ಬ್ರಾಹ್ಮಣ ಸೇನೆ ಸೇರಬಾರದೇ?

Update: 2017-02-25 18:34 GMT


ಧಾರಾವಾಹಿ-11

 ಬೆಂಗಳೂರಿನಲ್ಲಿ ತರಬೇತಿಗೆ ಸೇರಿದ ಒಂದೇ ವಾರದಲ್ಲಿ ಪಪ್ಪುವಿಗೆ ಸ್ಪಷ್ಟವಾಯಿತು. ಇದು ನನ್ನ ಜಗತ್ತಲ್ಲ ಎನ್ನುವುದು. ಉದ್ದದ ಹಾಲ್‌ನಲ್ಲಿ ಎಲ್ಲರಿಗೂ ಅವರದೇ ಸಣ್ಣದೊಂದು ಮಂಚ. ಅದರಡಿಯಲ್ಲೇ ಅವರ ಡಬ್ಬಾ ಪೆಟ್ಟಿಗೆ. ಅವನಿಗೆ ಅತ್ಯಂತ ಅಸಹನೀಯ ಅನ್ನಿಸಿದ್ದು, ಬೆಳಗ್ಗೆ 3 ಗಂಟೆಗೇ ಕಿವಿಯನ್ನು ಕೊರೆಯುವ ಹವಾಲ್ದಾರ್‌ನ ವಿಸಿಲ್. ಆತನ ತಂಡದ ನಾಯಕನಾಗಿ ಮೃತ್ಯುಂಜಯ ಆಯ್ಕೆಯಾಗಿದ್ದ. ಚಿಕ್ಕಮಗಳೂರು ಮೂಲದ ಈತನನ್ನ್ನು ಮೃತ್ಯು ಎಂದೇ ಕರೆಯುತ್ತಿದ್ದರು. ರೆಜಿಮೆಂಟಿನಲ್ಲಿ ಪಪ್ಪುವನ್ನು ಹೊರತು ಪಡಿಸಿ ಕರ್ನಾಟಕದವರೆಂದು ಇರುವುದು ಮೂರೇ ಜನ. ಒಬ್ಬ ಮೃತ್ಯುಂಜಯ. ಇನ್ನೊಬ್ಬ ಬೆಳಗಾವಿಯ ಆಂಜನಪ್ಪ. ಮೂರನೆಯವನು ಕೊಡಗಿನ ಅಪ್ಪಯ್ಯ. ಇವನ ಪರಿಚಯ ಈ ಹಿಂದೆಯೇ ಇದ್ದುದರಿಂದ ಪಪ್ಪುವಿಗೆ ಅವನ ಜೊತೆಗೆ ಬೆರೆಯಲು ಅನುಕೂಲವಾಯಿತು. ಮೃತ್ಯುಂಜಯ ತುಸು ಒರಟ. ಆಂಜನಪ್ಪನ ಕನ್ನಡವೇ ಪಪ್ಪುವಿಗೆ ಅಪರಿಚಿತವಾಗಿತ್ತು. ಉಳಿದವರೊಂದಿಗೆ ಬೆರೆಯಲು ಭಾಷೆ ಬಹುದೊಡ್ಡ ಅಡ್ಡಿಯಾಗಿತ್ತು. ಎಲ್ಲರೂ ನಿಧಾನಕ್ಕೆ ಪರಸ್ಪರ ಬೆರೆತುಕೊಳ್ಳುತ್ತಿದ್ದರಾದರೂ ಪಪ್ಪು ಮಾತ್ರ ದಿನದಿಂದ ದಿನಕ್ಕೆ ಎಲ್ಲರಿಂದ ದೂರ ಆಗುತ್ತಾ ಹೋದ.

