ಹಂಗಿನರಮನೆ ಪ್ರಾಪ್ತಿರಸ್ತು!

ಸೋಪು, ಶ್ಯಾಂಪೂ, ಕ್ರೀಮು ಮಾರುವ ಸೇಲ್ಸ್ ತಂಡಗಳನ್ನು ಹುಟ್ಟುಹಾಕಿ, ಅವರಿಗೆ ತಲುಪಲು ಗುರಿ ನೀಡುವ ರೀತಿಯಲ್ಲೇ, ಆಡಳಿತ ಪಕ್ಷವು ಈ ಬಾರಿ, ಪೇಜ್ ಪ್ರಮುಖರಿಂದಾದಿಯಾಗಿ ಬೃಹತ್ ಚುನಾವಣೆ ಗೆಲ್ಲುವ ಯಂತ್ರವನ್ನು ಸೃಜಿಸಿಕೊಂಡು, ‘ಅಬ್ ಕೀ ಬಾರ್ 400 ಪಾರ್’ ಎಂದು ತನ್ನ ಗುರಿಯನ್ನು ಆರಂಭದಲ್ಲೇ ಪ್ರಕಟಿಸಿತ್ತು. ಆದರೀಗ ಎರಡು ಹಂತಗಳ ಚುನಾವಣೆ ಮುಗಿಯುತ್ತಿರುವಾಗಲೇ ಮೋದಿ 3.0ಗೆಂದು ಸನ್ನದ್ಧಗೊಂಡಿದ್ದ ಆಡಳಿತ ಪಕ್ಷಕ್ಕೆ, ತನ್ನ ಈ ನಿಗದಿತ ಗುರಿಯ ಕುರಿತು ಸಂಶಯಗಳು ಏಳತೊಡಗಿದ್ದು, ಗುರಿ ಮತ್ತೆಮತ್ತೆ ಪರಿಷ್ಕೃತಗೊಳ್ಳತೊಡಗಿದೆ.

Update: 2024-04-27 04:44 GMT

18ನೇ ಲೋಕಸಭೆಗಾಗಿ ಸಾರ್ವತ್ರಿಕ ಚುನಾವಣೆಗಳ ಎರಡನೇ ಹಂತ ನಿನ್ನೆ (ಎ. 26) ಮುಗಿದಿದೆ. ಇಲ್ಲಿಯ ತನಕದ ಬೆಳವಣಿಗೆಗಳನ್ನಾಧರಿಸಿ, ಈ ಚುನಾವಣೆಯ ಬಲುದೊಡ್ಡ ‘ಟೇಕ್ ಹೋಂ’ ಏನೆಂದರೆ, ಅದು- ಭಾರತದ ಮತದಾರರ ನಾಡಿಮಿಡಿತ ಅರಿಯುವ ಕೌಶಲ ಸಮಕಾಲೀನ ರಾಜಕೀಯ ನಾಯಕರಲ್ಲಿ ಗಮನಾರ್ಹವಾಗಿ ಕುಸಿದಿದೆ ಎಂಬ ವಾಸ್ತವದ (ಇಂತಹದೊಂದು ಖಚಿತ ಅಭಿಪ್ರಾಯಕ್ಕೆ ಜೂನ್ 4ರ ತನಕ ಕಾಯಬೇಕಾಗುತ್ತದೆ ಎಂಬ ಅರಿವಿನೊಂದಿಗೇ) ಅನಾವರಣ.

