ನಕಲಿ ನೋಟು: ಎಟಿಎಂ ನಗದು ನಿರ್ವಹಣೆ ಸೇವೆ ಸುತ್ತ ಸಂಶಯದ ಹುತ್ತ

Update: 2017-02-25 18:50 GMT

ಭಾರತೀಯ ರಿಸರ್ವ್ ಬ್ಯಾಂಕ್ ಬದಲು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ನೋಟುಗಳು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಸಿಕ್ಕಿರುವುದು ಇಡೀ ಬ್ಯಾಂಕ್ ನಗದು ಹೊರಗುತ್ತಿಗೆ ಸೇವೆ ಬಗ್ಗೆಯೇ ಕಳವಳ ಮೂಡಲು ಕಾರಣವಾಗಿದೆ.

ಎಟಿಎಂ ನಗದು ನಿರ್ವಹಿಸುವ ಹೊರಗುತ್ತಿಗೆ ಕಂಪೆನಿಗಳನ್ನು ಕಟ್ಟುನಿಟ್ಟಿನ ನಿರ್ಬಂಧಗಳಿಗೆ ಒಳಪಡಿಸುವುದು ಅಗತ್ಯ ಎಂದು ಉದ್ಯಮ ಮೂಲಗಳು ಹೇಳುತ್ತವೆ. ಅಶೋಕ ಚಕ್ರದ ಬದಲು ಚುರಾನ್ ಲೇಬಲ್ ಹೊಂದಿರುವ, ಆರ್‌ಬಿಐ ಸೀಲ್ ಬದಲಾಗಿ ಪಿಕೆ ಹೆಸರಿನ, ನೋಟಿನ ಕ್ರಮಸಂಖ್ಯೆಯ ಬದಲು ಶೂನ್ಯ ಸಂಕೇತ ಹೀಗೆ ಹಲವು ದೋಷಗಳು ಈ ನಕಲಿ ನೋಟುಗಳಲ್ಲಿ ಕಂಡುಬರುತ್ತವೆ.

ಇದು ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ. ಕೆಲ ಸೇವೆಗಳನ್ನು ಬ್ಯಾಂಕ್‌ಗಳು ಹೊರಗುತ್ತಿಗೆ ನೀಡಲೇಬೇಕಾಗುತ್ತದೆ. ಆದರೆ ಇಂದಿನ ತುರ್ತು ಅಗತ್ಯವೆಂದರೆ, ನಗದು ವರ್ಗಾವಣೆ ಘಟಕಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹಾಗೂ ಸ್ಪಷ್ಟ ನಿರ್ಬಂಧಗಳನ್ನು ವಿಧಿಸುವುದು. ಈ ಸಂಬಂದ ಬಹುಶಃ ಆರ್‌ಬಿಐ ಅಥವಾ ಕೇಂದ್ರ ಸರಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕಾಗಿದೆ. ಇದಕ್ಕೆ ಕಡ್ಡಾಯವಾಗಿ ಬ್ಯಾಂಕಿನ ಖಾತ್ರಿ ಇಲ್ಲವೇ ಕಡ್ಡಾಯ ಬಿಗಿ ನಿಯಮಗಳು ಅಗತ್ಯ ಎಂದು ಮುಂಚೂಣಿ ಎಟಿಎಂ ಘಟಕ ಎನ್‌ಸಿಆರ್ ಇಂಡಿಯಾದ ಸಿಇಒ ನೌರೋಜ್ ದಸ್ತೂರ್ ಹೇಳುತ್ತಾರೆ.

ಫೆಬ್ರವರಿ 6ರಂದು ದಿಲ್ಲಿಯ ಸಂಗಮ್ ವಿಹಾನ್‌ನ ತಿಗ್ರಿಯ ಎಟಿಎಂನಿಂದ ಪಡೆದ 2000 ರೂಪಾಯಿ ನೋಟಿನಲ್ಲಿ ಆರ್‌ಬಿಐ ಎಂಬ ಬದಲಾಗಿ ಚಿಲ್ಟ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿತವಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್‌ನ ಸಹಿ ಬದಲು ಭಾರತೀಯ ಮನೋರಂಜನ್ ಬ್ಯಾಂಕ್‌ನ ಗವರ್ನರ್‌ನ ಸಹಿ ಇತ್ತು. ಆರ್‌ಬಿಐ ಮುದ್ರೆಯ ಬದಲು ಪಿಕೆ ಎಂಬ ಲೋಗೊ, ಅಶೋಕ ಚಕ್ರದ ಬದಲು ಚುರಾನ್ ಲೇಬಲ್, ಕ್ರಮಸಂಖ್ಯೆ ಬದಲು ಸೊನ್ನೆಯಂಥ ಅಂಶಗಳು ಈ ನಕಲಿ ನೋಟುಗಳಲ್ಲಿ ಎದ್ದು ಕಾಣುತ್ತಿದ್ದವು.