ಬಂದ ಮೊದಲಲ್ಲಿ ಪೂಜೆ, ಸಂದ್ಯಾವಂದನೆ ಎಂದು ಮಾಡತೊಡಗಿದ್ದ. ಆದರೆ ಕೆಲವೇ ದಿನಗಳಲ್ಲಿ ಅವೆಲ್ಲವೂ ಬುಡಮೇಲಾಗತೊಡಗಿತು. ಪೂಜೆಯ ಮಧ್ಯೆಯೇ ಮೃತ್ಯು ಬಂದು ತನ್ನ ಕೈಯಲ್ಲಿರುವ ಲಾಠಿಯಿಂದ ಡಬಡಬನೆ ಮಂಚಕ್ಕೆ ಬಡಿಯುತ್ತಿದ್ದ. ಜೊತೆಗೆ ಇಡೀ ದಿನದ ತರಬೇತಿ ಆತನ ಕೋಮಲ ಮೈಯನ್ನು ಹಣ್ಣು ಮಾಡಿ ಬಿಡುತ್ತಿತ್ತು. ಮಡಿ ಮೈಲಿಗೆಗಳೆಲ್ಲ ಅಟ್ಟ ಸೇರಿದ್ದವು. ತೀರಾ ಅಪರಿಚಿತ ಪರಿಸರಕ್ಕೆ ಎಸೆಯಲ್ಪಟ್ಟವನಂತೆ ಒದ್ದಾಡುತ್ತಿದ್ದ. ತಾಯಿಯ ಮೃದುಮಾತಿನ ಆರೈಕೆಯಲ್ಲಿ ಬೆಳೆದಿದ್ದ ಪಪ್ಪು, ಮೇಲಧಿಕಾರಿಗಳ ಗದ್ದಲ ಚೀರಾಟಗಳಿಗೆ ಬೆಚ್ಚಿ ಬೀಳುತ್ತಿದ್ದ. ಮೊದ ಮೊದಲು ನಿದ್ದೆಯಿಂದ ಮುಂಜಾವು ಏಳುವುದು ಕಷ್ಟವಾಗುತ್ತಿದ್ದರೆ, ದಿನಕಳೆದಂತೆ ನಿದ್ದೆ ಹತ್ತುವುದೂ ತಡವಾಗತೊಡಗಿತು. ಮರುದಿನ ತರಬೇತಿಯ ವೇಳೆ ಆತ ಇದರಿಂದ ಇನ್ನಷ್ಟು ಸುಸ್ತಾಗುತ್ತಿದ್ದ. ಹಲವು ಬಾರಿ ಕುಸಿದು ಬಿದ್ದು ಬಿಟ್ಟ. ಅಂತಹ ಸಂದರ್ಭದಲ್ಲಿ ಆತನಿಗೆ ಹೆಗಲು ನೀಡುತ್ತಿದ್ದವನು ಕೊಡಗಿನ ಅಪ್ಪಯ್ಯ. ಈತನೊಬ್ಬನಿಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿನವರೆಗೆ ತಾನು ಬದುಕಿಯೇ ಇರುತ್ತಿರಲಿಲ್ಲ ಅನ್ನಿಸುತ್ತಿತ್ತು ಪಪ್ಪುವಿಗೆ. ಅದನ್ನು ಅಪ್ಪಯ್ಯನ ಮುಂದೆ ಆಡಿಕೊಂಡೂ ಇದ್ದ.

