ಫುಟ್ಬಾಲ್ ದಂತಕತೆ ಪೀಲೆ ಪುತ್ರನಿಗೆ 13 ವರ್ಷ ಜೈಲು ಶಿಕ್ಷೆ

Update: 2017-02-26 04:06 GMT

ಸಾವೊ ಪೋಲೊ, ಫೆ.26: ಹಣಕಾಸು ಹಗರಣ ಹಾಗೂ ಮಾದಕವಸ್ತು ಕಳ್ಳಸಾಗಾಟ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದ ಫುಟ್ಬಾಲ್ ದಂತಕಥೆ ಪೀಲೆಯ ಪುತ್ರನಿಗೆ ಬ್ರೆಝಿಲ್ ನ್ಯಾಯಾಲಯ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತಂದೆ ಆಡುತ್ತಿದ್ದ ಸ್ಯಾಂಟೋಸ್ ಕ್ಲಬ್‌ಗೆ ಅಲ್ಪಕಾಲ ಫುಟ್ಬಾಲ್ ಆಡಿದ್ದ ಎಡ್ಸನ್ ಎಡಿನೊ ಚೊಲ್ಬಿ ಡೊ ನಶಿಮೆಂಟೊ ಪದೇಪದೇ ನ್ಯಾಯಾಲಯದ ತೀರ್ಪಿಗೆ ಮೇಲ್ಮನವಿ ಸಲ್ಲಿಸುತ್ತಾ ಬಂದು, ಶಿಕ್ಷೆ ಅನುಭವಿಸುವುದರಿಂದ ತಪ್ಪಿಸಿಕೊಂಡಿದ್ದ. ಆದರೆ ಗುರುವಾರ, ಅವವ ಶಿಕ್ಷೆಯನ್ನು ಎತ್ತಿಹಿಡಿದ ನ್ಯಾಯಾಧೀಶರು, 2014ರಲ್ಲಿ ಅವನಿಗೆ ವಿಧಿಸಿದ್ದ 33 ವರ್ಷಗಳ ಜೈಲು ಶಿಕ್ಷೆಯನ್ನು 12 ವರ್ಷ 10 ತಿಂಗಳಿಗೆ ಇಳಿಸಿದರು.

ಬ್ರೆಝಿಲ್ ನ ಬಂದರು ನಗರವಾದ ಸ್ಯಾಂಟೋಸ್‌ನಲ್ಲಿ ಶುಕ್ರವಾರ ಪೊಲೀಸರಿಗೆ ಶರಣಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಈ ಮಾಜಿ ಗೋಲ್‌ಕೀಪರ್, "ಇದರಿಂದ ನನಗೆ ತೀವ್ರ ಆಘಾತವಾಗಿದೆ. ಹಣ ದುರ್ಬಳಕೆ ಆರೋಪದಲ್ಲಿ ನನಗೆ ಶಿಕ್ಷೆ ವಿಧಿಸಲಾಗಿದೆ. ನಾನು ವಾಸ್ತವವಾಗಿ ಇದರಲ್ಲಿ ಶಾಮೀಲಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾನೆ.

ದೂರವಾಣಿ ಕರೆ ಕದ್ದಾಲಿಕೆ ಸಾಕ್ಷಿಗೆ ಅನುಗುಣವಾಗಿ ಈತನಿಗೆ ಶಿಕ್ಷೆ ವಿಧಿಸಲಾಗಿತ್ತು. ತನ್ನ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ ಪೀಲೆ ಪುತ್ರ, ''ಹಣಕಾಸು ದುರ್ಬಳಕೆಯಲ್ಲಿ ನಾನು ಶಾಮೀಲಾಗಿಲ್ಲ. ಮಾದಕವಸ್ತು ಕಳ್ಳ ಸಾಗಾಟದಾರರ ಜತೆಗೆ ನನಗೆ ಇದ್ದ ಸಂಬಂಧವೆಂದರೆ, ಕೇವಲ ನಾನು ಅದನ್ನು ಬಳಸುತ್ತಿದ್ದುದು'' ಎಂದು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News