ದೌಲತಾಬಾದ್ ನಿಂದ ಅಹ್ಮದಾಬಾದ್ ವರೆಗೆ
ಮುಹಮ್ಮದ್ ಬಿನ್ ತುಘಲಕ್‌ನನ್ನು ಆತನ ಎರಡು ದುರಂತಮಯ ದಂಡೆಯಾತ್ರೆಗಳು ಕೆಳಕ್ಕ್ಕಿಳಿಸಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳು ಈ ಕೆಲಸವನ್ನು ಮಾಡಬಹುದು. ಇದರಿಂದ ಸಾಧಿಸಿದ್ದು ಏನಿಲ್ಲವಾದರೂ ಹಗೆತನ ಮತ್ತು ದ್ವೇಷದ ವಾತಾವರಣವನ್ನು ಇದು ಸೃಷ್ಟಿಸಿತು ಮತ್ತು ಭಾರತವನ್ನು ಅತ್ಯುತ್ತಮ ದೇಶವನ್ನಾಗಿ ಮಾಡಲು ಅಗತ್ಯವಿರುವ ಆರ್ಥಿಕ ಬೆಳವಣಿಗೆಗೆ ಇದು ಒಳ್ಳೆಯದಲ್ಲ. ಇತಿಹಾಸದ ಜೊತೆ ತಳಕು ಹಾಕುವ ಇಂದಿನ ಸ್ಥಿತಿ ನಿಜವಾಗಿಯೂ ಆತಂಕವನ್ನು ಉಂಟುಮಾಡುತ್ತದೆ ಮತ್ತು ಕೈಗಳನ್ನು ಜೋಡಿಸಿ ಉತ್ತಮವಾದುದು ನಡೆಯುತ್ತದೆ ಎಂಬ ಭರವಸೆಯನ್ನು ಇಡುವುದರ ಹೊರತು ಬೇರೆಯೇನೂ ವಿಧಿಯಿಲ್ಲ.
ಪ್ರಸಿದ್ಧ ಮಾತೊಂದಿದೆ-ಇತಿಹಾಸ ತಾನಾಗಿ ಮರುಕಳಿಸುತ್ತದೆ. ಮುಹಮ್ಮದ್ ಬಿನ್ ತುಘಲಕ್ ದಿಲ್ಲಿಯನ್ನು ಕ್ರಿ.ಶ.1325 ರಿಂದ ಕ್ರಿ.ಶ. 1351ರವರೆಗೆ ಆಳಿದ. ಅಲ್ಲಾವುದ್ದೀನ್ ಖಿಲ್ಜಿಯ ನಂತರ ಈತನೇ ದಿಲ್ಲಿಯ ಅತ್ಯುತ್ತಮ ಸುಲ್ತಾನನಾಗಿದ್ದಾನೆ.
ಈತನನ್ನು ಹಲವು ಕ್ಷೇತ್ರಗಳಲ್ಲಿ ಮುಖ್ಯವಾಗಿ ಆಡಳಿತ ಮತ್ತು ಕೃಷಿಯಲ್ಲಿ ಪ್ರಯೋಗ ಮತ್ತು ನವನವೀನ ಯೋಚನೆಗಳಿಗಾಗಿ ನೆನಪಿಸಲಾಗುತ್ತದೆ. ಈತ ತನ್ನ ಕಾಲದ ಅತ್ಯಂತ ಪ್ರಭಾವಿ ಆಡಳಿತಗಾರರಲ್ಲಿ ಒಬ್ಬನು.
ಉನ್ನತ ಶಿಕ್ಷಣ ಹೊಂದಿದ್ದ ತುಘಲಕ್ ಅರೆಬಿಕ್ ಮತ್ತು ಪರ್ಶಿಯನ್ ಎರಡೂ ಭಾಷೆಗಳನ್ನು ಬಲ್ಲವನಾಗಿದ್ದ. ಧಾರ್ಮಿಕ, ತತ್ವಶಾಸ್ತ್ರ, ಖಗೋಳಶಾಸ್ತ್ರ, ಗಣಿತ, ಔಷಧಿ ಮತ್ತು ತಾರ್ಕಿಕ ವಿಷಯಗಳಲ್ಲಿ ಆತ ಪ್ರವೀಣನಾಗಿದ್ದ. ಆತಕೈಬರಹದಲ್ಲೂ ಔನತ್ಯ ಪಡೆದಿದ್ದ.