 ಆತನಿಗೆ ಅತ್ಯಂತ ನೋವು ಕೊಟ್ಟ ಸಂಗತಿಯೆಂದರೆ, ಹವಾಲ್ದಾರ್ ತೀರಾ ಸಿಟ್ಟು ಬಂದಾಗ ತನ್ನನ್ನು ಆಗಾಗ ‘ಏ ಬೊಮ್ಮನ್...’ ಎಂದು ಉಲ್ಲೇಖಿಸುವುದು. ಒಮ್ಮಾಮ್ಮೆ ಇಲ್ಲ ತಡೆಯಲಾರೆ...ಇದು ನನಗೆ ಸಂಬಂಧಿಸಿದ್ದಲ್ಲ...ಇಲ್ಲಿಂದ ಏಕಾಏಕಿ ಎದ್ದು ಓಡಿದರೆ ಹೇಗೆ? ಎಂದು ಯೋಚಿಸುತ್ತಿದ್ದ. ಓಡಿಯೂ ಬಿಡುತ್ತಿದ್ದನೇನೋ? ಆದರೆ ಜಾನಕಿ, ಗುರೂಜಿಯ ಮುಂದೆ ಆಗುವ ಅವಮಾನವನ್ನು ನೆನೆದು ತಲ್ಲಣಿಸುತ್ತಿದ್ದ. ತನ್ನ ನಿರ್ಧಾರದಿಂದ ಹಿಂದೆ ಸರಿದು ಅವುಡುಗಚ್ಚಿ, ಮತ್ತೊಂದು ಬೆಳಗಿಗೆ ಸಿದ್ಧನಾಗುತ್ತಿದ್ದ.

ಶಿಬಿರದಲ್ಲೂ ಆತ ಎಲ್ಲರ ಪಾಲಿನ ಪಪ್ಪು ಆಗಿಯೇ ಗುರುತಿಸಲ್ಪಟ್ಟಿದ್ದ. ಅಲ್ಲಿದ್ದವರೆಲ್ಲರಿಗೂ ಆತನೊಂದು ಅಚ್ಚರಿ. ಆಗಾಗ ತಮಾಷೆಯ ವಸ್ತು. ಈ ಬೆಣ್ಣೆಯ ಮುದ್ದೆ ಇಲ್ಲೇನು ಮಾಡುತ್ತಿದೆ ಎನ್ನುವುದು ಅವರ ಪ್ರಶ್ನೆ.

 ‘‘ಎಲ್ಲೋ ಅಮೆರಿಕದಲ್ಲಿ ಕಂಪ್ಯೂಟರ್ ಮುಂದೆ ಕೂತು ಕೀಲಿ ಒತ್ತೋದು ಬಿಟ್ಟು ಇದು ಇಲ್ಲೇನು ಮಾಡುತ್ತಿದೆ’’ ಎನ್ನುವ ಪ್ರಶ್ನೆಯನ್ನು ಹಲವರು ಪರಸ್ಪರ ಕೇಳಿಕೊಂಡಿದ್ದರು. ಸ್ವತಃ ಅಪ್ಪಯ್ಯ ಕೂಡ ಕೇಳಿದ್ದ ‘‘ಬ್ರಾಹ್ಮಣನಾಗಿ ನೀನು ಸೇನೆ ಸೇರಿದ್ದು ಯಾಕೆ?’’

ಈ ಪ್ರಶ್ನೆ ಪಪ್ಪುವಿಗೆ ಅರ್ಥವಾಗಿರಲಿಲ್ಲ ‘‘ಬ್ರಾಹ್ಮಣನಾಗಿ ಸೇನೆ ಸೇರಬಾರದೇ?’’ ತಾನೇನಾದರೂ ತಪ್ಪು ಮಾಡಿದ್ದೇನೆಯೇ ಎಂಬ ಆತಂಕ ಆತನದು.

‘‘ಹಾಗೇನೂ ಇಲ್ಲ...’’ ಅಪ್ಪಯ್ಯ ಮಾತು ಬದಲಿಸಲು ನೋಡಿದ ‘‘ಹಾಗೆ ನೋಡಿದರೆ ಹಲವರು ಬ್ರಾಹ್ಮಣರು ನಮ್ಮ ಸೇನೆಯಲ್ಲಿದ್ದಾರೆ. ಮರಾಠಿ ರೆಜಿಮೆಂಟ್‌ನಲ್ಲಿ ಚಿತ್ಪಾವನ ಬ್ರಾಹ್ಮಣರು ತುಂಬಾ ಜಾಸ್ತಿ ಇದ್ದಾರಂತೆ....’’