ಸೋಪು, ಶ್ಯಾಂಪೂ, ಕ್ರೀಮು ಮಾರುವ ಸೇಲ್ಸ್ ತಂಡಗಳನ್ನು ಹುಟ್ಟುಹಾಕಿ, ಅವರಿಗೆ ತಲುಪಲು ಗುರಿ ನೀಡುವ ರೀತಿಯಲ್ಲೇ, ಆಡಳಿತ ಪಕ್ಷವು ಈ ಬಾರಿ, ಪೇಜ್ ಪ್ರಮುಖರಿಂದಾದಿಯಾಗಿ ಬೃಹತ್ ಚುನಾವಣೆ ಗೆಲ್ಲುವ ಯಂತ್ರವನ್ನು ಸೃಜಿಸಿಕೊಂಡು, ‘ಅಬ್ ಕೀ ಬಾರ್ 400 ಪಾರ್’ ಎಂದು ತನ್ನ ಗುರಿಯನ್ನು ಆರಂಭದಲ್ಲೇ ಪ್ರಕಟಿಸಿತ್ತು. ಆದರೀಗ ಎರಡು ಹಂತಗಳ ಚುನಾವಣೆ ಮುಗಿಯುತ್ತಿರುವಾಗಲೇ ಮೋದಿ 3.0ಗೆಂದು ಸನ್ನದ್ಧಗೊಂಡಿದ್ದ ಆಡಳಿತ ಪಕ್ಷಕ್ಕೆ, ತನ್ನ ಈ ನಿಗದಿತ ಗುರಿಯ ಕುರಿತು ಸಂಶಯಗಳು ಏಳತೊಡಗಿದ್ದು, ಗುರಿ ಮತ್ತೆಮತ್ತೆ ಪರಿಷ್ಕೃತಗೊಳ್ಳತೊಡಗಿದೆ. ಚುನಾವಣಾ ಫಲಿತಾಂಶದ ಹೊತ್ತಿಗೆ ಅದು ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.

ಇಂತಹದೊಂದು ಸನ್ನಿವೇಶಕ್ಕೆ ಕಾರಣಗಳು ಇಲ್ಲದಿಲ್ಲ. 2019ರಲ್ಲಿ ಎನ್‌ಡಿಎ ಮೈತ್ರಿಕೂಟ 352 ಸ್ಥಾನಗಳನ್ನು (ಬಿಜೆಪಿ-303) ಗಳಿಸಿತ್ತು. ಅವರಿಗೆ ಗುಜರಾತ್, ರಾಜಸ್ಥಾನ, ದಿಲ್ಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಶೇ. 100 ಅಂದರೆ ಎಲ್ಲ 77 ಸೀಟುಗಳು ದೊರೆತಿದ್ದವು. ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಒಂದು ಸೀಟು ಬಿಟ್ಟು ಉಳಿದೆಲ್ಲ (54ರಲ್ಲಿ 52) ಅವರ ಪಾಲಾಗಿತ್ತು. ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪ. ಬಂಗಾಳಗಳಲ್ಲಿ ಅವರದೇ ಹೆಚ್ಚಿನ (210ರಲ್ಲಿ 162) ಸೀಟುಗಳು. ಅಂದರೆ, ಈ 12 ರಾಜ್ಯಗಳ ಸುಮಾರು 341 ಸೀಟುಗಳಲ್ಲಿ 291ನ್ನು ಎನ್‌ಡಿಎ ಬಣ ತನ್ನ ಬಳಿ ಇರಿಸಿಕೊಂಡಿತ್ತು. ಅಲ್ಲಿನ ಎಲ್ಲ ಸೀಟುಗಳನ್ನು ಮತ್ತೆ ಗೆದ್ದರೆ, ಸುಲಭವಾಗಿ 18ನೇ ಲೋಕಸಭೆಗೆ ಉಸ್ತುವಾರಿ ಅವರದೇ. ಇದರಿಂದಾಚೆ 400ರ ಉದ್ದೇಶಿತ ಗಡಿ ದಾಟಬೇಕೆಂದರೆ, ದಕ್ಷಿಣದ ರಾಜ್ಯಗಳಲ್ಲಿ (ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ) ಎನ್‌ಡಿಎ ಗಮನಾರ್ಹ ಸೀಟುಗಳನ್ನು ಪಡೆಯಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆಯಾದರೂ, ಫಲಿತಾಂಶ ಬಂದ ಬಳಿಕವಷ್ಟೇ ಪರಿಸ್ಥಿತಿ ಗೊತ್ತಾದೀತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎನ್‌ಡಿಎಗೆ, ಈ ಚುನಾವಣೆಯಲ್ಲಿ, ದಕ್ಷಿಣದ ದಿಗ್ವಿಜಯದ ಬದಲು, ತಾನು ಮಹಾರಾಷ್ಟ್ರ, ಬಿಹಾರ, ಕರ್ನಾಟಕ, ಪ. ಬಂಗಾಳ, ಜಾರ್ಖಂಡ್, ಒಡಿಶಾಗಳಲ್ಲಿ ಗಳಿಸಲಿರುವ ಸೀಟುಗಳು 18ನೇ ಲೋಕಸಭೆಯ ಸಮೀಕರಣವನ್ನು ನಿರ್ಧರಿಸಲಿವೆ ಎಂಬುದು ಅರಿವಾಗತೊಡಗಿದೆ. ಹಾಗಾಗಿಯೇ ‘400 ಪಾರ್’ ಪರಿಷ್ಕರಣಗೊಂಡಿರುವುದು.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್, ಪ್ರೀತಿಯ ಅಂಗಡಿ ತೆರೆದು ದೇಶದ ಉದ್ದಗಲಕ್ಕೂ ಓಡಾಡಿತಾದರೂ, ಈ ಬಾರಿ ಅದರ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸ್ಥಾನಗಳಿಗೆ ಸ್ಪರ್ಧೆಗೆ ಇಳಿಯುತ್ತಿದೆಯಂತೆ. ತನ್ನ ಸಹಪಕ್ಷಗಳೊಂದಿಗೆ IಓಆI ಅಲಯನ್ಸ್ ರಚಿಸಿಕೊಂಡು ಅದು ಆರಂಭದಲ್ಲಿ ತೋರಿದ ಇಚ್ಛಾಶಕ್ತಿ, ಡಿಸೆಂಬರಿನಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಳಿಕ ಸಡಿಲಗೊಂಡದ್ದಕ್ಕೂ IಓಆI ಅಲಯನ್ಸ್‌ಗೆ ಮತದಾರರ ನಾಡಿಮಿಡಿತವನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗದಿರುವುದೇ ಕಾರಣ.

