ಶಾಂತಾ ರಂಗಸ್ವಾಮಿ :ಭಾರತ ಕ್ರಿಕೆಟ್‌ನ ಮೊದಲ ಮಹಿಳೆ

Update: 2017-03-04 08:29 GMT

ರಂಗಸ್ವಾಮಿ ಭಾರತೀಯ ಮಹಿಳಾ ಕ್ರಿಕೆಟ್‌ನ ಅಗ್ರಗಣ್ಯೆಯಾಗಿದ್ದರು ಮತ್ತು ಕ್ರಿಕೆಟ್‌ನ ಬಾಲಾವಸ್ಥೆಯಲ್ಲಿ ಅದನ್ನು ಪೋಷಿಸಿ ಆರಂಭಿಕ ಹೋರಾಟದಲ್ಲಿ ದಿಕ್ಕು ತೋರಿಸಿ ಮುನ್ನಡೆಸಿದ್ದರು. 25ರ ಹರೆಯದ ಕೆಳಗಿನ ಆಸ್ಟ್ರೇಲಿಯಾ ತಂಡ 1975ರ ಫೆಬ್ರವರಿಯಲ್ಲಿ ಮೊದಲ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ರಂಗಸ್ವಾಮಿ ಅಂತಾರಾಷ್ಟ್ರೀಯ ಪಂದ್ಯದಲ್ಲೂ ತನ್ನ ಛಾಪು ಮೂಡಿಸಿದರು.

ಶಾಂತಾ ರಂಗಸ್ವಾಮಿ ಹಲವು ಪ್ರಥಮಗಳ ಮಹಿಳೆ. 1976ರಲ್ಲಿ ಆಕೆ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ಆಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಮೊದಲ ಮಹಿಳೆ ಮತ್ತು ಟೆಸ್ಟ್ ಪಂದ್ಯ ಗೆದ್ದ ಮೊದಲ ನಾಯಕಿಯಾಗಿದ್ದಾರೆ. ಕಳೆದ ಸೋಮವಾರ ಆಕೆ ಮತ್ತೊಂದು ಪ್ರಮುಖವಾದ ಪ್ರಥಮಕ್ಕೆ ನಾಂದಿ ಹಾಡಿದರು; ಭಾರತೀಯ ಕ್ರಿಕೆಟ್ ಮಂಡಳಿ ಹೊಸದಾಗಿ ಪರಿಚಯಿಸಿರುವ ಮಹಿಳಾ ಜೀವಿತಾವಧಿ ಸಾಧನೆ ಪುರಸ್ಕಾರದಿಂದ ಆಕೆಯನ್ನು ಸನ್ಮಾನಿಸುವ ಮೂಲಕ ಆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಆಕೆ ಭಾಜನರಾದರು.

ಆದರೆ ಮಹಿಳಾ ಕ್ರಿಕೆಟ್‌ನ ದಂತಕತೆಯಾಗಿರುವ 63ರ ಹರೆಯದ ಶಾಂತಾ ಈ ಪ್ರಶಸ್ತಿಯನ್ನು ವಿಸ್ತಾರವಾದ ಕೋನದಲ್ಲಿ ನೋಡುತ್ತಾರೆ. ‘‘ನನಗೆ ಹೆಮ್ಮೆಯೆನಿಸುತ್ತದೆ, ಆದರೆ ಅದು ನನಗೆ ವೈಯಕ್ತಿಕವಾಗಿಯಲ್ಲ. ಇದು ಮಹಿಳಾ ಕ್ರಿಕೆಟ್‌ನ ಸಾಧನೆ. ಕನಿಷ್ಠ ಪಕ್ಷ ಇನ್ನು ಮುಂದೆ ಪ್ರತೀ ವರ್ಷ ಒಬ್ಬ ಮಹಿಳಾ ಕ್ರಿಕೆಟ್‌ಪಟು ತನ್ನ ಸಾಧನೆಗಾಗಿ ಗುರುತಿಸಿಕೊಳ್ಳಲಿದ್ದಾಳೆ’’ ಎನ್ನುತ್ತಾರೆ ಆಕೆ.