‘‘ಅದೇನು ಬೇರೆ ಬ್ರಾಹ್ಮಣರು ಸೇನೆಗೆ ಸೇರುವುದಿಲ್ಲವೇ?’’ ಪಪ್ಪು ಮತ್ತೆ ಕೇಳಿದ.

‘‘ಹಾಗಲ್ಲ...ಮರಾಠಿ ಪೇಶ್ವೆಗಳು ಚಿತ್ಪಾವನ ಬ್ರಾಹ್ಮಣರಂತೆ. ನನ್ನ ಮಾವನ ಜೊತೆಗೆ ಒಬ್ಬ ಚಿತ್ಪಾವನ ಬ್ರಾಹ್ಮಣ ಇದ್ದನಂತೆ...’’ ಅಪ್ಪಯ್ಯ ಮಾತು ತೇಲಿಸಿದ.

ಆಹಾರ ಪಪ್ಪುವಿನ ಅತಿ ದೊಡ್ಡ ಸಮಸ್ಯೆ ಯಾಗಿತ್ತು. ಮನೆಯ ಆಹಾರಕ್ಕೂ ಇಲ್ಲಿಗೂ ಅಜಗಜಾಂತರ. ತಾಯಿಯ ಅಡುಗೆಯ ರುಚಿ ಇಲ್ಲಿನ ಅಡುಗೆಗಿರಲಿಲ್ಲ. ಇದರ ಜೊತೆಗೆ ತನ್ನ ಸಹಪಾಠಿಗಳೆಲ್ಲರೂ ಮಾಂಸಾಹಾರಿಗಳಾಗಿದ್ದುದು ಅವನ ಗಮನಕ್ಕೆ ಬಂದಿತ್ತು. ಆಹಾರದ ವಿಷಯದಲ್ಲಿ ಆತ ಅಲ್ಲಿ ಪ್ರತ್ಯೇಕವಾಗಿ ಬಿಟ್ಟಿದ್ದ. ಆಹಾರದ ಕುರಿತಂತೆ ಒಳಗೊಳಗೆ ಇರುವ ಅಸಹನೆ, ಅತೃಪ್ತಿ ಅವನನ್ನು ಇನ್ನಷ್ಟು ಸೊರಗುವಂತೆ ಮಾಡಿತು. ಎಲ್ಲಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಶಿಬಿರದಲ್ಲಿ ಮೊಟ್ಟೆಯನ್ನು ಸಸ್ಯಾಹಾರ ಎಂದು ಘೋಷಿಸಿರುವುದು.

‘‘ಮೊಟ್ಟೆ ಹೇಗೆ ಸಸ್ಯಾಹಾರವಾಗುತ್ತೇ?’’ ಅರ್ಥವಾಗದೆ ಕೇಳಿದ್ದ ಪಪ್ಪು.