ಸುಲ್ತಾನನಲ್ಲಿ ಇಷ್ಟೆಲ್ಲಾ ಉತ್ತಮ ಜ್ಞಾನಗಳಿದ್ದರೂ ಆತನಲ್ಲಿ ಕೆಲವು ದೌರ್ಬಲ್ಯಗಳೂ ಇದ್ದವು. ಆತ ತಾಳ್ಮೆರಹಿತ ಮತ್ತು ಆತುರದ ಸ್ವಭಾವ ಹೊಂದಿದ್ದ ಕಾರಣ ಆತನ ಹಲವು ಪ್ರಯೋಗಗಳು ವಿಫಲವಾಗಿದ್ದವು. ತಂದೆಯ ಮರಣದ ನಂತರ ದಿಲ್ಲಿಯ ರಾಜಪೀಠವನ್ನೇರಿದ ಆತ ತುಘಲಕ್‌ಬಾದ್‌ನಲ್ಲಿ ತನ್ನನ್ನು ಸುಲ್ತಾನನೆಂದು ಘೋಷಿಸಿ ಅಲ್ಲೇ ನಲ್ವತ್ತು ದಿನಗಳ ಕಾಲ ಉಳಿದ.
ಆತ ದಿಲ್ಲಿಗೆ ಮರಳಿದಾಗ ರಾಜ್ಯದ ಜನತೆಯಿಂದ ಭವ್ಯ ಸ್ವಾಗತವನ್ನು ಪಡೆದ. ಆತನ ಪಟ್ಟಾಭಿಷೇಕ ಬಲ್ಬಾನ್‌ನ ಕೆಂಪು ಅರಮನೆಯಲ್ಲಿ ನಡೆಯಿತು. ಜನರ ನಿರೀಕ್ಷೆಯ ಫಲವಾಗಿ ಆತ ವಿವಿಧ ಕ್ಷೇತ್ರಗಳಲ್ಲಿ ಕೆಚ್ಚೆದೆಯ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದ. ಮೊದಲನೆಯದಾಗಿ ದೇಶದ ಆದಾಯ ಮತ್ತು ಖರ್ಚಿನ ಮೇಲೆ ಸರಿಯಾದ ನಿಯಂತ್ರಣವಿಡುವ ಕ್ರಮವಾಗಿ ಆದಾಯ ಮೌಲ್ಯಮಾಪನ ಮಾಡಿದ. ಇದಕ್ಕಾಗಿ ಆತ ಪ್ರತ್ಯೇಕ ಕಚೇರಿಯನ್ನು ತೆರೆದ. ಸಮಾನ ಆದಾಯ ಮಟ್ಟವನ್ನು ಹೊಂದುವುದು ಇದರ ಹಿಂದಿನ ಯೋಚನೆಯಾಗಿತ್ತು.
ಆದರೆ, ದಾವೊಬ್ ಪ್ರದೇಶದಲ್ಲಿ ತೆರಿಗೆಯಲ್ಲಿ ಏರಿಕೆ ಆತ ಇಟ್ಟ ಮೊದಲ ತಪ್ಪು ಹೆಜ್ಜೆಯಾಗಿತ್ತು. ಆ ಪ್ರದೇಶ ಅತ್ಯಂತ ಫಲವತ್ತಾಗಿದ್ದರೂ ಅದಾಗಲೇ ರೈತರು ತಾವು ಬೆಳೆದ ಬೆಳೆಯ ಅರ್ಧಭಾಗವನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಿದ್ದರು. ಮತ್ತೆ ಈ ಏರಿಕೆಯನ್ನು ಕೂಡಾ ಆ ಪ್ರದೇಶವು ಬರಗಾಲ ಪೀಡಿತವಾಗಿದ್ದ ಸಮಯದಲ್ಲೇ ಮಾಡಲಾಗಿತ್ತು.