‘‘ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಪಟುಗಳನ್ನು ಕೂಡಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬ ನಿರ್ಧಾರಕ್ಕೆ ಆಡಳಿತಗಾರರ ಸಮಿತಿ ಸೋಮವಾರದಂದು ನಿರ್ಧಾರ ತೆಗೆದುಕೊಂಡಿತು’’ ಎಂದು ಹೇಳುತ್ತಾರೆ ಭಾರತೀಯ ಮಹಿಳಾ ಕ್ರಿಕೆಟ್‌ನ ಮತ್ತೋರ್ವ ಸಾಧಕಿ ಮತ್ತು ಬಿಸಿಸಿಐಯ ನಾಲ್ಕು ಸದಸ್ಯರ ಆಡಳಿತ ಸಮಿತಿಯ ಭಾಗವಾಗಿರುವ ಡಯನಾ ಎಡುಲ್ಜಿ. ‘‘ಹಲವು ಹೆಸರುಗಳನ್ನು ಈ ಪ್ರಶಸ್ತಿಗೆ ಚರ್ಚಿಸಿದರೂ ಶಾಂತಾ ರಂಗಸ್ವಾಮಿಯೇ ಈ ಪ್ರಶಸ್ತಿಗೆ ಅರ್ಹರು ಎಂಬ ನಿರ್ಧಾರಕ್ಕೆ ಸಮಿತಿ ಬಂತು. ಆಕೆ ಓರ್ವ ಉತ್ತಮ ಆಲ್-ರೌಂಡರ್ ಮತ್ತು ಚತುರ ನಾಯಕಿ, ಭಾರತೀಯ ಮಹಿಳಾ ಕ್ರಿಕೆಟ್‌ನ ಅಗ್ರಗಣ್ಯರಲ್ಲಿ ಒಬ್ಬರು’’ ಎಂದಾಕೆ ಹೇಳುತ್ತಾರೆ.

ಭಾರತೀಯ ಕ್ರಿಕೆಟ್ ಮಂಡಳಿಯು 2006ರಲ್ಲಿ ಮಹಿಳಾ ಕ್ರಿಕೆಟ್ ಆಯೋಗದಿಂದ ಮಹಿಳಾ ಕ್ರಿಕೆಟ್‌ನ್ನು ಪಡೆದುಕೊಂಡಿತು. ಆದರೆ ಮಹಿಳಾ ಕ್ರಿಕೆಟ್ ಆಟಗಾರರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲು ಬಿಸಿಸಿಐ ಒಂದು ದಶಕ ಸಮಯ ತೆಗೆದುಕೊಂಡ ಬಗ್ಗೆಯೂ ರಂಗಸ್ವಾಮಿ ಗಮನಸೆಳೆಯುತ್ತಾರೆ.

‘‘ಇದು ತುಂಬಾ ಹಿಂದಿನಿಂದ ಬಾಕಿಯುಳಿದಿದ್ದ ಸನ್ಮಾನ. ಈ ಪ್ರಶಸ್ತಿಯನ್ನು ಆರಂಭಿಸಲು ಅವರಿಗೆ ಹತ್ತು ವರ್ಷಗಳೇ ಬೇಕಾಯಿತು. ಆದರೆ ನಾನು ಈ ಪ್ರಶಸ್ತಿಯನ್ನು ಗುಣಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಮತ್ತು ಇದೊಂದು ಉತ್ತಮ ಆರಂಭ ಎಂದು ಾವಿಸುತ್ತೇನೆ’’ ಎನ್ನುತ್ತಾರೆ ಶಾಂತಾ.

ಸರ್ವೋಚ್ಛ ನ್ಯಾಯಾಲಯದ ಆದೇಶದ ನಂತರ ಬಿಸಿಸಿಐಯ ಆಡಳಿತ ಸಮಿತಿಯ ಕಮಾನನ್ನು ಹಿಡಿದುಕೊಂಡಿರುವ ಆಡಳಿತಗಾರರು ಕೂಡಾ ಈ ನಿರ್ಧಾರದಲ್ಲಿ ಮುಖ್ಯ ಪಾತ್ರವಹಿಸಿರಬಹುದು ಎನ್ನುವುದನ್ನು ಶಾಂತಾ ಒಪ್ಪಿಕೊಳ್ಳುತ್ತಾರೆ. ಆಡಳಿತಗಾರರ ಸಮಿತಿ ತಮ್ಮನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಕೂಡಾ ಶಾಂಾ ಶ್ಲಾಘಿಸುತ್ತಾರೆ.