‘‘ಹಾಲು ಹೇಗೆ ಸಸ್ಯಾಹಾರವಾಗುತ್ತೇ? ಅದು ದನದ ರಕ್ತದಿಂದ ಆಗಿರುವುದು ತಾನೇ?’’ ಮೃತ್ಯು ಬಾಣ ಎಸೆಯುತ್ತಿದ್ದ. ಬೇಕು ಬೇಕೆಂದೇ ಅವನ ತಟ್ಟೆಗೆ ಮೊಟ್ಟೆ ತುರುಕುತ್ತಿದ್ದ. ಹವಾಲ್ದಾರ್ ಕೂಡ ಮೊಟ್ಟೆ ತಿನ್ನುವುದಕ್ಕೆ ಪಪ್ಪುವನ್ನು ಒತ್ತಾಯಿಸುತ್ತಿದ್ದ. ಒಮ್ಮೆ ಹವಾಲ್ದಾರ್ ಜೊತೆಗೆ ಕೇಳಿಯೇ ಬಿಟ್ಟಿದ್ದ ‘‘ನನಗೆ ಬ್ರಾಹ್ಮಣರ ಅಡುಗೆ ಸಿಗುವುದಿಲ್ಲವೇ?’’ ಹವಾಲ್ದಾರ್ ಅವನನ್ನೇ ವಿಚಿತ್ರವಾಗಿ ನೋಡಿ, ಮೀಸೆ ತುದಿಯಲ್ಲಿ ನಕ್ಕಿದ್ದ. ಆಹಾರ ವ್ಯತ್ಯಾಸಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದಂತೆ ಅದು ಅವನ ಮನಸ್ಸು, ದೇಹದ ಮೇಲೆ ಪರಿಣಾಮ ಬೀರುತ್ತಿತ್ತು. ನಿಧಾನಕ್ಕೆ ಒಗ್ಗಿಕೊಳ್ಳಲು ಶ್ರಮ ನಡೆಸುತ್ತಿರುವ ಸಂದರ್ಭದಲ್ಲೆ ಅವನ ಭಾವ ಪ್ರಪಂಚದ ಮೇಲೆ ಒಂದು ದಾಳಿ ನಡೆದು ಬಿಟ್ಟಿತು.

ಅದು ಸಂಜೆಯ ಹೊತ್ತು. ಶಿಬಿರದ ತರಬೇತಿಗಳೆಲ್ಲ ಮುಗಿದು ಅವನು ಮಂಚದ ಮೇಲೆ ಬಿದ್ದುಕೊಂಡು ಜಾನಕಿಗೆ ಬರೆದ ಹಳೆಯ ಪತ್ರವನ್ನು ಓದುತ್ತಿದ್ದ. ಆ ಪತ್ರವನ್ನು ಅವನು ಓದುತ್ತಿರುವುದು ಅದು 30ನೆ ಬಾರಿ. ರಣವಿಕ್ರಮ ಕಾದಂಬರಿ ಅವನ ಪಕ್ಕದಲ್ಲೇ ಬಿದ್ದುಕೊಂಡಿತ್ತು. ‘ಜಾನಕಿ ನನ್ನ ಕುರಿತಂತೆ ಈಗ ಏನು ಯೋಚಿಸುತ್ತಿರಬಹುದು? ಪಪ್ಪು ಕೊನೆಗೂ ತನ್ನ ಆಸೆಯನ್ನು ಈಡೇರಿಸಿಕೊಂಡ ಎಂದು ಅವಳು ಹೆಮ್ಮೆಪಡುತ್ತಿರಬಹುದು...’ ಹೀಗೆಲ್ಲ ಯೋಚಿಸುತ್ತಾ, ಒಂದೊಂದೇ ಸಾಲುಗಳನ್ನು ಎರಡೆರಡು ಬಾರಿ ಓದುತ್ತಿದ್ದ. ಇದೇ ಹೊತ್ತಲ್ಲಿ ಅದೇನೋ ಗದ್ದಲ. ಬಾಗಿಲು ಒದ್ದು ಬಂದ ಒಂದಿಷ್ಟು ಸಹೋದ್ಯೋಗಿಗಳು ಕೇಕೆ ಹಾಕುತ್ತಾ ಅವನ ಮೇಲೆ ಮುಗಿ ಬಿದ್ದರು. ಮೃತ್ಯುವಿನ ಕೈಯಲ್ಲಿ ಅದೇನೋ ಇತ್ತು. ಏನಾಗುತ್ತಿದೆ ಎನ್ನುವುದು ಅರಿವಾಗುವ ಮೊದಲೇ ಪಪ್ಪುವಿನ ಬಾಯಿಗೆ ಅದಾವುದೋ ವಸ್ತುವನ್ನು ತುರುಕಿ ಬಿಟ್ಟಿದ್ದರು. ಖಾರ, ಉಪ್ಪು...ತಕ್ಷಣ ಹೊಳೆಯಿತು ಮಾಂಸ! ಕರುಳಿನಾಳದಿಂದ ವಾಂತಿ ಎದ್ದು ಬಂತು. ಅವರಿಂದ ಬಿಡಿಸಿಕೊಂಡವನೇ ಹೊರಗೆ ಓಡಿ, ಬಸಬಸನೇ ಕಾರತೊಡಗಿದ. ಹೊಟ್ಟೆಯೊಳಗಿರುವ ಕರುಳೂ ಕಿತ್ತು ಬರುವಂತೆ, ಸುಮಾರು ಹೊತ್ತು ವಾಂತಿ ಮಾಡುತ್ತಲೇ ಇದ್ದ. ಅವನ ಸ್ಥಿತಿ ಕಂಡು, ಉಳಿದವರಿಗೆಲ್ಲ ಆತಂಕ, ಗಾಬರಿ. ಅವನು ಅಲ್ಲೇ ಕುಸಿದು ಬಿದ್ದ. ಅಪ್ಪಯ್ಯನ ನೇತೃತ್ವದಲ್ಲಿ ಎಲ್ಲರೂ ಅವನನ್ನು ಎತ್ತಿ ಕೋಣೆಗೆ ತಂದರು. ಅಂದು ರಾತ್ರಿ ಹಿಡಿದ ಜ್ವರ ಎಡೆ ಬಿಡದೆ ಎರಡು ದಿನ ಕಾಡಿತು. ಯಾವ ಆಹಾರವನ್ನೂ ಅವನು ಒಳತೆಗೆದುಕೊಳ್ಳುತ್ತಿರಲಿಲ್ಲ. ಶಿಬಿರದ ಹವಾಲ್ದಾರ್ ಬಂದು ವಿಚಾರಿಸಿದ ‘‘ಪಾಕಿಸ್ತಾನದ ಹರಾಮಿಗಳನ್ನು ಓಡಿಸಬೇಕೆಂದರೆ ಮಾಂಸ ತಿಂದು ಶಕ್ತಿವಂತರಾಗಬೇಕು...ಗಡಿಯಲ್ಲಿ ನಾವು ಪೂಜೆ ಮಾಡೋದಕ್ಕೆ ಹೋಗೋದಲ್ಲ...’’ ಸೌಮ್ಯ ಭಾಷೆಯಲ್ಲೇ ಆತ ಹೇಳಿದ್ದ. ಪಪ್ಪುವಿಗೆ ಏನೂ ಕೇಳಿಸುತ್ತಿರಲಿಲ್ಲ. ಅವನು ಜ್ವರದಲ್ಲಿ ತನ್ನ ತಾಯಿಯನ್ನು ಕನವರಿಸುತ್ತಿದ್ದ.