ತೆರಿಗೆಯನ್ನು ಪಡೆಯುವ ಸಲುವಾಗಿ ಸುಲ್ತಾನ ಕಠಿಣ ಕ್ರಮಗಳನ್ನು ತೆಗೆದುಕೊಂಡ ಫಲವಾಗಿ ರೈತರು ಆ ಪ್ರದೇಶವನ್ನು ತೊರೆದು ಓಡಲು ಆರಂಭಿಸಿದರು ಮತ್ತು ಕೆಲವರಂತೂ ಕಾಡು ಸೇರಿ ಡಕಾಯಿತರ ಜೊತೆ ಕೈಜೋಡಿಸಿದರು. ಕೃಷಿಯಲ್ಲಿ ಅಭಿವೃದ್ಧಿ ಮಾಡಲು ಆತ ದಿವಾನ್-ಇ-ಕೊಹಿ ಎಂಬ ಕೃಷಿ ಇಲಾಖೆಯನ್ನು ಹುಟ್ಟುಹಾಕಿದನು. ದೊಡ್ಡ ಸಂಖ್ಯೆಯಲ್ಲಿ ರೈತರು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರು. ಆದರೆ ಈ ಯೋಜನೆ ಕೂಡಾ ವಿಫಲವಾಯಿತು. ಮತ್ತೆ ಅದರ ಫಲಿತಾಂಶ ದುರಂತವಾಗಿತ್ತು.
ಆತನ ಅತ್ಯಂತ ಕೆಟ್ಟ ಯೋಜನೆಯೆಂದರೆ ರಾಜಧಾನಿಯನ್ನು ದಿಲ್ಲಿಯಿಂದ ದೇವಗಿರಿಗೆ (ದೌಲತಾಬಾದ್) ಸ್ಥಳಾಂತರಿಸಿದ್ದು. ದೇಶದ ದಕ್ಷಿಣ ಭಾಗವನ್ನು ದಿಲ್ಲಿಯಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಆತನಿಗನಿಸಿತ್ತು. ದೇವಗಿರಿ ದೇಶದ ಮಧ್ಯಭಾಗದಲ್ಲಿದ್ದು ಭಾರತದಲ್ಲಿ ತುರ್ಕರ ಆಡಳಿತ ವಿಸ್ತರಣೆಯ ಮೂಲ ಅದೇ ಆಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ದಿಲ್ಲಿಯ ಮೇಲೆ ಮಂಗೋಲರ ದಾಳಿಯ ಸಾಧ್ಯತೆ ಹೆಚ್ಚಾಗಿತ್ತು.
ದೇವಗಿರಿ ಮಧ್ಯಭಾಗದಲ್ಲಿ ಇದ್ದ ಕಾರಣ ಉತ್ತರ ಮತ್ತು ದಕ್ಷಿಣ, ಎರಡರ ಆಡಳಿತಕ್ಕೂ ಹೆಚ್ಚು ಸೂಕ್ತವೆನಿಸಿತ್ತು. ಆತ ದಿಲ್ಲಿಯ ಜನರು ದೇವಗಿರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ. ಆದರೆ ಅದು ಜನರಿಗೆ ದುಸ್ವಪ್ನದಂತಿತ್ತು. ಆದರೆ ಎರಡು ವರ್ಷಗಳ ಕಾಲ ದೇವಗಿರಿಯಲ್ಲಿ ಕಳೆದ ಸುಲ್ತಾನನಿಗೆ ದಿಲ್ಲಿಯಿಂದ ದಕ್ಷಿಣವನ್ನು ನಿಯಂತ್ರಿಸುವುದು ಹೇಗೆ ಸುಲಭವಲ್ಲವೋ ಹಾಗೆಯೇ ದೌಲತಾಬಾದ್ನಿಂದ ಉತ್ತರವನ್ನು ನಿಯಂತ್ರಿಸುವುದು ಕೂಡಾ ಅಷ್ಟು ಸುಲಭವಲ್ಲ ಎಂಬುದರ ಅರಿವಾಯಿತು. ಬೇರೆ ವಿಧಿಯಿಲ್ಲದೆ ಆತ ಮತ್ತೆ ರಾಜಧಾನಿಯನ್ನು ದಿಲ್ಲಿಗೆ ಬದಲಾಯಿಸಿದ. ಅನಗತ್ಯ ಖರ್ಚು ಮತ್ತು ಜನರಿಗೆ ತೊಂದರೆ ಈ ಎರಡು ವಿಷಯಗಳಲ್ಲೂ ಈ ಸ್ಥಳಾಂತರ ಅತ್ಯಂತ ವೆಚ್ಚದಾಯಕವಾಗಿತ್ತು.