2014ರಲ್ಲಿ ಕಾಣಿಸಿದ ನಿರೀಕ್ಷೆಯ ಅಲೆ, 2019ರಲ್ಲಿ ಕಾಣಿಸಿಕೊಂಡ ಹುಮ್ಮಸ್ಸಿನ ಅಲೆಗಳು ಈಗ 2024ರಲ್ಲಿ ಕಾಣಿಸುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ಆಡಳಿತ ಯಂತ್ರದ ಸಾಲು ಸಾಲು ವೈಫಲ್ಯಗಳು, ಕಣ್ಣಿಗೆ ರಾಚುವಷ್ಟು ಹೆಚ್ಚಿರುವ ಸಂಪತ್ತಿನ ಅಸಮತೋಲನ, ಭ್ರಷ್ಟಾಚಾರ ತಡೆಯುವಲ್ಲಿ ಘೋರ ವೈಫಲ್ಯ, ಹಗರಣಗಳ ಸರಮಾಲೆ ಮತ್ತವನ್ನು ಮುಚ್ಚಿಡುವ ಪ್ರಯತ್ನಗಳು ಮತದಾರರ ಗಮನಕ್ಕೆ ಬಂದಿವೆ. ವ್ಯಕ್ತಿಕೇಂದ್ರಿತ ರಾಜಕೀಯದ ಕಾರಣದಿಂದಾಗಿ ಕಳೆಗುಂದಿದ ಸಂಸದರು ಎದುರಿಸಬೇಕಾಗಿ ಬಂದಿರುವ ‘ಆಡಳಿತ ವಿರೋಧಿ ಅಲೆ’ ಈ ಬಾರಿ ಅಂತರ್ಗಾಮಿನಿಯಾಗಿ ಹರಿಯತೊಡಗಿದೆ. ನೋಟು ರದ್ದತಿ, ಕೋವಿಡ್ ಅಲೆ, ಆರ್ಥಿಕ ಸಂಕಟಗಳು ಮತ್ತು ಹದಗೆಟ್ಟ ಸಾಮಾಜಿಕ ಬದುಕುಗಳು, ದೇಶದ ಮಾಧ್ಯಮಗಳು ಸಂಪೂರ್ಣವಾಗಿ ಆಡಳಿತದ ಪರ ನಿಂತಿರುವ ಹೊರತಾಗಿಯೂ, ಜನಸಾಮಾನ್ಯರಲ್ಲಿ ಸಿಟ್ಟು, ಹತಾಶೆ, ಅಸಹಾಯಕತೆಗಳ ರೂಪದಲ್ಲಿ ಕಾಣಿಸತೊಡಗಿದೆ. ಇದನ್ನು ತನ್ನ ಪರವಾದ ಅಲೆಯಾಗಿ ಪರಿವರ್ತಿಸಿಕೊಳ್ಳಬಲ್ಲ ಸಂಘಟಿತ ಕಾರ್ಯಕರ್ತರ ಪಡೆ, ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳು ಪ್ರತಿಪಕ್ಷಗಳ ಬಳಿ ಕಾಣಿಸುತ್ತಿಲ್ಲ.

