ಕ್ಯಾಂಪಸ್‌ ರಾಜಕೀಯದಿಂದ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಧಕ್ಕೆ?

Update: 2017-03-04 08:44 GMT

‘‘ರಾಷ್ಟ್ರೀಯತೆಯ ಬೋಧಕನಾಗಿ, ರಾಷ್ಟ್ರೀಯತೆಯ ಹಲವು ವಿಶ್ಲೇಷಣೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಡುವುದು ನನ್ನ ಕರ್ತವ್ಯ. ಆದರೆ ನನ್ನ ಸುರಕ್ಷತೆಯ ದೃಷ್ಟಿಯಿಂದ ನನಗೆ ನಾನು ಕಡಿವಾಣ ಹಾಕಿಕೊಂಡಿದ್ದೇನೆ. ನನ್ನ ಯಾವ ಚಿಂತನೆ ಅಥವಾ ಶಬ್ದ ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತದೆ ಅಥವಾ ನನ್ನ ವಿರುದ್ಧ ಪ್ರಕರಣ ದಾಖಲಿಸಲು ಕಾರಣವಾಗುತ್ತದೆ ಎನ್ನುವುದು ನನಗೆ ತಿಳಿಯದು.’’

ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ. ಆದರೆ ಜೊತೆಜೊತೆಗೆ ನಿರ್ಬಂಧವನ್ನೂ ವಿಧಿಸಿದೆ. ಆದ್ದರಿಂದ ಮುಕ್ತ ಅಭಿವ್ಯಕ್ತಿ ಅಥವಾ ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂಸೆಯನ್ನು ಸಹಿಸಲಾಗದು. ಇದರಿಂದ ತೊಂದರೆಯಾಗುವುದು ಶೈಕ್ಷಣಿಕ ವಾತಾವರಣಕ್ಕೆ ಎನ್ನುವುದು ಜೆಎನ್‌ಯು ಕುಲಪತಿ ಸುಧೀರ್ ಕುಮಾರ್ ಅವರ ಅಭಿಪ್ರಾಯ.

ದಿಲ್ಲಿ ವಿಶ್ವವಿದ್ಯಾನಿಲಯದ ರಾಮ್‌ಜಸ್ ಕಾಲೇಜಿನಲ್ಲಿ ಬಲಪಂಥೀಯ ಹಾಗೂ ಎಡಪಂಥೀಯ ವಿದ್ಯಾರ್ಥಿಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆ, ಕ್ಯಾಂಪಸ್‌ಗಳು ರಾಜಕೀಯ ರಣರಂಗವಾಗುತ್ತಿರುವುದನ್ನು ನೆನಪಿಸುತ್ತದೆಯೇ ಅಥವಾ ಪ್ರಮುಖ ಶಿಕ್ಷಣ ಸಂಸ್ಥೆಗಳು ತಮ್ಮ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ಪ್ರತಿಫಲಿಸುತ್ತವೆಯೇ?

ಫೆಬ್ರವರಿ 22ರಂದು ಕಲ್ಲು ತೂರಾಟ ನಡೆಸಿದ್ದರಿಂದ ಪತ್ರಕರ್ತರು ಹಾಗೂ ಪ್ರಾಧ್ಯಾಪಕರೂ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವನ್ನಷ್ಟೇ ಬೆಟ್ಟು ಮಾಡುವುದು ಮಾತ್ರವಲ್ಲ; ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿ ಸಂಘರ್ಷ ರಾಜಕೀಯ, ಅರಾಜಕತೆ ತಲೆ ಎತ್ತಿರುವುದನ್ನು ಸೂಚಿಸುತ್ತದೆ.

ರಾಷ್ಟ್ರರಾಜಧಾನಿಯ ಜವಾಹರಲಾಲ್ ನೆಹರೂ ವಿವಿಯಿಂದ ಕೋಲ್ಕತ್ತಾದ ಜಾಧವಪುರ ವಿವಿ, ಹೈದರಾಬಾದ್ ವಿವಿವರೆಗೆ, ವಿದ್ಯಾರ್ಥಿ ಸಮಸ್ಯೆಗಳು ಪ್ರತಿಸ್ಪರ್ಧಿ ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗಳಿಗೂ ಕಾರಣವಾಗಿವೆ. ಎಬಿವಿಪಿ ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿ ಪ್ರಾಬಲ್ಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಿರುವುದರಿಂದ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಪೂರ್ವಾನಂದ ಝಾ ಅಭಿಪ್ರಾಯಪಡುತ್ತಾರೆ.