ಇನ್ನೊಂದು ಧೈರ್ಯದ ಆದರೆ ದುರಂತಮಯ ಕ್ರಮವೆಂದರೆ ಹೊಸ ಕರೆನ್ಸಿಯ ಪರಿಚಯ. ಮುಹಮ್ಮದ್ ಬಿನ್ ತುಘಲಕ್‌ನ ಹಿಂದಿನ ಆಡಳಿತಗಾರರು ಬಂಗಾರ ಮತ್ತು ಬೆಳ್ಳಿ ನಾಣ್ಯಗಳನ್ನು ಬಳಸುತ್ತಿದ್ದರು. ಆದರೆ ಆತನ ಸಮಯದಲ್ಲಿ ಹಲವು ಕ್ರಮಗಳು ಮತ್ತು ಪ್ರಯೋಗಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಯಿತು. ಆದರೆ ಸಾಕಷ್ಟು ಬೆಳ್ಳಿ ಮತ್ತು ಚಿನ್ನ ಲಭ್ಯವಿರಲಿಲ್ಲ. ಹಾಗಾಗಿ ಆತ ಕಂಚಿನ ನಾಣ್ಯಗಳನ್ನು ಮಾಡಲು ಆದೇಶಿಸಿದ.
ಆದರೆ ಜನರು ಇಂತಹ ನಾಣ್ಯಗಳನ್ನು ಮನೆಯಲ್ಲೇ ತಯಾರಿಸಲು ಆರಂಭಿಸಿದ ಪರಿಣಾಮ ಎಲ್ಲೆಡೆಯೂ ಈ ನಕಲಿ ನಾಣ್ಯಗಳು ಹರಿದಾಡಲು ಆರಂಭಿಸಿತು. ತುಘಲಕ್‌ನ ಬಳಿ ಈ ನಕಲಿ ನಾಣ್ಯಗಳನ್ನು ತಡೆಯಲು ಯಾವುದೇ ಉಪಾಯಗಳು ಇರಲಿಲ್ಲ ಹಾಗಾಗಿ ಅಂತಿಮವಾಗಿ ಆತನೇ ಕಂಚಿನ ನಾಣ್ಯಗಳನ್ನು ವಾಪಸ್ ಪಡೆಯಬೇಕಾಯಿತು. ಕೊನೆಯದಾಗಿ ಸುಲ್ತಾನನು ಖುರಸ್ಸನ್ ಮತ್ತು ಕಜರಲ್‌ಗೆ ದಂಡಯಾತ್ರೆ ನಡೆಸಲು ಸಿದ್ಧತೆ ನಡೆಸಿದನು. ಈ ಎರಡೂ ದಂಡಯಾತ್ರೆಗಳನ್ನು ಕೈಬಿಡಬೇಕಾದ ಪರಿಣಾಮ ಬಹಳಷ್ಟು ನಷ್ಟವುಂಟಾಯಿತು. ಈ ಎಲ್ಲಾ ವೈಫಲ್ಯಗಳಿಂದ ಆತನನ್ನು ಹುಚ್ಚು ಸುಲ್ತಾನ ಎಂದು ಕರೆಯುತ್ತಾರೆ!
ಈಗಿನ ಸಂದರ್ಭದಲ್ಲಿ ಕೆಲವು ಇಂಥದ್ದೇ ಕ್ರಮಗಳನ್ನು ತೆಗೆದುಕೊಂಡಿರುವ ಕಾರಣ ಸುಲ್ತಾನನ ನೆನಪು ಮತ್ತೆ ಮರುಕಳಿಸುತ್ತಿದೆ. ಹಲವು ರೀತಿಯಲ್ಲಿ ಗಮನಿಸಿದಾಗ ಅವುಗಳ ಉದ್ದೇಶ ಒಳ್ಳೆಯದೇ. ‘ಅಚ್ಛೇ ದಿನ್’, ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮುಂತಾದುವುಗಳು ಇವುಗಳಲ್ಲಿ ಕೆಲವು. ಆದರೆ ಆತುರದ ಅನುಷ್ಠಾನ ಅನಗತ್ಯ ಸಮಸ್ಯೆಗಳನ್ನು ಹುಟ್ಟುಹಾಕಿತು.