ಹಾರೈಕೆ!

ಎನ್‌ಡಿಎ ತನಗೆ ಏಕೆ 400+ ಸೀಟುಗಳು ಸಂಸತ್ತಿನಲ್ಲಿ ಬೇಕೆಂಬ ಬಗ್ಗೆ ಈಗಾಗಲೇ ಹಲವಾರು ನಾಯಕರ ಬಾಯಿಯಿಂದ ಆಯಕಟ್ಟಿನ ಜಾಗಗಳಲ್ಲಿ ಹೇಳಿಸಿದೆ. ಬಿಜೆಪಿಯ ಇಲ್ಲಿಯ ತನಕದ ರಾಜಕೀಯ ಚರಿತ್ರೆಯನ್ನು ಗಮನಿಸಿದವರು, ಬಹಳ ಸುಲಭವಾಗಿ ಈ ಬಿಂದುಗಳನ್ನು ಜೋಡಿಸಿಕೊಂಡು, ಪೂರ್ಣಚಿತ್ರ ಕಾಣಬಲ್ಲರು. ಬಹಳ ಸರಳವಾಗಿ ಹೇಳಬೇಕೆಂದರೆ, ದೇಶದ ಸದ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ, ಸಂವಿಧಾನ ಬದಲಾವಣೆ ಎಂಬುದು ಸಾಮಾಜಿಕ-ರಾಜಕೀಯ ಅಶಾಂತಿಗೆ ಹೂರಣ.

ಇಲ್ಲಿಯ ತನಕದ ಚುನಾವಣಾ ವಿಶ್ಲೇಷಣೆಗಳು, ಸಮೀಕ್ಷೆಗಳು, ಲೆಕ್ಕಾಚಾರಗಳು ಸದ್ಯದ ಸ್ಥಿತಿಯಲ್ಲಿ ಇಂತಹದೊಂದು ಬ್ರೂಟಲ್ ಬಹುಮತ ಎನ್‌ಡಿಎಗೆ ಸಿಗುವುದು ಸಾಧ್ಯವಿಲ್ಲ ಎಂದೇ ವ್ಯಾಖ್ಯಾನಿಸುತ್ತಿವೆ. ಆ ಹಿನ್ನೆಲೆಯಲ್ಲಿ, 18ನೇ ಲೋಕಸಭೆಯ ಬಲಾಬಲ ಸಾಧ್ಯತೆಗಳು ಈ ಎರಡರಲ್ಲಿ ಒಂದಾಗಿದ್ದರೆ ದೇಶಕ್ಕೆ ಒಳಿತು.