ರಾಮ್‌ಜಸ್ ಕಾಲೇಜಿನಲ್ಲಿ ನಡೆದ ಘಟನೆ ಒಂದು ಪ್ರತ್ಯೇಕ ಘಟನೆಯಾಗಿರದೇ, ರಾಷ್ಟ್ರೀಯತೆ ಯ ಹೆಸರಿನಲ್ಲಿ ಕ್ಯಾಂಪಸ್ ವಲಯದಲ್ಲಿ ಪ್ರಾಬಲ್ಯ ಸ್ಥಾಪಿಸಲು ವಿದ್ಯಾರ್ಥಿಗಳು ಹಾಗೂ ಯುವ ಹೋರಾಟಗಾರರು ನಡೆಸುವ ಪ್ರಚಾರದ ಒಂದು ಅಂಗವಾಗಿದೆ.

ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಚಿಂತಕರಿಗೆ ಎಬಿವಿಪಿ ಕಿರುಕುಳ ನೀಡುತ್ತಿದೆ. ಎಬಿವಿಪಿ ಕಾರ್ಯಕರ್ತರು, ತಮ್ಮ ಸಿದ್ದಾಂತವನ್ನು ಒಪ್ಪದ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು ಕೇವಲ ಜೆಎನ್‌ಯು ಅಥವಾ ದಿಲ್ಲಿ ವಿವಿಯಲ್ಲಲ್ಲ; ದೇಶಾದ್ಯಂತ ಎಲ್ಲ ಕ್ಯಾಂಪಸ್‌ಗಳಲ್ಲಿ ಇದೇ ಪರಿಸ್ಥಿತಿ ಇದೆ. ಎಬಿವಿಪಿಯ ಬೆದರಿಕೆ, ಚಳವಳಿ, ಪೊಲೀಸ್ ದೂರುಗಳ ಕಾರಣದಿಂದ ಸಮಾರಂಭಗಳು ರದ್ದಾದ ನೂರಾರು ನಿದರ್ಶನಗಳಿವೆ ಎಂದು ಝಾ ವಿವರಿಸುತ್ತಾರೆ.

ಕಳೆದ ವರ್ಷ ದೇಶದ್ರೋಹ ಆರೋಪಕ್ಕೆ ಒಳಗಾದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಆಹ್ವಾನಿಸಿದ್ದನ್ನೇ ನೆಪ ಮಾಡಿಕೊಂಡ ಎಬಿವಿಪಿ ಕಾರ್ಯಕರ್ತರು ರಾಮ್‌ಜಸ್ ಕಾಲೇಜು ಸಮಾರಂಭಕ್ಕೆ ಅಡ್ಡಿಪಡಿಸಿದ್ದಲ್ಲದೆ, ಹಿಂಸಾತ್ಮಕ ಕ್ರಮ ಕೈಗೊಂಡು ವಿದ್ಯಾರ್ಥಿಗಳು ಹಾಗೂ ಇತರರ ಮೇಲೆ ಹಲ್ಲೆ ನಡೆಸಿದರು. ಬಿಜೆಪಿ- ಆರೆಸ್ಸೆಸ್ ರಾಜಕೀಯವು ಭೀತಿ ಹುಟ್ಟಿಸಿ, ಮುಕ್ತ ಚರ್ಚೆ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎನ್ನುವುದು ಝಾ ಅವರ ಸ್ಪಷ್ಟ ಅಭಿಪ್ರಾಯ.

‘‘ಇಂದು ನನ್ನ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗಿದೆ. ಪ್ರಾಧ್ಯಾಪಕನಾಗಿ, ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದರೆ ಅದು ಅಪರಾಧ. ನನ್ನ ಮೇಲೆ ದಾಳಿ ನಡೆಸಿ, ರಾಷ್ಟ್ರದ್ರೋಹಿ ಎಂದು ಕರೆದು ಎಫ್‌ಐಆರ್ ದಾಖಲಿಸಬಹುದೇ’’ ಎಂದು ಝಾ ಪ್ರಶ್ನಿಸುತ್ತಾರೆ.

‘‘ರಾಷ್ಟ್ರೀಯತೆಯ ಬೋಧಕನಾಗಿ, ರಾಷ್ಟ್ರೀಯತೆಯ ಹಲವು ವಿಶ್ಲೇಷಣೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಡುವುದು ನನ್ನ ಕರ್ತವ್ಯ. ಆದರೆ ನನ್ನ ಸುರಕ್ಷತೆಯ ದೃಷ್ಟಿಯಿಂದ ನನಗೆ ನಾನು ಕಡಿವಾಣ ಹಾಕಿಕೊಂಡಿದ್ದೇನೆ. ನನ್ನ ಯಾವ ಚಿಂತನೆ ಅಥವಾ ಶಬ್ದ ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತದೆ ಅಥವಾ ನನ್ನ ವಿರುದ್ಧ ಪ್ರಕರಣ ದಾಖಲಿಸಲು ಕಾರಣವಾಗುತ್ತದೆ ಎನ್ನುವುದು ನನಗೆ ತಿಳಿಯದು.’’