‘‘ಕಳೆದ ಎರಡು ಮೂರು ವರ್ಷಗಳಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಕೊನೆಗೂ ಮಹಿಳಾ ಕ್ರಿಕೆಟನ್ನು ಗುರುತಿಸಲು ಒಬ್ಬ ಮಹಿಳೆ ಮತ್ತು ಹೊರಗಿನವರು ಬೇಕಾಯಿತು. ಆದರೆ ಸದ್ಯ ಪುನರಾವರ್ತನೆಗೆ ವೇದಿಕೆ ಸಜ್ಜಾಗಿದೆ ಮತ್ತು ಅದೇ ಸಂತೋಷದ ವಿಷಯ’’ ಎನ್ನುತ್ತಾರೆ ಶಾಂತಾ.

ಭಾರತೀಯ ಮಹಿಳಾ ಕ್ರಿಕೆಟ್‌ನ ಆರಂಭಿಕ ಆಡಳಿತಗಾರರಲ್ಲಿ ಒಬ್ಬರಾದ ಶಿಲು ರಂಗನಾಥನ್ ಹೀಗೆನ್ನುತ್ತಾರೆ, ‘‘ಕೊನೆಗೂ ಭಾರತದ ಓರ್ವ ಮಹಿಳಾ ಕ್ರಿಕೆಟ್‌ಪಟುವನ್ನು ಪ್ರತಿಷ್ಠಿತ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ಆಕೆ ಕ್ರೀಡೆಗಿಂತ ಮೇಲೆ ಬೆಳೆದಿದ್ದರು. ನಾವು ಮೆಟ್ರೊದ ಹೊರಗಿನ ಕ್ರೀಡಾಂಗಣಗಳಲ್ಲಿ ಆಡುತ್ತಿದ್ದಾಗ ಯುವಕರು ಬಂದು ಕ್ರಿಕೆಟ್ ನೋಡುತ್ತಿದ್ದರು ಮತ್ತು ಆಕೆಯ ಆಟೊಗ್ರಾಫ್ ಪಡೆದುಕೊಳ್ಳುತ್ತಿದ್ದರು’’.

ನಿಜವಾಗಿಯೂ ಇದು ಸುದೀರ್ಘವಾಗಿ ಬಾಕಿಯುಳಿದಿದ್ದ ಒಂದು ಪ್ರಶಸ್ತಿ, ಯಾಕೆಂದರೆ ರಂಗಸ್ವಾಮಿ ಭಾರತೀಯ ಮಹಿಳಾ ಕ್ರಿಕೆಟ್‌ನ ಅಗ್ರಗಣ್ಯೆಯಾಗಿದ್ದರು ಮತ್ತು ಕ್ರಿಕೆಟ್‌ನ ಬಾಲಾವಸ್ಥೆಯಲ್ಲಿ ಅದನ್ನು ಪೋಷಿಸಿ ಆರಂಭಿಕ ಹೋರಾಟದಲ್ಲಿ ದಿಕ್ಕು ತೋರಿಸಿ ಮುನ್ನಡೆಸಿದ್ದರು. 25ರ ಹರೆಯದ ಕೆಳಗಿನ ಆಸ್ಟ್ರೇಲಿಯಾ ತಂಡ 1975ರ ಫೆಬ್ರವರಿಯಲ್ಲಿ ಮೊದಲ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ರಂಗಸ್ವಾಮಿ ಅಂತಾರಾಷ್ಟ್ರೀಯ ಪಂದ್ಯದಲ್ಲೂ ತನ್ನ ಛಾಪು ಮೂಡಿಸಿದರು.

ವಿಸ್ಡನ್ ಇಂಡಿಯಾದಲ್ಲಿ ಸಿದ್ಧಾಂತ ಪಟ್ನಾಯಕ್ ಬರೆಯುವಂತೆ ರಂಗಸ್ವಾಮಿ ಎರಡನೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್ ಕಲೆ ಹಾಕಿದರು ಮತ್ತು ಆಸ್ಟ್ರೇಲಿಯಾ ಪಂದ್ಯ ಗೆಲ್ಲಲು ಕೊನೆಯ ಓವರ್‌ನಲ್ಲಿ ಐದು ರನ್‌ಗಳ ಆವಶ್ಯಕತೆಯಿದ್ದು ನಾಲ್ಕು ವಿಕೆಟ್‌ಗಳು ಕೈಯಲ್ಲಿದ್ದಾಗ ಆರು ಎಸೆತಗಳಲ್ಲಿ ಅಮೂಲ್ಯ ಮೂರು ವಿಕೆಟ್‌ಗಳನ್ನು ಕಿತ್ತು ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು. 1976ರಲ್ಲಿ ವೆಸ್ಟ್ ಇಂಡೀಸ್ ಎದುರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಆಕೆ 74 ರನ್ ಬಾರಿಸಿದ್ದರು.