1. ಒಂದು ವೇಳೆ ಎನ್‌ಡಿಎ ಬಣವು ಆಡಳಿತ ವಿರೋಧಿ ಅಲೆಯನ್ನು ಮೀರಿ ಮೂರನೆಯ ಬಾರಿಗೆ ಅಧಿಕಾರ ಹಿಡಿಯುವುದಿದ್ದರೆ, ಅದು ಹೇಗಿರಬೇಕು? ನರೇಂದ್ರ ಮೋದಿಯವರ ಪೂರ್ಣ ಬಹುಮತದ ಎರಡು ಅವಧಿಗಳನ್ನು ಕಂಡಿರುವ ದೇಶ, ಈ ಬಾರಿ ಒಂದು ಅಲ್ಪಮತದ ಸಮ್ಮಿಶ್ರ ಅಥವಾ ತೀರಾ ಸರಳ ಬಹುಮತದ ಸರಕಾರವೊಂದನ್ನು ನರೇಂದ್ರ ಮೋದಿಯವರು ಮುನ್ನಡೆಸುವುದನ್ನು ಕಾಣುವಂತಾಗಲಿ. ಎಲ್ಲರನ್ನು ಒಳಗೊಂಡು ದೇಶ-ಸರಕಾರ ಮುನ್ನಡೆಸುವ ಕೌಶಲ ತನಗಿದೆ ಎಂಬುದನ್ನು ಸಾಬೀತುಪಡಿಸುವ ಅವಕಾಶ ಅವರಿಗೆ ಒದಗಿಬರಲಿ.

2. ಅಕಸ್ಮಾತ್ ಎನ್‌ಡಿಎ ತನ್ನ ಸೀಟುಗಳಿಕೆಯಲ್ಲಿ ಹಿಂದುಳಿದು, INDI ಅಲಯನ್ಸ್ ಅಧಿಕಾರಕ್ಕೆ ಏರುವ ಸನ್ನಿವೇಶ ಎದುರಾದರೆ, ಅದೂ ದೊಡ್ಡ ಬಹುಮತದ ಸರಕಾರ ಆಗಿರುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ, ಈಗಾಗಲೇ ಅಲ್ಪಮತದ ಸಮ್ಮಿಶ್ರ ಸರಕಾರಗಳನ್ನು ಎರಡು ಅವಧಿಗಳಿಗೆ ಯಶಸ್ವಿಯಾಗಿಯೇ ನಡೆಸಿ, ಅವಧಿ ಪೂರೈಸಿದ ಹಿನ್ನೆಲೆ ಇರುವುದರಿಂದ ಅಂತಹದೇ ಇನ್ನೊಂದು ಪ್ರಯೋಗಕ್ಕೆ ದೇಶ ಸನ್ನದ್ಧವಾಗುತ್ತದೆ. ಸನ್ನಿವೇಶದ ಗಾಂಭೀರ್ಯವನ್ನು ಅರಿತರೆ, INDI ಅಲಯನ್ಸ್‌ನ ಎಲ್ಲ ಪಕ್ಷಗಳು ತಮ್ಮ ನಡುವಿನ ಅಭಿಪ್ರಾಯಭೇದಗಳನ್ನು ಮರೆತು, ದೇಶದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಆರೋಗ್ಯಕರ ಆಡಳಿತವೊಂದನ್ನು ಕೊಡುವುದು ಸಾಧ್ಯವಿದೆ.

ಈ ಎರಡೂ ಸನ್ನಿವೇಶಗಳಲ್ಲಿ ಬ್ರೂಟಲ್ ಬಹುಮತದ ಸಾಧ್ಯತೆಗಳು ಕಡಿಮೆ ಇರುವುದರಿಂದ, 18ನೇ ಲೋಕಸಭೆಗೊಂದು ಪ್ರಬಲ ಪ್ರತಿಪಕ್ಷ ಸಿಗುವುದು ಖಚಿತ. ಅದು ತೀರಾ ಅಗತ್ಯವಿದೆ. ಹಾಗಾಗಿಯೇ ಈ ಚುನಾವಣೆಯಲ್ಲಿ ದೇಶದ ಹಿತ ಬಯಸುವ ಎಲ್ಲರ ಹಾರೈಕೆ ಇರಬೇಕಾದುದು ‘ಹಂಗಿನರಮನೆ (Hung Parliament) ಪ್ರಾಪ್ತಿರಸ್ತು!’

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News