ಕ್ಯಾಂಪಸ್‌ನಲ್ಲಿ ದ್ವೇಷದ ಬೀಜ ಬಿತ್ತಲು ಎಡಪಕ್ಷದವರು ಕಾರಣ ಎಂದು ಹೇಳುವ ದಿಲ್ಲಿ ವಿವಿ ಪ್ರೊಫೆಸರ್ ರಾಕೇಶ್ ಸಿನ್ಹಾ ಕೂಡಾ, ರಾಷ್ಟ್ರೀಯತೆಯ ಹೆಸರಿನಲ್ಲಿ ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಡುತ್ತಾರೆ.

‘‘ಹಿಂಸೆಗೆ ಕ್ಯಾಂಪಸ್‌ನಲ್ಲಿ ಹೇಗೆ ಜಾಗವಿಲ್ಲವೋ ಹಾಗೆ, ಭಾರತದಲ್ಲೇ ಇದ್ದುಕೊಂಡು ದೇಶವನ್ನು ವಿಭಜಿಸುವ ಮಾತುಗಳನ್ನು ಆಡುವವರಿಗೂ ಜಾಗವಿಲ್ಲ. ಇಂಥ ವ್ಯಕ್ತಿಗಳು ಬಾಹ್ಯಶಕ್ತಿಗಳಿಗಿಂತಲೂ ಅಪಾಯಕಾರಿ. ರಾಷ್ಟ್ರದ ಸಮಗ್ರತೆಯನ್ನು ಬಲಗೊಳಿಸಲು ಸರಕಾರ ಪ್ರಯತ್ನ ಮಾಡುತ್ತಿದ್ದರೆ, ಕಾಶ್ಮೀರದ ಸ್ವಾತಂತ್ರ್ಯ ಬಗ್ಗೆ ಮಾತನಾಡುವ ಈ ವ್ಯಕ್ತಿಗಳು, ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಪರೋಕ್ಷವಾಗಿ ಕೈಜೋಡಿಸಿದಂತಾಗುತ್ತದೆ’’ ಎಂದು ಸಿನ್ಹಾ ಹೇಳುತ್ತಾರೆ. ಖಾಲಿದ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರುವುದನ್ನು ಸಮರ್ಥಿಸುವ ಸಿನ್ಹಾ, ‘

‘ಇದು ಖಂಡನೀಯ ಮಾತ್ರವಲ್ಲದೇ, ಇದರ ವಿರುದ್ಧ ಹೋರಾಟ, ಕಾನೂನು ಕ್ರಮ ಕೂಡಾ ಅಗತ್ಯ’’ ಎಂದು ಸಿನ್ಹಾ ಅಭಿಪ್ರಾಯಪಡುತ್ತಾರೆ.

ಎಬಿವಿಪಿ ಕ್ಯಾಂಪಸ್‌ನಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂಬ ಆರೋಪ ಅರ್ಥಹೀನ ಎಂದು ಹೇಳುವ ಸಿನ್ಹಾ, ‘‘ಎಡಪಂಥೀಯ ವಿದ್ಯಾರ್ಥಿ ಹೋರಾಟಗಾರರೇ ನಿಜವಾಗಿ ಅಸಹನೀಯರು’’ ಎಂದು ಬಣ್ಣಿಸುತ್ತಾರೆ. ‘‘ಆರೆಸ್ಸೆಸ್ ಪರ ಚಿಂತಕರಿಗೆ ಕಳೆದ 50 ವರ್ಷದಿಂದ ಅವಕಾಶ ಸಿಕ್ಕಿಲ್ಲ. ಹಾಗಾದರೆ ಮುಕ್ತ ಅಭಿವ್ಯಕ್ತಿಗೆ ಕಡಿವಾಣ ಹಾಕಿದವರು ಯಾರು?’’ ಎನ್ನುವುದು ಅವರ ಪ್ರಶ್ನೆ. ಎಡಪಂಥೀಯರಲ್ಲದವರನ್ನು ಜೆಎನ್‌ಯುಗೆ ಆಹ್ವಾನಿಸಲಾಗಿದೆಯೇ?

‘‘ಎಡಪಂಥೀಯರನ್ನು ಸಹಿಸುವುದು ಸಾಧ್ಯವಿಲ್ಲ. ಅವರ ಏಕತಾನತೆ ಅಭಿಪ್ರಾಯದ ವಿರುದ್ಧವಾಗಿ ಪರ್ಯಾಯ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಅವರ ಊಳಿಗಮಾನ್ಯ ಸಿದ್ಧಾಂತವನ್ನು ಪ್ರಶ್ನಿಸಿದಾಗ, ಅವರು ಪ್ರತಿಭಟನೆ ನಡೆಸುತ್ತಾರೆ; ಆರೋಪ ಮಾಡುತ್ತಾರೆ ಹಾಗೂ ಇತರ ಯಾವುದೇ ಕ್ರಮಕ್ಕೂ ಮುಂದಾಗುತ್ತಾರೆ’’ ಎನ್ನುವುದು ಅವರ ಅಭಿಮತ.