ಆ ಶಿಬಿರದಲ್ಲಿರುವವರಲ್ಲಿ ಕೊಡಗಿನ ಅಪ್ಪಯ್ಯ ಪಪ್ಪುವಿನ ತಳಮಳಗಳನ್ನು ಒಂದಿಷ್ಟು ಅರ್ಥಮಾಡಿಕೊಂಡಿದ್ದ. ಪಪ್ಪುವಿನೊಳಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ. ಉಳಿದ ಗೆಳೆಯರನ್ನೆಲ್ಲ ಕರೆಸಿ ಪಪ್ಪುವಿನ ಬಳಿ ಕ್ಷಮೆ ಕೇಳಿಸಿದ. ನಿಧಾನಕ್ಕೆ ಪಪ್ಪು ಚೇತರಿಸಿಕೊಳ್ಳತೊಡಗಿದ. ಆದರೆ ಎಂದಿನಂತೆ ತರಬೇತಿಗೆ ಅವನು ಸಿದ್ಧನಾಗಿರಲಿಲ್ಲ. ತೀರಾ ಬಳಲಿದ್ದ. ಎದ್ದು ಅತ್ತಿಂದಿತ್ತ ಓಡಾಡುವುದಕ್ಕಷ್ಟೇ ಸಮರ್ಥವಾಗಿದ್ದ. ಒಂದು ದಿನ ಅಪ್ಪಯ್ಯ ತನ್ನ ಕಬ್ಬಿಣದ ಪೆಟ್ಟಿಗೆಯಿಂದ ಒಂದು ಪುಸ್ತಕವನ್ನು ತೆಗೆದು ಪಪ್ಪುವಿನ ಕೈಗಿಟ್ಟ. ನೋಡಿದರೆ, ಸ್ವಾಮಿ ವಿವೇಕಾನಂದರ ಪುಸ್ತಕ ಅದಾಗಿತ್ತು. ‘‘ಸ್ವಾಮಿ ವಿವೇಕಾನಂದರಿಗೆ ಮಾಂಸ ಎಂದರೆ ಇಷ್ಟ. ಗೊತ್ತ ನಿನಗೆ?’’ ಅಪ್ಪಯ್ಯ ಹೇಳಿದಾಗ ಪಪ್ಪು ಅಚ್ಚರಿಯಿಂದ ಕಣ್ಣರಳಿಸಿದ.