ಮೂರು ಟೆಸ್ಟ್‌ಗಳ ನಂತರ ಆಕೆ ತನ್ನ ತಂಡವನ್ನು ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನತ್ತ ಮುನ್ನಡೆಸಿದ್ದರು. ಮುಂದೆ 1977ರಲ್ಲಿ ವಿದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರಂಗಸ್ವಾಮಿ ಆಕರ್ಷಕ ಶತಕ ಸಿಡಿಸಿ ಭಾರತ 177 ರನ್ ಕಲೆಹಾಕಲು ನೆರವಾಗುವ ಮೂಲಕ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು. ‘‘ಒಬ್ಬ ಅತ್ಯುತ್ತಮ ಇನ್‌ಸ್ವಿಂಗ್ ಬೌಲರ್ ಆಗಿದ್ದ ಆಕೆ ಅಷ್ಟೇ ಉತ್ತಮವಾಗಿ ಬ್ಯಾಟಿಂಗ್ ಕೂಡಾ ಮಾಡುತ್ತಿದ್ದರು. ಆಕೆ ಮುಂದೆ ನಿಂತು ತಂಡವನ್ನು ಮುನ್ನಡೆಸು ತ್ತಿದ್ದರು.

ನಾವು ದಕ್ಷಿಣ ವಲಯಕ್ಕೆ ಆಡುತ್ತಿದ್ದ ಸಮಯದಲ್ಲಿ ಆಕೆ ತನ್ನ ಬೆರಳು ಮೂಳೆ ಮುರಿತಕ್ಕೆ ಒಳಗಾಗಿದ್ದರೂ ಬ್ಯಾಟಿಂಗ್ ನಡೆಸಿದ್ದರು. ಆಕೆ ಖಂಡಿತವಾಗಿಯೂ ಪ್ರಶಸ್ತಿಗೆ ಅರ್ಹರು. ಮಹಿಳಾ ಕ್ರಿಕೆಟ್‌ಗೆ ಆಕೆ ಎಲ್ಲಾ ರೀತಿಯಲ್ಲೂ ಕಾಣಿಕೆ ನೀಡಿದ್ದಾರೆ’’ ಎಂದು ಹೇಳುತ್ತಾರೆ ಮಾಜಿ ಸಹ ಆಟಗಾರ್ತಿ ಸುಧಾ ಶಾ.

ರಂಗನಾಥನ್ ಶಾಂತಾ ರಂಗಸ್ವಾಮಿಯ ಆಕ್ರಮಣಕಾರಿ ಸ್ವಭಾವವನ್ನೂ ನೆನಪಿಸಿಕೊಳ್ಳುತ್ತಾರೆ. ಆಕೆ ತನ್ನ ಮಣಿಕಟ್ಟಿನ ಬಲದಲ್ಲೇ ಸಿಕ್ಸರ್ ಬಾರಿಸುತ್ತಿದ್ದರು. 1976ರಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕೆ ಸಲೀಸಾಗಿ ಚೆಂಡನ್ನು ಸಿಕ್ಸರ್ ಬಾರಿಸಿದ್ದರು ಎಂದು ಹೇಳುತ್ತಾರೆ ರಂಗನಾಥನ್.

ತಾನು ಮೂಲತಃ ಆಕ್ರಮಣಕಾರಿ ಆಟಗಾರ್ತಿಯಾಗಿದ್ದು ಪ್ರಸ್ತುತ ಜನಪ್ರಿಯವಾಗಿರುವ ಟಿ20 ಪಂದ್ಯಗಳಿಗೆ ಸರಿಹೊಂದುತ್ತಿದ್ದೆ ಎಂದು ಹೇಳುತ್ತಾರೆ ರಂಗಸ್ವಾಮಿ. ಆದರೆ ಆಕೆಯ ಎಲ್ಲಾ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಧನೆಗಳು ಕೇವಲ ಅಂಕಿಅಂಶಗಳು ಮಾತ್ರ. ತಾನು ದೇಶದಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಅಗ್ರಗಣ್ಯೆಯಾಗಿರುವುದೇ ಆಕೆಗೆ ಹೆಮ್ಮೆಯ ವಿಷಯವಾಗಿದೆ.

