362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಕ್ಕೆ ನಿರ್ಧಾರ
ಬೆಂಗಳೂರು, ಮಾ. 1: ಕೆಪಿಎಸ್ಸಿಯ 2011ನೆ ಸಾಲಿನ 362ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ನೇಮಕಾತಿಗೆ ಸಂಬಂಧ ಕರ್ನಾಟಕ ಆಡಳಿತ ನ್ಯಾಯ ಮಂಡಳಿ(ಕೆಎಟಿ) ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಬುಧವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭಾ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ತೂಗುಯ್ಯಿಲೆಯಲ್ಲಿದ್ದ 362 ಮಂದಿಗೂ ರಾಜ್ಯ ಸರಕಾರ ನೇಮಕಾತಿ ಆದೇಶ ನೀಡಲಿದೆ.
ಸಂಪುಟ ಸಭೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಕೆಎಟಿ ತೀರ್ಪನ್ನು ಸಂಪುಟ ಸಭೆಯಲ್ಲಿ ಕೂಲಂಕಶವಾಗಿ ಪರಿಶೀಲಿಸಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನೂ ಪಡೆದಿದೆ.
ಕೆಪಿಎಸ್ಸಿ ಆಯ್ಕೆಪಟ್ಟಿ ಕುರಿತಂತೆ ಕೇಳಿಬಂದ ಆರೋಪಗಳು, ನಂತರ ಈ ಕುರಿತಂತೆ ಸಿಐಡಿ ನೀಡಿದ ವರದಿ, ಸರಕಾರದಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ 2011ರಿಂದ ಈವರೆಗೆ ಆಗದೇ ಇರುವ ನೇಮಕಾತಿಗಳು ಹೀಗೆ ಎಲ್ಲವನ್ನೂ ಕೆಎಟಿ ಪರಿಗಣಿಸಿ ತೀರ್ಪು ಪ್ರಕಟಿಸಿದೆ. ಈ ಎಲ್ಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಪ್ರಜ್ಞಾಪೂರ್ವಕವಾಗಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಪುಟದ ಈ ನಿರ್ಧಾರದಿಂದ 362 ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗ ದೊರೆಯಲಿದೆ. ನೇಮಕಾತಿಗೆ ಮುನ್ನ, ಪೊಲೀಸ್ ಪರಿಶೀಲನೆ ಹಾಗೂ ನಂತರ ಖಾಯಂ ಪೂರ್ವ ಅವಧಿ ಇರುವ ಹಿನ್ನೆಲೆಯಲ್ಲಿ ಬಾಧಿತರಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ಇದ್ದೇ ಇರುತತಿದೆ ಎಂದು ಜಯಚಂದ್ರ ಇದೇ ವೇಳೆ ಸ್ಪಷ್ಟಣೆ ನೀಡಿದರು.