್ನು ಮತ್ತು ಸ್ವಭಾವಗಳನ್ನು ಗುರುತಿಸಿ ನಂತರ ವ್ಯಕ್ತಿಗತವಾಗಿ ಅವರ ಸಮಸ್ಯೆಗೆ ಪರಿಹಾರವನ್ನುನೀಡುವ ಪ್ರಯತ್ನ ಮಾಡುವುದು.

 4.ಅಧ್ಯಯನದ ನಡುವೆ ಹೆಚ್ಚು ಹೆಚ್ಚು ಆಕರ್ಷಕ ಕೆಲಸಗಳನ್ನು ತಂಡಗಳನ್ನಾಗಿ ನಿರ್ಮಿಸಿ ಮಾಡಿಸುವುದು. ತಂಡಗಳ ಸದಸ್ಯರನ್ನು ಆಗ್ಗಿಂದಾಗ್ಗೆ ಬದಲಿಸುತ್ತಿರಬೇಕು.

  5.ತೀರಾ ಗಂಭೀರವಾದಂತಹ ಸ್ವಭಾವ ದೋಷಗಳಿದ್ದರೆ ಮನೆಯಲ್ಲಿ ಪೋಷಕರಿಗೂ ಇದರ ಕುರಿತಾಗಿ ಗಮನಕ್ಕೆ ತಂದು, ಅದನ್ನು ತಿದ್ದುವ ದಿಕ್ಕಿನಲ್ಲಿ ಒಟ್ಟು ಜವಾಬ್ದಾರಿಯನ್ನು ಹೊಂದಬೇಕು.

 6.ಯಾವುದೇ ರೀತಿಯ ಕಿರುಕುಳಗಳನ್ನು ಶಿಕ್ಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತರಲು ಯಾವುದೇ ರೀತಿಯ ಪೂರ್ವಾಗ್ರಹಗಳು ಮಕ್ಕಳಲ್ಲಿ ಇಲ್ಲದಿರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಮಕ್ಕಳು ಮುಕ್ತವಾಗಿ ಶಿಕ್ಷಕರೊಡನೆ ಬೆರೆಯುವಂತ ವಾತಾವರಣ ಶಾಲೆಯಲ್ಲಿ ಇರಬೇಕು.

 7.ಪೋಷಕರು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಜೊತೆಗೆ ಮುಕ್ತವಾಗಿ ತಮ್ಮ ಸಮಸ್ಯೆಯನ್ನು ಅಥವಾ ಅನುಮಾನವನ್ನು ಹೇಳಿೊಳ್ಳಲು ಖಾಸಗಿ ಅವಕಾಶವಿರಬೇಕು.

  8.ಪೋಷಕರು ತುರ್ತು ವಿಚಾರಣೆ ನಡೆಸಬೇಕಾದ ಸಂದರ್ಭ ಬಂದರೆ ಯಾರನ್ನು ಸಂಪರ್ಕಿಸಬೇಕೆಂದು ಸ್ಪಷ್ಟವಾದ ನಿರ್ದೇಶನ ದೊರಕಿರಬೇಕು.

  9.ಸಾಮಾನ್ಯವಾಗಿ ಪೋಷಕರು ತಮ್ಮ ಮಗು ತೊಂದರೆಗೊಳಗಾಯಿತೆಂದ ಕೂಡಲೇ ತಮ್ಮ ಮಗು ಬಲಿಪಶು ಮತ್ತು ಮತ್ತೊಂದು ಮಗು ಅಪರಾಧಿ ಎಂದು ನೋಡತೊಡಗುತ್ತಾರೆ. ಆದರೆ ಶಿಕ್ಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಎರಡೂ ಮಕ್ಕಳೇ.

ಅವರಿಬ್ಬರಲ್ಲಿ ಯಾರೊಬ್ಬರಿಗೂ ಅನ್ಯಾಯವಾಗದ ರೀತಿಯಲ್ಲಿ ಎರಡೂ ಕಡೆಯ ಪೋಷಕರಿಗೆ ತಿಳುವಳಿಕೆ ನೀಡಬೇಕು. ಶಿಕ್ಷೆ, ದಂಡನೆ, ನಿಂದನೆಗಳಲ್ಲೇ ನಂಬಿಕೆ ಇರುವ ಜನಕ್ಕೆ ಅಷ್ಟು ಸುಲಭವಾಗಿ ಸೇತುವೆಯ ಧೋರಣೆ ಅರ್ಥವಾಗುವುದಿಲ್ಲ. ಹಾಗೆಂದು ಬಿಡಲಾಗುವುದೂ ಇಲ್ಲ.

Writer - ಯೋಗೇಶ್ ಮಾಸ್ಷರ್

contributor

Editor - ಯೋಗೇಶ್ ಮಾಸ್ಷರ್

contributor

Similar News