‘‘ನಾವು ಎಷ್ಟು ರನ್ ಗಳಿಸಿದೆವು ಅಥವಾ ವಿಕೆಟ್ ಕಿತ್ತೆವು ಎಂಬುದಿಲ್ಲಿ ಮುಖ್ಯವಲ್ಲ ನಾವು ಮಹಿಳಾ ಕ್ರಿಕೆಟ್‌ಗೆ ಒಂದು ಭದ್ರ ಬುನಾದಿಯನ್ನು ಹಾಕಿಕೊಟ್ಟೆವು ಅದೇ ಒಂದು ದೊಡ್ಡ ಕಾಣಿಕೆ’’ ಎಂದು ರಂಗಸ್ವಾಮಿ ಹೇಳುತ್ತಾರೆ. ‘‘ಒಂದರ್ಥದಲ್ಲಿ ನಾವು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸ್ಥಾಪಕ ತಾಯಂದಿರಾಗಿದ್ದೆವು. ಅದು ಜಗತ್ತಿಗೆ ಕಾಣುವಂತೆ ಮಾಡುವುದರ ಜೊತೆಗೆ ನಾವು ಕೂಡಾ ಮಾಯವಾಗದಂತೆ ನೋಡಿಕೊಂಡೆವು’’ ಎನ್ನುತ್ತಾರೆ ಆಕೆ.

ಆದರೆ ಇಷ್ಟು ತಡ ಯಾಕೆ? ಪುರುಷರ ಕ್ರಿಕೆಟ್‌ನಲ್ಲಿ ಕೇಂದ್ರೀಯ ಒಪ್ಪಂದವನ್ನು 2001ರಲ್ಲಿ ಪರಿಚಯಿಸಲಾಯಿತು. ಆದರೆ ಅದೇ ಮಹಿಳೆಯರ ಕ್ರಿಕೆಟ್‌ಗೆ ಬರುವಾಗ 2015 ಆಗಿತ್ತು ಅಂದರೆ ಬಿಸಿಸಿಐ ದೇಶದಲ್ಲಿ ಮಹಿಳಾ ಕ್ರಿಕೆಟನ್ನು ತನ್ನ ಸ್ವಾಮ್ಯಕ್ಕೆ ಪಡೆದುಕೊಂಡ ಒಂಬತ್ತು ವರ್ಷಗಳ ನಂತರ. ಮಹಿಳಾ ಕ್ರಿಕೆಟಿಗರಿಗೆ ವಾರ್ಷಿಕ ಒಪ್ಪಂದವನ್ನು ಪರಿಚಯಿಸಿದ ಕ್ರಿಕೆಟ್ ಆಡುವ ಎಂಟು ಅಗ್ರಮಾನ್ಯ ದೇಶಗಳ ಪೈಕಿ ಭಾರತ ಕೊನೆಯದ್ದಾಗಿದೆ.

‘‘ಅವರೆಲ್ಲರಿಗೂ ಅವರದ್ದೇ ಯೋಚನೆ,

ಜೀವಮಾನ ಸಾಧನೆ ಪ್ರಶಸ್ತಿಯಲ್ಲಿ ಪಡೆದ ನಗದು ಮೊತ್ತ ಮಾತ್ರ ಆಕೆ ತನ್ನ ಇಡೀ ಕ್ರಿಕೆಟ್ ಜೀವನದಲ್ಲೇ ಹಣದ ರೂಪದಲ್ಲಿ ಗಳಿಸಿದ ಪ್ರಯೋಜನವಾಗಿದೆ. ‘‘ನಾನು ಆಡುತ್ತಿದ್ದ ಸಮಯದಲ್ಲಿ ನನ್ನ ಎಲ್ಲಾ ಖರ್ಚುವೆಚ್ಚಗಳನ್ನು ನಾನೇ ನೋಡಿಕೊಂಡಿದ್ದೆ. ಕೇವಲ ಕಲ್ಪನೆಗಳಿದ್ದವು. ಸಾಮಾನ್ಯಕ್ಕಿಂತ ಹೊರತಾಗಿ ಯೋಚಿಸಲು ಅವರಿಂದ ಸಾಧ್ಯವಾಗಲಿಲ್ಲ. ತೀರಾ ಇತ್ತೀಚೆಗಷ್ಟೇ ಪರಿಸ್ಥಿತಿ ಬದಲಾಗಲು ಆರಂಭವಾಗಿದೆ’’ ಎನ್ನುತ್ತಾರೆ ಶಾಂತಾ.