ಜೆಎನ್‌ಯು ಕುಲಪತಿ ಸುಧೀರ್ ಕುಮಾರ್ ಸೊಪೊರೋಯ್ ರಾಮ್‌ಜಸ್ ಕಾಲೇಜಿನ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದರೆ ಆದರೆ ರಾಷ್ಟ್ರೀಯತೆ ಹಾಗೂ ಮುಕ್ತ ಚರ್ಚೆ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಲು ಅವರು ನಿರಾಕರಿಸಿದರು. ‘‘ಕ್ಯಾಂಪಸ್‌ಗಳು ಇರುವುದು ಚರ್ಚೆಗಾಗಿ. ಅದನ್ನು ನಿರ್ಬಂಧಿಸುವ ಪ್ರಯತ್ನ ಸ್ವೀಕಾರಾರ್ಹವಲ್ಲ’’ ಎಂದು ಹೇಳಿದರು.

‘‘ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ. ಆದರೆ ಜೊತೆಜೊತೆಗೆ ನಿರ್ಬಂಧವನ್ನೂ ವಿಧಿಸಿದೆ. ಆದ್ದರಿಂದ ಮುಕ್ತ ಅಭಿವ್ಯಕ್ತಿ ಅಥವಾ ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂಸೆಯನ್ನು ಸಹಿಸಲಾಗದು. ಇದರಿಂದ ತೊಂದರೆಯಾಗುವುದು ಶೈಕ್ಷಣಿಕ ವಾತಾವರಣಕ್ಕೆ’’ ಎನ್ನುವುದು ಅವರ ಅಭಿಪ್ರಾಯ.

ಮಾನವಹಕ್ಕು ಜಾಗೃತಿ ಸಂಸ್ಥೆಯಾದ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡಾ ಭಾರತೀಯ ವಿವಿಗಳಲ್ಲಿ ಮುಕ್ತ ಅಭಿವ್ಯಕ್ತಿಗೆ ಎದುರಾಗಿರುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯತೆ ಹೆಸರಿನಲ್ಲಿ ದ್ವೇಷ ಹಬ್ಬಿಸುವ ಕಾರ್ಯ ನಡೆಯುತ್ತಿದೆ ಎನ್ನುವುದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರೊಫೆೆಸರ್ ಒಬ್ಬರ ಅಭಿಪ್ರಾಯ. ‘‘ರಾಷ್ಟ್ರೀಯತೆಯ ಹೆಸರಿನಲ್ಲಿ, ಜನ ಬೇರೆಯವರನ್ನು ಹತ್ಯೆ ಮಾಡುವುದು ಅಥವಾ ದ್ವೇಷ, ಪೂರ್ವಾಗ್ರಹವನ್ನು ಬಿತ್ತುವುದು ಸಲ್ಲದು. ಅದು ರಾಷ್ಟ್ರೀಯತೆಯಲ್ಲ. ಇದು ಅಪಾಯಕಾರಿ ಬೆಳವಣಿಗೆ’’

‘‘ದೇಶದಲ್ಲಿ ಭ್ರಾತೃತ್ವ ಹಾಗೂ ಪ್ರೀತಿಯನ್ನು ಬೆಳೆಸುವ ಉದ್ದೇಶದ ರಾಷ್ಟ್ರೀಯತೆ ಶ್ರೇಷ್ಠ. ಆದರೆ ಅದನ್ನು ಕೋಮುವಾದ ಅಥವಾ ದ್ವೇಷ ಹರಡಲು ಬಳಸಿದರೆ ಅದು ರಾಷ್ಟ್ರೀಯತೆ ಎನಿಸಿಕೊಳ್ಳುವುದಿಲ್ಲ. ಕಾನೂನು ಅಲ್ಲದೇ ಬೇರೆ ಯಾರಿಗೂ ಮತ್ತೊಬ್ಬರನ್ನು ದೇಶವಿರೋಧಿ ಅಥವಾ ರಾಷ್ಟ್ರಪ್ರೇಮಿಯಲ್ಲ ಎಂದು ನಿರ್ಧರಿಸುವ ಹಕ್ಕು ಇಲ್ಲ. ಅದನ್ನು ನಿರ್ಧರಿಸಬೇಕಾದ್ದು ನ್ಯಾಯಾಂಗ.’’

Writer - ಅನುರಾಗ್ ಡೇ

contributor

Editor - ಅನುರಾಗ್ ಡೇ

contributor

Similar News