ಮತ್ತೊಂದು ಎಟಿಎಂ ನಿರ್ವಹಿಸುವವರು ಹೇಳುವಂತೆ, ಎಟಿಎಂನಿಂದ ಹಲವು ಬಾರಿ ನಗದು ಕಾಣೆಯಾಗುವ ಮೂಲಕ ಅಭಾವ ಸೃಷ್ಟಿಯಾಗುತ್ತಿತ್ತು. ಹಲವಷ್ಟು ಬಾರಿ ನಗದು ಒಯ್ಯುವ ವಾಹನಗಳಿಗೆ ಸಶಸ್ತ್ರ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಇಡೀ ವ್ಯವಸ್ಥೆಯಲ್ಲೇ ಗಂಭೀರ ಲೋಪಗಳಿವೆ. ಕೇವಲ 5 ರಿಂದ 10 ಸಾವಿರ ರೂಪಾಯಿ ವೇತನಕ್ಕೆ ದುಡಿಯುವ ಮಂದಿಗೆ ಇದು ಸುಲಭದ ಗುರಿಯಾಗುತ್ತದೆ. ಬ್ಯಾಂಕಿಂಗ್ ಹಾಗೂ ಎಟಿಎಂ ಕ್ಷೇತ್ರಗಳಲ್ಲಿರುವ ಮಂದಿ ಅತಿಹೆಚ್ಚಿನ ವಿಶ್ವಾಸ ಹೊಂದಿರಬೇಕಾಗುತ್ತದೆ

ಹಲವು ಸೇವೆಗಳನ್ನು ಏಜೆನ್ಸಿಗಳಿಗೆ ಹೊರಗುತ್ತಿಗೆಗೆ ನೀಡಲಾಗಿದ್ದು, ಇವರು ವರ್ಗಾವಣೆ ಕಂಪೆನಿಗಳಲ್ಲಿ ನಗದನ್ನು ಪಡೆಯುತ್ತಾರೆ. ಸಶಸ್ತ್ರ ಕಾವಲು ಸಿಬ್ಬಂದಿ ಹಾಗೂ ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ನಿಯಮಾವಳಿ ಇಲ್ಲದಿರುವುದರಿಂದ, ಬ್ಯಾಂಕಿನ ಕರೆನ್ಸಿ ಚೆಸ್ಟ್‌ನಿಂದ ಈ ಕಂಪೆನಿಯ ಸಿಬ್ಬಂದಿಗೆ ನಗದು ಹಣವನ್ನು ನೀಡುವಲ್ಲಿಂದ, ಎಟಿಎಂಗೆ ಅವುಗಳನ್ನು ಲೋಡ್ ಮಾಡುವವರೆಗೆ ಏನಾಗುತ್ತದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ.

ಕಳೆದ ವರ್ಷ ಆರ್‌ಸಿಐ ನಗದು ನಿರ್ವಹಣೆ ಸೇವಾ ಸಂಸ್ಥೆ ಬಹುಕೋಟಿ ನಿಧಿ ದುರ್ಬಳಕೆ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ಇಲ್ಲಿ ಉದಾಹರಿಸಬಹುದಾಗಿದೆ.