ಇದರ ಜೊತೆಗೆ ಆಕೆ ಹೇಳಿದ ಮತ್ತೊಂದು ಮಾತೆಂದರೆ ಆಟದ ಮೇಲಿನ ಸೆಳೆತ ಪ್ರೀತಿಯಿಂದಾಗಿ ನಾವು ಆಡುತ್ತಿದ್ದೆವು’’ ಎಂದಾಕೆ ವಿವರಿಸುತ್ತಾರೆ. ‘‘1976ರಲ್ಲಿ ಅರ್ಜುನ ಪ್ರಶಸ್ತಿ ಪಡೆದಾಗಲೂ ನಗದು ರೂಪದಲ್ಲಿ ಬಹುಮಾನ ಪಡೆದಿರಲಿಲ್ಲ. ಅದನ್ನು ನಂತರ ಪರಿಚಯಿಸಲಾಯಿತು. ಆದರೆ ಸರಕಾರ ಈ ಹಿಂದಿನ ಅರ್ಜುನ ಪ್ರಶಸ್ತಿ ಪುರಸ್ಕೃತರಿಗೂ ಆ ಮೊತ್ತವನ್ನು ನೀಡಲು ಯೊೀಚಿಸಬೇಕು’’ ಎಂದಾಕೆ ತಿಳಿಸುತ್ತಾರೆ.

63ರ ಹರೆಯದ ಶಾಂತಾ ಈ ಪ್ರಶಸ್ತಿಯ ಗೌರವವನ್ನು ತನಗೆ ಮಾತ್ರ ಸೀಮಿತವಾಗಿಸಿಲ್ಲ. ‘‘ಈ ವೇಳೆಯಲ್ಲಿ ನಾನು ಮಾಧವ್ ರಾವ್ ಸಿಂಧಿಯಾ, ಶರದ್ ಪವಾರ್, ಡಯಾನಾ ಎಡುಲ್ಜಿ ಮತ್ತು ಅನುರಾಗ್ ಠಾಕೂರ್ ಅವರನ್ನು ಸ್ಮರಿಸಲು ಬಯಸುತ್ತೇನೆ. ಈ ನಾಲ್ವರು ಮಹಾನುಭಾವರು ತಮ್ಮದೇ ರೀತಿಯಲ್ಲಿ ಮಹಿಳಾ ಕ್ರಿಕೆಟನ್ನು ಸಬಲೀಕರಣಗೊಳಿಸಲು ಪ್ರಯತ್ನಿಸಿದ್ದಾರೆ’’ ಎನ್ನುತ್ತಾರೆ ಶಾಂತಾ ರಂಗಸ್ವಾಮಿ.

ಇನ್ನು ಸದ್ಯ 2017ರ ಮಹಿಳಾ ವಿಶ್ವಕಪ್‌ಗೆ ಆಯ್ಕೆಯಾಗಿರುವ ಮತ್ತು ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿರುವ ಪ್ರಸ್ತುತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬಗ್ಗೆಯೇನು? ಎಂದು ಕೇಳಿದರೆ ರಂಗಸ್ವಾಮಿ ಈ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ‘‘ಕೆಲವೊಂದು ಏರುಪೇರುಗಳಿದ್ದವು. ಆದರೆ ಈ ತಂಡ ಉತ್ತಮವಾಗಿದೆ ಮತ್ತು ಅವರು ಉತ್ತಮವಾಗಿ ಆಡಲಿದ್ದಾರೆ ಎಂಬ ವಿಶ್ವಾಸ ನನಗಿದೆ’’ ಎಂದು ತಿಳಿಸುತ್ತಾರೆ ಶಾಂತಾ ರಂಗಸ್ವಾಮಿ. ಭಾರತೀಯ ಮಹಿಳಾ ಕ್ರಿಕೆಟ್‌ನ ಬಾಲ್ಯವಸ್ಥೆಯನ್ನು ಕಂಡಿರುವ ಅನುಭವಿಯ ಬಾಯಿಯಿಂದ ಬಂದ ಮಾತುಗಳು ನಿಜವಾಗಿಯೂ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News