‘‘ಆದರೆ ಅವರು ಸ್ವಾಮೀಜಿಗಳಲ್ಲವೇ? ಅದು ಹೇಗೆ ಸಾಧ್ಯ? ಅದೂ ಅಷ್ಟು ದೊಡ್ಡ ವ್ಯಕ್ತಿ....’’

‘‘ಪಶ್ಚಿಮಬಂಗಾಳದ ಬ್ರಾಹ್ಮಣರು ಮಾಂಸ ತಿನ್ನುತ್ತಾರೆ. ಮೀನು ಅವರ ಇಷ್ಟದ ಪದಾರ್ಥಗಳಲ್ಲಿ ಒಂದು. ವಿವೇಕಾನಂದರೂ ಮಾಂಸ ತಿನ್ನುತ್ತಿದ್ದರು...ಈ ಪುಸ್ತಕದಲ್ಲಿ ಅವುಗಳ ಬಗ್ಗೆ ತುಂಬಾ ವಿವರಗಳಿವೆ....ಓದು...’’ ಅಪ್ಪಯ್ಯ ಹೇಳಿದ. ಹೊಸದಾಗಿ ನೋಡುವಂತೆ, ಪುಸ್ತಕದ ಮುಖಪುಟದಲ್ಲಿದ್ದ ವಿವೇಕಾನಂದರನ್ನು ತದೇಕಚಿತ್ತನಾಗಿ ನೋಡ ತೊಡಗಿದ.

ಜಾನಕಿ ವಿವೇಕಾನಂದರ ಕುರಿತಂತೆ ತುಂಬಾ ತುಂಬಾ ಹೇಳಿದ್ದಳು. ಚಿಕಾಗೋದಲ್ಲಿ ವಿವೇಕಾನಂದರು ಮಾಡಿದ ಭಾಷಣ, ಇಡೀ ಭಾರತವನ್ನು ಜಗತ್ತಿಗೆ ಪರಿಚಯಿಸಿತಂತೆ. ‘‘ನನ್ನ ಸಹೋದರ ಸಹೋದರಿಯರೇ...’’ ಎಂದು ಕರೆದಾಗ ಇಡೀ ಜಗತ್ತು ರೋಮಾಂಚನಗೊಂಡವಂತೆ. ಹಲವರು ಹಿಂದೂಧರ್ಮಕ್ಕೆ ಮತಾಂತರಗೊಂಡರಂತೆ. ಅಂತಹ ಸ್ವಾಮೀಜಿ ಮಾಂಸ ತಿನ್ನುತ್ತಿದ್ದರೇ? ಪಪ್ಪು ದಿಗ್ಭ್ರಾಂತನಾಗಿ ಅಪ್ಪಯ್ಯನನ್ನು ನೋಡಿದ.