ವಿದೇಶಗಳಂತೆ, ಭಾರತದಲ್ಲೂ ಕೆಸೆಟ್-ಸ್ವಾ ್ಯಪ್ ವ್ಯವಸ್ಥೆಯನ್ನು ಭಾರತೀಯ ರಿಸರ್ವ್‌ಬ್ಯಾಂಕ್ 2009ರಲ್ಲಿ ಶಿಫಾರಸು ಮಾಡಿತ್ತು. ಈ ವ್ಯವಸ್ಥೆಯಡಿ ಬ್ಯಾಂಕುಗಳು ನಗದು ಹೊಂದಿದ ಕೆಸೆಟ್‌ಗಳನ್ನು ಲೋಡ್ ಮಾಡಿ ಸೀಲ್ ಮಾಡುತ್ತವೆ. ಈ ಸೀಲ್ ಮಾಡಿದ ಕೆಸೆಟ್‌ಗಳನ್ನು ನಗದು ವರ್ಗಾವಣೆ ಕಂಪೆನಿಗಳು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸಬೇಕು. ನೇರವಾಗಿ ನೋಟುಗಳನ್ನು ನಿರ್ವಹಿಸಲು ಇಲ್ಲಿ ಅವಕಾಶ ಇರುವುದಿಲ್ಲ. ಇದು ಹೆಚ್ಚು ಸುರಕ್ಷಿತವಾಗಿ ನಗದು ನಿರ್ವಹಿಸುವ ವಿಧಾನವಾಗಿದೆ.

ಆದರೆ ಇದು ದುಬಾರಿ ಎಂಬ ಕಾರಣಕ್ಕೆ ಇನ್ನೂ ಇದನ್ನು ಅನುಷ್ಠಾನಗೊಳಿಸಿಲ್ಲ. ಜತೆಗೆ ನಮ್ಮ ಮೂಲಸೌಕರ್ಯ ಕೂಡಾ ಇದಕ್ಕೆ ಸಜ್ಜಾಗಿಲ್ಲ. ಕಳೆದ ವರ್ಷ 19 ಬ್ಯಾಂಕುಗಳ 90 ಎಟಿಎಂಗಳಲ್ಲಿ 32 ಲಕ್ಷ ಡೆಬಿಟ್ ಕಾರ್ಡ್‌ಗಳ ಭದ್ರತಾ ಅಂಶಗಳು ಸೋರಿಕೆಯಾದಾಗ ಈ ಅಂಶ ಬೆಳಕಿಗೆ ಬಂದಿತ್ತು ಎಂದು ದಸ್ತೂರ್ ಹೇಳುತ್ತಾರೆ.

ಇದರಿಂದಾಗಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್‌ಗಳ ಸುಮಾರು 1.03 ಕೋಟಿ ರೂಪಾಯಿ ಮೌಲ್ಯದ ಡೆಬಿಟ್ ಕಾರ್ಡ್ ವಹಿವಾಟಿನ ಬಗ್ಗೆ ಸಂಶಯಗಳು ಹುಟ್ಟಿಕೊಂಡಿದ್ದವು. ಈ ಕಾರ್ಡ್‌ಗಳನ್ನು ನಿಯತವಾಗಿ ಎಟಿಎಂಗಳಲ್ಲಿ ಬಳಸಲಾಗುತ್ತಿತ್ತು ಹಾಗೂ ಮೂರನೆ ಪಕ್ಷದವರು ಇದನ್ನು ನಿರ್ವಹಿಸುತ್ತಿರುವುದು ಬಹಿರಂಗವಾಗಿತ್ತು. ಎಟಿಎಂ ಸಂಕೇತ ಸಾಫ್ಟ್‌ವೇರ್‌ಗಳನ್ನೇ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ನಂಬಲಾಗಿತ್ತು.