ಅತ್ಯಂತ ಮುಖ್ಯವಾದುದೆಂದರೆ ‘ನೋಟು ಅಮಾನ್ಯ’ ಎಂದು ಇತ್ತೀಚಿನ ದಿನಗಳಲ್ಲಿ ಕರೆಯಲ್ಪಡುವ ಕರೆನ್ಸಿಯ ಬದಲಾವಣೆ. ಈ ತಕ್ಷಣದ ಮತ್ತು ಅಘೋಷಿತ ಕ್ರಮ ಮುಖ್ಯವಾಗಿ ಬಡವರಿಗೆ ಬಹಳಷ್ಟು ತೊಂದರೆಗಳನ್ನು ಸೃಷ್ಟಿಸಿತು. ಚಲಾವಣೆಯಲ್ಲಿ ಹೆಚ್ಚಾಗಿರುವ ಅಧಿಕ ಮೌಲ್ಯದ ನೋಟುಗಳನ್ನು ಹಿಂಪಡೆದ ಕಾರಣ ಕೆಳಸ್ತರದ ಜನರಲ್ಲಿ ಸಾಕಷ್ಟು ಗದ್ದಲ, ಸಮಸ್ಯೆಗಳನ್ನು ಸೃಷ್ಟಿಸಿತು. ಹೀಗಾಗಲು ಕಾರಣ ಹಣ ಹಿಂಪಡೆಯಲು ಹಾಕಲಾದ ನಿಯಂತ್ರಣ ಮತ್ತು ಕಡಿಮೆ ಮೌಲ್ಯದ ನೋಟುಗಳ ಕೊರತೆ. ಇದರಿಂದ ಅತ್ಯಂತ ಹೆಚ್ಚು ತೊಂದರೆಗೀಡಾದವರೆಂದರೆ ರೈತರು ಮತ್ತು ದಿನಗೂಲಿ ಕೆಲಸಗಾರರು.
ಪ್ರಚಾರ ಮಾಡಿದಂತೆ ಈ ಕ್ರಮದ ಹಿಂದಿನ ಉದ್ದೇಶ ದೇಶದಲ್ಲಿ ಕಪ್ಪುಹಣಕ್ಕೆ ಕೊನೆಹಾಡುವುದು ಮತ್ತು ನಕಲಿ ನೋಟುಗಳ ಮೇಲೆ ತಡೆ ಮತ್ತು ಆ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ನಕಲಿ ನೋಟುಗಳನ್ನು ಬಳಸುವುದನ್ನು ತಡೆಯುವುದು. ಆದರೆ ಮಾಹಿತಿಯ ಪ್ರಕಾರ ಈ ಅಧಿಕ ಮೌಲ್ಯದ ನೋಟುಗಳಲ್ಲಿ ಶೇ.97ರಷ್ಟು ಮರಳಿ ಬ್ಯಾಂಕ್‌ಗಳಲ್ಲಿ ಜಮೆಯಾಗಿದೆ. ಹಾಗಾದರೆ ಕಪ್ಪುಹಣ ಎಲ್ಲಿತ್ತು? ಅದಲ್ಲದೆ ಹೊಸ ನೋಟುಗಳನ್ನು ನಕಲಿ ಮಾಡಿದಂತಹ ಉದಾಹರಣೆಗಳೂ ಇದೆ.
ಹಣದ ಕೊರತೆ ಗದ್ದಲವನ್ನು ಸೃಷ್ಟಿಸಿತು ಮತ್ತು ತಮ್ಮದೇ ಹಣವನ್ನು ಪಡೆಯುವ ಸಲುವಾಗಿ ಎಟಿಎಂಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಒಟ್ಟಾರೆ ಆರ್ಥಿಕತೆಗೆ ಸಂಬಂಧಿಸಿದಂತೆ ಇದು ದೊಡ್ಡ ಆಘಾತ ನೀಡಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಹಲವು ಆರ್ಥಿಕತಜ್ಞರು ಈ ಕ್ರಮವನ್ನು ಬಡವರ ಕೊಳ್ಳೆ ಎಂದು ಕರೆದರೆ ಕಾರ್ಪೊರೇಟ್ ಜಗತ್ತು ಯಾವುದೇ ತೊಂದರೆಯನ್ನು ಎದುರಿಸಲಿಲ್ಲ.