‘‘ಹಿಂದೂ ಯುವಕರು ಕೇವಲ ಸಸ್ಯಾಹಾರಕ್ಕಷ್ಟೇ ಸೀಮಿತರಾಗಬಾರದು. ಮಾಂಸಾಹಾರ ಸೇವಿಸಿ ದೈಹಿಕ ಶಕ್ತಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ವಿವೇಕಾನಂದರು ನಂಬಿದ್ದರು’’ ಅಪ್ಪಯ್ಯ ಹೇಳಿದ.

ಪಪ್ಪು ತನ್ನ ವಿಶ್ರಾಂತಿ ಹೊತ್ತಿನಲ್ಲಿ ಆ ಪುಸ್ತಕವನ್ನು ಬಿಡಿಸಿದ. ನಿಧಾನಕ್ಕೆ ಒಂದೊಂದೇ ಪುಟಗಳನ್ನು ಬಿಡಿಸುತ್ತಾ, ಓದುತ್ತಾ ಹೋದಂತೆಯೇ ಚೇತರಿಸಿಕೊಳ್ಳತೊಡಗಿದ. ಅವನು ಎಂದಿನಂತೆ ಆರೋಗ್ಯಕ್ಕೆ ಮರಳಿದ ಬೆನ್ನಿಗೇ ಉಳಿದ ಗೆಳೆಯರು ಮತ್ತೆ ಅವನನ್ನು ಛೇಡಿಸತೊಡಗಿದರು. ‘‘ಶತ್ರುಗಳ ರುಂಡ ಕತ್ತರಿಸಬೇಕಾದರೆ ಮೊದಲು ಕುರಿ, ಕೋಳಿ ರುಂಡ ಕತ್ತರಿಸಬೇಕು....ತಿಳಿಸಾರು ಕುಡಿದು ಪಾಕಿಸ್ತಾನಿಗಳನ್ನು ಎದುರಿಸಲು ಸಾಧ್ಯವಿಲ್ಲ್ಲ...ನೆನಪಿಟ್ಟುಕೋ...’’ ಮೃತ್ಯು ಮತ್ತೆ ಪಪ್ಪುವಿನ ಹಿಂದೆ ಬಿದ್ದಿದ್ದ. ಯಾವ ಹೊತ್ತಿನಲ್ಲಿ ಇವನಿಗೆ ಮೃತ್ಯು ಎಂದು ಹೆಸರಿಟ್ಟರೋ, ಮೃತ್ಯುವಾಗಿ ಕಾಡುತ್ತಿದ್ದಾನೆ ಎಂದು ಪಪ್ಪು ಒಳಗೊಳಗೆ ನೊಂದುಕೊಂಡ. ಮೃತ್ಯು ಕುರುಬರ ಜಾತಿಗೆ ಸೇರಿದ್ದ. ಆದರೆ ಅತೀವ ದೇಶಭಕ್ತನಂತೆ. ರೆಟ್ಟೆಯಲ್ಲಿ ಭಾರತಮಾತೆಯ ಹಚ್ಚೆ ಹಾಕಿಸಿಕೊಂಡಿದ್ದ. ಅದರ ಮಧ್ಯೆ ಓಂ ಚಿತ್ರವಿತ್ತು. ಚಿಕ್ಕಂದಿನಲ್ಲೇ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದನಂತೆ. ‘‘ಹೆಸರು ಪ್ರತಾಪ. ಮಾಡುವುದು ನೋಡಿದರೆ....ಪ್ರಲಾಪ...’’ ಬೆಳಗಾವಿಯ ಅಂಜನಪ್ಪ ನಕ್ಕಿದ್ದ. ಈ ಅಂಜನಪ್ಪ ಗೋಮಾಂಸವನ್ನೂ ತಿನ್ನುತ್ತಾನೆ ಎನ್ನುವುದು ಕೇಳಿ ಪಪ್ಪು ಬೆಕ್ಕಸ ಬೆರಗಾಗಿದ್ದ.

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News