ಈ ಮಾಹಿತಿಗಳು ಸೋರಿಕೆಯಾದ ಬಳಿಕ ಯೆಸ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹೊರಗುತ್ತಿಗೆ ಪಾಲುದಾರರ ಬಗ್ಗೆ ಹೆಚ್ಚು ಜಾಗರೂಕವಾಗಿರುವ ಅಗತ್ಯವಿದೆ ಹಾಗೂ ಭದ್ರತಾ ನಿಯಂತ್ರಣಗಳು ಎಷ್ಟು ಕಟ್ಟುನಿಟ್ಟಾಗಿರಬೇಕು ಎಂದರೆ, ವಿತರಣೆ ವ್ಯವಸ್ಥೆಯಲ್ಲಿ ಯಾವ ಅಪಾಯಕ್ಕೂ ಅವಕಾಶ ಇರಬಾರದು..ಹೊರಗುತ್ತಿಗೆ ಕಂಪೆನಿಗಳ ವಿಚಾರದಲ್ಲಿ ಹೆಚ್ಚು ಕಣ್ಗಾವಲು ಇರಬೇಕು. ಏಕೆಂದರೆ ಕಾರ್ಯನಿರ್ವಹಣೆ ಹಂತದಲ್ಲಿ ಇವು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಹೊರಗುತ್ತಿಗೆ ಸೇವೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳು ಹೆಚ್ಚು ನಿರ್ದಿಷ್ಟವಾಗಿಲ್ಲ. 2012ರಲ್ಲಿ, ಎಟಿಎಂ ವಿಸ್ತರಣೆ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಸಾಮಾನ್ಯವಾಗಿ ಜಾರಿಯಲ್ಲಿರುವ ಬಂಡವಾಳ ವೆಚ್ಚ ಮಾದರಿಯ ಬದಲು, ಕಾರ್ಯನಿರ್ವಹಣೆ ಮಾದರಿಯನ್ನು ಜಾರಿಗೊಳಿಸಬೇಕು ಎಂದು ಹಣಕಾಸು ಸಚಿವಾಲಯ ಒತ್ತಿ ಹೇಳಿತ್ತು. ಕಾರ್ಯನಿರ್ವಹಣೆ ವೆಚ್ಚ ಮಾದರಿಯಲ್ಲಿ, ಮೂರನೆ ಸಂಸ್ಥೆ ಎಟಿಎಂಗಳನ್ನು ಸ್ಥಾಪಿಸುತ್ತದೆ ಹಾಗೂ ನಿರ್ವಹಿಸುತ್ತದೆ. ಇಂಥ ಪ್ರತೀ ವಹಿವಾಟಿನಲ್ಲಿ ಸಂಭಾವನೆ ಪಡೆಯುತ್ತದೆ. ಆದರೆ ಬಂಡವಾಳ ವೆಚ್ಚ ಮಾದರಿಯಲ್ಲಿ ಬ್ಯಾಂಕುಗಳೇ ಎಲ್ಲವನ್ನೂ ನಿರ್ವಹಿಸುತ್ತವೆ.

ನಗದು ಒಯ್ಯುವ ವಾಹನಗಳ ಜತೆ ಸಶಸ್ತ್ರ ಭದ್ರತಾ ಸಿಬ್ಬಂದಿ ಇರಬೇಕು ಎಂದು ಸೂಚಿಸಲಾಗಿದ್ದರೂ, ಇದರ ಮೇಲ್ವಿಚಾರಣೆಗೆ ಯಾವ ವ್ಯವಸ್ಥೆಯೂ ಇಲ್ಲ. ಜತೆಗೆ ಈ ವಾಹನಗಳ ಚಲನ ವಲನಗಳ ಮೇಲೆ ಅಥವಾ ಸ್ಥಳದ ಮೇಲೆ ನಿಗಾ ಇಡುವ ಜಿಪಿಎಸ್ ಸ್ಥಳಸೂಚಕ ವ್ಯವಸ್ಥೆಯನ್ನು ಕೂಡಾ ಈ ವಾಹನಗಳಿಗೆ ಅಳವಡಿಸಿಲ್ಲ. ಹಲವು ಉತ್ತರ ರಾಜ್ಯಗಳಲ್ಲಿ ಈ ನಗದು ವರ್ಗಾವಣೆ ಕಂಪೆನಿಗಳ ಹಲವು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವೇಳೆ ಗುಂಡೇಟಿಗೆ ಬಲಿಯಾದ ನಿದರ್ಶನಗಳಿವೆ. 2016ರ ಅಕ್ಟೋಬರ್‌ವರೆಗೆ ದೇಶದಲ್ಲಿ 2.05 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವರ ಎಂದು ಆರ್‌ಬಿಐ ಅಂಕಿ ಅಂಶಗಳು ಹೇಳುತ್ತದೆ.

(ಕೃಪೆ: moneycontrol.com)

Writer - ಬೀನಾ ಪರ್ಮಾರ್

contributor

Editor - ಬೀನಾ ಪರ್ಮಾರ್

contributor

Similar News