ಇನ್ನು ರಾಜಧಾನಿಯ ಬದಲಾವಣೆಯ ವಿಷಯದಲ್ಲಿ ಹೇಳುವುದಾದರೆ ಅದು ವಿಭಿನ್ನ ರೀತಿಯಲ್ಲಿ ನಡೆಯುತ್ತಿದೆ. ಅಹ್ಮದಾಬಾದ್ ರಾಜಧಾನಿಯಾಗಿರುವ ಗುಜರಾತ್ ಕಾರ್ಪೊರೇಟ್‌ಗಳ ಮತ್ತು ಬಹುರಾಷ್ಟ್ರೀಯರ ನೂತನ ಗುರಿಯಾಗುತ್ತಿದೆ. ರಾಜ್ಯ ಸರಕಾರ ಸಾಧ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಜರಾತ್‌ನಲ್ಲಿ ಹೂಡಿಕೆಯು ಹಲವು ಲಕ್ಷ ಕೋಟಿಗಳನ್ನು ಮೀರುತ್ತಿದೆ.
ರಾಜನೈತಿಕವಲ್ಲದಿದ್ದರೂ ಆರ್ಥಿಕವಾಗಿ ಅದು ಸದ್ಯೋಭವಿಷ್ಯತ್ತಿನಲ್ಲಿ ಭಾರತದ ರಾಜಧಾನಿಯಾಗಲಿದೆ. ನಮೋ ಭಾರತವನ್ನು ಅಭಿವೃದ್ಧಿ ಹೊಂದಿರುವ ದೇಶಗಳ ಸಾಲಿನಲ್ಲಿ ನಿಲ್ಲಿಸುವ ತನ್ನ ಯೋಜನೆಗಳಿಗೆ ರೂಪ ನೀಡಲು ಅದೆಷ್ಟು ಪ್ರಯತ್ನಿಸಿದರೂ ಅವರ ಹಿಂದುತ್ವದ ಹೊರೆ ಮಾತ್ರ ಅವರನ್ನು ಪದೇಪದೆ ಕೆಳಕ್ಕೆಳೆಯುತ್ತಿದೆ. ಅದಕ್ಕೊಂದು ಇತ್ತೀಚಿನ ಉದಾಹರಣೆಯೆಂದರೆ ಭಾರತದಲ್ಲಿ ಜನಿಸಿದ ಎಲ್ಲರೂ ಹಿಂದೂಗಳೇ ಎಂಬ ಮೋಹನ್ ಭಾಗವತ್ ಹೇಳಿಕೆ. ಮುಹಮ್ಮದ್ ಬಿನ್ ತುಘಲಕ್‌ನನ್ನು ಆತನ ಎರಡು ದುರಂತಮಯ ದಂಡೆಯಾತ್ರೆಗಳು ಕೆಳಕ್ಕ್ಕಿಳಿಸಿತ್ತು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳು ಈ ಕೆಲಸವನ್ನು ಮಾಡಬಹುದು. ಇದರಿಂದ ಸಾಧಿಸಿದ್ದು ಏನಿಲ್ಲವಾದರೂ ಹಗೆತನ ಮತ್ತು ದ್ವೇಷದ ವಾತಾವರಣವನ್ನು ಇದು ಸೃಷ್ಟಿಸಿತು ಮತ್ತು ಭಾರತವನ್ನು ಅತ್ಯುತ್ತಮ ದೇಶವನ್ನಾಗಿ ಮಾಡಲು ಅಗತ್ಯವಿರುವ ಆರ್ಥಿಕ ಬೆಳವಣಿಗೆಗೆ ಇದು ಒಳ್ಳೆಯದಲ್ಲ. ಇತಿಹಾಸದ ಜೊತೆ ತಳಕು ಹಾಕುವ ಇಂದಿನ ಸ್ಥಿತಿ ನಿಜವಾಗಿಯೂ ಆತಂಕವನ್ನು ಉಂಟುಮಾಡುತ್ತದೆ ಮತ್ತು ಕೈಗಳನ್ನು ಜೋಡಿಸಿ ಉತ್ತಮವಾದುದು ನಡೆಯುತ್ತದೆ ಎಂಬ ಭರವಸೆಯನ್ನು ಇಡುವುದರ ಹೊರತು ಬೇರೆಯೇನೂ ವಿಧಿಯಿಲ್ಲ.